ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪಕ್ಷ ನಿಷ್ಠೆಗೆ ದಕ್ಕಿದ ಬೆಲೆ, ಸಂಘಟನೆಯ ತಂತ್ರ...

ರಾಷ್ಟ್ರ ರಾಜಕಾರಣದ ಮುಖ್ಯವಾಹಿನಿಗೆ ಮಲ್ಲಿಕಾರ್ಜುನ ಖರ್ಗೆ

Srinivasa Murthy VN
Updated On : 3 Jun 2014, 2:18 am

-ರಾಘವೇಂದ್ರ ಭಟ್
ಬೆಂಗಳೂರು:
ಅಖಂಡ ಪಕ್ಷ ನಿಷ್ಠೆಯ ಫಲ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಈಗ ರಾಷ್ಟ್ರ ರಾಜಕಾರಣದ ಮುಖ್ಯವಾಹಿನಿಗೆ ತಂದು ನಿಲ್ಲಿಸಿದೆ. ಹತ್ತು ವರ್ಷಗಳ ಕಾಲ ಕೇಂದ್ರದಲ್ಲಿ ಅಧಿಕಾರ ನಡೆಸಿದ ಯುಪಿಎ ಸರ್ಕಾರದ ವಿರುದ್ಧ ಬೀಸಿದ ಆಡಳಿತ ವಿರೋಧಿ ಅಲೆ, ದೇಶಾದ್ಯಂತ ಕಾಂಗ್ರೆಸ್‌ನ ಘಟಾನುಘಟಿ ನಾಯಕರನ್ನು ತರಗೆಲೆಗಳಂತೆ ಹಾರಿಸಿ ಸೋಲಿಸಿತು. ಇದರ ಪರಿಣಾಮವಾಗಿ ಸಂಸತ್ತಿನಲ್ಲಿ ಕಾಂಗ್ರೆಸ್‌ನ ನೀತಿ ಪ್ರತಿಪಾದನೆಗೂ ಸಮರ್ಥರಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು.
ಈ ಹಂತದಲ್ಲಿ ಕಾಂಗ್ರೆಸ್ ಹೈಕಮಾಂಡ್ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕನ ಜವಾಬ್ದಾರಿಯ ನೊಗ ಹೊರಿಸಿದೆ. ಬಹುಶಃ ಈ ಹುದ್ದೆಗೆ ನೇಮಕಗೊಂಡ ಕಾಂಗ್ರೆಸ್‌ನ ಮೊದಲ ಕನ್ನಡಿಗ ಎಂಬ ಖ್ಯಾತಿಯೂ ಖರ್ಗೆ ಅವರ ಪಾಲಾಗಲಿದೆ.
ಎರಡನೇ ಬಾರಿಗೆ ಸಂಸದರಾಗಿ ಆಯ್ಕೆಗೊಂಡ ಖರ್ಗೆ ಅವರನ್ನು ಈ ಮಹತ್ವದ ಹುದ್ದೆಗೆ ನೇಮಕ ಮಾಡುವುದರ ಹಿಂದೆ ಕಾಂಗ್ರೆಸ್ ಸಾಕಷ್ಟು ಕಸರತ್ತು ನಡೆಸಿದೆ. ಈ ನೇಮಕದಿಂದ ಕುಸಿದು ಕುಳಿತ ಪಕ್ಷದ ಸಂಘಟನೆಗೂ, ಪಕ್ಷ ನಿಷ್ಠೆ ಮೆರೆದ ವ್ಯಕ್ತಿಗೂ ಅನುಕೂಲವಾಗಬೇಕೆಂಬ ಚಿಂತನೆ ಇದೆ.
ವೈಯಕ್ತಿಕ ಹಾಗೂ ಸಾರ್ವಜನಿಕ ಬದುಕಿನಲ್ಲಿ ಯಾವ ಕೊಳೆಯನ್ನು ಅಂಟಿಸಿಕೊಳ್ಳದ ಖರ್ಗೆ ಅವರು ಎಂದೋ ರಾಜ್ಯದ ಮುಖ್ಯಮಂತ್ರಿಯಾಗಬೇಕಿತ್ತು. ದಲಿತ ಸಮುದಾಯದಿಂದ ಬಂದ ವ್ಯಕ್ತಿ ಮೊದಲ ಬಾರಿಗೆ ರಾಜ್ಯದ ಸಿಎಂ ಆದರೂ ಎಂಬ ಹೆಗ್ಗಳಿಕೆಯನ್ನೂ ಅವರೇ ಹೊದ್ದುಕೊಳ್ಳಬೇಕಿತ್ತು. ಆದರೆ ಅವರ ಮನೆ ಬಾಗಿಲವರೆಗೆ ಬಂದ ಅವಕಾಶವನ್ನು ಮೂರ್ನಾಲ್ಕು ಬಾರಿ ಅನ್ಯರು ಕಿತ್ತುಕೊಂಡಿದ್ದಾರೆ.
ಆದರೆ ಆ ಎಲ್ಲ ಸಂದರ್ಭದಲ್ಲಿ ಪಕ್ಷದ ಹಿತ ಕಾಯುವುದಕ್ಕಾಗಿ ಹೈಕಮಾಂಡ್ ಮಾತಿಗೆ ಮನ್ನಣೆ ಕೊಟ್ಟು ಅವಕಾಶ ವಂಚಿತರಾದರೂ ಮೌನ ಮುರಿಯಲಿಲ್ಲ. ರಾಜಕೀಯ ರಂಗದ ಸಾಂಗ್ಯ- ಬಾಳ್ಯ ಎಂದೇ ಖರ್ಗೆ-ಧರ್ಮಸಿಂಗ್ ಖ್ಯಾತರು. ಆದರೆ ತಮ್ಮ ಗೆಣೆಕಾರನಿಗೆ ಸಿಎಂ ಪದವಿ ಒಲಿದು ಬಂದರೂ ಆದ ಬೇಸರವನ್ನು ತೋರಿಸಿಕೊಳ್ಳಲಿಲ್ಲ. ಅಷ್ಟೇ ಏಕೆ ಜನತಾ ಪರಿವಾರವನ್ನು ತೊರೆದು ಕಾಂಗ್ರೆಸ್‌ಗೆ ಬಂದ ಸಿದ್ದರಾಮಯ್ಯನವರಿಗೆ ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನ ಬಿಟ್ಟುಕೊಡಬೇಕಾದ ಸಂದರ್ಭ ಬಂದಾಗಲೂ ಮರು ಮಾತಿಲ್ಲದೇ ಶಾಸಕತ್ವ ರಾಜೀನಾಮೆ ನೀಡಿ ಲೋಕಸಭಾ ಚುನಾವಣೆಗೆ ನಿಂತರು. ಈ ಬಾರಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೂ ಹೈಕಮಾಂಡ್ ಮಾತಿಗೆ ಮನ್ನಣೆ ನೀಡಿ ಬಜೆಟ್ ಮಂಡನೆ ಅವಕಾಶವಿಲ್ಲದಿದ್ದರೂ ಕೇಂದ್ರದಲ್ಲಿ ರೈಲ್ವೆ ಖಾತೆ ಒಪ್ಪಿಕೊಂಡರು.
ಖರ್ಗೆಯವರ ಈ ಎಲ್ಲ ತ್ಯಾಗವನ್ನು ಅರಿತಿರುವ ಕಾಂಗ್ರೆಸ್ ಹೈಕಮಾಂಡ್ ಈಗ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಮುಖವಾದ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕನ ಸ್ಥಾನವನ್ನು ಕರುಣಿಸಿದೆ. ಇದು ಪಕ್ಷ ನಿಷ್ಠೆಗೆ ದಕ್ಕಿದ ಬೆಲೆ. ಅಷ್ಟು ಮಾತ್ರವಲ್ಲ ಪಕ್ಷ ಸಂಘಟನೆಯ ತಂತ್ರವೂ ಹೌದು.
ಕಾಂಗ್ರೆಸ್‌ಗೆ ಈಗ ರಾಷ್ಟ್ರೀಯ ಮಟ್ಟದಲ್ಲಿ ಹೇಳಿಕೊಳ್ಳುವಂಥ ದಲಿತ ಮುಖಂಡರು ಇಲ್ಲ. ಇದ್ದವರೆಲ್ಲರೂ ಲೋಕಸಭಾ ಚುನಾವಣೆಯಲ್ಲಿ ಮುಗ್ಗರಿಸಿ ಬಿದ್ದಿದ್ದಾರೆ. ಗೆದ್ದವರಲ್ಲಿ ಖರ್ಗೆ ಮಾತ್ರ ಗಟ್ಟಿಗರು. 9 ಬಾರಿ ಶಾಸಕರಾಗಿ, 2 ಬಾರಿ ಸಂಸದರಾಗಿ ಕರ್ತವ್ಯ ನಿರ್ವಹಿಸಿದ ಅನುಭವ ಇದೆ. ಹೇಳಿಕೇಳಿ ಕಾಂಗ್ರೆಸ್‌ಗೆ ದಲಿತರೇ ಜೀವಾಳ. ಆದರೆ ಈ ಚುನಾವಣೆಯಲ್ಲಿ ರಾಷ್ಟ್ರಾದ್ಯಂತ ಶೇ.30ಕ್ಕೂ ಹೆಚ್ಚು ದಲಿತ ಮತಗಳು ಕಾಂಗ್ರೆಸ್ ಬುಟ್ಟಿಯಿಂದ ಜಾರಿ ಬಿಜೆಪಿಯನ್ನು ಸೇರಿದೆ.
ಭವಿಷ್ಯದಲ್ಲಿ ಮತ್ತೆ ಪಕ್ಷಕ್ಕೆ ಜೀವಕೊಡಬೇಕಿದ್ದರೆ ಈ ವರ್ಗದ ಮತ ಸೆಳೆಯುವುದೂ ಅಗತ್ಯ. ಜತೆಗೆ ರಾಜ್ಯದಲ್ಲಿ ದಲಿತರಿಗೆ ಸೂಕ್ತ ಸ್ಥಾನಮಾನವನ್ನು ನೀಡಿಲ್ಲ ಎಂಬ ಅಪವಾದವನ್ನು ತೊಳೆದುಕೊಳ್ಳುವ ಪ್ರಯತ್ನವನ್ನು ಕಾಂಗ್ರೆಸ್ ಹೈಕಮಾಂಡ್ ಈ ಮೂಲಕ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement