ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಎಂಇಎಸ್ ನಿಷೇಧಕ್ಕೆ ಚಿಂತನೆ

ಭಾಷೆ, ಗಡಿ ವಿವಾದ ಸಂಬಂಧ ಪದೇಪದೆ ಕ್ಯಾತೆ ತೆಗೆದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು...

Srinivasa Murthy VN
Updated On : 29 Jul 2014, 5:35 am

'ಸಾಮ್ನಾ' ಸಂಪಾದಕೀಯದಲ್ಲಿ ಕನ್ನಡಿಗರ ವಿರುದ್ಧ ಶಿವಸೇನೆ ಕಿಡಿ
ಬೆಳಗಾವಿ:
ಭಾಷೆ, ಗಡಿ ವಿವಾದ ಸಂಬಂಧ ಪದೇಪದೆ ಕ್ಯಾತೆ ತೆಗೆದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಿಷೇಧಕ್ಕೆ ರಾಜ್ಯ ಸರ್ಕಾರದ ಮಟ್ಟದಲ್ಲಿ ಚಿಂತನೆ ಮಾಡಲಾಗುತ್ತಿದೆ.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ, ಈ ಬಗ್ಗೆ ಶೀಘ್ರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಕನ್ನಡ ನೆಲದಲ್ಲಿದ್ದು, ಕರ್ನಾಟಕ ಸರ್ಕಾರದ ವಿರುದ್ಧ ಕಾರ್ಯಚಟುವಟಿಕೆ ನಡೆಸಿದರೆ ಸಹಿಸಲಾಗದು. ಇಲ್ಲಿ ವಾಸಿಸುವವರು ಈ ನೆಲಕ್ಕೆ ಬದ್ಧರಾಗಬೇಕು. ಗಡಿ ಭಾಗದಲ್ಲಿ ಬೇರೆ ಭಾಷಿಕರೂ ವಾಸವಾಗಿದ್ದಾರೆ. ಅವರೆಲ್ಲರೂ ನಮ್ಮವರೇ. ಎಲ್ಲರನ್ನೂ ಮಾನವೀಯತೆಯಿಂದ ನೋಡುತ್ತೇವೆ. ಇಲ್ಲಿ ಪದೇಪದೆ ಗಲಾಟೆಯಾದರೆ, ಈ ಭಾಗದ ಅಭಿವೃದ್ಧಿಗೆ ಹೊಡೆತ ಬೀಳುತ್ತದೆ. ಹೀಗಾಗಿ ಮರಾಠಿ ಭಾಷಿಕರು ಅಭಿವೃದ್ಧಿ ಕುರಿತು ಚಿಂತಿಸಬೇಕಿದೆ ಎಂದರು.
ಶಾಸಕರ ವಿರುದ್ಧವೂ ಕ್ರಮ: ಮರಾಠಿ ಭಾಷಿಕರಿಗೆ ಪ್ರಚೋದನೆ ನೀಡಿದ ಆರೋಪ ಸಾಬೀತಾದರೆ ಬೆಳಗಾವಿ ದಕ್ಷಿಣ ಶಾಸಕ ಸಂಭಾಜಿ ಪಾಟೀಲ ಹಾಗೂ ಖಾನಾಪುರ ಶಾಸಕ ಅರವಿಂದ ಪಾಟೀಲ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಜಾರಕಿಹೊಳಿ ಹೇಳಿದರು. ಶಾಸಕರಿಬ್ಬರು ಮಹಾರಾಷ್ಟ್ರ ರಾಜ್ಯ ಫಲಕ ಪ್ರತಿಷ್ಠಾಪನೆ ಮಾಡುವಂತೆ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂಬ ಮಾಹಿತಿ ಬಂದಿದೆ. ಈ ಕುರಿತು ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು ಎಂದರು.

 ಸಹಜಸ್ಥಿತಿಗೆ ಯಳ್ಳೂರು: ನಿಷೇಧಾಜ್ಞೆ ಮುಂದುವರಿಕೆ
ಯಳ್ಳೂರು ಗ್ರಾಮ ಸೋಮವಾರ ಸಹಜ ಸ್ಥಿತಿಯತ್ತ ಮರಳಿದೆ. ಆದರೆ, ಬಿಗಿ ಪೊಲೀಸ್ ಬಂದೋಬಸ್ತ್ ಹಾಗೂ ನಿಷೇಧಾಜ್ಞೆ ಮುಂದುವರಿದಿದೆ. ವಡಗಾವಿ ರಸ್ತೆಯಲ್ಲಿ ಹಾಗೂ ವಿವಾದಾತ್ಮಕ ಫಲಕ ತೆರವುಗೊಳಿಸಿದ ಸ್ಥಳದಲ್ಲಿ ಪೊಲೀಸರು ಚೆಕ್‌ಪೋಸ್ಟ್ ಆರಂಭಿಸಿದ್ದಾರೆ. ಈ ಎರಡೂ ಕಡೆ ಪ್ರತಿ ವಾಹನ ತಪಾಸಣೆ ಮಾಡಿ, ವಿಚಾರಿಸಿ ಯಳ್ಳೂರಿಗೆ ಪ್ರವೇಶ ನೀಡಲಾಗುತ್ತಿದೆ. ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಕನ್ನಡ ಮತ್ತು ಮರಾಠಿ ಸರ್ಕಾರಿ ಶಾಲೆಗೆ ರಜೆ ನೀಡಲಾಗಿದೆ. ಇದೇ ವೇಳೆ ಸೋಮವಾರ ಜಿಲ್ಲಾಧಿಕಾರಿ ಎನ್. ಜಯರಾಂ, ಐಜಿಪಿ ಭಾಸ್ಕರರಾವ್, ವಿಶೇಷ ಅಧಿಕಾರಿ ಹೇಮಂತ ನಿಂಬಾಳ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ್ ಅವರೊಂದಿಗೆ ಸಚಿವ ಜಾರಕಿಹೊಳಿ ಸಭೆ ನಡೆಸಿದ್ದು, ಗಲಾಟೆ ಮಾಡುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

'ಚುನಾವಣಾ ಭಯೋತ್ಪಾದನೆ'
ಮುಂಬೈ:
ಬೆಳಗಾವಿಯಲ್ಲಿ ಮರಾಠಿ ಪುಂಡರಿಗೆ ಬೆತ್ತದ ರುಚಿ ತೋರಿಸಿದ ಕರ್ನಾಟಕ ಪೊಲೀಸರನ್ನು ಶಿವಸೇನೆ 'ಭಯೋತ್ಪಾದಕ'ರಿಗೆ ಹೋಲಿಸಿದೆ. ಈ ಮೂಲಕ ಶಿವಸೇನೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಈ ಹೊತ್ತಿನಲ್ಲಿ ಗಡಿವಿಚಾರಕ್ಕೆ ಸಂಬಂಧಿಸಿ ಮತ್ತೊಮ್ಮೆ ರಾಜಕೀಯ ಮಾಡಲು ಹೊರಟಿದೆ. ಈ ನಡುವೆ, ಯಳ್ಳೂರು ಘಟನೆಗೆ ಸಂಬಂಧಿಸಿ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಅವರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ.
ಕೇಂದ್ರ ಮಧ್ಯಪ್ರವೇಶಿಸಲಿ: ಬೆಳಗಾವಿಯಲ್ಲಿ ಮರಾಠಿಗರ ಮೇಲೆ 'ಕನ್ನಡ ಭಯೋತ್ಪಾದನೆ' ನಡೆಯುತ್ತಿದೆ. ಯಳ್ಳೂರಿನಲ್ಲಿ ಮಹಾರಾಷ್ಟ್ರ ನಾಮಫಲಕ ಪುನಃ ಸ್ಥಾಪಿಸಿದ ಮರಾಠಿಗರ ಮೇಲೆ ನಡೆಸಿದ ದೌರ್ಜನ್ಯ ನೋಡಿ ಮುಂಬೈ ದಾಳಿ ರೂವಾರಿ ಉಗ್ರ ಹಫೀಜ್ ಸಯೀದ್ ಕೂಡ ನಾಚಿಕೆ ಪಡಬೇಕು ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದ ಸಂಪಾದಕೀಯದಲ್ಲಿ ವ್ಯಂಗ್ಯವಾಡಿದೆ. ಈ ವಿಚಾರದಲ್ಲಿ ಕೇಂದ್ರ ಮಧ್ಯಪ್ರವೇಶಿಸಬೇಕು. ಮರಾಠಿಗರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದೆ.

ಬೆಳಗಾವಿ ಪೊಲೀಸರು ಖಾಕಿ ಸಮವಸ್ತ್ರದಲ್ಲಿರುವ ಗೂಂಡಾಗಳು. ಬೆಳಗಾವಿ ಗೂಂಡಾಗಳ ಪ್ರದೇಶವಾಗಿದೆ. ಆ ರೀತಿಯ ಗೂಂಡಾಗಿರಿ ಮಾಡಲು ನಮಗೂ ಬರುತ್ತದೆ. ಆದರೆ, ನಾವು ಅಂಥ ಕೆಲಸ ಮಾಡಲ್ಲ.
-ಸಂಜಯ್ ರಾವುತ್, ಶಿವಸೇನೆ ಮುಖಂಡ

ಶಿವಸೇನೆ ಚುನಾವಣಾ ರಾಜಕೀಯ
ಮುಂಬೈ:
ಚುನಾವಣೆಯ ಹೊಸ್ತಿಲಲ್ಲಿ ಶಿವಸೇನೆಗೆ ಮರಾಠಿ ಪ್ರೇಮ ನೆನಪಾಗುವುದು ಹೊಸದೇನಲ್ಲ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಇನ್ನು ಮೂರು ತಿಂಗಳಷ್ಟೇ ಬಾಕಿ ಇದೆ. ಇಂಥ ಪರಿಸ್ಥಿತಿಯಲ್ಲಿ ಬೆಳಗಾವಿ ಗಡಿ ವಿಚಾರ ಪ್ರಸ್ತಾಪಿಸುವ ಮೂಲಕ ಶಿವಸೇನೆ ಮತ್ತೊಮ್ಮೆ ಮತ ರಾಜಕೀಯ ಮಾಡಲು ಹೊರಟಿದೆ.
ಯಳ್ಳೂರಿನಲ್ಲಿ ಹೈಕೋರ್ಟ್ ಆದೇಶದಂತೆ ಕಿತ್ತುಹಾಕಲಾಗಿದ್ದ ಮಹಾರಾಷ್ಟ್ರ ರಾಜ್ಯ ನಾಮಫಲಕವನ್ನು ಮರುದಿನವೇ ಪುನಃ ಸ್ಥಾಪಿಸುವ ಮೂಲಕ ಎಂಇಎಸ್ ಪುಂಡರು ದುಸ್ಸಾಹಸ ತೋರಿದ್ದರು. ನಂತರ ಪೊಲೀಸರು, ಮಾಧ್ಯಮದವರ ಮೇಲೆಯೇ ಕಲ್ಲು ತೂರಿದ್ದರು. ಆದರೆ, ಶಿವಸೇನೆ ಮಾತ್ರ 'ಸಾಮ್ನಾ'ದಲ್ಲಿ ಪೊಲೀಸರೇ ಮರಾಠಿಗರ ಮೇಲೆ ಹಲ್ಲೆ ನಡೆಸಿದ್ದಾರೆ, ಮಹಿಳೆಯರು, ಮಕ್ಕಳೆನ್ನದೆ ಕಲ್ಲು ತೂರಿದ್ದಾರೆ. ಮರಾಠಿಗರ ಮನೆ, ಮಠಗಳನ್ನು ಕೆಡವಿದ್ದಾರೆ ಎಂದು ಆರೋಪಿಸಿದೆ.
ಮುಂಬೈನಲ್ಲಿ ಕರ್ನಾಟಕ ಭವನ ಹಾಗೂ ಕರ್ನಾಟಕ ಸಂಘ ಕಟ್ಟಡಗಳು ತಲೆ ಎತ್ತಿ ನಿಲ್ಲುತ್ತವೆ. ಆದರೆ, ಕರ್ನಾಟಕದಲ್ಲಿ 'ಮಹಾರಾಷ್ಟ್ರ ರಾಜ್ಯ' ನಾಮಫಲಕಕ್ಕೆ ಜಾಗವಿಲ್ಲ ಎಂದು ಕಿಡಿಕಾರಿರುವ ಶಿವಸೇನೆ, ನರೇಂದ್ರ ಮೋದಿಯಂಥ ಬಲಿಷ್ಠ ಪ್ರಧಾನಿ ಹಾಗೂ ರಾಜನಾಥ್ ಸಿಂಗ್‌ರಂಥ ಖಡಕ್ ಗೃಹ ಸಚಿವರಿಂದ ಕರ್ನಾಟಕದ ಗಡಿಯಲ್ಲಿರುವ ಮರಾಠಿಗರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕರ್ನಾಟಕದ ಪೊಲೀಸರ ಇಂಥ ಉಗ್ರವಾದಕ್ಕೆ ಕಡಿವಾಣ ಹಾಕುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ಸಾಮ್ನಾದಲ್ಲಿ ಹೇಳಲಾಗಿದೆ.
ರಾಜ್ಯೋತ್ಸವಕ್ಕೆ ಅವಕಾಶ ಇಲ್ಲ: ಈ ನಡುವೆ, ಕೈಗಾರಿಕಾ ಸಚಿವ ನಾರಾಯಣ ರಾಣೆ ಅವರ ಪುತ್ರ ನಿತಿನ್ ರಾಣೆ, ಯಳ್ಳೂರು ಘಟನೆಗೆ ಪ್ರತಿಭಟನಾರ್ಥವಾಗಿ ಮುಂಬೈನಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ, ಕೇಂದ್ರ ಸರ್ಕಾರ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು. ಕೇಂದ್ರದ ಪ್ರತಿನಿಧಿಯೊಬ್ಬರನ್ನು ಆಡಳಿತಾಧಿಕಾರಿಯಾಗಿ ನೇಮಿಸಬೇಕು. ಜತೆಗೆ, ಕೇಂದ್ರ ಸರ್ಕಾರ ಯಳ್ಳೂರು ಸುತ್ತಮುತ್ತ ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಅನ್ನು ನಿಯೋಜಿಸಬೇಕು ಎಂದು ಶಿವಸೇನೆ ಮುಖಂಡ ಸಂಜಯ್ ರಾವುತ್ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement