ಉದ್ಯಾನನಗರಿ ಈಗ ಹಿರಿಯ ಜೀವಿಗಳ ಪಾಲಿಗೆ ನರಕ!
ಒಂದು ಕಾಲದಲ್ಲಿ 'ನಿವೃತ್ತರ ಸ್ವರ್ಗ' ಎನ್ನುವ ಕೀರ್ತಿ ಹೊಂದಿದ್ದ ಬೆಂಗಳೂರು ನಗರ ಈಗ ಹಿರಿಯ ಜೀವಿಗಳ ಪಾಲಿಗೆ ನರಕವಾಗಿದೆ..
ಕ.ಪ್ರ. ವಾರ್ತೆ ಬೆಂಗಳೂರು ಜೂ. 13
ಬೆಂಗಳೂರು: ಒಂದು ಕಾಲದಲ್ಲಿ 'ನಿವೃತ್ತರ ಸ್ವರ್ಗ' ಎನ್ನುವ ಕೀರ್ತಿ ಹೊಂದಿದ್ದ ಬೆಂಗಳೂರು ನಗರ ಈಗ ಹಿರಿಯ ಜೀವಿಗಳ ಪಾಲಿಗೆ ನರಕವಾಗಿದೆ ಎಂದು 'ಹೆಲ್ಪ್ಏಜ್ ಇಂಡಿಯಾ' ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ಇಡೀ ದೇಶದಲ್ಲೇ ಬೆಂಗಳೂರು ನಗರದಲ್ಲಿ ಹಿರಿಯ ಜೀವಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ದುರಂತ ಎಂದರೆ, ಮಗ ಹಾಗೂ ಸೊಸೆಯಂದಿರಿಂದಲೇ ಹೆಚ್ಚು ದೌರ್ಜನ್ಯ ನಡೆಯುತ್ತಿದೆಯಂತೆ.
ಹೆಲ್ಪ್ ಏಜ್ ಇಂಡಿಯಾ ದೇಶದ 6 ಮಹಾನಗರಗಳು ಹಾಗೂ ಎರಡನೇ ದರ್ಜೆ 6 ನಗರಗಳ 1200 ವೃದ್ಧರನ್ನು ಕೌಟುಂಬಿಕ ದೌರ್ಜನ್ಯದ ಸಮೀಕ್ಷೆಗೆ ಒಳಪಡಿಸಿದೆ.
ಏನನ್ನುತ್ತೆ ಸಮೀಕ್ಷೆ?: ಮಹಾನಗರಗಳಲ್ಲಿ ನಡೆಯುತ್ತಿರುವ ದೌರ್ಜನ್ಯದಲ್ಲಿ ಬೆಂಗಳೂರು ಮೊದಲನೇ (ಶೇ.75) ಸ್ಥಾನದಲ್ಲಿದ್ದರೆ ರಾಷ್ಟ್ರ ರಾಜಧಾನಿ ದೆಹಲಿ ಅತಿ ಕಡಿಮೆ ಅಂದರೆ ಶೇ.22ರೊಂದಿಗೆ ಕೊನೆ ಸ್ಥಾನದಲ್ಲಿದೆ. ಎರಡನೇ ದರ್ಜೆ ನಗರಗಳಲ್ಲಿ ನಾಗಪುರ ಹೆಚ್ಚು ಅಂದರೆ ಶೇ.85 ವೃದ್ಧರು ಹಾಗೂ ಕಾನ್ಪುರದಲ್ಲಿ ಕಡಿಮೆ ಅಂದರೆ ಶೇ.13ರಷ್ಟು ವೃದ್ಧರು ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಹೆತ್ತ ಮಗನಿಂದ ಶೇ.59ರಷ್ಟು ಹಾಗೂ ಸೊಸೆಯಂದಿರಿಂದ ಶೇ.61ರಷ್ಟು ವೃದ್ಧರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಬೈಗುಳ ಶೇ.41, ಅಗೌರವ ಶೇ.33 ಮತ್ತು ಪೋಷಕರ ಬಗ್ಗೆ ನಿರ್ಲಕ್ಷ್ಯದಿಂದ ಶೇ.29 ದೌರ್ಜನ್ಯ ನಡೆಯುತ್ತಿದೆ. ಮಾರ್ಯಾದೆಗೆ ಅಂಜಿ ಶೇ.41ರಷ್ಟು ವೃದ್ಧರು ತಮ್ಮ ಮೇಲೆ ನಡೆಯುವ ದೌರ್ಜನ್ಯವನ್ನು ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ. ಇನ್ನು ವೃದ್ಧರಿಗೆಂದೇ ಇರುವ ಪೊಲೀಸ್ ಸಹಾಯವಾಣಿಗಳ ಬಗ್ಗೆ ಶೇ.64ರಷ್ಟು ಜನರಿಗೆ ಮಾಹಿತಿ ಇದೆ. ಆದರೆ, ಅದರ ನೆರವು ಪಡೆಯುತ್ತಿರುವವರು ಶೇ.12ರಷ್ಟು ಮಂದಿ ಮಾತ್ರ. ಉಳಿದವರು ಸ್ನೇಹಿತರು, ಸಂಬಂಧಿಗಳ ಬಳಿ ತಮ್ಮ ದುಃಖವನ್ನು ಹಂಚಿಕೊಳ್ಳುತ್ತಿದ್ದಾರೆ.
ಹಿರಿಯ ನಾಗರಿಕರಿಗೆ ಸಹಾಯವಾಣಿ
ಹಿರಿಯ ನಾಗರಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್, ಪಿತೃ ದೇವೋಭವ, ಮಾತೃ ದೇವೋಭವ ಎಂಬ ಸಂಸ್ಕೃತಿ ಕಣ್ಮರೆಯಾಗಿ ಆಸ್ತಿಗಾಗಿ ಹೆತ್ತವರಿಗೆ ಕಿರುಕುಳ ನೀಡುವ ಸಂಸ್ಕೃತಿ ಇತ್ತೀಚೆಗೆ ಹೆಚ್ಚಾಗುತ್ತಿದೆ ಎಂದರು. ಕಾಲ ಕಳೆದಂತೆ ಎಲ್ಲರೂ ವೃದ್ಧರಾಗುತ್ತಾರೆ ಎನ್ನುವ ಅರಿವು ಪ್ರತಿಯೊಬ್ಬರಿಗೂ ಇರಬೇಕು. ದೌರ್ಜನ್ಯಕ್ಕೊಳಗಾಗುವ ವೃದ್ಧರು ಕುಟುಂಬದ ಗೌರವ ಹಾಳಾಗುತ್ತದೆ ಎಂದು ದೂರು ನೀಡಲು ಹಿಂಜರಿಯುತ್ತಾರೆ. ಹೀಗಾಗಿ ತಪ್ಪು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಅಸಾಧ್ಯವಾಗುತ್ತಿದೆ. ಆದರೆ, ಪೊಲೀಸ್ ಇಲಾಖೆ ಹಿರಿಯರ ನೆರವಿಗೆ ಸದಾ ಸಿದ್ಧವಿದೆ ಎಂದರು. ಇದೇ ವೇಳೆ ಎನ್ಜಿಓಗಳು ವೃದ್ಧರ ಮೇಲಿನ ದೌರ್ಜನ್ಯ ತಡೆಗಟ್ಟಲು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಔರಾದ್ಕರ್ ಹೇಳಿದರು. ಕುಟುಂಬ ಹಾಗೂ ಸಮಾಜದಿಂದ ದೌರ್ಜನ್ಯಕ್ಕೆ ಒಳಗಾಗುವ ಹಿರಿಯರ ನೆರವಿಗಾಗಿ ಶೀಘ್ರದಲ್ಲೇ 5 ಪೊಲೀಸ್ ಉಪವಿಭಾಗಗಳಲ್ಲೂ ಸಹಾಯವಾಣಿ ಕೇಂದ್ರ ತೆರೆಯಲಾಗುವುದು ಎಂದು ಔರಾದ್ಕರ್ ಹೇಳಿದರು.