ಮುಂಡೆ ನೇಪಥ್ಯಕ್ಕೆ ಕಾರಣವಾದ ಕರಾಳ 3ರ ಕರಾಮತ್ತು
ಒಂಬತ್ತು ದಿನ ಹಿಂದಷ್ಟೇ ಕೇಂದ್ರ ಸಚಿವರಾಗಿ ಪ್ರಮಾಣ ವಚನ...
ನವದೆಹಲಿ: ಒಂಬತ್ತು ದಿನ ಹಿಂದಷ್ಟೇ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಬಿಜೆಪಿ ಹಿರಿಯ ನಾಯಕ ಗೋಪಿನಾಥ್ ಮುಂಡೆ ಇನ್ನಿಲ್ಲ. ಇದರೊಂದಿಗೆ ಪ್ರಮೋದ್ ಮಹಾಜನ್ ನಂತರ ಮಹಾರಾಷ್ಟ್ರ ಬಿಜೆಪಿಯ ಮತ್ತೊಂದು ಬೆನ್ನೆಲುಬು ಮುರಿದಂತಾಗಿದೆ.
ನವದೆಹಲಿಯಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಮುಂಡೆ (64) ಅಸುನೀಗಿದರು. ಮುಂಬೈಗೆ ತೆರಳಲು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದಾಗ ಬೆಳಗ್ಗೆ 6.20ಕ್ಕೆ ದುರ್ಘಟನೆ ಸಂಭವಿಸಿದೆ. ಸ್ವಕ್ಷೇತ್ರ ಮಹಾರಾಷ್ಟ್ರದ ಬೀಡ್ನಲ್ಲಿ ಸಂಜೆ ಪೌರ ಸನ್ಮಾನ ಸ್ವೀಕರಿಸಬೇಕಿತ್ತು. ಮೊದಲ ಸಲ ಕೇಂದ್ರ ಸಚಿವರಾಗಿರುವ ಹೆಮ್ಮೆಯ ಪುತ್ರನ ಅದ್ಧೂರಿ ಸ್ವಾಗತಕ್ಕೆ ಸಜ್ಜಾಗಿದ್ದ ಬೀಡ್, ವಿಷಯ ತಿಳಿಯುತ್ತಿದ್ದಂತೆ ಶೋಕ ಸಾಗರದಲ್ಲಿ ಮುಳುಗಿತು.
ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿಯೂ ಆಗಿರುವ ಮುಂಡೆ ನಿಧನದಿಂದ ರಾಜ್ಯ ಬಿಜೆಪಿಗೆ ಭಾರಿ ನಷ್ಟ. ಹಿಂದುಳಿದ ವರ್ಗಗಳ ಪ್ರಭಾವಿ ಮುಖಂಡರಾಗಿದ್ದ ಅವರು ಜಾತಿ ಸಮೀಕರಣದಲ್ಲಿ ಪಳಗಿದ್ದರು. ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ ಬಹುಮತ ಪಡೆದಿದ್ದರೆ ಮುಖ್ಯಮಂತ್ರಿ ಪಟ್ಟ ಏರುವ ಸಾಧ್ಯತೆಯಿತ್ತು. ಮುಂಡೆ ದಿ.ಪ್ರಮೋದ್ ಮಹಾಜನ್ ಅವರ ಭಾವ. 5 ಬಾರಿ ಶಾಸಕರಾಗಿದ್ದ ಅವರು, 2009, 2014ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು.
ಕಾರಿನಲ್ಲೇ ಸಾವು: ಪೃಥ್ವಿರಾಜ್ ರಸ್ತೆ-ತುಘಲಕ್ ರಸ್ತೆ ಜಂಕ್ಷನ್ನಲ್ಲಿ ಸಿಗ್ನಲ್ ಜಂಪ್ ಮಾಡಿ ನುಗ್ಗಿದ ಇಂಡಿಕಾ ಕಾರು ಸಚಿವರು ಪ್ರಯಾಣಿಸುತ್ತಿದ್ದ ಮಾರುತಿ ಸುಜುಕಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಸಚಿವರು ಡಿಕ್ಕಿ ರಭಸಕ್ಕೆ ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗಿ ಗುದ್ದಿದ್ದರಿಂದ ಮೂಗಿನಲ್ಲಿ ಸಣ್ಣ ಗಾಯವಾಗಿದೆ. ಚಾಲಕನಿಂದ ನೀರು ಪಡೆದು, ಆಸ್ಪತ್ರೆಗೆ ಕರೆದೊಯ್ಯಲು ಹೇಳಿದ್ದಾರೆ. ಏಮ್ಸ್ನ ಅಪಘಾತ ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ಯುವಷ್ಟರಲ್ಲಿ ಪ್ರಾಣ ಹಾರಿಹೋಗಿದೆ.
'ಆಸ್ಪತ್ರೆಗೆ ಕರೆತರುವಷ್ಟರಲ್ಲಿ ದೇಹ ಸಂಪೂರ್ಣ ನಿಶ್ಚೇಷ್ಟಿತವಾಗಿತ್ತು. ಉಸಿರಾಟ, ನಾಡಿ ಬಡಿತ, ರಕ್ತದೊತ್ತಡ, ಹೃದಯ ಬಡಿತಗಳು ನಿಂತಿದ್ದವು. ಅಪಘಾತದಿಂದ ಆಘಾತಗೊಂಡು ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರು' ಎಂದು ವೈದ್ಯರು ತಿಳಿಸಿದ್ದಾರೆ. ಹೃದಯ ಬಡಿತ ಪುನರಾರಂಭಿಸಲು ವೈದ್ಯರು 50 ನಿಮಿಷ ಕಾಲ ಪ್ರಯತ್ನಿಸಿದರು. 7.20ಕ್ಕೆ ನಿಧನವಾರ್ತೆ ಘೋಷಿಸಲಾಯಿತು.
ಬಹು ಅಂಗ ಗಾಯ: ಡಿಕ್ಕಿ ರಭಸಕ್ಕೆ ಪಿತ್ತಕೋಶ ಛಿದ್ರಗೊಂಡು ಆಂತರಿಕ ರಕ್ತಸ್ರಾವವಾಗಿದೆ. ಕತ್ತಿನ ಮೂಳೆಗಳು ಮುರಿದು ಮೆದುಳಿಗೆ ರಕ್ತಪೂರೈಕೆ ಸ್ಥಗಿತಗೊಂಡಿತ್ತು. ಆಂತರಿಕವಾಗಿ ಉಂಟಾದ ಬಹುಅಂಗ ಗಾಯ ಸಾವಿಗೆ ಪ್ರಮುಖ ಕಾರಣ. ದೇಹದ ಹೊರಭಾಗದಲ್ಲಿ ಎಲ್ಲಿಯೂ ಗಾಯಗಳಾಗಿಲ್ಲ ಎಂದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ತಿಳಿಸಿದೆ.
ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ, ರಾಜನಾಥ ಸಿಂಗ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಜೆಡಿಯು ಅಧ್ಯಕ್ಷ ಶರದ್ ಯಾದವ್, ಎನ್ಸಿಪಿ ವರಿಷ್ಠ ಶರದ್ ಪವಾರ್ ಸೇರಿದಂತೆ ವಿವಿಧ ಪಕ್ಷಗಳ ಪ್ರಮುಖರು ಅಂತಿಮ ದರ್ಶನ ಪಡೆದರು.
3 ಕರಾಳ
ಬಿಜೆಪಿ ಹಿರಿಯ ನಾಯಕ ಪ್ರಮೋದ್ ಮಹಾಜನ್ ಅವರ ತಂಗಿಯನ್ನು ವಿವಾಹವಾಗಿದ್ದರು ಗೋಪಿನಾಥ್ ಮುಂಡೆ. ಎರಡೂ ಕುಟುಂಬಗಳಿಗೆ 3ನೇ ತಾರೀಖು ಕರಾಳ ದಿನ. ನಾಲ್ಕು ಸಾವುಗಳು 3ರಂದೇ ಸಂಭವಿಸಿವೆ.
ಮೇ 3, 2006
ಪ್ರಮೋದ್ ಮಹಾಜನ್ ನಿಧನ
ಜೂನ್ 3, 2006
ಪ್ರಮೋದ್ ನಿಕಟವರ್ತಿ ವಿವೇಕ್ ಮೊಯಿತ್ರಾ ಸಾವು
ಮಾರ್ಚ್ 3, 2010
ಮೆದುಳಿನಲ್ಲಿ ರಕ್ತಸ್ರಾವದಿಂದ ಪ್ರವೀಣ್ ಮಹಾಜನ್ ಸಾವು
ಜೂನ್ 3, 2014
ಗೋಪಿನಾಥ್ ಮುಂಡೆ ದುರ್ಮರಣ
ಕೊಲೆ ಪಿತೂರಿ ತನಿಖೆ
ಸಚಿವ ಮುಂಡೆ ಕಾರು ಅಪಘಾತ ಪೂರ್ವ ನಿಯೋಜಿತವೇ? ಇದರ ಹಿಂದೆ ಕೊಲೆ ಪಿತೂರಿ ಇದೆಯೇ ಎನ್ನುವ ಕುರಿತು ಇಂಟಲಿಜೆನ್ಸ್ ಬ್ಯೂರೊ ಮತ್ತು ವಿಶೇಷ ತನಿಖಾ ದಳ ತನಿಖೆ ನಡೆಸಲಿವೆ ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸಚಿವರ ಕಾರಿಗೆ ಡಿಕ್ಕಿ ಹೊಡೆದಿದ್ದ ಕಾರಿನ ಚಾಲಕ ಗುರ್ವಿಂದರ್ ಸಿಂಗ್ಗೆ ದೆಹಲಿ ಮೆಟ್ರೋಪಾಲಿಟನ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಅವರ ವಿರುದ್ಧ ನಿರ್ಲಕ್ಷ್ಯದ ಚಾಲನೆಯಿಂದ ಸಾವಿಗೆ ಕಾರಣನಾದ ಮತ್ತು ಅತಿವೇಗದ ಚಾಲನೆಯ ಪ್ರಕರಣ ದಾಖಲಾಗಿದೆ.
ಇಂದು ಅಂತ್ಯಕ್ರಿಯೆ
ಮುಂಡೆ ಪಾರ್ಥಿವ ಶರೀರವನ್ನು ಸಂಜೆ ಮುಂಬೈಗೆ ಒಯ್ಯಲಾಗಿದ್ದು ಅಲ್ಲಿಯೂ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬುಧವಾರ ಬೆಳಗ್ಗೆ ಲಾತೂರ್, ಬಳಿಕ ಸ್ವಂತ ಊರು ಬೀಡ್ ಜಿಲ್ಲೆಯ ಪರ್ಲಿಗೆ ಒಯ್ಯಲಾಗುತ್ತದೆ. ಅಲ್ಲಿಯೇ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ.