ಅರ್ಕಾವತಿ ಡಿನೋಟಿಫಿಕೇಶನ್ ಅನಿವಾರ್ಯವಿತ್ತು: ಸಿದ್ದರಾಮಯ್ಯ ಪರ ನಿಲ್ಲುತ್ತಿವೆ ದಾಖಲೆಗಳ ಸತ್ಯ
ಅರ್ಕಾವತಿ ಬಡಾವಣೆಯಲ್ಲಿ ನಿಜ...
ನ್ಯಾಯಾಂಗ ನಿಂದನೆ ಇಕ್ಕಟ್ಟಿಗೆ ಸಿಲುಕಿದ್ದ ಸಿದ್ದು ಸರ್ಕಾರ
ಪರಿಷ್ಕೃತ ಯೋಜನೆ ರಾಜ್ಯ ಪತ್ರಕ್ಕೆ ಸಹಿ ಹಾಕಿದ್ದ ಸಿಎಂ
ಸುಪ್ರೀಂ ನಿರ್ದೇಶನದ ಪ್ರಕಾರ ನಡೆದ ಮರುಪರಿವರ್ತನೆ ಅಕ್ರಮ ಡಿನೋಟಿಫಿಕೇಶನ್ ಅಲ್ಲ- ಕಾನೂನು ತಜ್ಞರ ಅಭಿಮತ
-ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಬೆಂಗಳೂರು ಜು.30
ಅರ್ಕಾವತಿ ಬಡಾವಣೆಯಲ್ಲಿ ನಿಜಕ್ಕೂ 540 ಎಕರೆ ಭೂಮಿ ಡಿನೋಟಿಫೈ ಆಗಿದೆಯೇ? ಇದರಲ್ಲಿ ಕೋಟ್ಯಂತರ ರುಪಾಯಿ 'ಕೈ' ಬದಲಾಗಿದೆಯೇ? ಲೋಕಸಭಾ ಚುನಾವಣೆಗೆ ಹೈಕಮಾಂಡ್ ಕೈ ಚೀಲ ತುಂಬಿಸುವ ಅನಿವಾರ್ಯಕ್ಕೆ ಬಿದ್ದ ಸಿಎಂ ಸಿದ್ದರಾಮಯ್ಯ ಭೂ ನೈವೇದ್ಯ ಸ್ವೀಕರಿಸಿದರೇ?
ಕಳೆದ ಕೆಲ ದಿನಗಳಿಂದ ಇಂಥ ಹತ್ತಾರು ಪ್ರಶ್ನೆಗಳು ರಾಜ್ಯದ ನಾಗರಿಕರನ್ನು ಕಾಡುತ್ತಿವೆ. ಪ್ರತಿಪಕ್ಷ ಬಿಜೆಪಿ 'ಗುಳುಂ ಗುಳುಂ ಅರ್ಕಾವತಿ ಗುಳುಂ' ಎಂಬ ಘೋಷಣೆಯೊಂದಿಗೆ ಭಾರಿ ಹೋರಾಟ ಆರಂಭಿಸಿದೆ. 'ನಾನು ಒಂದು ಗುಂಟೆ ಜಾಗವನ್ನೂ ಡಿನೋಟಿಫೈ ಮಾಡಿಲ್ಲ' ಎಂದು ಸಿದ್ದರಾಮಯ್ಯ ಸದನದಲ್ಲಿ ಹೇಳಿದ್ದು ಸುಳ್ಳೇ ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿದೆ.
ಹಾಗಾದರೆ ಅರ್ಕಾವತಿಯಲ್ಲಿ ನಿಜಕ್ಕೂ ನಡೆದಿದ್ದೇನು? ಅರ್ಕಾವತಿ ಬಡಾವಣೆಯಲ್ಲಿ 541 ಎಕರೆ ಡಿನೋಟಿಫಿಕೇಶನ್ ನಡೆಸುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾನೂನು ಪ್ರಕಾರ ಅನಿವಾರ್ಯವಾಗಿತ್ತೇ? ಇಲ್ಲವಾದರೆ ಅವರು ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಳ್ಳುವ ಸನ್ನಿವೇಶ ನಿರ್ಮಾಣವಾಗುತ್ತಿತ್ತೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವ ದಾಖಲೆಗಳು 'ಕನ್ನಡಪ್ರಭ'ಕ್ಕೆ ಲಭ್ಯವಾಗಿವೆ.
