ಕಸ ಸಮಸ್ಯೆ ಪರಿಹಾರಕ್ಕೆ ಸಿಎಂ ಸಭೆ ವಿಫಲ
ಬಿಬಿಎಂಪಿಯ ಕಸದ ತಾಣ ಮಂಡೂರಿನಲ್ಲಿ ಕಸ ಸುರಿಯುವಿಕೆ ಇನ್ನೂ ಅಬಾಧಿತ. ಅಷ್ಟೇ ಅಲ್ಲ..
ಬೆಂಗಳೂರು: ಬಿಬಿಎಂಪಿಯ ಕಸದ ತಾಣ ಮಂಡೂರಿನಲ್ಲಿ ಕಸ ಸುರಿಯುವಿಕೆ ಇನ್ನೂ ಅಬಾಧಿತ. ಅಷ್ಟೇ ಅಲ್ಲ, ಇನ್ನೂ 6 ತಿಂಗಳ ಕಾಲ ನಗರದ ಕಸ ಮಂಡೂರಿಗೆ ಹೋಗುವುದು ಬಹುತೇಕ ಖಚಿತ.
ಇದು ಮಂಡೂರು ಕಸ ವಿವಾದಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯ ಫಲಶ್ರುತಿ. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸುದೀರ್ಘ ಸಭೆ ಕಸ ವಿವಾದ ಕುರಿತು ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಯಿತು. ಅಲ್ಲದೆ, ಕಸ ವಿರೋಧಿಸಿ ಹೋರಾಟ ನಡೆಸುತ್ತಿರುವ ಗ್ರಾಮದ ಮುಖಂಡರ ಜತೆಗಿನ ಮಾತುಕತೆ ಕೂಡ ಮುರಿದುಬಿದ್ದಿತು.
ಇದರೊಂದಿಗೆ ಕಸ ಸಮಸ್ಯೆ ಎಂದಿನಂತೆ ಮುಂದುವರಿದಂತಾಯಿತು. ಹೀಗಾಗಿ ಶನಿವಾರದಿಂದ ನಿಷೇಧಾಜ್ಞೆ ನಡುವೆಯೇ ಕಸ ಸಾಗಣೆಯಾಗಲಿದ್ದು, ಗ್ರಾಮಸ್ಥರು ಸಹಕಾರ ನೀಡಿದರೆ ನಿಷೇಧಾಜ್ಞೆ ತೆರವಾಗಲಿದೆ.
ಸಭೆಯಲ್ಲಿ ಗ್ರಾಮಸ್ಥರು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಅಭಿಪ್ರಾಯ ಕೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದೆಲ್ಲದಕ್ಕೂ ಬಿಬಿಎಂಪಿ ವೈಫಲ್ಯವೇ ಕಾರಣ ಕಿಡಿಕಾರಿದರು. ಇನ್ನುಮುಂದೆ ಮೇಯರ್ ಕಟ್ಟೆ ಸತ್ಯನಾರಾಯಣ ಅವರು ವಾರಕ್ಕೊಮ್ಮೆ ಮಂಡೂರಿಗೆ ಹೋಗಿ ಪರಿಶೀಲಿಸಬೇಕು. ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ವಾರಕ್ಕೊಮ್ಮೆ ಪ್ರಗತಿ ಪರಿಶೀಲನೆ ನಡೆಸಬೇಕೆಂದು ಸೂಚಿಸಿದರು. ಪರ್ಯಾಯ ವ್ಯವಸ್ಥೆ ಮಾಡಲು ಬೇರೆ ಜಮೀನು ಖರೀದಿಸಬೇಕು. ಹಾಗೆಯೇ ಸಂಸ್ಕರಣ ಘಟಕಗಳನ್ನು ತ್ವರಿತವಾಗಿ ಆರಂಭಿಸಬೇಕೆಂದೂ ಹೇಳಿದರು.
