ಚಾಲಕ ಆತ್ಮಹತ್ಯೆ ಯತ್ನ
'ಕನ್ನಡಪ್ರಭ'ದ ಸರಣಿ ವರದಿ ಬಳಿಕ ಕೆಲಕಾಲ ಸಾರಿಗೆ ಸಂಸ್ಥೆಯಲ್ಲಿ ತಣ್ಣಗಾಗಿದ್ದ ಮೇಲಧಿಕಾರಿಗಳ ಕಿರುಕುಳ ಈಗ ಮತ್ತೆ ಶುರುವಾಗಿದೆ.
ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಎದುರೇ ಘಟನೆ
ಗದಗ: 'ಕನ್ನಡಪ್ರಭ'ದ ಸರಣಿ ವರದಿ ಬಳಿಕ ಕೆಲಕಾಲ ಸಾರಿಗೆ ಸಂಸ್ಥೆಯಲ್ಲಿ ತಣ್ಣಗಾಗಿದ್ದ ಮೇಲಧಿಕಾರಿಗಳ ಕಿರುಕುಳ ಈಗ ಮತ್ತೆ ಶುರುವಾಗಿದೆ. ಹಿರಿಯ ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಚಾಲಕನೊಬ್ಬ ಗದಗ ವಿಭಾಗೀಯ ನಿಯಂತ್ರಣಾಧಿಕಾರಿಗಳ ಸಮ್ಮುಖದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ನಡೆದಿದೆ.
ಬೆಟಗೇರಿ ಡಿಪೋದಲ್ಲಿ ಹಿರಿಯ ಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವ ಬಸವರಾಜ ಕರಿಸಕ್ರಣ್ಣವರ (52) ಆತ್ಮಹತ್ಯೆಗೆ ಯತ್ನಿಸಿದಾತ. ಹಲವು ವರ್ಷಗಳಿಂದ ಸಂಸ್ಥೆಯಲ್ಲಿ ದುಡಿಯುತ್ತಿದ್ದ ಬಸವರಾಜ ಅವರನ್ನು ಕಳೆದ ಲೋಕಸಭಾ ಚುನಾವಣೆ ವೇಳೆ ನರಗುಂದ ಡೀಪೋಗೆ ವರ್ಗಾಯಿಸಲಾಗಿತ್ತು. ಆದರೆ, ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಬೆಟಗೇರಿ ಡೀಪೋಗೆ ಮರಳಿ ವರ್ಗಾಯಿಸುವಂತೆ ಬಸವರಾಜ ವಿನಂತಿಸಿಕೊಂಡಿದ್ದರು.
ಆದರೆ, ಅಧಿಕಾರಿಗಳು ಮಾತ್ರ ವಿವಿಧ ಕಾರಣ ನೀಡಿ ನೋಟಿಸ್ ನೀಡುವುದು, ದಂಡ ಹಾಕುವುದು ಮಾಡುತ್ತಿದ್ದರು. ಇದರಿಂದ ಮಾನಸಿಕವಾಗಿ ಜರ್ಝರಿತನಾಗಿದ್ದ ಬಸವರಾಜ ಸೋಮವಾರ ಮತ್ತೆ ಬೆಳಗ್ಗೆ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಗೆ ತೆರಳಿ ವಿಚಾರಿಸಿದ್ದಾರೆ. ಅಧಿಕಾರಿಗಳಿಂದ ಸಕಾರಾತ್ಮಕ ಉತ್ತರ ಬಾರದಿದ್ದಾಗ ಅವರ ಸಮ್ಮುಖದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಿರುಕುಳ ಆರೋಪದ ಬಗ್ಗೆ ಕುಟುಂಬ ಸದಸ್ಯರನ್ನು ಸಂಪರ್ಕಿಸಲು ಪ್ರಯತ್ನಿಸಿದರೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಸಾರಿಗೆ ಸಂಸ್ಥೆಯ ಅಧಿಕಾರಿಗಳು, ಇದರಲ್ಲಿ ತಮ್ಮ ತಪ್ಪೇನೂ ಇಲ್ಲ ಎಂಬ ಹೇಳಿಕೆ ನೀಡುತ್ತಿದ್ದಾರೆ. ಸ್ಥಳದಲ್ಲಿದ್ದ ಕೆಲವು ಸಾರಿಗೆ ಸಂಸ್ಥೆ ನೌಕರರು, ನಮ್ಮ ಹೆಸರು ಪ್ರಕಟಿಸಬೇಡಿ. ಆದರೆ, ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಅವರ ಕೈಕೆಳಗಿನ ಹಿರಿಯ ಅಧಿಕಾರಿಗಳು ಹಿಟ್ಲರ್ ಮಾದರಿಯಲ್ಲಿ ಅಧಿಕಾರ ನಡೆಸುತ್ತಿದ್ದಾರೆ. ನೌಕರರನ್ನು ಕಿತ್ತು ತಿನ್ನುತ್ತಿದ್ದಾರೆ. ಕೂಡಲೇ ಅವರನ್ನು ಬದಲಿಸಿ ಎಂದು ಆಗ್ರಹಿಸಿದ್ದಾರೆ.
ಯಾರ್ಯಾರು ಕಾರಣ?
ಆತ್ಮಹತ್ಯೆಗೆ ಯತ್ನಿಸಿದ ಕರಿಸಕ್ರಣ್ಣವರ ವಿಷ ಸೇವಿಸುವ ಮುನ್ನ ಬರೆದ ಡೆತ್‌ನೋಟ್‌ನಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಡ್ಡಿ ಗದ್ದಿಕೇರಿ, ಎಟಿಐ ಚನ್ನಪ್ಪ ಬಟ್ಟೂರ ಹಾಗೂ ಟಿಸಿ ಎಂ.ಜಿ. ಪಾಟೀಲ ಅವರೇ ತಮ್ಮ ಆತ್ಮಹತ್ಯೆಗೆ ಕಾರಣ ಎಂದು ಬರೆದಿದ್ದಾರೆ.