ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ವಿಧಾನಸಭೆ ಕೆಲಸ ಸಚಿವರಿಗೆ ಕಾಲಕಸ

ಸಚಿವರು ವಿಧಾನಸೌಧಕ್ಕೆ ಬರಬೇಕು. ಕಚೇರಿಯಲ್ಲಿ ಕುಳಿತು ಕೆಲಸ ಮಾಡಬೇಕು. ದಿನವೂ ಬೇಡ, ಕನಿಷ್ಠ ವಾರದಲ್ಲಿ ಮೂರು ದಿನವಾದರೂ ಕಚೇರಿಯಲ್ಲೇ ಕಾರ್ಯನಿರ್ವಹಿಸಬೇಕು.

Srinivasa Murthy VN
Updated On : 15 Jul 2014, 12:09 pm

-ಕೆರೆ ಮಂಜುನಾಥ್
ಬೆಂಗಳೂರು:
ಸಚಿವರು ವಿಧಾನಸೌಧಕ್ಕೆ ಬರಬೇಕು. ಕಚೇರಿಯಲ್ಲಿ ಕುಳಿತು ಕೆಲಸ ಮಾಡಬೇಕು. ದಿನವೂ ಬೇಡ, ಕನಿಷ್ಠ ವಾರದಲ್ಲಿ ಮೂರು ದಿನವಾದರೂ ಕಚೇರಿಯಲ್ಲೇ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರಿಗೆ ಸಿಗಬೇಕು. ಇದು ಕಡ್ಡಾಯ...
ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಒಂದು ವರ್ಷದಲ್ಲಿ ಅದೆಷ್ಟು ಬಾರಿ ಈ ಮಾತು ಹೇಳಿದ್ದಾರೋ ಲೆಕ್ಕಕ್ಕೇ ಸಿಗುವುದಿಲ್ಲ. ಗೌಪ್ಯವಾಗಿ ನಡೆಯುವ ಸಚಿವ ಸಂಪುಟ ಸಭೆಯಲ್ಲಷ್ಟೇ ಅಲ್ಲ, ಬಹಿರಂಗವಾಗಿಯೂ ಈ ಮಾತಿನ ಚಾಟಿ ಬೀಸಿದ್ದಾರೆ. ಏಕೆಂದರೆ, ಸಚಿವರು ಯಾರಿಗೂ ಉತ್ತರದಾಯಿಗಳೇ ಅಲ್ಲ!
ಸಚಿವರು ವಿಧಾನಸೌಧಕ್ಕೆ ಅಥವಾ ಅವರ ಇಲಾಖೆಯ ಯಾವುದೇ ಕಚೇರಿಗೆ ಹೋದರೂ ಅವರಿಗೆ ಹಾಜರಿ ಪುಸ್ತಕವೇ ಇಲ್ಲ. ಅವರು ವಿಧಾನಸೌಧಕ್ಕೋ ವಿಕಾಸಸೌಧಕ್ಕೋ ಬಂದು ಕೆಲಸ ನಿರ್ವಹಿಸಿರುವ ಬಗ್ಗೆ ಎಲ್ಲೂ ದಾಖಲೆಯೇ ಇಲ್ಲ. ಸಚಿವ ಸಂಪುಟ ಅಧಿಪತಿ ಮುಖ್ಯಮಂತ್ರಿ ಅವರಿಗೂ ಈ ಮಾಹಿತಿ ಇರುವುದಿಲ್ಲ.
ಮುಖ್ಯಮಂತ್ರಿ ಕಚೇರಿ, ಸಚಿವ ಸಂಪುಟ ಶಾಖೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಸರ್ಕಾರದ ಯಾವ ಶಾಖೆಯಲ್ಲೂ ಸಚಿವರು ವಿಧಾನಸೌಧ ಅಥವಾ ವಿಕಾಸಸೌಧಕ್ಕೆ ಹಾಜರಾಗಿರುವ ಬಗ್ಗೆ ದಾಖಲೆಯೇ ಇಲ್ಲ. ಇಂತಹ ಒಂದು ದಾಖಲೆ ನಿರ್ವಹಿಸುವುದೇ ಇಲ್ಲ ಎಂದು ಮಾಹಿತಿ ಹಕ್ಕು ಕಾಯಿದೆ ಮೂಲಕ ಪತ್ರಿಕೆ ಕೋರಿದ ವಿವರಕ್ಕೆ ಸಮಜಾಯಿಷಿ ನೀಡಿದ್ದಾರೆ.
ಸಚಿವರ ಆಪ್ತ ಕಾರ್ಯದರ್ಶಿಯವರು ಇಂತಹ ದಾಖಲೆ ನಿರ್ವಹಿಸಬೇಕಾಗಿದ್ದರೂ ಅದು 'ಕಡ್ಡಾಯ'ವೇನೂ ಅಲ್ಲವಂತೆ! ಅದಕ್ಕೆ ಇಂತಹ 'ಪ್ರಾಕ್ಟೀಸ್‌' ಈವರೆಗೆ ಯಾರೂ ಮಾಡುತ್ತಿಲ್ಲವಂತೆ!
ಗರಿಷ್ಠ ಸೌಲಭ್ಯ ಪಡೆಯುವ ಮಂತ್ರಿ ಮಹೋದಯರಿಗೆ ಹಾಜರಿ ಪುಸ್ತಕವೇ ಇಲ್ಲ. ಅವರಿಗೆ ಮಾತ್ರವಲ್ಲ ಅವರ ಕಚೇರಿಯಲ್ಲಿ ಅವರಿಗಾಗೇ ಕಾರ್ಯನಿರ್ವಹಿಸುವವರಿಗೂ ಹಾಜರಿಯಿಂದ ಮಾಫಿ!
ಸಚಿವರು ಸಾರ್ವಜನಿಕರಿಗೆ ಸಿಗುವ ಕಾರ್ಯಕ್ರಮವಂತೂ ಇಲ್ಲವೇ ಇಲ್ಲ. ಜನತಾದರ್ಶನ ಮುಖ್ಯಮಂತ್ರಿಗೆ ಮಾತ್ರ ಮೀಸಲು.
ರಾಜ್ಯದಲ್ಲಿ ಸಚಿವರಾದವರಿಗೆ ಮನೆ, ಕಾರು, ಆಳು, ಆಪ್ತರು ಸೇರಿದಂತೆ ಏನು ಬೇಕೋ ಅದೆಲ್ಲ ಸೌಲಭ್ಯ ಲಭ್ಯ. ಇದಕ್ಕಾಗಿ ದೊಡ್ಡ ಮೊತ್ತದ ಹಣವನ್ನು ಸರ್ಕಾರ ಭರಿಸುತ್ತದೆ.
ಕೆಲವು ಸೌಲಭ್ಯಗಳಿಗಂತೂ ಅಂದರೆ ಕಚೇರಿ ವೆಚ್ಚ, ಕಾಫಿ-ಟೀ, ತಿಂಡಿ, ಡೀಸೆಲ್-ಪೆಟ್ರೋಲ್ ಇತ್ಯಾದಿಗಳಿಗೆ 'ಲಮ್‌ಸಮ್‌' ಆಗಿ ಸಾವಿರಾರು ರುಪಾಯಿ ಲೆಕ್ಕದಲ್ಲಿ ಪ್ರತಿ ತಿಂಗಳಿಗೆ ಡಿಪಿಎಆರ್ (ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ) ಹಣ ಬಿಡುಗಡೆ ಮಾಡುತ್ತದೆ. ಇದಕ್ಕೆ ಯಾವ ಲೆಕ್ಕವನ್ನೂ ನೀಡಬೇಕಾಗಿಲ್ಲ.
ಅಂದರೆ, ಜನರಿಂದ ಆಯ್ಕೆಯಾಗಿ ಅವರಿಂದ ಅಧಿಕಾರಕ್ಕೇರಿದ ಮೇಲೆ ಉತ್ತರದಾಯಿತ್ವವೇ ಇಲ್ಲ ಎಂಬಂತಾಗಿದೆ.
ಹಾಜರಿ ಪುಸ್ತಕವನ್ನು ನಿರ್ವಹಿಸಿದರೆ ಬಂದ ದಿನವೇ ಸಹಿ ಹಾಕುತ್ತಾರೆ ಎಂಬ ಖಾತರಿ ಏನೂ ಇಲ್ಲ. ಆದರೂ, ಸರ್ಕಾರಿ ಕೆಲಸದಲ್ಲಿ ದಾಖಲೆ (ಕಡತ) ಇಲ್ಲದಿದ್ದರೆ ಏನೂ ನಡೆಯುವುದಿಲ್ಲ ಎಂಬುದು ಜನರಿಗೆ ಅರಿವಿರುವ ಸತ್ಯ.