ದಾಖಲೆ ಪ್ರಕಾರ ಸಿಎಂ ಸಿದ್ದರಾಮಯ್ಯ ಅರ್ಕಾವತಿಯಲ್ಲಿ ಒಂದಿಂಚು ಜಾಗವನ್ನೂ ಡಿನೋಟಿಫೈ ಮಾಡಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ಆಡಳಿತಾತ್ಮಕ ನಿರ್ಣಯಗಳು, ನ್ಯಾಯಾಲಯದ ಆದೇಶ, ಭೂಸ್ವಾಧೀನ ಅಧಿಕಾರಿಗಳ ವರದಿ ಆಧರಿಸಿ ಬಿಡಿಎ ನೀಡಿದ್ದ ವರದಿ ಅನ್ವಯ ಅರ್ಕಾವತಿ ಪರಿಷ್ಕೃತ ಯೋಜನೆ ರಾಜ್ಯ ಪತ್ರಕ್ಕೆ ಸಹಿ ಹಾಕಿದ್ದಾರೆ. ಅದು ನ್ಯಾಯಾಂಗ ನಿಂದನೆ ಮುಜುಗರದಿಂದ ಸರ್ಕಾರ ತಪ್ಪಿಸಿಕೊಳ್ಳುವ ಏಕಮಾತ್ರ ಉದ್ದೇಶಕ್ಕಾಗಿ! ಆದರೆ ಪ್ರತಿಪಕ್ಷ ಬಿಜೆಪಿ ಇದೊಂದು ಭಾರಿ ಹಗರಣ. ಹೀಗಾಗಿ ಸಿಬಿಐ ತನಿಖೆ ಆಗಲೇಬೇಕು ಎಂದು ಪಟ್ಟು ಹಿಡಿದಿದೆ.
ಆದರೆ ತಾವೇ ಅಧಿಕಾರದಲ್ಲಿದ್ದಾಗ ನ್ಯಾಯಾಲಯ ಆದೇಶ ಪಾಲನೆಗಾಗಿ ನಿಯೋಜಿಸಿದ್ದ ವಿಶೇಷ ಭೂಸ್ವಾಧೀನಾಧಿಕಾರಿಗಳ ವರದಿ ಆಧರಿಸಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 1766 ಎಕರೆ 7 ಗುಂಟೆ ಜಾಗದಲ್ಲಿ ಅರ್ಕಾವತಿ ಬಡಾವಣೆ ನಿರ್ಮಿಸಲು ಪರಿಷ್ಕೃತ ಯೋಜನೆಗೆ (ಶೆಟ್ಟರ್ ಆರೋಪಿಸುವ ರಿ-ಡು) ಹೈಕೋರ್ಟ್‌ನಲ್ಲಿ ರಾಜ್ಯಪತ್ರ ಸಲ್ಲಿಸಿದೆ ಎಂಬ ವಾಸ್ತವ ಮರೆತುಹೋದಂತಿದೆ. ಹೀಗಾಗಿ ಸರ್ಕಾರ ತೆಗೆದುಕೊಂಡ ಈ ಆಡಳಿತಾತ್ಮಕ ನಿರ್ಧಾರಕ್ಕೆ ಈಗ ಅಕ್ರಮದ ಲೇಪ ಮೆತ್ತಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಶೆಟ್ಟರ್ ಸಿಎಂ ಆಗಿದ್ದ ಸಂದರ್ಭದಲ್ಲೇ ನಡೆದ ಬಿಡಿಎ ಸಭೆಯಲ್ಲಿ 423 ಎಕರೆ 13 ಗುಂಟೆ ಜಾಗ ಹೊರತುಪಡಿಸಿ ಪರಿಷ್ಕೃತ ಯೋಜನೆಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲು ಫೆ. 12, 2013ರಂದು ಒಪ್ಪಿಗೆ ನೀಡಲಾಗಿದೆ. ಹೀಗಾಗಿ ಶೆಟ್ಟರ್ ಅವಧಿಯಲ್ಲಿ ಸೃಷ್ಟಿಯಾದ ಈ ಭೂ'ಭೂತ'ದ ಗರ್ಭಕ್ಕೆ ವರ್ಷ ಕಳೆಯುವಷ್ಟರಲ್ಲಿ ಕಾನೂನಿನ ಉರುಳು ಗಂಟುಬಿದ್ದಿದ್ದರಿಂದ ಈಗಿನ ಸರ್ಕಾರಕ್ಕೆ ಇದನ್ನು 'ದತ್ತು' ತೆಗೆದುಕೊಳ್ಳುವುದು ಅನಿವಾರ್ಯವಾಗಿ ಪರಿಣಮಿಸಿದೆ.
ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅರ್ಕಾವತಿ ಬಡಾವಣೆ ಸಂಬಂಧ 2ನೇ ಬಾರಿಗೆ ಪುನರ್ ಪರಿಷ್ಕೃತ ಯೋಜನೆ ಅಧಿಸೂಚನೆ ಸಲ್ಲಿಸಿತು. ಬಡಾವಣೆಯ 983 ಎಕರೆ 33 ಗುಂಟೆ ಜಮೀನನ್ನು ಈ ಪರಿಷ್ಕೃತ ಯೋಜನೆಯಿಂದ ಹೊರಗಿಡಲಾಗಿದೆ. ಇದು ಕಾಂಗ್ರೆಸ್ ಅವಧಿಯಲ್ಲಿ ನಡೆದ ಅಕ್ರಮ ಡಿನೋಟಿಫಿಕೇಶನ್ ಅವಾಂತರ ಎಂಬುದು ಶೆಟ್ಟರ್ ವಾದ. ಆದರೆ ಸಿದ್ದರಾಮಯ್ಯ ಸರ್ಕಾರ ಎರಡನೇ ಬಾರಿಗೆ ಪರಿಷ್ಕೃತ ಯೋಜನೆ ಸಲ್ಲಿಸುವುದಕ್ಕೆ ಮುನ್ನವೇ ಅರ್ಕಾವತಿ ಒಡಲಿನಲ್ಲಿ ಹಲವು 'ಗುಟ್ಟು'ಗಳು ಮುಚ್ಚಿಹೋಗಿವೆ.
3,839 ಎಕರೆ 12 ಗುಂಟೆ ಜಾಗದಲ್ಲಿ ಅರ್ಕಾವತಿ ಬಡಾವಣೆ ನಿರ್ಮಿಸಲು ಫೆ.3, 2003ರಲ್ಲಿ 16 ಗ್ರಾಮಗಳ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. 2004ರಲ್ಲಿ ಬಿಡಿಎ 589.12 ಎಕರೆ ಹೊರತುಪಡಿಸಿ ಪರಿಷ್ಕೃತ ಯೋಜನೆ ಸಿದ್ಧಪಡಿಸಿತು. ಆದರೆ ಅಂದಿನ ಸರ್ಕಾರದ ಸೂಚನೆ ಮೇರೆಗೆ ಮತ್ತೆ 500 ಎಕರೆ ಕೈ ಬಿಟ್ಟು 2750 ಎಕರೆ ವಿಸ್ತೀರ್ಣದಲ್ಲಿ ಯೋಜನೆ ಆರಂಭಿಸುವುದಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಈ ಭೂಸ್ವಾಧೀನ ಪ್ರಕ್ರಿಯೆ ಪ್ರಶ್ನಿಸಿ ಹಲವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಯೋಜನಾ ವ್ಯಾಪ್ತಿಯಿಂದ ಭೂಮಿ ಕೈ ಬಿಡುವಾಗ ತಾರತಮ್ಯವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯ ನೀಡಿದ್ದರ ಜತೆಗೆ ಡಿನೋಟಿಫಿಕೇಶನ್‌ಗೆ 6 ಮಾರ್ಗಗಳನ್ನು ಸೂಚಿಸಿತ್ತು. ಇದರ ಆಧಾರದಲ್ಲಿ ಅರ್ಕಾವತಿ ಮಾರ್ಗಸೂಚಿಯಲ್ಲಿ ಬರುವ ಭೂಮಿ ಡಿನೋಟಿಫೈ ಮಾಡುವ ಜವಾಬ್ದಾರಿಯನ್ನು ಬಿಡಿಎಗೆ ನಿಯೋಜಿಸಲಾಗಿದ್ದು, ಬಿಡಿಎ ಡಿನೋಟಿಫೈ ಮಾಡಿದ ನಂತರ ಉಳಿಕೆ ಜಮೀನಿನ ಬಗ್ಗೆ ಪರಿಷ್ಕೃತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಸರ್ಕಾರ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ದ್ವಿಸದಸ್ಯ ಪೀಠ 25-11-2005ರಂದು ಆದೇಶಿಸಿತ್ತು.
ಇದನ್ನು ಪ್ರಶ್ನಿಸಿ ಹಲವರು ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ರಾಜ್ಯ ಹೈಕೋರ್ಟ್ ಆದೇಶವನ್ನು ಸುಪ್ರೀಂ ಎತ್ತಿ ಹಿಡಿದಿದ್ದು ಮಾತ್ರವಲ್ಲ, 6 ಮಾರ್ಗಸೂಚಿ ಅನ್ವಯ ಸ್ವಾಧೀನಪಡಿಸಿಕೊಂಡ ಜಮೀನು ಇದ್ದಲ್ಲಿ ಅವುಗಳನ್ನು ಹೊರತುಪಡಿಸುವಂತೆ ಸೂಚಿಸಿತ್ತು. ಮಾತ್ರವಲ್ಲ ಈಗಾಗಲೇ ಬಿಡಿಎ ಲೇಔಟ್ ಆಗಿ ಪರಿವರ್ತಿಸಿದ ಹಾಗೂ ಬಲ್ಕ್ ಹಂಚಿಕೆ ಮಾಡಿದ ಜಾಗಗಳಿಗೂ ಇದು ಅನ್ವಯವಾಗುತ್ತದೆ ಎಂದು ಸೂಚಿಸಿತ್ತು. ಹೀಗಾಗಿ ಭೂ ಮಾಲೀಕರ ತಕರಾರು ಅರ್ಜಿಗಳನ್ನು ಮರು ವಿಚಾರಣೆ ನಡೆಸಿ ನ್ಯಾಯಾಲಯ ನಿಗದಿಪಡಿಸಿದ 6 ಮಾರ್ಗಸೂಚಿಗಳು ಅನ್ವಯವಾಗುವ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಡಿನೋಟಿಫೈ ಮಾಡಲು ಅಂದು ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ 4-6-2010ಕ್ಕೆ ನಾಲ್ವರು ಭೂ ಸ್ವಾಧೀನ ಅಧಿಕಾರಿಗಳನ್ನು ನೇಮಿಸಿ, ಪ್ರತಿಯೊಬ್ಬರಿಗೆ ಅರ್ಕಾವತಿ ಬಡಾವಣೆ ವ್ಯಾಪ್ತಿಯಲ್ಲಿ ಬರುವ ತಲಾ 4 ಗ್ರಾಮಗಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿತ್ತು. ಈ ಅಧಿಕಾರಿಗಳು 983.33 ಎಕರೆ ಭೂಮಿಯನ್ನು ಸ್ವಾಧೀನದಿಂದ ಹೊರಗಿಟ್ಟು ಪರಿಷ್ಕೃತ ಯೋಜನೆ ತಯಾರಿಸುವಂತೆ ಬಿಡಿಎಗೆ ವರದಿ ನೀಡಿದ್ದರು.
ಬಿಡಿಎಯ ಈ ಪರಿಷ್ಕೃತ ಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಅಂದು ಬಿಡಿಎ ಅಧ್ಯಕ್ಷರಾಗಿದ್ದ ಸುಭೀರ್ ಹರಿಸಿಂಗ್, ಬಿಡಿಎ ಆಯುಕ್ತ ಶ್ಯಾಂ ಭಟ್, ಸಿಎಂ (ಶೆಟ್ಟರ್) ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ್, ಬಿಬಿಎಂಪಿ ಆಯುಕ್ತ ಸಿದ್ದಯ್ಯ, ಸರ್ಕಾರದ ಮುಖ್ಯ ವಾಸ್ತುಶಿಲ್ಪಿ ಕೆ.ಉದಯ್, ಬಿಬಿಎಂಪಿ ಅಭಿಯಂತರ ಸದಸ್ಯ ಪಿ.ಎನ್.ನಾಯಕ್, ನಗರ ಯೋಜನಾ ಸದಸ್ಯ ಬಿ.ಎಂ.ತಿರುಕನಗೌಡರ್, ಆರ್ಥಿಕ ಸದಸ್ಯ ಬಿ. ಗಂಗಣ್ಣ, ಬಿಡಿಎ ಸದಸ್ಯ ಕಾರ್ಯದರ್ಶಿ ಕೆ.ಎಂ.ಜಾನಕಿ ಫೆ 12, 2013ರಂದು ಭಾಗವಹಿಸಿದ್ದಸಭೆಯಲ್ಲಿ ಈ ವಿಚಾರ ಚರ್ಚೆಗೆ ಬಂದಿತ್ತು. ಮಾತ್ರವಲ್ಲ ವಿಶೇಷ ಭೂಸ್ವಾಧೀನ ಅಧಿಕಾರಿಗಳು ನೀಡಿದ್ದ ವರದಿ ಆಧರಿಸಿ 423.13 ಎಕರೆ ಭೂಮಿ ಹೊರಗಿಟ್ಟು ಪರಿಷ್ಕೃತ ಯೋಜನೆ ತಯಾರಿಸುವಂತೆ ಒಪ್ಪಿಗೆ ನೀಡಲಾಗಿತ್ತು. ಈ ಸಭೆಯ ನಡಾವಳಿ ಪತ್ರ 'ಕನ್ನಡಪ್ರಭ'ಕ್ಕೆ ಲಭ್ಯವಾಗಿದೆ.
ಆದರೆ ಈ ಮಧ್ಯೆ ಎಸ್.ಜಯರಾಂ ಮತ್ತು ಗುರುಪಾದಪ್ಪ ನಾಗಮಾರಪಳ್ಳಿ ಎಂಬವರು ಅರ್ಕಾವತಿ ವಿಚಾರದಲ್ಲಿ ರಿಟ್ ಅರ್ಜಿ ಸಲ್ಲಿಸಿದರು. ಸರ್ಕಾರ ನ್ಯಾಯಾಲಯ ಸೂಚಿಸಿದ 6 ಮಾರ್ಗಗಳ ಅನ್ವಯ ಭೂಮಿ ಡಿನೋಟಿಫೈ ಮಾಡಿ ಪರಿಷ್ಕೃತ ಯೋಜನೆ ಇನ್ನೂ ಸಲ್ಲಿಸಿಲ್ಲ. ಇದು ನ್ಯಾಯಾಂಗ ನಿಂದನೆಯಾಗುತ್ತದೆ. ಹೀಗಾಗಿ ತಿಂಗಳೊಳಗಾಗಿ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದರು. ಹೀಗಾಗಿ 20-4-2014ರಂದು ಒಂದು ವಾರದೊಳಗಾಗಿ ಅನುಪಾಲನಾ ವರದಿ ನೀಡುವಂತೆ ನ್ಯಾಯಾಲಯ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಸೂಚಿಸಿತ್ತು.
ಆದರೆ ಆ ಸಮಯದಲ್ಲಿ ಚುನಾವಣಾ ನೀತಿ ಸಂಹಿತೆ ಇದ್ದುದರಿಂದ ನ್ಯಾಯಾಂಗ ನಿಂದನೆ ಆರೋಪದಿಂದ ಪಾರಾಗುವ ಇಕ್ಕಟ್ಟಿಗೆ ಸಿಲುಕಿದ ಸರ್ಕಾರ ಚುನಾವಣಾ ಆಯೋಗದ ಅನುಮತಿ ಪಡೆದು 1766 ಎಕರೆ 7 ಗುಂಟೆ ಪರಿಷ್ಕೃತ ಯೋಜನೆಗೆ ರಾಜ್ಯಪತ್ರ ಹೊರಡಿಸಿದೆ. ಈ ಪ್ರಕ್ರಿಯೆಯಲ್ಲಿ 541 ಎಕರೆ ಭೂಮಿಯನ್ನು ಮೂಲ ಯೋಜನೆಯಿಂದ ಕೈ ಬಿಡಲಾಗಿದೆ. ಕಾನೂನು ಪ್ರಕಾರ ಸರ್ಕಾರ ಈ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವೇ ಆಗಿತ್ತು. ಹೀಗಾಗಿ ಇದು ಸುಪ್ರೀಂ ನಿರ್ದೇಶನದ ಪ್ರಕಾರ ನಡೆದ ಯೋಜನಾ ಮರು ಪರಿವರ್ತನೆಯೇ ವಿನಾ ಅಕ್ರಮ ಡಿನೋಟಿಫಿಕೇಶನ್ ಅಲ್ಲ ಎಂಬುದು ಕಾನೂನು ತಜ್ಞರ ಅಭಿಮತ. ಆದರೆ ಕಾಗೆ ಬಂದು ಕೂರುವುದಕ್ಕೂ, ಕೋಲು ಮುರಿದು ಬೀಳುವುದಕ್ಕೂ ಸರಿ ಹೋಗಿದೆ. ಸರ್ಕಾರ ಅಧಿಸೂಚನೆ ಹೊರಡಿಸುವಾಗ ಚುನಾವಣೆ ಎದುರಿತ್ತು. ಹೀಗಾಗಿ ಖರ್ಚಿಗಾಗಿ ಸಿದ್ದರಾಮಯ್ಯ ಡಿನೋಟಿಫೈ ಮಾಡಿದ್ದಾರೆಂಬ ಆರೋಪ ಹೆಚ್ಚು ರೋಚಕವಾಗಿ ಕಾಣುತ್ತಿದೆ. ಆದರೆ ದಾಖಲೆಗಳು ಹೇಳುವ ಸತ್ಯಗಳೇ ಬೇರೆ. ಅವು ಸಿದ್ದರಾಮಯ್ಯ ಪರವಾಗಿ ನಿಲ್ಲುತ್ತಿವೆ.
ಹಿಂದಿನ ಡಿನೋಟಿಫಿಕೇಶನ್‌ಗಳು
-2004ರಲ್ಲಿ ಅಂತಿಮ ಅಧಿಸೂಚನೆ ಸಂದರ್ಭದಲ್ಲಿ 1089 ಎಕರೆ.
-2005ರಿಂದ 2013ರ ಅವಧಿಯಲ್ಲಿ ನ್ಯಾಯಾಲಯ ಆದೇಶದ ಪ್ರಕಾರ 83.08 ಎಕರೆ.
-2006ರಲ್ಲಿ 140.32 ಎಕರೆ.
-4-5-2005ರಿಂದ 19-8-2010ರ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರಗಳ ಯಾವುದೇ ಶಿಫಾರಸು ಇಲ್ಲದೇ 198.20 ಎಕರೆ.