ದಕ್ಷಿಣ ಕನ್ನಡದಲ್ಲಿ ಮಳೆ ಪ್ರದಕ್ಷಿಣೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿದಿದ್ದು, ಹಳ್ಳ, ಕೊಳ್ಳ, ತೊಡು ಭರ್ತಿಯಾಗಿವೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿದಿದ್ದು, ಹಳ್ಳ, ಕೊಳ್ಳ, ತೊಡು ಭರ್ತಿಯಾಗಿವೆ. ನೇತ್ರಾವತಿ, ಕುಮಾರಧಾರ ನದಿಯಲ್ಲಿ ಪ್ರವಾಹ ಕಾಣಿಸಿಕೊಂಡಿದೆ. ಸಮುದ್ರ ನೀರೂ ಉಕ್ಕೇರಿದ್ದು, ಸುರತ್ಕಲ್‌ನ ಮೀನಕಳಿಯದಲ್ಲಿ ಪಣಂಬೂರು ಸಂಪರ್ಕಿಸುವ 300 ಮೀಟರ್ ಮೀನುಗಾರಿಕಾ ರಸ್ತೆ ಭಾನುವಾರ ಸಮುದ್ರ ಪಾಲಾಗಿದೆ. ಇದರಿಂದ ಕಡಲ ತಡಿ ಸಂಚಾರಕ್ಕೆ ತಡೆ ಉಂಟಾಗಿದೆ. ಮೀನಕಳಿಯದಲ್ಲಿ ಕಡಲ್ಕೊರೆತ ಶುರುವಾಗಿದೆ. ಮಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನಿರಂತರ ಮಳೆಯಿಂದ ಭಾನುವಾರ ತಗ್ಗುಪ್ರದೇಶ ಜಲಾವೃತವಾಗಿದೆ. ವಿಪರೀತ ಗಾಳಿಗೆ ವಿದ್ಯುತ್ ತಂತಿಗೆ ಮರಬಿದ್ದು ಕಾವೂರು, ಬೈಕಂಪಾಡಿ, ಕುಳಾಯಿ, ಹೊಸಬೆಟ್ಟುಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. ಪಣಂಬೂರಿನಲ್ಲಿ ಮೆಸ್ಕಾಂ ಕಚೇರಿಗೆ ನೀರು ನುಗ್ಗಿದ್ದು, ಬೈಕಂಪಾಡಿ ಖಾಸಗಿ ಶಾಲೆ ಜಲಾವೃತವಾಗಿದೆ.
ಕುಮಾರಧಾರ ಮುಳುಗಡೆ
ಕುಮಾರಧಾರಾ ನದಿ ಶನಿವಾರ ರಾತ್ರಿ ಹಾಗೂ ಭಾನುವಾರ ಬೆಳಗ್ಗೆ ಮುಳುಗಡೆಯಾಗಿ ಸಂಚಾರ ಅಸ್ತವ್ಯಸ್ತವಾಯಿತು. ಇದರಿಂದ ಸುಬ್ರಹ್ಮಣ್ಯಕ್ಕೆ ತೆರಳುವವರಿಗೂ ಅನಾನುಕೂಲವಾಯಿತು. ನದಿ ಸ್ನಾನ ಘಟ್ಟದ ಬಳಿಯ ಅಂಗಡಿಗಳು ಜಲಾವೃತವಾಗಿದ್ದು, ಪ್ರಯಾಣಿಕರ ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ. ಹಲವೆಡೆ ತೋಟಗಳಿಗೂ ನೀರು ನುಗ್ಗಿವೆ. ಸುಳ್ಯ- ಸುಬ್ರಹ್ಮಣ್ಯ ಸಂಪರ್ಕ ರಸ್ತೆಯ ಹಾಲೆಮಜಲು ಬಳಿ ರಸ್ತೆ ಕುಸಿದಿದೆ ಮತ್ತು ಹಾಲೆಮಜಲು ಶಾಲೆ ಬಳಿ ಮರವೊಂದು ಧರೆಗೆ ಉರುಳಿ ಬಿದ್ದಿದೆ.
ಗುಡ್ಡ ಕುಸಿತ
ಉಪ್ಪಿನಂಗಡಿ ಪರಿಸರದ ಐದು ಕಡೆ ಗುಡ್ಡ ಜರಿತದಿಂದಾಗಿ ಮನೆಗಳು ಹಾನಿಗೀಡಾಗಿವೆ. 34ನೇ ನೆಕ್ಕಿಲಾಡಿಯ ಸುಭಾಷ್‌ನಗರ ಎಂಬಲ್ಲಿ ದಿನಕರ ಆಚಾರ್ಯ ಎಂಬುವರ ಮನೆ ಹಿಂಭಾಗದಲ್ಲಿ ನಿರ್ಮಿಸಿದ್ದ ಮುರಕಲ್ಲಿನ ತಡೆಗೋಡೆ ಕುಸಿದು ಮನೆಗೆ ಹಾನಿಯಾಗಿದೆ. ಮನೆಯಲ್ಲಿ ನೆಂಟರು ಸೇರಿ ಒಟ್ಟು 13 ಮಂದಿ ಇದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಭೂಕುಸಿತ
ಸುಳ್ಯ ತಾಲೂಕಿನ ಕೆಲವೆಡೆ ಭೂಕುಸಿತವಾಗಿದ್ದು, ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಜಾಲ್ಸೂರು- ಸುಬ್ರಹ್ಮಣ್ಯ ರಸ್ತೆಯಲ್ಲಿರುವ ಕಂದಡ್ಕದಲ್ಲಿ ರಸ್ತೆ ಮೇಲೆ ನೀರು ನಿಂತಿದ್ದು ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಪೇರಡ್ಕದಲ್ಲಿ ನಿರ್ಮಾಣವಾಗುತ್ತಿರುವ ನೂತನ ಸೇತುವೆಯ ಬದಿಯಲ್ಲಿ ಭೂ ಕುಸಿತವಾಗಿದೆ. ಮಳೆ, ಗಾಳಿಗೆ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ಹಾನಿ ಸಂಭವಿಸಿದ್ದು ವಿದ್ಯುತ್ ಪೂರೈಕೆ ವ್ಯತ್ಯಯವಾಗಿದೆ.