ಅಂತಿಮ ನಿರ್ಧಾರ ಆಗಿಲ್ಲ
ಕಸ ಸಮಸ್ಯೆ ಆಲಿಸಿದ ಮುಖ್ಯಮಂತ್ರಿ, ಸಾಕಷ್ಟು ಸಲಹೆ, ಸೂಚನೆಗಳನ್ನು ನೀಡಿದ್ದಾರೆ. ಆದರೆ ಸಭೆಯಲ್ಲಿ ಅಂತಿಮ ತೀರ್ಮಾನ ಆಗಿಲ್ಲ. ಮಂಡೂರಿಗೆ ಕಸ ಕಳುಹಿಸುವುದನ್ನು ನಿಲ್ಲಿಸಲು ಸರ್ಕಾರ 6 ತಿಂಗಳ ಕಾಲಾವಕಾಶ ಕೇಳಿದೆ. ಆದರೆ ಗ್ರಾಮದ ಮುಖಂಡರು 3 ತಿಂಗಳು ನೀಡುವುದಾಗಿ ಹೇಳಿದ್ದಾರೆ. ಹೀಗಾಗಿ ಮುಖಂಡರು ತಮ್ಮ ಗ್ರಾಮಸ್ಥರ ಅಭಿಪ್ರಾಯ ಕೇಳಿ ಬರುವುದಾಗಿ ಹೇಳಿದ್ದಾರೆ. ಅವರು ಅಭಿಪ್ರಾಯ ಹೇಳುತ್ತಿದ್ದಂತೆ ಸಮಸ್ಯೆ ಸದ್ಯಕ್ಕೆ ಬಗೆಹರಿಯಲಿದೆ ಎಂದು ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು.
ಕಸ ಸಾಗಣೆ ನಿಲ್ಲಿಸಲು ಈ ಹಿಂದೆ ಕೆಲವು ಭರವಸೆ ನೀಡಿ 1 ವರ್ಷ ಕಾಲಾವಕಾಶ ಪಡೆಯಲಾಗಿತ್ತು. ಆದರೆ ಆಗಿನ ಭರವಸೆಗೂ ಈಗಿನ ಭರವಸೆಗೂ ಬಹಳ ವ್ಯತ್ಯಾಸವಿದೆ. ಈಗ ಕಸ ಸಂಸ್ಕರಣ ಘಟಕಗಳು ಆರಂಭವಾಗುವ ಹಂತದಲ್ಲಿದೆ. ಹೀಗಾಗಿ ಸಮಸ್ಯೆ ಬಹುಬೇಗ ನಿವಾರಣೆಯಾಗಲಿದೆ ಎಂದು ರಾಮಲಿಂಗಾ ರೆಡ್ಡಿ ವಿವರಿಸಿದರು.
ಸಚಿವರಾದ ಕೆ.ಜೆ.ಜಾರ್ಜ್, ರೋಷನ್ ಬೇಗ್, ಮೇಯರ್ ಕಟ್ಟೆ ಸತ್ಯನಾರಾಯಣ, ಶಾಸಕರಾದ ಭೈರತಿ ಬಸವರಾಜು, ಭೈರತಿ ಸುರೇಶ್, ಅರವಿಂದ ಲಿಂಬಾವಳಿ, ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಬಿಬಿಎಂಪಿ ಆಯುಕ್ತ ಲಕ್ಷ್ಮೀನಾರಾಯಣ ಸಭೆಯಲ್ಲಿ ಭಾಗವಹಿಸಿದ್ದರು.
ಕಸ ವಿಲೇವಾರಿ: ಹೈಗೆ ಸಲಹೆ ಸಲ್ಲಿಕೆ
ಬೆಂಗಳೂರು: ನಗರದ ಕಸ ಸಮಸ್ಯೆ ನಿವಾರಣೆಗೆ ಸಂಬಂಧಿಸಿದಂತೆ ಸಲಹೆ ನೀಡಲು ರಚನೆಯಾಗಿದ್ದ ತಜ್ಞರ ಸಮಿತಿ, ಮಂಡೂರು ತ್ಯಾಜ್ಯ ವಿಲೇವಾರಿ ಘಟಕದಲ್ಲಿನ ಸಮಸ್ಯೆ ಬಗೆಹರಿಸಲು ತನ್ನ ಸಲಹೆಗಳನ್ನು ಹೈಕೋರ್ಟ್ಗೆ ಶುಕ್ರವಾರ ಸಲ್ಲಿಸಿದೆ.
ಮಂಡೂರಿನ 85 ಎಕರೆ ಪ್ರದೇಶದಲ್ಲಿ ಶ್ರೀನಿವಾಸ ಗಾಯತ್ರಿ ರಿಸೋರ್ಸ್ ರಿಕವರಿ ಲಿಮಿಟೆಡ್ಗೆ ತ್ಯಾಜ್ಯದಲ್ಲಿ ವಿದ್ಯುತ್ ತಯಾರಿಸುವ ಘಟಕ ಸ್ಥಾಪನೆಗೆ ನೀಡಲಾಗಿತ್ತು. ಆದರೆ, ಈವರೆಗೆ ಇಲ್ಲಿ ವಿದ್ಯುತ್ ಘಟಕ ಕಾರ್ಯಾರಂಭ ಮಾಡಿಲ್ಲ. ತ್ಯಾಜ್ಯವನ್ನು ಯಾವುದೇ ರೀತಿಯಲ್ಲಿ ಸಂಸ್ಕರಣೆ ಮಾಡದೆ ಇಲ್ಲಿ ಸುರಿಯಲಾಗುತ್ತಿದೆ. ಇದು ಸುತ್ತಮುತ್ತಲಿನ ಮಾವಿನ ತೋಟಗಳಿಗೂ ವಿಷವನ್ನು ಬೀರುತ್ತಿದೆ ಎಂದು ಸಮಿತಿ ವರದಿಯಲ್ಲಿ ತಿಳಿಸಿದೆ.
ಮಂಡೂರು ಪ್ರದೇಶವನ್ನು ಉತ್ತರ, ದಕ್ಷಿಣ ಭಾಗವನ್ನಾಗಿ ವಿಂಗಡಿಸಿ ಕಸ ಸುರಿಯಲಾಗುತ್ತಿದೆ. ಅತ್ಯಂತ ದೊಡ್ಡರಾಶಿಯಾಗಿ ಕಸ ಇಲ್ಲಿ ಬಿದ್ದಿರುವುದರಿಂದ ದುವಾರ್ಸನೆ ಬೀರುತ್ತಿದೆ. ತ್ಯಾಜ್ಯವನ್ನು ಸಂಸ್ಕರಿಸದೆ ಇಲ್ಲಿ ಸುರಿಯಬೇಡಿ ಎಂದು ಬಿಬಿಎಂಪಿ ವಿರುದ್ಧ ಸ್ಥಳೀಯ ಗ್ರಾಮಸ್ಥರು ಹೋರಾಟ ಮಾಡುತ್ತಿದ್ದಾರೆ. ಈ ಪ್ರದೇಶವನ್ನು ವಿಲೇವಾರಿ ತಾಣದಿಂದ ಮುಕ್ತಗೊಳಿಸಿ, ತ್ಯಾಜ್ಯವನ್ನು ಸಂಸ್ಕರಿಸಿ ವೈಜ್ಞಾನಿಕ ವಿಲೇವಾರಿ ಘಟಕವನ್ನಾಗಿ ಮಾಡುವ ಅಗತ್ಯ ಇದೆ.
2013ರ ಜನವರಿ 4ರಂತೆ ಮಂಡೂರಿನಲ್ಲಿ 19 ಲಕ್ಷ ಟನ್ ತ್ಯಾಜ್ಯ ಸುರಿಯಲಾಗಿದೆ. ಬಿಬಿಎಂಪಿ ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು, ಕಸ ಸಂಸ್ಕರಿಸಿ, ಲ್ಯಾಂಡ್ಫಿಲ್ ಮರುಸ್ಥಾಪಿಸಬೇಕಾಗಿದೆ. ಅಲ್ಲದೆ ಮಂಡೂರಿನಲ್ಲಿರುವ ಎಲ್ಲ ತ್ಯಾಜ್ಯವನ್ನೂ ಅಲ್ಲಿಂದ ತೆರವುಗೊಳಿಸಬೇಕೆಂದು ತಜ್ಞರ ಸಮಿತಿ ಶಿಫಾರಸು ಮಾಡಿದೆ.
