ಗೋವಾದ ಮಳೆಗಾಲ ಕುತಂತ್ರ ರಾಜಕಾರಣಿಗಳ ಬಾಯಿಗೆ ಬರ
ಗೋವಾ ಸರ್ಕಾರಕ್ಕೆ ಯಾಕಿಂಥ ಸಿಟ್ಟು ಗೊತ್ತಿಲ್ಲ. ಕನ್ನಡಿಗರ ಮನೆಗಳನ್ನು ನೆಲಸಮ ಮಾಡಲು ಮಳೆಗಾಲವನ್ನೇ ಆಯ್ಕೆ ಮಾಡಿಕೊಳ್ಳುತ್ತಿದೆ.
-ವಸಂತಕುಮಾರ್ ಕತಗಾಲ
ಬೈನಾ (ಗೋವಾ): ಗೋವಾ ಸರ್ಕಾರಕ್ಕೆ ಯಾಕಿಂಥ ಸಿಟ್ಟು ಗೊತ್ತಿಲ್ಲ. ಕನ್ನಡಿಗರ ಮನೆಗಳನ್ನು ನೆಲಸಮ ಮಾಡಲು ಮಳೆಗಾಲವನ್ನೇ ಆಯ್ಕೆ ಮಾಡಿಕೊಳ್ಳುತ್ತಿದೆ. ಅಲ್ಲಿರುವ ಕನ್ನಡಿಗರು ಸುರಿಯುವ ಮಳೆಯಲ್ಲೇ ಒದ್ದೆ-ಮುದ್ದೆಯಾಗಿದ್ದಾರೆ.
ಆದರೆ, ನಿರ್ಗತಿಕರಾದ ಗೋವಾ ಕನ್ನಡಿಗರ ಪರ ಧ್ವನಿ ಎತ್ತಬೇಕಿದ್ದ ಕರ್ನಾಟಕದ ಸಚಿವರು, ಜನಪ್ರತಿನಿಧಿಗಳು ವಿಧಾನಸೌಧದಲ್ಲಿ ಬೆಚ್ಚಗೆ ಕುಳಿತಿದ್ದಾರೆ. ಸರ್ಕಾರ ಹಾಗೂ ಪ್ರತಿಪಕ್ಷಗಳ ನಾಯಕರು ತುಟಿ ಬಿಚ್ಚುತ್ತಿಲ್ಲ. ಇದು ಹೊರನಾಡ ಕನ್ನಡಿಗರ ಬಗ್ಗೆ ಇರುವ ಉಡಾಫೆಯೋ ಅಥವಾ ನಿರ್ಗತಿಕರ ಕುರಿತ ನಿಲುವು ಹೀಗೇನಾ ಎಂದು ಪ್ರಶ್ನೆ ಮಾಡುವಂತಿದೆ.
ಬಯಲಲ್ಲೇ ಕುಳಿತಿದ್ದಾರೆ: ಬೈನಾ ಕಡಲ ತೀರದಲ್ಲಿ ಕನ್ನಡಿಗರ 75 ಮನೆಗಳನ್ನು ಉರುಳಿಸಿ ಮೂರು ದಿನಗಳಾಗಿವೆ. ಮಳೆಯಿದ್ದರೂ ಬಯಲನ್ನೇ ಆಶ್ರಯಿಸಿರುವ ಕನ್ನಡಿಗರು ಕಾಯಂ ಪುನರ್ವಸತಿಗೆ ಮೊರೆ ಇಡುತ್ತಿದ್ದಾರೆ. ಹಸುಗೂಸನ್ನು ಎದೆಗವುಚಿಕೊಂಡ ಮಹಿಳೆ, ಪಾರ್ಶ್ವವಾಯು ಪೀಡಿತರು, ವಯೋವೃದ್ಧರು ಪರದಾಡುತ್ತಿದ್ದಾರೆ. ಆದರೆ, ಬೆಂಗಳೂರಿನ ವಿಧಾನಸೌಧದಲ್ಲಿ ಅಧಿವೇಶನ ನಡೆಯುತ್ತಿದ್ದರೂ ಯಾವೊಬ್ಬ ಸಚಿವರು, ಪ್ರತಿಪಕ್ಷ ನಾಯಕರು ಹಾಗೂ ಶಾಸಕರಿಗೆ ಇವರ ನೋವು, ರೋದನ ಕೇಳೇ ಇಲ್ಲ. ಹೀಗಾಗಿ ವಿಧಾನಸೌಧ, ವಿಧಾನ ಪರಿಷತ್ತಿನಲ್ಲಿ ಧ್ವನಿ ಮೊಳಗಲಿಲ್ಲ. ಗೋವಾ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನೆ ಆಗಲೂ ಇಲ್ಲ.
ಮತ ಬೇಕು, ಕಷ್ಟ ಬೇಡ: ಗೋವಾ ಕನ್ನಡಿಗರಲ್ಲಿ ಈಗಲೂ ಬಹುತೇಕರ ಮತಗಳು ತಮ್ಮ ಮೂಲವಾದ ಉತ್ತರ ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿವೆ. ಚುನಾವಣೆ ಬಂದಾಗಲೆಲ್ಲ ನಮ್ಮ ನಾಯಕರಿಗೆ ಇವರ ನೆನಪಾಗುತ್ತದೆ. ಪ್ರಚಾರಕ್ಕೆ ಬರುತ್ತಾರೆ. ಮತದಾನಕ್ಕಾಗಿ ವಾಹನಗಳಲ್ಲಿ ಕರೆದೊಯ್ಯುತ್ತಾರೆ. ಇವರು ಮತ್ತೆ ನನೆಪಾಗೋದು ಇನ್ನೊಂದು ಚುನಾವಣೆ ಬಂದಾಗಲೇ.
ಈ ನಡುವೆ ಗೋವಾ ರಾಜ್ಯಪಾಲರಾದ ಕನ್ನಡತಿ ಮಾರ್ಗರೆಟ್ ಆಳ್ವ ಅವರ ಭೇಟಿ ಪ್ರಯತ್ನವೂ ಮುಂದುವರಿದಿದೆ.
ಕನ್ನಡ ಸಂಘಗಳ ಸಹಾಂುಹಸ್ತ
ನಿರಾಶ್ರಿತರಿಗೆ ಅಖಿಲ ಗೋವಾ ಕನ್ನಡ ಸಂಘದ ಅಧ್ಯಕ್ಷ ಸಿದ್ದಣ್ಣ ಮೇಟಿ ನೇತೃತ್ವದಲ್ಲಿ ಬಿರ್ಲಾ ಕನ್ನಡ ಸಂಘಟನೆ, ಕನ್ನಡಿಗರ ಂುವಜನ ಸೇನೆ ವಾಸ್ಕೊ ಅವಲಕ್ಕಿ, ಚಹಾ, ಉಪ್ಪಿಟ್ಟು, ಚಹಾ ವ್ಯವಸ್ಥೆ ಮಾಡಿದೆ. ಭಾನುವಾರ ಮಧ್ಯಾಹ್ನ ಕೆಲ ಸಂಘಟನೆಗಳು ಆಹಾರ ಸಾಮಗ್ರಿ ವಿತರಿಸಿವೆ. ಭಾನುವಾರ ಕೊಂಚ ಬಿಸಿಲಿದ್ದಿದ್ದರಿಂದ ಸೂರು ಕಳೆದುಕೊಂಡವರು ಈ ದಿನಸಿ ಪ್ರದಾರ್ಥ ಬಳಸಿಕೊಂಡು ಬಯಲಲ್ಲೇ ಅಡುಗೆ ತಯಾರಿಸಿ ಊಟ ಮಾಡಿದರು.
2004ರಲ್ಲೂ ಮಳೆ ನಡುವೆ ಕಾರ್ಯಾಚರಣೆ
ಅದು 2004ರ ಸಮಯ. ಭರ್ಜರಿ ಮಳೆಯ ನಡುವೆಯೇ ಬೈನಾದಲ್ಲಿ 400ಕ್ಕೂ ಹೆಚ್ಚು ಕನ್ನಡಿಗರ ಮನೆ ಕಿತ್ತೆಸೆಯಲಾಯಿತು. 2012ರಲ್ಲಿ ಜುವಾರಿ ಕಾರ್ಖಾನೆಯಲ್ಲಿ 300ಕ್ಕೂ ಹೆಚ್ಚು ಕಾರ್ಮಿಕರನ್ನು ಹಠಾತ್ ಉದ್ಯೋಗದಿಂದ ವಜಾ ಮಾಡಿದಾಗಲೂ ಭರ್ಜರಿ ಮಳೆ. ಈ ಎರಡೂ ಸಂದರ್ಭದಲ್ಲಿ ಸಾಕಷ್ಟು ಮಂದಿ ತವರಿಗೆ ಮರಳಿದರು. ಈ ಬಾರಿಯೂ ಮಳೆಗಾಲದಲ್ಲೇ ಈ ಕುಕೃತ್ಯ ನಡೆದಿದೆ. ಮನೆ ಕಳೆದುಕೊಂಡವರು ಓಡಿ ಹೋಗಬೇಕೆನ್ನುವುದೇ ಇದರ ಹಿಂದಿರುವ ದುರುದ್ದೇಶ ಎಂದು ನಿರ್ಗತಿಕರು ಕಣ್ಣೀರು ಹಾಕುತ್ತಿದ್ದಾರೆ.
ಕೂಲಿಗೂ ಹೋಗುತ್ತಿಲ್ಲ!
ಬೀದಿಪಾಲಾಗಿರುವ 75 ಮನೆಗಳಲ್ಲಿದ್ದ 200 ಕ್ಕೂ ಹೆಚ್ಚು ಕನ್ನಡಿಗರು ಕೂಲಿನಾಲಿ ಮಾಡಿಕೊಂಡು ಜೀವನಸಾಗಿಸುತ್ತಿದ್ದವರು. ಈಗ ಭವಿಷ್ಯದ ಕುರಿತ ಚಿಂತೆಯಿಂದ ಎರಡು ದಿನಗಳಿಂದ ಕೆಲಸಕ್ಕೂ ಹೋಗಿಲ್ಲ.