ಸಚಿವರ ಕಚೇರಿಯಲ್ಲೂ ಹಾಜರಿ ಇಲ್ಲ
ಸಚಿವರಿಗೆ ಮಾತ್ರ ಹಾಜರಿ ಇಲ್ಲ ಎಂದೇನು ಇಲ್ಲ. ಅವರ ಕಚೇರಿಯಲ್ಲಿ ಹಾಗೂ ಅವರಿಗಾಗಿ ಕಾರ್ಯನಿರ್ವಹಿಸುವ ಯಾರಿಗೂ ಹಾಜರಿ ಕಡ್ಡಾಯವೇನೂ ಇಲ್ಲ. ಹಾಜರಿ ಪುಸ್ತಕ ಎಂಬುದೇನೂ ಇಲ್ಲ. ಸಚಿವರು ಅಥವಾ ಅಧಿಕಾರಿಗಳಿಗೆ ಹಾಜರಿ ಪುಸ್ತಕ ಬೇಡ ಎಂದು ಯಾವ ಸುತ್ತೋಲೆಯೂ ಡಿಪಿಎಆರ್‌ನಿಂದ ಹೊರಬಂದಿಲ್ಲ. ಆದರೆ, ಹಿಂದಿನಿಂದಲೂ ಇಂತಹ 'ಪ್ರಾಕ್ಟೀಸ್‌' ಇಲ್ಲ. ಅದಕ್ಕೇ ನಾವು ಅದನ್ನು ಮಾಡುತ್ತಿಲ್ಲ. ನಾವು ಎಲ್ಲೂ ಸಹಿ ಹಾಕಲ್ಲ. ನಮ್ಮ ಕಚೇರಿಯಲ್ಲೇ ಇರುವ ಕೆಲವು ಸಿಬ್ಬಂದಿಗೆ ಮಾತ್ರ ಹಾಜರಿ ಪುಸ್ತಕ ಇದೆ. ನಮಗೆಲ್ಲ ಯಾರೂ ಕೇಳಲ್ಲ, ನಾವು ನಿರ್ವಹಿಸಿಯೂ ಇಲ್ಲ ಎಂದು ಸಚಿವರ ಆಪ್ತ ಕಾರ್ಯದರ್ಶಿಯವರೇ ವಿವರಿಸುತ್ತಾರೆ. ಆದರೆ, ಸರ್ಕಾರ ನಡೆಸುವವರಿಗೇ ಆ 'ಕಡ್ಡಾಯ ಕಡತ'ಗಳ ಗೊಡವೆ ಇಲ್ಲ. ಅಧಿಕಾರಕ್ಕೇರಲು ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾಡುವ ಸಹಿಯೊಂದನ್ನು ಬಿಟ್ಟು ಇನ್ನಾವುದಕ್ಕೂ ಸಚಿವರಿಗೆ ಉತ್ತರಾಯಿತ್ವ ಇಲ್ಲ. ಇನ್ನು ಜನರಿಗೆ ಸಿಗುವ ಮಾತೆಲ್ಲಿ?


ಸಚಿವರು ಬರೋದಿಲ್ಲ
ವಿಧಾನಸೌಧ ಅಥವಾ ವಿಕಾಸಸೌಧದಲ್ಲಿ ಎಲ್ಲ ಸಚಿವರಿಗೂ ಕಚೇರಿ ಕೊಠಡಿ ಇದೆ. ಪ್ರತಿ ಸಚಿವರು ಇಲ್ಲಿಗೆ ಕಾಲಿಡುವ ಮುನ್ನ ಲಕ್ಷಾಂತರ ವೆಚ್ಚದಲ್ಲಿ ನವೀಕರಣ ಮಾಡಿಸಿಕೊಂಡಿರುತ್ತಾರೆ. ಗೋಡೆ ಒಡೆಸಿದವರೂ ಇದ್ದಾರೆ. ಆದರೆ ಅದೇ ಪ್ರಮಾಣದಲ್ಲಿ ಇಲ್ಲಿ ಕುಳಿತು ಕೆಲಸ ಮಾಡುತ್ತಾರಾ? ಇಲ್ಲ ಎಂಬುದು ಸಿದ್ದರಾಮಯ್ಯ ಅವರ ಗಮನಕ್ಕೂ ಬಂದಿದೆ. ಅವರು ಸಾಕಷ್ಟು ಬಾರಿ ಹೇಳಿದ್ದಾರೆ. ವಾರದಲ್ಲಿ ಕನಿಷ್ಠ ಮೂರು ದಿನವಾದರೂ ಕಚೇರಿಯಲ್ಲಿ ಕುಳಿತು ಕೆಲಸ ಮಾಡಿ ಎಂದು ಕಟ್ಟಪ್ಪಣೆ ಹೊರಡಿಸಿದ್ದಾರೆ. ಆದರೆ, ಇದು ಯಾರ ಮೇಲೂ ಪರಿಣಾಮ ಬೀರಿದಂತೆ ಕಂಡುಬಂದಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement