ಬಿಡುವಿಲ್ಲದ ಯಾನ
ಹುಬ್ಬಳ್ಳಿ 'ಸಾಹಿತ್ಯ ಭಂಡಾರ'ದ ಎರಡು ಲ್ಯಾಂಡ್‌ಲೈನು, ಎರಡು ಮೊಬೈಲು ಫೋನುಗಳಿಗೆ ಬಂದ ಕರೆಗಳನ್ನು ಸ್ವೀಕರಿಸಿ...
-ಕೀರ್ತಿ ಕೋಲ್ಗಾರ್
ಬೆಂಗಳೂರು: ಹುಬ್ಬಳ್ಳಿ 'ಸಾಹಿತ್ಯ ಭಂಡಾರ'ದ ಎರಡು ಲ್ಯಾಂಡ್‌ಲೈನು, ಎರಡು ಮೊಬೈಲು ಫೋನುಗಳಿಗೆ ಬಂದ ಕರೆಗಳನ್ನು ಸ್ವೀಕರಿಸಿ ಪ್ರಕಾಶನದ ಅರುಣ್, ರಾಜಾ ಇಬ್ಬರೂ ಬಸವಳಿದಿದ್ದಾರೆ. ಬೆಳಗ್ಗಿನ ತಿಂಡಿ ಮಧ್ಯಾಹ್ನಕ್ಕೆ, ಊಟ ಸಂಜೆಗೆ... ಅವರ ದಿನಚರಿ ಏರುಪೇರು. 10 ನಿಮಿಷದ ಸ್ನಾನ, ಮತ್ತೊಂದಕ್ಕೂ ಕರೆಗಳು ಬಿಡುತ್ತಿಲ್ಲ. ಇನ್ನು 15 ದಿನ ಅವರ ಸ್ಥಿತಿ ಹೀಗೆಯೇ. ಆದರೆ, ಇದಕ್ಕೆಲ್ಲ ಎಸ್.ಎಲ್. ಭೈರಪ್ಪನವರೇ ಕಾರಣ ಎಂಬ 'ಆರೋಪ' ಅವರಿಬ್ಬರ ಬಾಯಿಯಿಂದೇನು ಬರುವುದಿಲ್ಲ!
ಇದು 'ಯಾನ' ತಂದಿತ್ತ ಸ್ಥಿತಿ. ಭೈರಪ್ಪನವರ 29ನೇ ಕೃತಿಯನ್ನು ಮುದ್ರಿಸುತ್ತಿರುವ ಸಾಹಿತ್ಯ ಭಂಡಾರಕ್ಕೆ ಈ ಪ್ರಸಂಗ ಹೊಸದೇನಲ್ಲ. ಆದರೆ, ಹಿಂದಿನ ಯಾವ ಕೃತಿಗಳೂ ಈ ಮಟ್ಟದಲ್ಲಿ ದಾಖಲೆ ಬೇಡಿಕೆಸೃಷ್ಟಿಸಿರಲಿಲ್ಲ. ಅಷ್ಟಕ್ಕೂ, ಕನ್ನಡದಲ್ಲಿ ನೂರಾರು ಪ್ರಕಾಶನಗಳಿರುವಾಗ ಇಷ್ಟೆಲ್ಲ ಬೇಡಿಕೆಯುಳ್ಳ ಲೇಖಕ ಭೈರಪ್ಪ ಈ 'ಭಂಡಾರ'ಕ್ಕೇ ಯಾಕೆ ಕಟ್ಟು ಬೀಳುತ್ತಾರೆ ಎಂಬುದು ಕೌತುಕ.
54 ವರ್ಷದ ನಂಟು: ಅದು 1960. ಈ ಹಿಂದೆಯೇ 'ಭೀಮಕಾಯ' ಕಾದಂಬರಿ ಬರೆದು ಮುಗಿಸಿದ್ದ ಭೈರಪ್ಪನವರು ಅದನ್ನು ಮುದ್ರಿಸಲೂ ಕೊಡದೆ ಎರಡನೇ ಕಾದಂಬರಿ 'ಧರ್ಮಶ್ರೀ' ಬರೆದಿದ್ದರು.
ಯಾವ ಪ್ರಕಾಶನದವರ ಕೈಗಿಡುವುದು ಎಂಬ ಲೇಖಕನ ಆರಂಭಿಕ ಆತಂಕ ಅವರಲ್ಲೂ ಇತ್ತು. ಇದನ್ನು ತಮ್ಮ ಫಿಲಾಸಫಿಯ ಶಿಷ್ಯರೊಬ್ಬರಲ್ಲೂ ಹೇಳಿಕೊಂಡಿದ್ದರು. ಆ ಶಿಷ್ಯೋತ್ತಮ 'ಧರ್ಮಶ್ರೀ'ಯನ್ನು ಹಿಡಿದು ಸೀದಾ ಸಾಹಿತ್ಯ ಭಂಡಾರದ ಮ. ಗೋವಿಂದ ರಾಯರ ಬಳಿ ಬಂದರು. 'ನೀವೀ ಕೃತಿಯನ್ನು ಮುದ್ರಿಸಲೇಬೇಕು. ಇದನ್ನು ಬರೆದ ವ್ಯಕ್ತಿ ನನಗೆ ಬಹಳ ಬೇಕಾದವರು' ಎಂದು ಒತ್ತಡ ಹಾಕಿದರು. 'ಕಾದಂಬರಿ ಓದದೆ ನಾನು ಯಾವ ಕಾರಣಕ್ಕೂ ಮುದ್ರಿಸಲ್ಲ' ಎಂಬ ಪಟ್ಟು ರಾಯರದ್ದು. ಬಂದಿದ್ದ ವ್ಯಕ್ತಿಗೆ ಬಹಳ ಕೋಪ ಬಂದು ಭೈರಪ್ಪನವರ ಬಳಿ ಹೋದರು. 'ಅವರು ಹೇಳೋದೂ ಸತ್ಯ ಕಣ್ರೀ. ಮೊದಲು ಅವರಿಗೆ ಕೃತಿ ಕೊಡಿ, ಮತ್ತೆ ನೋಡೋಣ' ಎಂದರು ಭೈರಪ್ಪ.
ಮನೇಗೇ ಬಂತು ಆಫರ್
ವಾರದೊಳಗೆ ಕೃತಿ ಓದಿದ ರಾಯರು ಸೈಕಲ್ ತುಳಿದುಕೊಂಡು ನೇರ ಭೈರಪ್ಪನವರ ಮನೆಗೆ ಬಂದರು. 'ಸರ್, ನಾವು ನಿಮ್ಮ ಕೃತಿಯನ್ನು ಪ್ರಕಟಿಸ್ತೀವಿ. ಸಾವಿರ ಪ್ರತಿ ಮುದ್ರಿಸ್ತೀವಿ. ಇಂತಿಷ್ಟು ಅಂತ ಕೊಡ್ತೀವಿ. ನಮ್ಮ- ನಿಮ್ಮ ಮಧ್ಯ ದಲ್ಲಾಳಿಗಳು ಬೇಡ' ಎಂದಾಗ ಭೈರಪ್ಪನವರಿಗೆ ಆದ ಅಚ್ಚರಿ ಅಗಾಧ. 'ಹೆಸರೇ ಇಲ್ಲದ ವ್ಯಕ್ತಿ ನಾನು. ನನಗೆ ಇಷ್ಟೆಲ್ಲ ಗೌರವ ಕೊಡುತ್ತಿದ್ದಾರಲ್ಲ' ಎಂಬ ಸಹಜ ಅಚ್ಚರಿ ಆಗಿತ್ತದು. ಭೈರಪ್ಪನವರು ಒಪ್ಪಿಗೆ ಸೂಚಿಸಿದರು.
ಈ ನಂಟು ಪರಮನೆಂಟು
ಯಾವ ಪ್ರಕಾಶಕರೂ ಪ್ರಾಮಾಣಿಕ ಲೆಕ್ಕ ತೋರಿಸದ ಹೊತ್ತಿನಲ್ಲಿ ಮ. ಗೋವಿಂದರಾಯರ ನೇರ ವ್ಯಕ್ತಿತ್ವ ಭೈರಪ್ಪನವರಿಗೆ ಹಿಡಿಸಿತು. ಕ್ರಮೇಣ ಅವರ ಕಾದಂಬರಿಗಳು ಜನಪ್ರಿಯತೆ ಪಡೆದಾಗಲೂ, ಅವರಿಗೆ ಬೇರೆ ಬೇರೆ ಪ್ರಕಾಶನದವರು ಬೇಕಾದಷ್ಟು ಆಮಿಷವೊಡ್ಡಿದರೂ ಭೈರಪ್ಪನವರು ನಿಷ್ಠೆ ಬದಲಿಸಲಿಲ್ಲ.
ಅಗ್ರಿಮೆಂಟೇ ಇಲ್ಲ
ಕೃತಿ ಪ್ರಕಟಣೆಗೂ ಮುನ್ನ ಲೇಖಕನಿಗೂ- ಪ್ರಕಾಶಕರ ನಡುವೆ ಕರಾರು ಒಪ್ಪಂದವಾಗುತ್ತದೆ. ಆದರೆ, ಇಲ್ಲಿ ತನಕ ಇಂಥ ಶಿಷ್ಟಾಚಾರದ ಗುಂಗಿಗೆ ಭೈರಪ್ಪನವರು ಬಿದ್ದಿಲ್ಲ. ನೀವಿಷ್ಟು ಕೊಡಲೇಬೇಕೆಂದು ಯಾವತ್ತೂ ಭೈರಪ್ಪ ಪಟ್ಟೂ ಹಿಡಿಯಲಿಲ್ಲ. ದಾಖಲೆ ಮಾರಾಟವಾದಾಗಲೂ ಇಷ್ಟು ಕೊಡಿ ಎಂಬ ಡಿಮ್ಯಾಂಡೂ ಇಟ್ಟಿಲ್ಲ. 'ನಮ್ಮ ಜೇಬಲ್ಲಿ ಯಾವಾಗ ಹಣವಿರುತ್ತದೋ ಆಗ ಅವರಿಗೆ ಕೊಡುತ್ತೇವೆ' ಅಂತಾರೆ ಭಂಡಾರದ ಅರುಣ್.
ಭೈರಪ್ಪನವರ 'ಸತ್ಯ ಮತ್ತು ಸೌಂದರ್ಯ', 'ನಾನೇಕೆ ಬರೆಯುತ್ತೇನೆ'ಯಂಥ ಕಾದಂಬರಿಯೇತರ ಪ್ರಕಾರಗಳಷ್ಟೇ ಇಂದು ಕಡಿಮೆ ಮಾರಾಟವಾಗುತ್ತಿವೆ. ಆದರಿದು, ಕನ್ನಡದ ಇತರೆ ಕಾದಂಬರಿಗಳ ಮಾರಾಟಕ್ಕಿಂತಲೂ ತೃಪ್ತಿದಾಯಕ. ಕನ್ನಡದಲ್ಲಿ ಲೇಖಕ- ಪ್ರಕಾಶಕರ ನಡುವಿನ ಇಷ್ಟು ಸುದೀರ್ಘ ನಂಟಿಗೆ ಬೇರೊಂದು ಉದಾಹರಣೆ ಸಿಗುವುದಿಲ್ಲ. ಪ್ರಕಾಶನದವರ ಪ್ರಾಮಾಣಿಕತೆಯೂ ಇಲ್ಲಿ ಅಪರೂಪದ ಮಾದರಿ.
10000 ಪ್ರತಿ ದಾಖಲೆ ಮಾರಾಟ
ನಾಲ್ಕು ವರ್ಷದ ನಂತರ ಹೊರಬಂದ ಭೈರಪ್ಪನವರ 'ಯಾನ' ಬಿಡುಗಡೆಗೂ ಮುನ್ನವೇ 10 ಸಾವಿರ ಪ್ರತಿಗಳು ಮಾರಾಟಗೊಂಡಿವೆ. ಈ ಮೂಲಕ ಮೊದಲ ಮುದ್ರಣದ ಅಷ್ಟೂ ಪ್ರತಿಗಳು ಮಾರಾಟಗೊಂಡಂತಾಗಿದೆ. 'ಯಾನ' ಸೋಮವಾರ ರಾತ್ರಿಯೇ 2ನೇ ಮುದ್ರಣ ಕಂಡಿದ್ದು, ಮಂಗಳವಾರ ರಾಜ್ಯದ ಎಲ್ಲ ಪುಸ್ತಕ ಮಳಿಗೆಗಳಲ್ಲೂ ಲಭ್ಯ. ಹುಬ್ಬಳ್ಳಿಯ ಸಾಹಿತ್ಯ ಭಂಡಾರ ಹೊರತಂದಿರುವ 224 ಪುಟಗಳ 'ಯಾನ'ದ ಮುಖಬೆಲೆ 190 ರು. ಹುಬ್ಬಳ್ಳಿಯಲ್ಲಿ ಪ್ರೊ. ಶ್ರೀನಿವಾಸ ತೋಫಖಾನೆ ಪುಣ್ಯತಿಥಿ ಪ್ರಯುಕ್ತ ಮಂಗಳವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಮೊದಲ ಕೃತಿ ಅರ್ಪಣೆ ಆಗಲಿದೆ.