ಶ್ರಮೇವ ಜಯತೇ; ನಮೋ ಉವಾಚ ಮೊದಲಧಿವೇಶನದಲ್ಲಿ ಮೋದಿ ಮಂತ್ರ
ಭಾರತಕ್ಕಿರುವ ಹಗರಣಗಳ ಹಣೆಪಟ್ಟಿ ಅಳಸಿ, ಕೌಶಲ್ಯ ಭಾರತ ಕಟ್ಟೋಣ. ಅದಕ್ಕಾಗಿ ಮುಂದಿನ 5 ವರ್ಷಕಾಲ 'ಶ್ರಮೇವ ಜಯತೇ' ಮಂತ್ರ ಪಠಿಸಬೇಕಿದೆ.
ನವದೆಹಲಿ: ಭಾರತಕ್ಕಿರುವ ಹಗರಣಗಳ ಹಣೆಪಟ್ಟಿ ಅಳಸಿ, ಕೌಶಲ್ಯ ಭಾರತ ಕಟ್ಟೋಣ. ಅದಕ್ಕಾಗಿ ಮುಂದಿನ 5 ವರ್ಷಕಾಲ 'ಶ್ರಮೇವ ಜಯತೇ' ಮಂತ್ರ ಪಠಿಸಬೇಕಿದೆ.
- ಲೋಕಸಭೆಯಲ್ಲಿ ಮೊದಲ ಬಾರಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಯಿದು.
ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಚರ್ಚೆಗೆ ಉತ್ತರಿಸಿದ ಪ್ರಧಾನಿ, 'ನಾನು ತಪ್ಪು ಮಾತನಾಡಿದರೆ ಕ್ಷಮಿಸಿ' ಎಂದೇ ಮಾತು ಆರಂಭಿಸಿದರು. ಹಿಂದಿನ ಸರ್ಕಾರಗಳ ಬಗ್ಗೆ ಟೀಕೆ ಮಾಡಲು ಇಲ್ಲಿ ನಿಂತಿಲ್ಲ ಎಂದ ಅವರು, ತಮ್ಮ ಕನಸಿನ ಭಾರತದ ಪರಿಕಲ್ಪನೆ ಅನಾವರಣ ಮಾಡಿದರು.
2 ದಿನಗಳ ಚರ್ಚೆಗೆ ವಿಸ್ತ್ರತ ಪ್ರತಿಕ್ರಿಯೆ ನೀಡಿ, 'ರಾಷ್ಟ್ರಪತಿ ಭಾಷಣವು ನಮಗೆ ಸಂಪ್ರದಾಯವಲ್ಲ. ಭಾಷಣದಲ್ಲಿ ಪ್ರಸಾಪಿತ ಪ್ರತಿ ವಿಚಾರವೂ ಪವಿತ್ರ. ರಾಷ್ಟ್ರಪತಿ ಭಾಷಣದಲ್ಲಿ ಭಾರತದ ಭವಿಷ್ಯದ ನೀಲನಕ್ಷೆ ಇದೆ. ಇದರ ಅನುಷ್ಠಾನಕ್ಕೆ ಸರ್ಕಾರ ಕಟಿಬದ್ಧ. ಹಾಗೆಯೇ ಭಾಷಣ ಕುರಿತ ಪ್ರತಿಪಕ್ಷಗಳ ಟೀಕೆ, ಸಲಹೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇನೆ. ಕ್ರಿಕೆಟ್‌ನಂತೆ ಅಭಿವೃದ್ಧಿಯಲ್ಲೂ ಒಗಟ್ಟು ಪ್ರದರ್ಶಿಸಬೇಕು' ಎಂದರು.
ಹೊಸ ನಿರೀಕ್ಷೆ ಹಾಗೂ ಪ್ರಜಾಪ್ರಭುತ್ವದ ಮೇಲಿನ ಗೌರವದಿಂದ ಜನ ಶಕ್ತ ಸರ್ಕಾರಕ್ಕೆ ಅವಕಾಶ ನೀಡಿದ್ದಾರೆ. ಇದು ಕೇವಲ ಉಳ್ಳವರ ಹಾಗೂ ಕೆಲ ಪ್ರಭಾವಿಗಳ ಸರ್ಕಾರ ಅಲ್ಲ. ಬಡವರು ಹಾಗೂ ಸಾಮಾನ್ಯರ ಸರ್ಕಾರವಾಗಿ ಕೆಲಸ ಮಾಡಿ ತೋರಿಸುತ್ತದೆ. ಬಡವನ ಮಕ್ಕಳು ಕೂಡ ಉತ್ತಮ ಶಿಕ್ಷಣ ಹಾಗೂ ಆರೋಗ್ಯ ಸೇವೆ ಪಡೆಯುವ ವ್ಯವಸ್ಥೆ ರೂಪಿಸುವುದು ಅಗತ್ಯ. ಸರ್ಕಾರದ ಕೆಲಸ ಬಡವರನ್ನು ತಲುಪುವಂತೆ ಮಾಡುತ್ತೇವೆ ಎಂದು ಹೇಳಿದರು.
ಸಾಧಿಸಿ ತೋರಿಸುತ್ತೇವೆ
ರಾಷ್ಟ್ರಪತಿ ಭಾಷಣದಲ್ಲಿ ಸಾಧಿಸಲು ಆಗದ ಸಾಕಷ್ಟು ಅಂಶಗಳ ಪ್ರಸ್ತಾಪವಾಗಿದೆ, ಮೋದಿ ಇಂತಹ ಯೋಜನೆಗಳನ್ನು ಹೇಗೆ ಅನುಷ್ಠಾನಕ್ಕೆ ತರುತ್ತಾರೆ ಎಂದು ಸದಸ್ಯರು ಪ್ರಶ್ನಿಸಿದ್ದಾರೆ. ಈ ಪ್ರಶ್ನೆ ಕೇಳುವದರಲ್ಲಿ ಯಾವುದೇ ತಪ್ಪಿಲ್ಲ. ನಾನು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ವಿದ್ಯುತ್ ಪೂರೈಕೆ ಕುರಿತಂತೆ ಇಂತಹುದೇ ಪ್ರಶ್ನೆ ಕೇಳಲಾಗಿತ್ತು. ಆದರೆ ನನ್ನ ಅಧಿಕಾರಾವಧಿಯಲ್ಲಿ ಇದನ್ನು ಸಾಧಿಸಿ ತೋರಿಸಿದ್ದೇನೆ. ಇಲ್ಲಿಯೂ ಅಧಿಕಾರದಿಂದ ಇಳಿಯುವಾಗ ಯಾವುದೇ ಭರವಸೆಯನ್ನು ಈಡೇರಿಸದೆ ಮತ್ತೊಂದು ಸರ್ಕಾರದ ಹೆಗಲಿಗೇರಿಸಿ ಹೋಗುವುದಿಲ್ಲ ಎಂದು ವಚನ ನೀಡಿದರು.
ಪ್ರಣಾಳಿಕೆಯಲ್ಲ, ಕಾಳಜಿ
- ಹಣದುಬ್ಬರ ಹಾಗೂ ಬೆಲೆಯೇರಿಕೆ ನಿಯಂತ್ರಿಸುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದೇವೆ ಎಂಬ ಕಾರಣಕ್ಕಷ್ಟೇ ಆ ನಿಟ್ಟಿನಲ್ಲಿ ಕಾರ್ಯನಿವಹಿಸುವುದಿಲ್ಲ. ಇದು ಈ ಸರ್ಕಾರದ ಕಾಳಜಿಯಾಗಿದೆ.
- ದೇಶದ ಮಹಿಳೆಯರು ಸುರಕ್ಷಿತರಾಗಿರಬೇಕು ಹಾಗೂ ಯಾವುದೇ ಮಗುವು ಹಸಿವಿನಿಂದ ಹಾಸಿಗೆಗೆ ಹೋಗಬಾರದು.
- ಚೀನಾ ಮುದಿಯಾಗುತ್ತಿದೆ, ನಾವು ತಾರುಣ್ಯದಿಂದ ಕಂಗೊಳಿಸುತ್ತಿದ್ದೇವೆ. ನಮ್ಮ ಜನಸಂಖ್ಯೆಯ ಶೇ.65ರಷ್ಟು ಯುವಕರು. ಅದನ್ನು ಬಳಸಿಕೊಂಡು ನಾವು ಮುನ್ನಡೆಯಬೇಕು.
- ಸ್ವಾತಂತ್ರ್ಯಕ್ಕಾಗಿ ಗಾಂಧಿ ಜನಾಂದೋಲನ ಮಾಡಿದರು, ಇಂದು ಅಭಿವೃದ್ಧಿಯ ಆಂದೋಲನ ಮಾಡಬೇಕಿದೆ.
- ಇವತ್ತಿನವರೆಗೆ ಈ ದೇಶದ ಮಾನವ ಸಂಪನ್ಮೂಲ ಶಕ್ತಿಯನ್ನು ವಿಶ್ವಕ್ಕೆ ಪ್ರದರ್ಶಿಸಿಲ್ಲ.
- ಗ್ರಾಮೀಣ ಭಾರತದ ಉಳಿವಿಗೆ ಕೃಷಿ ಆಧಾರಿತ ಕೈಗಾರಿಕೆ ಬೆಳೆಸಬೇಕು.
- ಸಾವಯವ ಕೃಷಿಯು ರೈತರ ಜೀವನಾಡಿಯಾಗಬೇಕು.
ಖರ್ಗೆಗೆ ಪಿಎಂ ಉತ್ತರ
ದುರ್ಯೋಧನನಿಗೆ ಸತ್ಯ, ಧರ್ಮದ ಬಗ್ಗೆ ಗೊತ್ತಿದ್ದರೂ ಪಾಲಿಸುವುದು ಆತನ ಡಿಎನ್‌ಎಯಲ್ಲಿಲ್ಲ. ಪಾಂಡವರು (ಕಾಂಗ್ರೆಸ್) ಸೋತಿದ್ದಾರೆ. ಆದರೆ ನಾವು ಕೌರವರಂತಲ್ಲ. ವಿಜಯ ನಮಗೆ ಪಾಠ ಕಲಿಸಿದೆ. ಸತ್ಯ, ಧರ್ಮ ಮನಗೆ ಗೊತ್ತಿದೆ. ಎಲ್ಲರ ಜತೆ ಮುನ್ನಡೆಯುತ್ತೇವೆ ಎಂದು ಕಾಂಗ್ರೆಸ್‌ಗೆ ಮೋದಿ ಪ್ರತಿಕ್ರಿಯಿಸಿದರು.
ಹಳ್ಳಿ ಸೊಗಡಿನ ನಗರೋತ್ಥಾನ
ರಾಷ್ಟ್ರಪತಿ ಭಾಷಣದಲ್ಲಿ ಹೇಳಿದಂತೆ ಕೇಂದ್ರ ಸರ್ಕಾರವು 'ರುರ್ಬನ್' ಎಂಬ ಹೊಸ ಕಲ್ಪನೆ ಹರಿದುಬಿಟ್ಟಿದೆ. ಹಳ್ಳಿಗಳಲ್ಲಿ ನಗರಗಳಂತೆ ಮೂಲಸೌಕರ್ಯ ಕಲ್ಪಿಸುವುದು ಇದರ ಆಶಯ. ರೈತರು ಹಳ್ಳಿ ಬಿಡದಂತೆ ನಗರದಲ್ಲಿ ಸಿಗುವ ಸೌಕರ್ಯ ಕಲ್ಪಿಸಬೇಕು. ಆಗ ಭಾರತದ ಹಳ್ಳಿಗಳು ಉಸಿರಾಡುತ್ತವೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಅತ್ಯಾಚಾರವನ್ನು ವಿಮರ್ಶಿಸಬೇಡಿ
ಅತ್ಯಾಚಾರವನ್ನು ವಿಮರ್ಶಿಸುವ ಕೆಲಸಕ್ಕೆ ಕೈ ಹಾಕಬೇಡಿ. ಇಂತಹ ಹೀನ ಕೃತ್ಯಗಳನ್ನು ಎಸಗಿದ ವ್ಯಕ್ತಿಯ ಮನೋ'ಾವನೆ ಅವಲೋಕಿಸುವ ಅನಿವಾರ್ಯವಿಲ್ಲ. ಬದಲಾಗಿ ನಮ್ಮ ತಾಯಂದಿರು ಹಾಗೂ ಅಕ್ಕ-ತಂಗಿಯ ಗೌರವ ಕಾಪಾಡುವ ಕೆಲಸ ಮಾಡೋಣ. ಈ ದೇಶದ ಮಹಿಳೆ ಸೇರಿದಂತೆ 120 ಕೋಟಿ ಜನರ ರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಕಾನೂನು ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸಿ ಮಹಿಳೆಯರ ರಕ್ಷಣೆಯ 'ರವಸೆ ನೀಡಬೇಕು ಎಂದು ತಮ್ಮ ಕಾನೂನು ಸುವ್ಯವಸ್ಥೆಯ ಪಥ ತಿಳಿಸಿದರು.
ನಾನೊಬ್ಬನೇ ಕೆಲಸ ಮಾಡುತ್ತೇನೆ ಎಂದು ಹೇಳುತ್ತಿಲ್ಲ. ಎಲ್ಲರೂ ಸೇರಿ ಸಮಸ್ಯೆಗಳನ್ನು ಗುರುತಿಸೋಣ, ಪರಿಹಾರಕ್ಕೆ ಎಲ್ಲರೂ ಪ್ರಯತ್ನಿಸೋಣ. ಸಂದರ್ಭ ಬಂದಾಗ ಹಿರಿಯರ ಮಾರ್ಗದರ್ಶನದಲ್ಲಿ ದೇಶ ಮುನ್ನಡೆಸೋಣ. ಈ ದೇಶಕ್ಕಾಗಿ ಬದುಕುವ ಪುಣ್ಯ ಅವಕಾಶ ನನಗೆ ದೊರೆತಿದೆ
-ನರೇಂದ್ರ ಮೋದಿ, ಪ್ರಧಾನಿ