ಎಂಎಲ್ಸಿ ಆಗಿಸಿದ ಜಯಮ್ಮನ ಗಂಡ!
ಕಾಡುಗೊಲ್ಲ ಸಮುದಾಯದ ಮಹಿಳೆಯೇ ವಿಧಾನ ಪರಿಷತ್ ಅಭ್ಯರ್ಥಿಯಾಗಬೇಕು ಎಂದು...
-ರಾಘವೇಂದ್ರ ಭಟ್
ಬೆಂಗಳೂರು: ಕಾಡುಗೊಲ್ಲ ಸಮುದಾಯದ ಮಹಿಳೆಯೇ ವಿಧಾನ ಪರಿಷತ್ ಅಭ್ಯರ್ಥಿಯಾಗಬೇಕು ಎಂದು ಹೇಳಿದ್ದು ಎಐಸಿಸಿ ಅಧ್ಯಕ್ಷೆ ಸೋನಿಯಮ್ಮ, ಕೆಪಿಸಿಸಿ ಕಳುಹಿಸಿದ ಹೆಸರು ಶಾಂತಮ್ಮ, ಆದರೆ ಒಂದೇ ದಿನದಲ್ಲಿ ಅದೃಷ್ಟ ನೆತ್ತಿಗೆ ಹೊಡೆದು ಎಂಎಲ್ಸಿಯಾಗಿದ್ದು ಚಿತ್ರದುರ್ಗದ ಜಯಮ್ಮ..!
ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ತಮ್ಮನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡುತ್ತದೆ ಎಂದು ಖುದ್ದು ಜಯಮ್ಮನವರೇ ನಂಬಿರಲಿಲ್ಲವಂತೆ. ಮೂರು ಬಾರಿ ಚಿತ್ರದುರ್ಗ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದ ಅವರ ಪತಿ ಬಾಲರಾಜ್ ಒಂದು ಅವಕಾಶ ಕೊಡಿ ಎಂದು ಕೇಳಿದಾಗ, ಈ ಸಲ ಮಹಿಳೆಯರಿಗೇ ಛಾನ್ಸ್ ಕೊಡೋದು ಎಂದು ಮುಖಂಡರು ಹೇಳಿದ್ದರಂತೆ. ಹೀಗಾಗಿ ಕೆಪಿಸಿಸಿ ಚಿತ್ರದುರ್ಗದವರೇ ಆದ ಶಾಂತಮ್ಮ ಅವರ ಹೆಸರನ್ನು ಶಿಫಾರಸು ಮಾಡಿತ್ತು. ಆದರೆ ಹಿರಿಯರ ಸದನ ಪ್ರವೇಶಕ್ಕೆ ಅಗತ್ಯ ವಯಸ್ಸಾಗದ ಕಾರಣ ಅದೇ ಸಮುದಾಯಕ್ಕೆ ಸೇರಿದ ಜಯಮ್ಮ ಅವರ ಹೆಸರನ್ನು ಪರಿಗಣಿಸಲಾಯಿತು.
ನಾಮಪತ್ರ ಸಲ್ಲಿಕೆ ಕೊನೆಯ ದಿನ ಜಯಮ್ಮ ಹೆಸರು ಪಟ್ಟಿಯಲ್ಲಿ ಸೇರಿತು. ಅದೇ ದಿನ ನಾಮಪತ್ರ ಸಲ್ಲಿಸಿ ವಿಧಾನ ಪರಿಷತ್ ಸದಸ್ಯತ್ವ ದೊರಕಿತು. ಹುದ್ದೆ ಬಯಸಿದ ಪತಿಗೆ ದೊರಕದ ಭಾಗ್ಯ, ಲಾಬಿ ಮಾಡದೇ ಜಯಮ್ಮನವರಿಗೆ ಸಿಕ್ಕಿದೆ. ಮಾತ್ರವಲ್ಲ, ವಿಧಾನ ಪರಿಷತ್ ಸದಸ್ಯರಾದ ಮೊದಲ ಕಾಡುಗೊಲ್ಲ ಮಹಿಳೆ ಎಂಬ ಬಿರುದೂ ದೊರಕಿದೆ.
ಈ ಹಿನ್ನೆಲೆಯಲ್ಲಿ ಕನ್ನಡಪ್ರಭ ಜಯಮ್ಮನವರನ್ನು ಮಾತನಾಡಿಸಿದಾಗ ಅವರು ಹೇಳಿದ್ದು ಹೀಗಿದೆ.....
-ಏಳ್ನೇ ಕ್ಲಾಸ್ ಪಾಸಾಗಿರೋ ನೀವು, ವಿಧಾನ ಪರಿಷತ್ತಿನಲ್ಲಿ ಏನ್ಮಾಡ್ತೀರಿ ಎಂದರೆ ನಿಮ್ಮ ಉತ್ತರವೇನು?
ಹೌದ್ರಿ. ನಾನು ಓದಿದ್ದು ಏಳನೇ ತರಗತಿ ಮಾತ್ರ. ಆದರೆ ಲೋಕಜ್ಞಾನ ಇದೆ. ನಾನು ಹುಟ್ಟಿದ ಮನೆಯಲ್ಲೂ ಕೂಡು ಕುಟುಂಬ. ಮದುವೆಯಾಗಿ ಬಂದ ಮನೆಯಲ್ಲೂ ಅಷ್ಟೇ. ನಮ್ಮ ಮನೆಯಲ್ಲಿ ಆಗ 60 ಜನರಿದ್ದರು. ಅವಿಭಕ್ತ ಕುಟುಂಬದ ಮನೆಯ ಸೊಸೆಗೆ ತನಗರಿವಿಲ್ಲದೇ ಕುಟುಂಬ ನಿಭಾಯಿಸೋದು ಗೊತ್ತಾಗುತ್ತದೆ. ಮನೆ ಕಷ್ಟವೇ ಸಮಾಜದ ಕಷ್ಟ ಅಲ್ವೇನ್ರಿ? ಅಷ್ಟಕ್ಕೂ ನನ್ನನ್ನು ಪಕ್ಷ ಆಯ್ಕೆ ಮಾಡಿರೋದು ಮಹಿಳಾ ಕೋಟಾದಲ್ಲಿ. ಗ್ರಾಮೀಣ ಭಾಗದ ಕಷ್ಟವನ್ನು ನಿತ್ಯ ನೋಡಿದ ನನಗೆ ಆ ಬಗ್ಗೆ ಮಾತನಾಡುವುದು, ಸರ್ಕಾರದ ಗಮನ ಸೆಳೆಯೋದು ಕಷ್ಟ ಅಲ್ಲ ಅಂದ್ಕೊಂಡಿದ್ದೇನೆ.
-ಆದ್ರೂ ರಾಜಕೀಯ ಹೊಸದಲ್ವಾ?
ಬೆಂಗಳೂರಿನ ರಾಜಕಾರಣಕ್ಕೆ ನಾನು ಹೊಸಬಳೇ. ಆದರೆ ನಮ್ಮ ಯಜಮಾನ್ರು 30 ವರ್ಷದಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದರು. ನಾನು ನಾಯಕನಹಟ್ಟಿ ಹೋಬಳಿ ಜಂಬಯ್ಯನಹಟ್ಟಿ ಗೊಲ್ಲರಹಟ್ಟಿಯ ಜಿಲ್ಲಾ ಪಂಚಾಯತ್ ಸದಸ್ಯೆ. ನನಗೆ ಸ್ಥಳೀಯ ಸಮಸ್ಯೆ ಗೊತ್ತಿದೆ. ಅದನ್ನೇ ವಿಧಾನಸೌಧದಲ್ಲಿ ಮಾತಾಡ್ತೇನೆ.
-ಹಿರಿಯರ ಸದನದಲ್ಲಿ ಭಾಷಣ ಮಾಡೋದು ಕಷ್ಟ ಆಗಲ್ವಾ?
ದೊಡ್ಡ ಶಬ್ದ ಹಾಕಿ ಭಾಷಣ ಮಾಡೋಕೆ ಬರ್ದೇ ಇರಬಹುದು. ಆದರೆ ಹಳ್ಳಿ ಶೈಲಿ ಗೊತ್ತು. ನೀನು ಒಂದು ಗಂಟೆ ಭಾಷಣ ಮಾಡಿದ್ರೆ ನಿನ್ನನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮಾಡಸ್ತೇನೆ ಎಂದು ನಮ್ಮ ಜಿಲ್ಲಾ ಉಸ್ತುವಾರಿ ಸಚಿವ ಆಂಜನೇಯ ಅವರು ಹೇಳ್ತಾ ಇದ್ರು. ಮಾತಾಡ್ತೇನೆ.
-ಹಳ್ಳಿ ಸಮಸ್ಯೆ ಅಂದ್ರಲ್ಲಾ, ಯಾವ್ಯಾವ ವಿಷಯ ಮಾತಾಡ್ತೀರಿ?
ನೋಡಿ ಸರ್ ನಾನು ಹುಟ್ಟಿದ ಮನೆಯಲ್ಲೂ ಕುರಿ ಕಾಯ್ತಾ ಇದ್ದೆ. ಮದುವೆಯಾಗಿ ಹೋದ ಮನೆಯಲ್ಲೂ ಕುರಿ ಕಾದಿದ್ದೇನೆ. ಹೈನು ಉದ್ಯಮದ ಸಮಸ್ಯೆ ಬಗ್ಗೆ ಮಾತಾಡ್ತೇನೆ. ನನಗೂ ಒಬ್ಳು ಮಗಳು ಇದ್ದಾಳೆ. ನಮ್ಮೂರ ಹೆಣ್ಣು ಮಕ್ಕಳ ಸಮಸ್ಯೆನೂ ಗೊತ್ತು. ಹೀಗಾಗಿ ಸದನದಲ್ಲಿ ಸ್ತ್ರೀ ಸಮಸ್ಯೆ ಬಗ್ಗೆ ಧ್ವನಿ ಎತ್ತುತ್ತೇನೆ. ಗ್ರಾಮೀಣ ಶುಚಿತ್ವ, ಪರಿಸರ, ಶೌಚಾಲಯ ಸಮಸ್ಯೆ ಬಗ್ಗೆ ಮಾತನಾಡುತ್ತೇನೆ. ವೃದ್ಧಾಪ್ಯ ವೇತನ ಸಕಾಲದಲ್ಲಿ ಫಲಾನುಭವಿಗಳಿಗೆ ಕೊಡಿಸುವ ಪ್ರಯತ್ನ ಮಾಡುತ್ತೇನೆ.
-ಆದ್ರೂ ಇದು ನಿಮಗೆ ಅನಿರೀಕ್ಷಿತ ಅಲ್ವಾ?
ಹೌದು. ಆದರೆ ಒಬ್ಬ ಗ್ರಾಮೀಣ ಹಿಂದುಳಿದ ಮಹಿಳೆಯನ್ನು ಪಕ್ಷ ಗುರುತಿಸಿದೆ. ಸೋನಿಯಾ ಗಾಂಧಿ, ಸಿಎಂ ಸಿದ್ದರಾಮಯ್ಯ, ಪರಮೇಶ್ವರ, ನಮ್ಮ ಜಿಲ್ಲಾ ಸಚಿವರು, ಶಾಸಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನನಗೆ ರಾಜಕೀಯ ಮೊದಲಿನಿಂದಲೂ ಆಸಕ್ತಿ. ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಚುನಾವಣೆ ಎದುರಿಸುತ್ತಿದ್ದಾಗ ಬುಷ್ ರೇಡಿಯೋದಲ್ಲಿ ಚುನಾವಣೆ ಫಲಿತಾಂಶವನ್ನು ಸಂಪೂರ್ಣ ಕೇಳಿಯೇ ನಿದ್ದೆ ಮಾಡುತ್ತಿದ್ದೆ. ಅಷ್ಟರ ಮಟ್ಟಿಗೆ ನನಗೆ ರಾಜಕೀಯ ಜ್ಞಾನವಿದೆ.