ಬಂದಾಗುತ್ತೆ ಇಂದು ಬೆಂಗಳೂರು, ಹೊರ ಹೋಗುವಾಗ ಹುಷಾರು
ಖಾಸಗಿ ಶಾಲಾ ಕಾಲೇಜುಗಳು ರಜೆ ಸಾಧ್ಯತೆ ಆಟೋ ಒಡಾಟ ವಿರಳ, ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ವ್ಯಾಪಾರ ವಹಿವಾಟು ಬಂದ್..
ಖಾಸಗಿ ಶಾಲಾ ಕಾಲೇಜುಗಳು ರಜೆ ಸಾಧ್ಯತೆ ಆಟೋ ಒಡಾಟ ವಿರಳ, ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ವ್ಯಾಪಾರ ವಹಿವಾಟು ಬಂದ್ ಅಹಿತಕರ ಘಟನೆ ನಡೆದರೆ ಬಸ್ ಸಂಚಾರ ಅನುಮಾನ ಸರ್ಕಾರಿ ಕಚೇರಿ, ಬ್ಯಾಂಕ್ ಸೇವೆ ಎಂದಿನಂತೆ
ಬೆಂಗಳೂರು: ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ಹಾಗೂ ಕರ್ನಾಟಕದಲ್ಲಿ ಎಂಇಎಸ್ ಮತ್ತು ಶಿವಸೇನೆ ಪುಂಡಾಟಿಕೆ ಖಂಡಿಸಿ ಕನ್ನಡ ಸಂಘಟನೆಗಳು ಗುರುವಾರ, ಬೆಂಗಳೂರು ಬಂದ್ಗೆ ಕರೆನೀಡಿದ್ದು ಎಂದಿನ ಜನ ಜೀವನ ಏರುಬೇರಾಗುವ ಸಂಭವ ಇದೆ. ಆದರೆ, ಬಂದ್ ಶಾಂತಿಯುತವಾಗಿರಲಿದೆ ಎಂದು ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಬಂದ್ಗೆ ಕೆಲವು ಸಂಘಟನೆಗಳು ಹಾಗೂ ಆಟೋ ಚಾಲಕರ ಸಂಘ ಬೆಂಬಲ ನೀಡಿವೆ. ಹಾಗಾಗಿ ಆಟೋಗಳು ಓಡಾಟ ಕಡಿಮೆ ಇರುವ ಸಾಧ್ಯತೆ ಇದೆ. ಕೆಲ ಖಾಸಗಿ ಶಾಲೆ, ಕಾಲೇಜುಗಳು ಈಗಾಗಲೇ ರಜೆ ಘೋಷಿಸಿವೆ. ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ಗಳ ಸಂಚಾರ ಎಂದಿನಂತೆ ಇರಲಿದೆ. ಏರ್ಪೋರ್ಟ್ ಟ್ಯಾಕ್ಸಿಗಳು ಸಂಚರಿಸಲಿವೆ.
'ಕನ್ನಡಪ್ರಭ'ದೊಂದಿಗೆ ಮಾತನಾಡಿದ ವಾಟಾಳ್, ರಾಜ್ಯದಲ್ಲಿ ಅತ್ಯಾಚಾರ ಸರಣಿ ತಡೆಗಟ್ಟಬೇಕು. ರಾಜ್ಯದ ಶಾಂತಿ ಹಾಳು ಮಾಡುತ್ತಿರುವ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಶಾಂತಿಯುತ ಬಂದ್ಗೆ ಕರೆ ನೀಡಿದ್ದೇವೆ. ಸುಮಾರು 70ಕ್ಕೂ ಅಧಿಕ ಕನ್ನಡ ಸಂಘಟನೆಗಳು, ಆರ್ಎಂಸಿ ಯಾರ್ಡ್, ನಗರದ ಮಾಲ್ಗಳು, ಖಾಸಗಿ ಶಾಲೆಗಳು, ಹೋಟೆಲ್ ಮಾಲೀಕರು, ಸರ್ಕಾರಿ ನೌಕರರ ಸಂಘಟನೆ, ಖಾಸಗಿ ವಾಹನ ಮಾಲೀಕರ ಕೆಲ ಸಂಘಟನೆಗಳು ಬಂದ್ಗೆ ಬೆಂಬಲ ಸೂಚಿಸಿವೆ ಎಂದರು.
ಪ್ರವಾಸಿ ವಾಹನ ವಿರಳ: ಬಂದ್ಗೆ ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘ ಬಾಹ್ಯ ಬೆಂಬಲ ವ್ಯಕ್ತಪಡಿಸಿದೆ. ಸಂಘದ ಕಾರ್ಯದರ್ಶಿ, ಕೆ.ರಾಧಾಕೃಷ್ಣ ಹೊಳ್ಳ, 'ಬಂದ್ಗೆ ನಾವು ಬಾಹ್ಯ ಬೆಂಬಲ ವ್ಯಕ್ತಪಡಿಸುತ್ತೇವೆ. ಈಗಾಗಲೇ ಬುಕ್ ಆಗಿರುವ ಕಾರು, ಟೊಂಪೊಟ್ರಾವಲರ್ನಂಥ ವಾಹನಗಳು ಎಂದಿನಂತೆ ಸಂಚರಿಸಲಿವೆ. ಹೊಸದಾಗಿ ಯಾವುದೇ ಬುಕ್ಕಿಂಗ್ ಮಾಡಿಕೊಂಡಿಲ್ಲ. ಆದರೆ, ತುರ್ತು ಸೇವೆಗಳ ವಾಹನಗಳು ಎಂದಿನಂತೆ ಸಂಚರಿಸಲಿವೆ. ಏರ್ಪೋರ್ಟ್ ಟ್ಯಾಕ್ಸಿಗಳು ಎಂದಿನಂತೆ ಇರಲಿವೆ' ಎಂದರು.
ಈ ಸೇವೆ ಲಭ್ಯ
ಅಗತ್ಯ ಸೇವೆಗಳಾದ ಅಂಬುಲೆನ್ಸ್, ಮೆಡಿಕಲ್ ಶಾಪ್, ಹಾಲು, ದಿನಪತ್ರಿಕೆ ಮುಂತಾದ ಸೇವೆಗಳು ಎಂದಿನಂತೆ ಲಭ್ಯ
ಹೀಗೆ ಮಾಡಿ
-ತೀರಾ ಅಗತ್ಯವಿದ್ದರೆ ಮಾತ್ರ ಹೊರಗೆ ಬನ್ನಿ.
-ಬಸ್, ಆಟೋ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆಗಳಿರುವುದರಿಂದ ದೂರದ ಪ್ರಯಾಣ ಬೇಡ.
-ಪಿಕ್ನಿಕ್, ಪ್ರವಾಸ ಮಾಡದಿರುವುದು ಒಳಿತು.
-ಮಕ್ಕಳನ್ನು ಖುದ್ದು ಶಾಲೆಗೆ ತಲುಪಿಸಿ ಬನ್ನಿ, ತರಗತಿ ನಡೆಯುವುದು ಖಚಿತವಾದರೆ ಮಾತ್ರ ಶಾಲೆಯಲ್ಲಿ ಬಿಟ್ಟು ಬನ್ನಿ.
-ಬ್ಯಾಂಕ್, ಮತ್ತಿತರ ಸರಕಾರಿ ಕೆಲಸ ಸಾಧ್ಯವಾದರೆ ಮುಂದೂಡಿ
-ಸುತ್ತಾಟ, ಶಾಪಿಂಗ್ ಸಂಜೆ 6ರ ನಂತರವೇ ಉತ್ತಮ
-ದೂರದೂರಿಂದ ನಗರಕ್ಕೆ ಬರಲಿರುವ ಬಂಧುಗಳನ್ನು ಮೆಜೆಸ್ಟಿಕ್, ರೈಲುನಿಲ್ದಾಣದಿಂದ ಖುದ್ದು ನೀವೇ ಹೋಗಿ ಕರೆ ತನ್ನಿ
ಅತ್ಯಾಚಾರಿಗಳು ಹಾಗೂ ರಾಜ್ಯದಲ್ಲಿ ಶಾಂತಿ ಕದಡುವ ಎಂಇಎಸ್ ಹಾಗೂ ಶಿವಸೇನೆ ವಿರುದ್ಧ ನಮ್ಮ ಪ್ರತಿಭಟನೆ. ಶಾಂತಿಯುತ ಪ್ರತಿಭಟನೆಗೆ ಬೆಂಗಳೂರಿನ ಜನತೆ ಬೆಂಬಲ ನೀಡಬೇಕು.
-ವಾಟಾಳ್ ನಾಗರಾಜ್, ಕನ್ನಡ ಹೋರಾಟಗಾರ