ತೆಲಂಗಾಣದ ಮೊದಲ ಮುಖ್ಯಮಂತ್ರಿಯಾಗಿ ಕೆಸಿಆರ್ ಪ್ರಮಾಣ
ತೆಲಂಗಾಣ: ದೇಶದ 29ನೇ ರಾಜ್ಯದ ಉದಯವಾಗಿರುವ ತೆಲಂಗಾಣ ರಾಜ್ಯದ ಮೊದಲ...
29ನೇ ರಾಜ್ಯೋದಯ
60 ವರ್ಷ ತೆಲಂಗಾಣಕ್ಕಾಗಿ ಹೋರಾಟ ನಡೆದಿದ್ದು
ಫೆ.7 2014 ತೆಲಂಗಾಣ ರಾಜ್ಯ ರಚನೆ ಮಸೂದೆ ಅಂಗೀಕಾರ
10 ತೆಲಂಗಾಣದಲ್ಲಿರುವ ಜಿಲ್ಲೆಗಳು
ಹೈದರಾಬಾದ್: ದೇಶದ 29ನೇ ರಾಜ್ಯವಾಗಿ ಉದಯವಾಗಿರುವ ತೆಲಂಗಾಣ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಕೆ. ಚಂದ್ರಶೇಖರ ರಾವ್ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.
ಹೈದ್ರಾಬಾದ್‌ನ ರಾಜಭವನದಲ್ಲಿ ಮುಖ್ಯಮಂತ್ರಿಯಾಗಿ ಕೆ. ಚಂದ್ರಶೇಖರ ರಾವ್ ಹಾಗೂ 17 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್) ಮುಖ್ಯಸ್ಥ ಚಂದ್ರಶೇಖರ ರಾವ್ ಸೇರಿದಂತೆ 17 ಸಚಿವರಿಗೆ ರಾಜ್ಯಪಾಲ ನರಸಿಂಹನ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು.
ಚಂದ್ರಶೇಖರ್ ರಾವ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್ ಜಾಲತಾಣದ ಮುಖಾಂತರ ಶುಭಾಶಯ ಕೋರಿದ್ದಾರೆ. ಅಲ್ಲದೆ ತೆಲಂಗಾಣ ಅಭಿವೃದ್ಧಿಗೆ ಸಹಕರಿಸುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ.
ದೇಶದ 29ನೇ ರಾಜ್ಯದ ಉದಯ. ದಶಕಗಳ ಹೋರಾಟಕ್ಕೆ ಸಿಕ್ಕ ಫಲವೆಂಬಂತೆ ಸೋಮವಾರ ತೆಲಂಗಾಣ ರಾಜ್ಯ ಉದಯಿಸಿದೆ. 1956ರಲ್ಲಿ ರಚನೆಯಾಗಿದ್ದ ಅಖಂಡ ಆಂಧ್ರವನ್ನು ಇಬ್ಭಾಗ ಮಾಡಿ ತೆಲಂಗಾಣ ಪ್ರದೇಶದ ಜನರಿಗೆಂದೇ ಪ್ರತ್ಯೇಕ ರಾಜ್ಯ ಅಸ್ತಿತ್ವಕ್ಕೆ ಬಂದಿದೆ. ಈ ಮೂಲಕ 60 ವರ್ಷಗಳ ನಿರಂತರ ಹೋರಾಟ ಅಂತ್ಯ ಕಂಡಿದೆ.
ರಾಷ್ಟ್ರಪತಿ ಆಳ್ವಿಕೆ ವಾಪಸ್
ಆಂಧ್ರ ಇಬ್ಭಾಗದ ನಿರ್ಧಾರಕ್ಕೆ ಒಪ್ಪಿಗೆ ಮುದ್ರೆ ಬೀಳುತ್ತಲೇ ಆಂಧ್ರ ಸಿಎಂ ಕಿರಣ್‌ಕುಮಾರ್ ರೆಡ್ಡಿ ರಾಜಿನಾಮೆ ನೀಡಿದ್ದರು. ಹೀಗಾಗಿ ಮಾರ್ಚ್ 1ರಂದು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. ತೆಲಂಗಾಣದ ಹೊಸ ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಆಳ್ವಿಕೆ ವಾಪಸ್ ಪಡೆಯಲಾಗುತ್ತದೆ. ಸೀಮಾಂಧ್ರದಲ್ಲಿ ಇನ್ನೂ ಒಂದು ವಾರ ರಾಷ್ಟ್ರಪತಿ ಆಳ್ವಿಕೆ ಮುಂದುವರಿಯಲಿದೆ. ಜೂ.8ರಂದು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಸಿಎಂ ಆಗಿ ಪ್ರಮಾಣ ಸ್ವೀಕರಿಸಿದ ಬಳಿಕ ಅಲ್ಲಿಯೂ ರಾಷ್ಟ್ರಪತಿ ಆಳ್ವಿಕೆ ಹಿಂಪಡೆಯಲಾಗುತ್ತದೆ.
ಹಬ್ಬದ ವಾತಾವರಣ
ತೆಲಂಗಾಣದಲ್ಲಿ ಹಬ್ಬದ ವಾತಾವರಣ. ಟಿಆರ್‌ಎಸ್, ಇತರೆ ರಾಜಕೀಯ ಪಕ್ಷಗಳು, ತೆಲಂಗಾಣ ಪರ ಹೋರಾಟಗಾರರು ಹೊಸ ರಾಜ್ಯದ ಉದಯವನ್ನು ಅಭೂತಪೂರ್ವವಾಗಿ ಸ್ವಾಗತಿಸಲು ಸಜ್ಜಾಗಿದ್ದಾರೆ. ಇಡೀ ತೆಲಂಗಾಣ ಟಿಆರ್‌ಎಸ್ ಧ್ವಜದ ಬಣ್ಣವಾದ ಗುಲಾಬಿ ಬಣ್ಣಕ್ಕೆ ತಿರುಗಿದೆ. ಕೆಸಿಆರ್ ಅವರ ಬೃಹತ್ ಕಟೌಟ್‌ಗಳು, ಬ್ಯಾನರ್‌ಗಳು, ಬಲೂನುಗಳು ರಾರಾಜಿಸುತ್ತಿವೆ. ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಕೆಸಿಆರ್ ಪರೇಡ್ ಮೈದಾನದಲ್ಲಿ ಅದ್ಧೂರಿ 'ತೆಲಂಗಾಣ ಸ್ಥಾಪನಾ ದಿನ'ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಹುಸೈನ್ ಸಾಗರ್ ಸರೋವರದ ಬಳಿ ಭಾನುವಾರ ರಾತ್ರಿ 9ರಿಂದ 11.59ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಿಡಿಮದ್ದುಗಳ ಅಬ್ಬರವೂ ಜೋರಿತ್ತು.
ಹೋರಾಟಗಾರನಿಗೆ ಮುಖ್ಯಮಂತ್ರಿ ಪಟ್ಟ
ದೇಶದ 29ನೇ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಕೆ. ಚಂದ್ರಶೇಖರ್ ರಾವ್ ಸೋಮವಾರ ಬೆಳಗ್ಗೆ 8.15ಕ್ಕೆ ಹೈದರಾಬಾದ್‌ನ ರಾಜಭವನದಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದಕ್ಕೂ ಮೊದಲು ಆಂಧ್ರದ ರಾಜ್ಯಪಾಲರಾಗಿರುವ ಇಎಸ್‌ಎಲ್ ನರಸಿಂಹನ್ ಅವರು ತೆಲಂಗಾಣದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದರು.
ಎರಡೂ ರಾಜ್ಯಗಳ ಗವರ್ನರ್ ಆಗಿ ನರಸಿಂಹನ್ ಮುಂದುವರಿಯಲಿದ್ದಾರೆ.
44 ಐಎಎಸ್ ಅಧಿಕಾರಿಗಳು
ಹೊಸ ರಾಜ್ಯ ತೆಲಂಗಾಣಕ್ಕೆ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ 44 ಮಂದಿ ಐಎಎಸ್ ಅಧಿಕಾರಿಗಳನ್ನು ಒದಗಿಸಿದೆ. ಕೇಂದ್ರ ಸರ್ಕಾರ ನೇಮಕ ಮಾಡಿದ ಸಮಿತಿಯು ತೆಲಂಗಾಣ ರಾಜ್ಯದಲ್ಲಿ ಕಾರ್ಯನಿರ್ವಹಿಸಲು 163 ಐಎಎಸ್, 112 ಐಪಿಎಸ್, 65 ಐಎಫ್‌ಓಎಸ್ ಅಧಿಕಾರಿಗಳ ಅಗತ್ಯವಿದೆ ಎಂದು ಪ್ರಾಥಮಿಕ ವರದಿಯಲ್ಲಿ ಶಿಫಾರಸು ಮಾಡಿತ್ತು. ಈ ಶಿಫಾರಸನ್ನು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯ ಒಪ್ಪಿದ ಬಳಿಕವೇ ತೆಲಂಗಾಣಕ್ಕೆ ಅಧಿಕಾರಿಗಳ ಪೂರ್ಣಪ್ರಮಾಣದ ನೇಮಕ ಆಗಲಿದೆ.