ಮಲ್ಲಿಕಾರ್ಜುನ ಖರ್ಗೆ ಲೋಕಸಭೆ ಕೈ ನಾಯಕ
ಕೇಂದ್ರದ ಮಾಜಿ ಸಚಿವ, ಗುಲ್ಬರ್ಗ ಸಂಸದ ಮಲ್ಲಿಕಾರ್ಜುನ ಖರ್ಗೆ...
ನವದೆಹಲಿ: ಕೇಂದ್ರದ ಮಾಜಿ ಸಚಿವ, ಗುಲ್ಬರ್ಗ ಸಂಸದ ಮಲ್ಲಿಕಾರ್ಜುನ ಖರ್ಗೆ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಲೋಕಸಭೆಯಲ್ಲಿ ಪ್ರತಿಪಕ್ಷ ಸ್ಥಾನದ ಗೌರವ ಕರ್ನಾಟಕಕ್ಕೆ ಇಂಥ ಗೌರವ ಪ್ರಾಪ್ತವಾಗಿದೆ.
ಮಧ್ಯಪ್ರದೇಶದ ಚಿಂದ್ವಾರಾ ಕ್ಷೇತ್ರದಿಂದ ಸತತ 9ನೇ ಸಲ ಲೋಕಸಭೆಗೆ ಆಯ್ಕೆಯಾಗಿರುವ ಕಮಲನಾಥ್ ಅವರಿಗೆ ಈ ಹೊಣೆ ವಹಿಸುವ ನಿರೀಕ್ಷೆ ಇತ್ತು. ಕೊನೆ ಕ್ಷಣದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಹಿಂದುಳಿದ ವರ್ಗಕ್ಕೆ ಸೇರಿದ ಎಂ.ವೀರಪ್ಪ ಮೊಯ್ಲಿ ಸಹ ರೇಸ್‌ನಲ್ಲಿ ಸೇರಿಕೊಂಡಿದ್ದರು. ಆದರೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ದಲಿತ ಮುಖಂಡ ಖರ್ಗೆಯವರ ಹೆಸರು ಸೂಚಿಸಿ ಅಚ್ಚರಿ ಉಂಟುಮಾಡಿದ್ದಾರೆ.
ದಾಖಲೆಯ ಒಂಬತ್ತು ಸಲ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿದ್ದ ಖರ್ಗೆ, 2009ರಲ್ಲಿ ಗುಲ್ಬರ್ಗದಿಂದ ಮೊದಲ ಬಾರಿ ಲೋಕಸಭೆ ಪ್ರವೇಶಿಸಿದ್ದರು. ಕಳೆದ ಚುನಾವಣೆಯಲ್ಲಿ ಅಲ್ಲಿಂದಲೇ ಪುನರಾಯ್ಕೆಯಾಗಿದ್ದಾರೆ. 45 ವರ್ಷಗಳನ್ನು ರಾಜಕೀಯ ಜೀವನದಲ್ಲಿ ಕಳೆದಿರುವ ಅವರು, ಯುಪಿಎ-2 ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದರು. ಪವನ್‌ಕುಮಾರ್ ಬನ್ಸಾಲ್ ರಾಜೀನಾಮೆ ಬಳಿಕ ರೇಲ್ವೆ ಖಾತೆ ಹೊಣೆ ಹೆಗಲೇರಿತ್ತು. ತಮ್ಮ ಆಯ್ಕೆ ಕುರಿತು ಪ್ರತಿಕ್ರಿಯಿಸಿರುವ ಖರ್ಗೆ ಅವರು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತಿತರ ಹಿರಿಯ ನಾಯಕರ ಮಾರ್ಗದರ್ಶನ ಪಡೆಯುವ ಜತೆಗೆ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವುದಾಗಿ ತಿಳಿಸಿದರು. ಅಲ್ಲದೆ ಸದನದಲ್ಲಿ ವಿಷಯಾಧಾರಿತ ಹೋರಾಟ ನಡೆಸುವುದಾಗಿ ಹೇಳಿದರು.
-ಪ್ರತಿಪಕ್ಷ- ಇನ್ನೂ ನಿರ್ಧಾರವಿಲ್ಲ
ಪ್ರತಿಪಕ್ಷವೇ ಇಲ್ಲದ ಲೋಕಸಭೆಯಲ್ಲಿ ಆ ಮಾನ್ಯತೆಯನ್ನು ಯಾವ ಪಕ್ಷಕ್ಕೆ ನೀಡಬೇಕು ಎನ್ನುವ ನಿರ್ಧಾರವನ್ನು ಸರ್ಕಾರ ಇದುವರೆಗೂ ಪ್ರಕಟಿಸಿಲ್ಲ. ನಿಯಮಗಳ ಪ್ರಕಾರ ಪ್ರತಿಪಕ್ಷ ಸ್ಥಾನಕ್ಕೆ ಹಕ್ಕು ಮಂಡಿಸುವ ಪಕ್ಷ ಸದನದ ಒಟ್ಟು ಬಲದ ಹತ್ತನೇ ಒಂದರಷ್ಟು ಸದಸ್ಯರನ್ನು ಹೊಂದಿರಬೇಕು. ಅಂದರೆ ಕನಿಷ್ಠ 55 ಸದಸ್ಯರನ್ನು ಹೊಂದಿರಬೇಕು. ಬಿಜೆಪಿ ಹೊರತುಪಡಿಸಿದರೆ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷವಾಗಿರುವ ಕಾಂಗ್ರೆಸ್ ಕೇವಲ 44 ಸ್ಥಾನ ಹೊಂದಿದೆ. ಪಕ್ಷದ ಹೀನಾಯ ಸೋಲಿನ ಹೊಣೆ ಹೊತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಸದನದಲ್ಲಿ ಪಕ್ಷದ ನೇತೃತ್ವ ವಹಿಸಿಕೊಳ್ಳಲು ನಿರಾಕರಿಸಿದ್ದರು. ಸರ್ಕಾರದ ಶಿಫಾರಸಿನಂತೆ ನೂತನ ಸ್ಪೀಕರ್ ಪ್ರತಿಪಕ್ಷ ಯಾವುದು ಎನ್ನುವುದನ್ನು ಘೋಷಿಸಲಿದ್ದಾರೆ.
ಸರ್ಕಾರವನ್ನು ವಿರೋಧಿಸಬೇಕು ಎನ್ನುವ ಕಾರಣದಿಂದ ಪ್ರತಿಪಕ್ಷವಾಗಿ ಕಾಂಗ್ರೆಸ್ ಕೆಲಸ ಮಾಡುವುದಿಲ್ಲ. ದೇಶ ಮತ್ತು ಸಮಾಜದ ಹಿತ ಗಮನದಲ್ಲಿಟ್ಟುಕೊಂಡು ಲೋಕಸಭೆಯಲ್ಲಿ ವಿಷಯಾಧಾರಿತ ಹೋರಾಟ ನಡೆಸುತ್ತೇವೆ.
-ಮಲ್ಲಿಕಾರ್ಜುನ ಖರ್ಗೆ