ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪ್ರತಿ ಬಿಂದು, ಫಸಲು ಸಿಂಧು

'ಪ್ರತಿ ಮಾತೂ ಒಂದು ಮಂತ್ರ' ಎಂಬ ತತ್ವಕ್ಕೆ ಅಂಟಿಕೊಂಡಿರುವ ಪ್ರಧಾನಿ ಮೋದಿ, ದೇಶಕ್ಕೆ...

Srinivasa Murthy VN
Updated On : 30 Jul 2014, 3:35 am

ನವದೆಹಲಿ:  'ಪ್ರತಿ ಮಾತೂ ಒಂದು ಮಂತ್ರ' ಎಂಬ ತತ್ವಕ್ಕೆ ಅಂಟಿಕೊಂಡಿರುವ ಪ್ರಧಾನಿ ಮೋದಿ, ದೇಶಕ್ಕೆ ಇನ್ನೊಂದು ಮಂತ್ರವನ್ನು ನೀಡಿದ್ದಾರೆ. ಈ ಬಾರಿ ಅದು ಕೃಷಿ ಕ್ಷೇತ್ರಕ್ಕೆ ಸೇರಿದ್ದು.
'ಪ್ರತಿ ಬಿಂದು, ಫಸಲು ಸಿಂಧು'... (ಪರ್ ಡ್ರಾಪ್, ಮೋರ್ ಕ್ರಾಪ್) ಇದು ಪ್ರಧಾನಿ ಮೋದಿಯವರ ಹೊಸ ಮಂತ್ರ. ದೇಶದ ಕೃಷಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರುವ ಆಶಯದಿಂದ ಕೃಷಿ ವಿಜ್ಞಾನಿಗಳಿಗೆ ಮೋದಿ ಬೋಧಿಸಿರುವ ಈ ಸ್ಲೋಗನ್, ಲಾಲ್‌ಬಹದ್ದೂರ್ ಶಾಸ್ತ್ರಿಯವರ 'ಜೈ ಜವಾನ್, ಜೈ ಕಿಸಾನ್‌' ಅನ್ನು ನೆನಪಿಸಿದೆ.
ಮಂಗಳವಾರ ನಡೆದ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಎಲ್)ಯ 86ನೇ ಸಂಸ್ಥಾಪನಾ ದಿನಾಚರಣೆಯ ಉದ್ಘಾಟನೆ ಸಮಾರಂಭದಲ್ಲಿ ಮೋದಿ ಮಾತನಾಡಿ, ಪ್ರಸ್ತುತ ಚಾಲ್ತಿಯಲ್ಲಿರುವ ಕೃಷಿ ಪದ್ಧತಿಗಳಲ್ಲಿ ಬದಲಾವಣೆ ತಂದು ಬೆಳೆ ಇಳುವರಿ ಹೆಚ್ಚಿಸಲು ಶ್ರಮಿಸಬೇಕೆಂದು ಕೃಷಿ ವಿಜ್ಞಾನಿಗಳಿಗೆ ಕರೆ ನೀಡಿದರು.
   ರಾಜಿ ಬೇಡ
ಕ್ಷಿಪ್ರಗತಿಯಲ್ಲಿ ನಾವು ದೇಶದ ಕೃಷಿ ಇಳುವರಿ ಹೆಚ್ಚಿಸುವ ಸಾಧನೆ ಮಾಡಬೇಕು. ಆದರೆ, ಈ ನಿಟ್ಟಿನಲ್ಲಿ ಗುಣಮಟ್ಟದೊಂದಿಗೆ ರಾಜಿ ಬೇಡ ಎಂದರು. ಕೃಷಿಯ ಬಗೆಗಿನ ವೈಜ್ಞಾನಿಕ ತಿಳಿವಳಿಕೆ ರೈತರನ್ನು ತಲುಪುವ ಅವಶ್ಯಕತೆ ಇದೆ. ಪ್ರಯೋಗಾಲಯಗಳಲ್ಲಿ ಸಿದ್ಧಿಯಾದ ಜ್ಞಾನ ರೈತರನ್ನು ಮುಟ್ಟಬೇಕು. ಆದರೆ, ಇದೊಂದು ಸವಾಲಿನ ಕೆಲಸ ಎಂದು ಅಭಿಪ್ರಾಯಪಟ್ಟರು.
  ಸಮುದಾಯ ರೇಡಿಯೊ  
ರೈತರಿಗೆ ಕೃಷಿ ಜ್ಞಾನ ತಲುಪಿಸಲು ಸಮುದಾಯ ರೇಡಿಯೊಗಳ ಸಹಾಯ ಪಡೆಯಬೇಕು. ಪ್ರತಿ ಕೃಷಿ ವಿಶ್ವವಿದ್ಯಾಲಯ ಒಂದೊಂದು ರೇಡಿಯೊ ಕೇಂದ್ರ ತೆರೆಯಬೇಕೆಂದು ಸಲಹೆ ನೀಡಿದರು.

