ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಟೀಕೆಗಳ ಮಧ್ಯೆಯೂ ಹಲವು ದಾಖಲೆ ಬರೆದ ಅಧಿವೇಶನ

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಲವು ವರ್ಷಗಳ ನಂತರ..

Srinivasa Murthy VN
Updated On : 30 Jul 2014, 1:44 am

ಕ.ಪ್ರ. ವಾರ್ತೆ ಬೆಂಗಳೂರು  ಜು. 29
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಲವು ವರ್ಷಗಳ ನಂತರ ಇಲಾಖಾವಾರು ಬೇಡಿಕೆ ಮೇಲಿನ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದರಿಂದ ವಿಧಾನಮಂಡಲ ಅಧಿವೇಶನ ಟೀಕೆಗಳ ಮಧ್ಯೆಯೂ ಹಲವು ದಾಖಲೆ ಬರೆದಿದೆ.
ಬೇಡಿಕೆ ಚರ್ಚೆ, ಬಜೆಟ್ ಚರ್ಚೆಯನ್ನು 'ತೌಡು ಕುಟ್ಟುವುದು' ಎಂದೇ ಕರೆಯಲಾಗುತ್ತದೆ. ಆದರೆ ಶಾಸಕರ ನೈಜ ಕರ್ತವ್ಯ ವ್ಯಾಪ್ತಿಯಲ್ಲಿ ಇಂಥ ಚರ್ಚೆ ಸರ್ಕಾರದ ಗಮನ ಸೆಳೆಯುತ್ತದೆ. ಸ್ಪೀಕರ್ ಕಾಗೋಡು ತಿಮ್ಮಪ್ಪ ಆಸ್ಥೆ ವಹಿಸಿ ಸಿಎಂ ಸಿದ್ದರಾಮಯ್ಯ ಅವರ ಮನವೊಲಿಸಿ ಕರೆದ ಈ ಅಧಿವೇಶನ ಹೊಸ ನಿರೀಕ್ಷೆ ಹುಟ್ಟುಹಾಕಿದೆ.
ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ (ಡಿಪಿಎಆರ್ ) ವ್ಯಾಪ್ತಿಯ ಎಲ್ಲ ಇಲಾಖೆಗಳ ಬೇಡಿಕೆ ಚರ್ಚೆ ನಡೆಸುವುದು ಪ್ರಧಾನ ಉದ್ದೇಶವಾಗಿತ್ತು. ಇದರಲ್ಲಿ ಅರ್ಧಯಶ ಸಿಕ್ಕಿದೆ. ಕೃಷಿ, ಗ್ರಾಮೀಣಾಭಿವೃದ್ಧಿ, ಆಹಾರ, ಅರಣ್ಯ, ಆರೋಗ್ಯ, ಶಿಕ್ಷಣ ಸೇರಿ 11 ಇಲಾಖೆ ಬಗ್ಗೆ 78 ಗಂಟೆ 8 ನಿಮಿಷ ಚರ್ಚೆ ನಡೆದಿದೆ. 246 ಮಂದಿ ಭಾಗವಹಿಸಿರುವುದು ವಿಶೇಷ.
ಜತೆಗೆ ಧನವಿನಿಯೋಗ ವಿಧೇಯಕ, ಗೂಂಡಾ ಕಾಯ್ದೆ ತಿದ್ದುಪಡಿ, ಕಬ್ಬು ಬೆಲೆ ನಿಗದಿ, ಸಹಕಾರ ಕಾಯ್ದೆ, ಕೆರೆ ಅಭಿವೃದ್ಧಿ ಪ್ರಾಧಿಕಾರ ಸೇರಿ 15 ವಿಧೇಯಕಗಳನ್ನು ಅಂಗೀಕರಿಸಲಾಗಿದೆ.
ಡಿನೋಟಿಫಿಕೇಶನ್ ಅವ್ಯವಹಾರದ ಗದ್ದಲದಲ್ಲಿ ಕೊನೆಯ ದಿನ ನಾಲ್ಕು ವಿಧೇಯಕಗಳು ಚರ್ಚೆ ಇಲ್ಲದೇ ಅಂಗೀಕರಿಸಲ್ಪಟ್ಟಿದ್ದನ್ನು ಹೊರತುಪಡಿಸಿದರೆ ಉಳಿದ 11 ವಿಧೇಯಕಗಳ ಬಗ್ಗೆ ಉಭಯ ಸದನಗಳಲ್ಲಿ ಆಡಳಿತ-ವಿಪಕ್ಷ ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ ಇತ್ತು.
ಭಾರಿ ಸಂಖ್ಯೆಯ ಪ್ರಶ್ನೆಗಳು: ಕಲಾಪ ಎಂದರೆ ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆ, ಶೂನ್ಯವೇಳೆ, ನಿಯಮ 69ರ ಅನ್ವಯ ಸಾರ್ವಜನಿಕ ಮಹತ್ವದ ಚರ್ಚೆ ಇರಲೇಬೇಕು. ಈ ವಿಚಾರದಲ್ಲೂ ಈ ಬಾರಿ ದಾಖಲೆಯನ್ನು ಕಾಣಬಹುದು. ಈ ಬಾರಿ ಅಧಿವೇಶನದಲ್ಲಿ ವಿಧಾನಸಭೆಯೊಂದರಲ್ಲೇ 4932 ಪ್ರಶ್ನೆಗಳನ್ನು ಸ್ವೀಕರಿಸಲಾಗಿತ್ತು. ಆ ಪೈಕಿ 4888 ಪ್ರಶ್ನೆಗಳು ಅಂಗೀಕಾರಗೊಂಡಿದ್ದವು. ಅವುಗಳಲ್ಲಿ ಚುಕ್ಕೆ ಗುರುತು ಮತ್ತು ಗುರುತಿಲ್ಲದ ಪ್ರಶ್ನೆಗಳು ಸೇರಿ 4676 ಪ್ರಶ್ನೆಗಳು ಸೇರಿದ್ದವು. ಸದನದಲ್ಲಿ ಉತ್ತರಿಸುವ 390 ಪ್ರಶ್ನೆಗಳ ಪೈಕಿ 363ಕ್ಕೆ, ಲಿಖಿತ ಮೂಲಕ ಉತ್ತರಿಸುವ 4286 ಪ್ರಶ್ನೆಗಳ ಪೈಕಿ 3898ಕ್ಕೆ ಸರ್ಕಾರ ಉತ್ತರ ನೀಡಿದ್ದು, 256 ಪ್ರಶ್ನೆಗಳು ತಿರಸ್ಕೃತಗೊಂಡಿವೆ. ಶೂನ್ಯ ವೇಳೆಯಲ್ಲಿ 135 ವಿಷಯಗಳು ಪ್ರಸ್ತಾಪಗೊಂಡಿವೆ. ಜತೆಗೆ 2 ಹಕ್ಕು ಚ್ಯುತಿ ನಿರ್ಣಯ ಮಂಡನೆಯಾಗಿದೆ. ನಿಯಮ 73ರ ಪ್ರಕಾರ 299 ಗಮನ ಸೆಳೆಯುವ ಸೂಚನೆಗಳನ್ನು ಸ್ಪೀಕರ್ ಸ್ವೀಕರಿಸಿದ್ದು, 72 ಸೂಚನೆ ಬಗ್ಗೆ ಚರ್ಚೆಯಾಗಿದೆ. ನಿಯಮ 351ರ ಅನ್ವಯ 278 ಸೂಚನೆಗಳು ಸ್ವೀಕೃತವಾಗಿದ್ದು, 244 ಅಂಗೀಕಾರಗೊಂಡು 181 ಸೂಚನೆಗಳ ಬಗ್ಗೆ ಚರ್ಚೆಯಾಗಿದೆ.

ಮೂರು ತನಿಖೆ
ಸಾಮಾನ್ಯವಾಗಿ ಮಹತ್ವದ ವಿಚಾರಗಳ ಬಗ್ಗೆ ಸರ್ಕಾರ ಸದನದಲ್ಲಿ ತನಿಖೆಗೆ ಆದೇಶ ನೀಡಲು ಹಿಂಜರಿಯುತ್ತದೆ. ಆದರೆ ಈ ಬಾರಿ ಅದರಲ್ಲಿಯೂ ಅಪವಾದ ಕಾಣಬಹುದು. ಹಲವು ವರ್ಷಗಳಿಂದ ಜೀವಂತವಾಗಿದ್ದ ನೈಸ್ ಹಗರಣದ ಬಗ್ಗೆ ತನಿಖೆ ನಡೆಸಲು ಸರ್ಕಾರ ಸದನ ಸಮಿತಿ ರಚಿಸಿದೆ. ವಿದ್ಯುತ್ ಖರೀದಿ ಹಗರಣದ ಬಗ್ಗೆಯೂ ಸದನ ಸಮಿತಿ ಮೂಲಕ ತನಿಖೆ ನಡೆಯಲಿದೆ. ಬಿಜೆಪಿ ಸದಸ್ಯರು ಸಿಬಿಐ ತನಿಖೆಗೆ ಪಟ್ಟು ಹಿಡಿದಿದ್ದರೂ ಅರ್ಕಾವತಿ ಡಿನೋಟಿಫಿಕೇಶನ್ ಹಗರಣದ ಬಗ್ಗೆ ನ್ಯಾಯಾಂಗ ತನಿಖೆಯನ್ನು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಗೆದ್ದ ನಿಯಮ 60
ವಿಧಾನಸಭೆ ಕಲಾಪದಲ್ಲಿ ನಿಯಮ 60ರ ಅನ್ವಯ ಚರ್ಚೆಯಾಗುವ ಸಾರ್ವಜನಿಕ ಮಹತ್ವದ ವಿಚಾರಕ್ಕೆ ಅದರದ್ದೇ ಆದ ಗತ್ತು ಇದೆ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದಕ್ಕೆ ಪ್ರತಿಪಕ್ಷಗಳು ಪ್ರಯೋಗಿಸುವ ಮಹಾನ್ ಅಸ್ತ್ರವಿದು. ಅದರಲ್ಲಿಯೂ ಸ್ಪೀಕರ್ ಕಾಗೋಡು ತಿಮ್ಮಪ್ಪನವರು ಈ ನಿಯಮ ಪಾಲನೆ ಸಂದರ್ಭದಲ್ಲಿ ಪ್ರತಿಪಕ್ಷಗಳತ್ತ ತುಸು ಹೆಚ್ಚಿನ ಪ್ರೀತಿ ತೋರಿದರು. ಹೀಗಾಗಿ 18 ಸೂಚನೆಗಳು ಸ್ವೀಕಾರವಾಗಿದ್ದು, 8 ಸೂಚನೆಗಳಿಗೆ ಸರ್ಕಾರ ಕಷ್ಟಪಟ್ಟು ಉತ್ತರಿಸಿದೆ. ನಿಯಮ 69ರ ಅನ್ವಯ 27 ಸೂಚನೆ ಸ್ವೀಕರಿಸಲಾಗಿದ್ದು, 3ಕ್ಕೆ ಸರ್ಕಾರದಿಂದ ಉತ್ತರ ಕೊಡಿಸುವಲ್ಲಿ ಸ್ಪೀಕರ್ ಸಫಲರಾಗಿದ್ದಾರೆ. ಆಡಳಿತ-ಪ್ರತಿಪಕ್ಷ ಸಾಲಿನಿಂದ ಹೊಸ ವಾಗ್ಮಿಗಳ ಪರಿಚಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement