ಅರ್ಕಾವತಿ ಫಲಾನುಭವಿಗಳ ಪಟ್ಟಿಗೆ ಬಿಜೆಪಿ ಪಟ್ಟು
ಮುಖ್ಯಮಂತ್ರಿ ಸಿದ್ದರಾಮಯ್ಯ ಅರ್ಕಾವತಿ ಬಡಾವಣೆಯಲ್ಲಿ ಮಾಡಿರುವ 541 ಎಕರೆ...
ಕನ್ನಡಪ್ರಭ ವಾರ್ತೆ ಬೆಂಗಳೂರು ಜು.29
ಮುಖ್ಯಮಂತ್ರಿ ಸಿದ್ದರಾಮಯ್ಯ ಅರ್ಕಾವತಿ ಬಡಾವಣೆಯಲ್ಲಿ ಮಾಡಿರುವ 541 ಎಕರೆ ಡಿನೋಟಿಫಿಕೇಶನ್ನ ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡಬೇಕು ಎಂದು ಬಿಜೆಪಿ ಸವಾಲು ಹಾಕಿದೆ.
'ಒಂದು ಗುಂಟೆ ಭೂಮಿಯನ್ನೂ ಡಿನೋಟಿಫೈ ಮಾಡಿಲ್ಲ ಎಂದು ಗರ್ವ ಕೊಚ್ಚಿಕೊಳ್ಳುತ್ತಿದ್ದ ಸಿದ್ದರಾಮಯ್ಯ ತಮ್ಮ ಪ್ರಾಮಾಣಿಕತೆ ಪ್ರದರ್ಶಿಸುವ ಕಾಲ ಬಂದಿದೆ. ಲೋಕಸಭೆ ಚುನಾವಣೆಗೂ ಮುಂಚೆ ಅರ್ಕಾವತಿಯಲ್ಲಿ ಡಿನೋಟಿಫೈ ಮಾಡಿರುವ 541 ಎಕರೆ ಫಲಾನುಭವಿಗಳ್ಯಾರು? ಸರ್ವೆ ನಂಬರ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳ ವಿವರ ಬಹಿರಂಗಗೊಳಿಸಲಿ' ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಪಂಥಾಹ್ವಾನ ನೀಡಿದ್ದಾರೆ.
ಡಿನೋಟಿಫೈ ಮಾಡುವುದಿಲ್ಲ ಎಂದು ಹೇಳಿ ಅಧಿಕಾರಕ್ಕೇರಿದ ಸಿದ್ದರಾಮಯ್ಯ ಆ ಶಬ್ದದ ಹೆಸರು ಬದಲಿಸಿ ಅಕ್ರಮ ಮಾಡಿದ್ದಾರೆ. ಅದನ್ನು ಮುಚ್ಚಿಕೊಳ್ಳುವ ಭರಾಟೆಯಲ್ಲಿ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ಅರ್ಕಾವತಿ ಬಡಾವಣೆಯಲ್ಲಿ 8 ಸಾವಿರ ಫಲಾನುಭವಿಗಳಿಗೆ ನಿವೇಶನ ನೀಡಲಾಗಿದೆ. ಸರ್ಕಾರದ ಪ್ರಸ್ತುತ ಡಿನೋಟಿಫಿಕೇಶನ್ನಿಂದ ಸುಮಾರು 5 ಸಾವಿರ ಫಲಾನುಭವಿಗಳು ಬೀದಿಗೆ ಬಿದ್ದಿದ್ದಾರೆ. ಕೆಲ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ನೆರವು ನೀಡಲಾಗಿದೆ. ಇದು ಲೋಕಸಭೆ ಚುನಾವಣೆ ತಯಾರಿಗಾಗಿ ಮಾಡಿದ ಅಕ್ರಮ. ಹೈಕೋರ್ಟ್ ಆದೇಶದ ನೆಪದಲ್ಲಿ ಮಾರ್ಗಸೂಚಿ ಉಲ್ಲಂಘಿಸಲಾಗಿದೆ ಎಂದು ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಆರೋಪಿದರು
2013ರ ಫೆಬ್ರವರಿ 12ರಂದು ಬಿಡಿಎ ಸಭೆಯಲ್ಲಿ 421 ಎಕರೆ ಭೂಮಿ ಡಿನೋಟಿಫೈ ಮಾಡಲು ನಿರ್ಣಯ ಮಾಡಿ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಆದರೆ ಕಾನೂನು ತೊಡಕು ಎದುರಾದ ಕಾರಣ ನಾನು ಯಾವುದೇ ತೀರ್ಮಾನ ತೆಗೆದುಕೊಂಡಿರಲಿಲ್ಲ. ಆದರೆ ಲೋಕಸಭೆ ಚುನಾವಣೆ ಸಮಯಕ್ಕೆ ಸರಿಯಾಗಿ ಈ ಕಡತ ಹೊರತೆಗೆಯಲಾಗಿದೆ. ಹಿಂದಿನ ನಿರ್ಣಯಕ್ಕೆ ಮತ್ತೆ 120 ಎಕರೆ ಸೇರಿಸಿ ಡಿನೋಟಿಫೈ ಮಾಡಲಾಗಿದೆ. ಒಂದೆಡೆ ಅಕ್ರಮವಾಗಿ ಡಿನೋಟಿಫೈ ಮಾಡಿರುವ ಜತೆಗೆ ಹೊಸದಾಗಿ 120 ಎಕರೆ ಸೇರಿಸಿರುವ ಚಮತ್ಕಾರವನ್ನು ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು. ಇದು ಲೋಕಸಭೆ ಚುನಾವಣೆಯ ಚಂದಾ ಕೂಡ ಆಗಿರಬಹುದು ಎಂದು ಶೆಟ್ಟರ್ ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಸೇಡಿನ ರಾಜಕಾರಣ
1999ರ ಅವಧಿಯಿಂದ ರಾಜ್ಯದಲ್ಲಿ ನಡೆದ ವಿದ್ಯುತ್ ಖರೀದಿ ಕುರಿತಂತೆ ಸದನ ಸಮಿತಿ ರಚಿಸುವಂತೆ ಸರ್ಕಾರವನ್ನು ಬಿಜೆಪಿ ಆಗ್ರಹಿಸಿತ್ತು. ಆದರೆ ಸದನ ಸಮಿತಿ ರಚಿಸಲು ನಿರಾಕರಿಸಿದ್ದ ಸಿದ್ದರಾಮಯ್ಯ, ಈಗ ಡಿನೋಟಿಫೈ ಪ್ರಕರಣ ಬಹಿರಂಗವಾಗುತ್ತಿದ್ದಂತೆ ಕಾಂಗ್ರೆಸ್ ಸರ್ಕಾರದ ವಿದ್ಯುತ್ ಖರೀದಿ ವಿಚಾರ ಹೊರಗಿಟ್ಟು ಸದನ ಸಮಿತಿ ತನಿಖೆಗೆ ಆದೇಶಿಸಿದ್ದಾರೆ. ಇದು ಬಿಜೆಪಿ ವಿರುದ್ಧದ ಸೇಡಿನ ರಾಜಕಾರಣ. ಆದರೆ ಯಾವುದೇ ತನಿಖೆ ಎದುರಿಸಲು ಬಿಜೆಪಿ ತಯಾರಿದೆ ಎಂದು ಮಾಜಿ ಮುಖ್ಯಮಂತ್ರಿ ಶೆಟ್ಟರ್ ಸ್ಪಷ್ಟಪಡಿಸಿದರು.
ತನಿಖೆಯಿಂದ ಬಣ್ಣ ಬಯಲು: ಸಿಎಂ
ಬೆಂಗಳೂರು: ನ್ಯಾಯಾಂಗ ತನಿಖೆಯಿಂದ ಅರ್ಕಾವತಿ ಡಿನೋಟಿಫಿಕೇಶನ್ ಹಗರಣದ ನಿಜ ಬಣ್ಣ ಬಯಲಾಗಲಿದ್ದು, ಸತ್ಯ ಮುಚ್ಚಿಹಾಕಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರ ಜತೆ ಮಾತನಾಡಿ, 'ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆ ನಡೆಸುವುದಾಗಿ ಪ್ರಕಟಿಸಿದೆ. ನಾನು ಈ ಮಾತಿಗೆ ಬದ್ಧವಾಗಿದ್ದೇನೆ' ಎಂದರು.
ಈ ಹಗರಣ ಮುಚ್ಚಿ ಹಾಕುವುದಕ್ಕಾಗಿಯೇ ಬಿಜೆಪಿ ಸಿಬಿಐ ತನಿಖೆಗೆ ಆಗ್ರಹಿಸುತ್ತಿದೆ. ಹಿಂದೆ ಸಿಬಿಐ ತನಿಖೆ ಎಂದರೆ ಬೆಚ್ಚಿ ಬೀಳುತ್ತಿದ್ದ ಬಿಜೆಪಿಯವರಿಗೆ ಈಗ ಇದ್ದಕ್ಕಿದ್ದಂತೆ ಆ ಸಂಸ್ಥೆಯ ಮೇಲೆ ಪ್ರೀತಿ ಬಂದಿದೆ. ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ತಮ್ಮ ಪಕ್ಷದ ಮುಖಂಡರ ತಪ್ಪುಗಳನ್ನು ಸುಲಭವಾಗಿ ಮುಚ್ಚಿಕೊಳ್ಳಬಹುದೆಂಬುದು ಬಿಜೆಪಿಯವರ ಎಣಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು. '2005ರಿಂದ 2014ರವರೆಗೆ ನಡೆದ ವಿದ್ಯುತ್ ಖರೀದಿ ಹಗರಣದ ಬಗ್ಗೆ ತನಿಖೆ ನಡೆಸಲು ಸರ್ಕಾರ ಸದನ ಸಮಿತಿ ರಚಿಸಿದೆ. ಈ ತನಿಖೆಯಿಂದ ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದ ತಪ್ಪುಗಳ ಬಣ್ಣವೂ ಬಯಲಾಗಲಿದೆ. ನಾವು ಯಾರ ಜತೆಯೂ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ವಿದ್ಯುತ್ ಖರೀದಿಯಲ್ಲಿ ತಪ್ಪು ನಡೆದಿದೆ. ಹೀಗಾಗಿ ತನಿಖೆ ನಡೆಸುತ್ತೇವೆ'ಎಂದರು.
ನ್ಯಾಯಾಂಗ ತನಿಖೆಯಿಂದ ಅರ್ಕಾವತಿ ಡಿನೋಟಿಫಿಕೇಶನ್ ಹಗರಣದ ನಿಜ ಬಣ್ಣ ಬಯಲಾಗಲಿದ್ದು, ಸತ್ಯ ಮುಚ್ಚಿಹಾಕಲು ಯಾರಿಂದಲೂ ಸಾಧ್ಯವಿಲ್ಲ.
-ಸಿದ್ದರಾಮಯ್ಯ, ಸಿಎಂ
ರಾಜ್ಯಾದ್ಯಂತ ಆ.7ರಂದು ಪ್ರತಿಭಟನೆ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಾದ್ಯಂತ ಆ.7ರಂದು ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ.
ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಿನಾಮೆ ನೀಡಿ, ಸಿಬಿಐ ತನಿಖೆ ಎದುರಿಸಬೇಕು. ಅಕ್ರಮ ಡಿನೋಟಿಫಿಕೇಶನ್ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸುವವರೆಗೂ ಬಿಜೆಪಿ ಹೋರಾಟ ನಡೆಸಲಿದೆ. ಪಕ್ಷದ ಕಾನೂನು ತಜ್ಞರೊಂದಿಗೆ ಚರ್ಚಿಸಿ ಕಾನೂನು ಹೋರಾಟಕ್ಕೂ ಚಿಂತನೆ ನಡೆಸಲಾಗುವುದು. ಮುಂದಿನ ಹೋರಾಟ ಕುರಿತಂತೆ ಆ.6ರಂದು ನಡೆಯುವ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗುವುದು. ಇದಕ್ಕೂ ಮುಂಚೆ ಅರ್ಕಾವತಿ ಬಡಾವಣೆಯ ಫಲಾನುಭವಿಗಳ ಸಭೆ ನಡೆಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ತಿಳಿಸಿದರು.