   ರೈತರನ್ನು ಸಜ್ಜುಗೊಳಿಸಿ
ದೇಶವನ್ನು ಸಮೃದ್ಧಗೊಳಿಸಲು ಬೆಳೆ ಸಮೃದ್ಧತೆ ಅವಶ್ಯಕ. ಈ ನಿಟ್ಟಿನಲ್ಲಿ ನಾವು ರೈತರನ್ನೂ ಸಜ್ಜುಗೊಳಿಸಬೇಕು. 'ಪ್ರತಿ ಬಿಂದು, ಫಸಲು ಸಿಂಧು' ಎಂಬ ಮಂತ್ರದೊಂದಿಗೆ 'ಹೆಚ್ಚು ಉತ್ಪಾದನೆ, ಹೆಚ್ಚಿನ  ಗಳಿಕೆ ಮಾರ್ಗ'ವನ್ನು ರೈತರಿಗೆ ತೋರಿಸಬೇಕು ಎಂದ ಮೋದಿ, ಎಣ್ಣೆ ಕಾಳು, ದ್ವಿದಳ
ಧಾನ್ಯಗಳ ಉತ್ಪಾದನೆಗೂ ಹೆಚ್ಚಿನ ಪ್ರಾಮುಖ್ಯ ನೀಡಬೇಕೆಂದರು.

   ನೀಲ ಕ್ರಾಂತಿ
ದೇಶದ ಮೀನುಗಾರಿಕೆ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಒತ್ತು ನೀಡಬೇಕು. ದೇಶದಲ್ಲಿ ಈ ಹಿಂದೆ ನಡೆದಿದ್ದ ಹಸಿರು ಕ್ರಾಂತಿ, ಕ್ಷೀರ ಕ್ರಾಂತಿಗಳಂತೆಯೇ ನೀಲ ಕ್ರಾಂತಿಯೂ ನಡೆಯುವ ಅಗತ್ಯ ಇದೆ ಎಂದರು.

   ತಯಾರಿ ಆರಂಭಿಸಿ
ಐಸಿಎಆರ್‌ನ 100ನೇ ಸಂಸ್ಥಾಪನಾ ಸಮಾರಂಭಕ್ಕೆ ಈಗಿನಿಂದಲೇ ತಯಾರಿ ಆರಂಭಿಸಿ. ನಿರ್ದಿಷ್ಟ ಗುರಿ ಸಾಧನೆ ಮೂಲಕ 100ನೇ ಸಂಸ್ಥಾಪನಾ ವರ್ಷವನ್ನು ಹೆಚ್ಚು ಅರ್ಥಪೂರ್ಣವಾಗಿ ಆಚರಿಸುವಂತೆ  ಮೋದಿ ಕರೆ ನೀಡಿದರು.

ಭಾಷಣದ ಹೈಲೈಟ್ಸ್
ಮೀನುಗಾರಿಕೆ ಅಭಿವೃದ್ಧಿಗಾಗಿ 'ನೀಲ ಕ್ರಾಂತಿ'ಆಗಬೇಕು
ಪ್ರತಿ ಕೃಷಿ ವಿವಿ ಸಮುದಾಯ ರೇಡಿಯೋ ಸ್ಥಾಪಿಸಲಿ
ಭಾರತದ ಭವಿಷ್ಯ ಬದಲಾಯಿಸುವಲ್ಲಿ ರೈತರ ಪಾತ್ರ ಮಹತ್ವ
'ಪರ್ ಡ್ರಾಪ್, ಮೋರ್ ಕ್ರಾಪ್‌' ಎಂಬುದೇ ಮೂಲ ಮಂತ್ರವಾಗಲಿ.
ಕೃಷಿ ಸಂಶೋಧನೆಯಲ್ಲಿ ನಿರ್ದಿಷ್ಟ ಗುರಿ ಹೊಂದಬೇಕು.
ದೇಶದ ಕೃಷಿ ಉತ್ಪಾ ದನೆ ಹೆಚ್ಚಿಸದೇ ಬೇರೆ ದಾರಿಇಲ್ಲ
ಕೃಷಿ ಕ್ಷೇತ್ರ ಅಭಿವೃದ್ಧಿಯತ್ತ ಸಾಗುವ ವಿಶ್ವಾಸವಿದೆ.
ರೇಡಿಯೊ ಮೂಲಕ ಪ್ರಯೋಗಾಲಯದಲ್ಲಿ ಸಿದ್ಧಿಯಾದ ಜ್ಞಾನ ರೈತರಿಗೆ ತಲುಪಲಿ.
'ಹೆಚ್ಚು ಉತ್ಪಾದಿಸಿ, ಹೆಚ್ಚು ಗಳಿಸುವ ಮಾರ್ಗ'ವನ್ನು ರೈತರಿಗೆ ತೋರಿಸಬೇಕು
ಎಣ್ಣೆ ಕಾಳುಗಳು ಹಾಗೂ ದ್ವಿದಳ ಧಾನ್ಯಗಳ ಇಳುವರಿ ಹೆಚ್ಚಾಗಲಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement