ವಿದ್ಯುತ್ ಹಗರಣ ತನಿಖೆಗೆ ಸದನ ಸಮಿತಿ
ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಹಗರಣದ ಸಿಬಿಐ ತನಿಖೆಗೆ ಆಗ್ರಹಿಸಿ...
ವಿಧಾನಸಭೆ: ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಹಗರಣದ ಸಿಬಿಐ ತನಿಖೆಗೆ ಆಗ್ರಹಿಸಿ ಬಿಜೆಪಿ ನಡೆಸುತ್ತಿದ್ದ ಪ್ರತಿಭಟನೆ ಮಧ್ಯೆಯೇ ವಿದ್ಯುತ್ ಖರೀದಿ ಹಗರಣ ತನಿಖೆಗೆ ಸದನ ಸಮಿತಿ, ಅತ್ಯಾಚಾರಿಗಳು ಗೂಂಡಾ ಕಾಯ್ದೆ ವ್ಯಾಪ್ತಿಗೆ ತರುವ ವಿಧೇಯಕಗಳು ಹಾಗೂ ಧನವಿನಿಯೋಗ ವಿಧೇಯಕವನ್ನು ವಿಧಾನಸಭೆಯಲ್ಲಿ ಸೋಮವಾರ ಅಂಗೀಕರಿಸಲಾಗಿದೆ.
ಮೇಲ್ಮನೆಯಲ್ಲಿ 'ಮಹಾ'ಕ್ಯಾತೆ ಸಂಬಂಧ ನಿಲುವಳಿ ಸೂಚನೆಗೆ ಅವಕಾಶ ನೀಡುವಂತೆ ಬಿಜೆಪಿ ಸೋಮವಾರ ಇಡೀ ದಿನ ಧರಣಿ ನಡೆಸಿತು. ಈ ನಡುವೆಯೇ ವಿಧೇಯಕಗಳ ಅಂಗೀ ಕಾರ ಪಡೆಯಲಾಯಿತು. ವಿಧಾನಸಭೆಯಲ್ಲಿ ಡಿನೋ ಟಿಫಿಕೇಷನ್ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಿ ಬಿಜೆಪಿ ಬೆಳಗ್ಗಿನಿಂದ ನಡೆಸುತ್ತಿದ್ದ ಪ್ರತಿಭಟನೆ ಭೋಜನ ವಿರಾಮದ ನಂತರವೂ ಮುಂದುವರಿದಿತ್ತು. ಜತೆಗೆ ಕೆರೆ ಒತ್ತುವರಿ, ವಿದ್ಯುತ್ ಖರೀದಿ ಹಗರಣದ ಬಗ್ಗೆ ಸದನ ಸಮಿತಿ ರಚಿಸುವಂತೆ ಜೆಡಿಎಸ್ ಸದಸ್ಯರು ಪಟ್ಟು ಹಿಡಿದರು. ಹಲವು ಇಲಾಖಾ ಬೇಡಿಕೆಗಳು ಹಾಗೂ ಧನವಿನಿಯೋಗ ವಿಧೇಯಕವನ್ನು ಚರ್ಚೆ ಇಲ್ಲದೇ ಗದ್ದಲದಲ್ಲೇ ಅಂಗೀಕರಿಸಲಾಯಿತು. ಸೋಮವಾರ ಇಡೀ ದಿನ ಬಿಜೆಪಿ ಬಾವಿಗಿಳಿದು ಧರಣಿ ನಡೆಸಿದ್ದರಿಂದ ಸ್ಪೀಕರ್ ಕಾಗೋಡು ತಿಮ್ಮಪ್ಪ ವಿಧಾನಸಭೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
ಗದ್ದಲದಲ್ಲೇ ವಿಧೇಯಕ : ಸೋಮವಾರ ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಧರಣಿ ಮುಂದುವರಿಸಿದರು. ಬಿಜೆಪಿಯ ಧರಣಿ, ಧಿಕ್ಕಾರದ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೂರಕ ಅಂದಾಜಿಗೆ ಸಮ್ಮತಿ ಪಡೆದರು. ನಂತರ ಧನವಿನಿಯೋಗ ವಿಧೇಯಕವನ್ನೂ ಮಂಡಿಸಿ, ಸಂಪೂರ್ಣ ಬಜೆಟ್ಗೆ ಒಪ್ಪಿಗೆ ಪಡೆದರು. ಜತೆಗೆ ಸರ್ಕಾರ ಪ್ರಮುಖ ವಿಧೇಯಕಗಳನ್ನು ಸದನದಲ್ಲಿ ಮಂಡಿಸಿತು.
17 ಇಲಾಖೆಯ ಬೇಡಿಕೆ ಮೇಲಿನ ಚರ್ಚೆಗೆ ಅವಕಾಶ ಇಲ್ಲದೆ, ಅವುಗಳನ್ನು ಪಾಸ್ ಮಾಡಿಕೊಳ್ಳಲಾಯಿತು. ಬೆಳಗ್ಗೆ ಒಂದು ಗಂಟೆಯ ಕಲಾಪದ ನಂತರ ಸದನವನ್ನು ಭೋಜನ ವಿರಾಮದವರೆಗೆ ಮುಂದೂಡಲಾಯಿತು. ಭೋಜನ ವಿರಾಮದ ನಂತರವೂ ಬಿಜೆಪಿ ಧರಣಿಯಲ್ಲಿ ನಿರತವಾಗಿದ್ದರಿಂದ ಈ ನಾಲ್ಕು ವಿಧೇಯಕಗಳನ್ನು ಯಾವುದೇ ಚರ್ಚೆ ಇಲ್ಲದೇ ಅಂಗೀಕರಿಸಲಾಯಿತು. ಸದನವನ್ನು ಒಂದು ಗಂಟೆಗಳ ಮುಂದೂಡಲಾಯಿತು. ಈ ಸಂದರ್ಭದಲ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಸೂಚನೆ ಪ್ರಕಾರ, ಬಗರ್ ಹುಕುಂ ಸಾಗುವಾಳಿ ಭೂಮಿ ಅರ್ಜಿ ಸ್ವೀಕರಣೆ ಅವಧಿಯನ್ನು 2016ರ ವರೆಗೆ ವಿಸ್ತರಿಸಲು ಅನುಕೂಲ ಕಲ್ಪಿಸಲು ಕಂದಾಯ ಇಲಾಖೆಯ 94 (ಬಿ) ನಿಯಮಕ್ಕೆ ತಿದ್ದುಪಡಿ ತಂದ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕವನ್ನು ಮಂಡಿಸಿ ಗದ್ದಲದ ನಡುವೆಯೇ ಅನುಮೋದನೆ ಪಡೆಯಲಾಯಿತು. ಒಂದೆಡೆ ಸರ್ಕಾರ ವಿಧೇಯಕ ಮಂಡನೆಯಲ್ಲಿ ಮಗ್ನವಾಗಿದ್ದರೆ, ಸಿಬಿಐ ತನಿಖೆಗೆ ಆಗ್ರಹಿಸುತ್ತಿದ್ದ ಬಿಜೆಪಿ ಸದಸ್ಯರು ಮಹತ್ವದ ವಿಧೇಯಕಗಳನ್ನು ಪೂರಕ ಕಾರ್ಯಕಲಾಪದಲ್ಲಿ ಸೇರಿಸುವ ಮೂಲಕ ಸರ್ಕಾರ ಜನತೆಗೆ ಅನ್ಯಾಯ ಎಸಗುತ್ತಿದೆ. ಚರ್ಚೆ ಇಲ್ಲದೇ ವಿಧೇಯಕಗಳನ್ನು ಅಂಗೀಕರಿಸುವುದು ಅಸಂಸದೀಯ ಎಂದು ಕಿಡಿಕಾರಿದರು. ಈ ನಡುವೆ 2005-6ನೇ ಸಾಲಿನಿಂದ ಇಲ್ಲಿಯವರೆಗೆ ನಡೆದ ವಿದ್ಯುತ್ ಖರೀದಿ ಹಗರಣದ ತನಿಖೆಗೆ ಸದನ ಸಮಿತಿ ರಚಿಸುವುದಾಗಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಪ್ರಕಟಿಸಿದರು. ಆದಾಗಿಯೂ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದ ಹದಿನಾಲ್ಕನೇ ವಿಧಾನಸಭೆಯ ನಾಲ್ಕನೆ ಅಧಿವೇಶನ ಗದ್ದಲದೊಂದಿಗೆ ನಿಗದಿತ ಅವಧಿಗೆ ಇನ್ನೂ ಒಂದು ದಿನ ಇರುವಂತೆಯೇ ಮುಕ್ತಾಯ ಕಂಡಿತು.
ಕೃಷಿ ವಿವಿ ಕುಲಪತಿಗಳ ಅಕ್ರಮಕ್ಕೆ ಕಡಿವಾಣ
ವಿಧಾನಸಭೆ: ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳ ಅಕ್ರಮ ಕಡಿವಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಕುಲಪತಿಗಳ ವಿರುದ್ಧದ ವಿಚಾರಣೆ ಅಧಿಕಾರವನ್ನು ತನ್ನ ವ್ಯಾಪ್ತಿಗೆ ತರುವ ಉದ್ದೇಶದಿಂದ ಕೃಷಿ ವಿಜ್ಞಾನ ವಿವಿ ವಿಧೇಯಕಕ್ಕೆ ತಿದ್ದುಪಡಿ ತರಲಾಗಿದೆ. ಈ ತಿದ್ದುಪಡಿಯಿಂದ ಕುಲಪತಿ ವಿರುದ್ಧ ಆರೋಪಗಳು ಬಂದಾಗ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆ ನಡೆಸುವ ಅಧಿಕಾರ ರಾಜ್ಯ ಸರ್ಕಾರಕ್ಕೂ ಸಿಗಲಿದೆ. ಈ ವರದಿ ಆಧರಿಸಿ ಕುಲಾಧಿಪತಿಯಾಗಿರುವ ರಾಜ್ಯಪಾಲರು 6 ತಿಂಗಳೊಳಗೆ ಶಿಸ್ತುಕ್ರಮ ಜರುಗಿಸಬೇಕು. ಈ ತಿದ್ದುಪಡಿಗೆ ವಿಧಾನಮಂಡಲದ ಉಭಯ ಸದನಗಳು ಒಪ್ಪಿಗೆ ಸೂಚಿಸಿವೆ.
ಒಂದು ಗುಂಟೆ ಭೂಮಿಯನ್ನೂ ಡಿನೋಟಿಫೈ ಮಾಡಿಲ್ಲ, ಮಾಡಿದ್ದರೆ ರಾಜಕೀಯ ಸನ್ಯಾಸ ಸ್ವೀಕರಿಸಲು ಸಿದ್ಧ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಇಲ್ಲಿದೆ ನೋಡಿ ದಾಖಲೆ. ಅರ್ಕಾವತಿ ಬಡಾವಣೆಯ 541 ಎಕರೆ ಡಿನೋಟಿಫಿಕೇಶನ್ಗೆ ನೀವೇ ಸಹಿ ಮಾಡಿದ್ದೀರಿ. ನಿಮ್ಮ ಮಾತಿನಲ್ಲಿ ಅದು ರಿಮಾಡಿಫಿಕೇಷನ್ ಇರಬಹುದು. ಆದರೆ, ಇದೇ ಡಿನೋಟಿಫೈ. ಈಗ ರಾಜಿನಾಮೆ ನೀಡಿ, ರಾಜಕೀಯ ಸನ್ಯಾಸ ತೆಗೆದುಕೊಳ್ಳಿ.
-ಜಗದೀಶ್ ಶೆಟ್ಟರ್, ಪ್ರತಿಪಕ್ಷ ನಾಯಕ
ನಾನೇ ಸೈನ್ ಮಾಡಿರೋದು. ಅದು ಮಾಡಿಫೈ ಸ್ಕೀಂ. ಲೂಟಿ ಹೊಡೆದವರು ನೀವು. ಇಡೀ ಸರ್ಕಾರವೇ ಲೂಟಿ ಮಾಡಿತು. ಬಿಡಿಎ ಡಿನೋಟಿಫೈ ಅನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲು ಸರ್ಕಾರ ತೀರ್ಮಾನಿಸಿದೆ. ತನಿಖೆಯನ್ನು ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಿಂದ ಮಾಡಿಸಲಾಗುತ್ತದೆ. ನಾವು ತಪ್ಪು ಮಾಡಿಲ್ಲ. ನನ್ನ ಅವಧಿಯಲ್ಲಿ ಒಂದು ಗುಂಟೆಯನ್ನೂ ಡಿನೋಟಿಫೈ ಮಾಡಿಲ್ಲ. 541 ಎಕರೆಯನ್ನು ಇದೇ ಶೆಟ್ಟರ್ ಕಾಲದಲ್ಲಿ ಡಿನೋಟಿಫೈ ಮಾಡಲು ನಿರ್ಣಯ ತೆಗೆದುಕೊಳ್ಳಲಾಗಿತ್ತು
-ಸಿದ್ದರಾಮಯ್ಯ, ಮುಖ್ಯಮಂತ್ರಿ
ಅಂಗೀಕಾರ ಪಡೆದ ವಿಧೇಯಕಗಳು
-ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕ
-ಕಬ್ಬು ಬೆಲೆ ನಿಗದಿ ಮತ್ತು ನಿಯಂತ್ರಣ (ತಿದ್ದುಪಡಿ) ವಿಧೇಯಕ
-ಕರ್ನಾಟಕ ಕಳ್ಳಭಟ್ಟಿ ವ್ಯಾಪಾರಿಗಳ, ಮಾದಕ ವಸ್ತು ಅಪರಾಧಿಗಳ, ಜೂಜುಕೋರರ, ಗೂಂಡಾಗಳ, ಅನೈತಿಕ ವ್ಯವಹಾರ ಅಪರಾಧಿಗಳ, ಕೊಳಚೆ ಪ್ರದೇಶ ಕಬಳಿಸುವವರ, ವಿಡಿಯೋ -ಆಡಿಯೋ ನಕಲಿ ಮುದ್ರಕರ, ಅಪಾಯಕಾರಿ ಚಟುವಟಿಕೆಗಳ ಪ್ರತಿಬಂಧಕ ವಿಧೇಯಕ (ಗೂಂಡಾ ಕಾಯಿದೆ)
-ಕೃಷಿ ವಿಜ್ಞಾನಗಳ ವಿವಿ ವಿಧೇಯಕ
-ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ
-2014-15ನೇಸಾಲಿನ ಧನವಿನಿಯೋಗ ವಿಧೇಯಕ