ಇಲ್ಲಿರುವ ಕಸವನ್ನು ಎಲ್ಲಿಗೆ ಕೊಂಡೊಯ್ಯಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ಆದರೆ, ಈಗಿರುವ ಕಸದ ಮೇಲೆಯೇ ಮತ್ತಷ್ಟು ಕಸ ಸುರಿದರೆ ಇನ್ನಷ್ಟು ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಕಸ ಸುರಿಯಲಾಗಿರುವ ಪ್ರದೇಶ ಬಿಟ್ಟು ಬೇರೆ ಪ್ರದೇಶ ಅಥವಾ ಮಂಡೂರಿನಲ್ಲಿ ಇತರೆ ಪ್ರದೇಶದಲ್ಲಿ ಈ ಕಸವನ್ನು ಸಂಸ್ಕರಿಸಬೇಕಿದೆ ಎಂದು ಸಲಹೆ ನೀಡಿದೆ.
ಬಿಬಿಎಂಪಿ ಆಯುಕ್ತ ಲಕ್ಷ್ಮೀನಾರಾಯಣ್ ಹೈಕೋರ್ಟ್ಗೆ ಹಾಜರಾಗಿ ತಜ್ಞರ ಸಮಿತಿ ನೀಡಿದ ವರದಿಯನ್ನು ಸಲ್ಲಿಸಿದರು. ಅಲ್ಲದೆ, ಮುಖ್ಯಮಂತ್ರಿಯವರು ಶುಕ್ರವಾರ ಸಭೆ ನಡೆಸುತ್ತಿದ್ದು, ಕಸದ ಸಮಸ್ಯೆ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ. ಇದನ್ನು ಆಲಿಸಿದ ನ್ಯಾ. ಎನ್.ಕುಮಾರ್ ನೇತೃತ್ವದ ವಿಶೇಷ ವಿಭಾಗೀಯ ಪೀಠ ಈ ಬಗೆಗಿನ ವಿಚಾರಣೆಯನ್ನು ಜೂ.18ಕ್ಕೆ ಮುಂದೂಡಿತು. ಕಸ ನಿರ್ವಹಣೆ ವಿಚಾರಕ್ಕೆ ಸಂಬಂಧಿಸಿದಂತೆ ವಕೀಲ ಜಿ.ಆರ್.ಮೋಹನ್ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.
ನಮ್ಮ ಹೆಣದ ಮೇಲೆ ಕಸ ಹಾಕಿ
ನಾವು ಇಷ್ಟೆಲ್ಲಾ ಮನವಿ ಮಾಡಿದರೂ ಇನ್ನೂ 6 ತಿಂಗಳು ಕಸ ಹಾಕುತ್ತೇವೆ ಎನ್ನುತ್ತಿದ್ದೀರಿ. ಹಾಗಿದ್ದರೆ ನಮ್ಮ ಹೆಣದ ಮೇಲೆ ಕಸ ಹಾಕಿ ಎಂದು ಮಂಡೂರು ಮಹಿಳೆ ಇಂದಿರಾ ಶ್ರೀನಿವಾಸಗೌಡ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದಲ್ಲಿ ನಿಷೇಧಾಜ್ಞೆ ಹೇರಿ ದಬ್ಬಾಳಿಕೆ ಮಾಡಿ ಕಸ ಹಾಕಲಾಗುತ್ತಿದೆ. ಇದನ್ನು ಪ್ರಶ್ನಿಸಿದ ಕಾರಣಕ್ಕೆ ಗರ್ಭಿಣಿಯರು, ಬಾಣಂತಿಯನ್ನೂ ಲೆಕ್ಕಿಸದೆ ಬಂಧಿಸಿ ಜೈಲಿಗೆ ಹಾಕಿದ್ದಾರೆ. ಇದೇ ದೌರ್ಜನ್ಯ ಇನ್ನೂ ಎಷ್ಟು ದಿನ ನಡೆಸಬೇಕೆಂದ್ದೀರಿ ಎಂದು ಇಂದಿರಾ ಪ್ರಶ್ನಿಸಿದರು.
ವಾರಕ್ಕೆ ಇಬ್ಬರ ಸಾವು: ಸರ್ಕಾರದವರು ಹಿಂದೆ ಒಂದು ವರ್ಷ ಅವಕಾಶ ಕೇಳಿದರು. ಅದನ್ನು ಒಪ್ಪಿದ್ದೆವು. ಆದರೆ ಮಾತಿಗೆ ತಕ್ಕಂತೆ ನಡೆದುಕೊಳ್ಳಲಿಲ್ಲ. ನಂತರ ಮತ್ತೆ 6 ತಿಂಗಳು ಕೇಳಿದರು. ಅದಕ್ಕೂ ಒಪ್ಪಿದೆವು. ಅದೂ ನಡೆಯಲಿಲ್ಲ. ಈಗ ಮತ್ತೆ 6 ತಿಂಗಳು ಕೇಳುತ್ತಿದ್ದಾರೆ. ಇವರನ್ನು ಹೇಗೆ ನಂಬುವುದು ಎಂದು ಶೈಲಾ ನಾಗರಾಜ್ ನೋವು ತೋಡಿಕೊಂಡರು.
ಇದೇರೀತಿ ಅವಕಾಶ ನೀಡಿದರೆ ನಾವು ಬದುಕಿರುವುದಿಲ್ಲ. ಸಾಯುತ್ತೇವೆ. ಈ ಮೊದಲು ಕಸದಿಂದಾಗಿ ತಿಂಗಳಿಗೆ ಒಬ್ಬರು ಸಾಯುತ್ತಿದ್ದರು. ಈಗ ವಾರಕ್ಕೆ ಒಬ್ಬರು ಸಾಯವಂತಾಗಿದೆ ಎಂದು ಹೇಳಿದರು.
ಉಪವಾಸ ಸತ್ಯಾಗ್ರಹ: ಮುಖ್ಯಮಂತ್ರಿಗಳ ಸಭೆಯಲ್ಲಿ ಸಮಸ್ಯೆಯೇ ಪರಿಹಾರವಾಗುತ್ತದೆ ಎಂದು ಭಾವಿಸಿದ್ದೆವು. ಆದರೆ ಹೀಗೆ ನಿರಾಶೆಯಾಗುತ್ತದೆ ಎಂದುಕೊಂಡಿರಲಿಲ್ಲ. ಇವರು ಕಸ ಹಾಕುವುದನ್ನು ಮುಂದುವರಿಸಿದರೆ ಉಪವಾಸ ಸತ್ಯಾಗ್ರಹ ನಡೆಸುವುದು ಖಚಿತ ಎಂದು ಮಂಡೂರು ಗ್ರಾಮಪಂಚಾಯಿತಿ ಸದಸ್ಯ ಚಂದ್ರಶೇಖರ್ ತಿಳಿಸಿದರು.
ಕೃಷ್ಣಾದಲ್ಲಿ ಕಸದ ಗಲಾಟೆ
ಮಂಡೂರಿನಲ್ಲಿ ಕಸ ಹಾಕುವುದನ್ನು ನಿಲ್ಲಿಸುವುದಕ್ಕೆ ಇನ್ನೂ 6 ತಿಂಗಳು ಸಮಯ ಬೇಕೆಂದು ಮುಖ್ಯಮಂತ್ರಿ ಕೇಳಿದರು. ಇದನ್ನು ಒಪ್ಪಿಕೊಳ್ಳದ ಗ್ರಾಮದ ಮುಖಂಡರು ಸಭೆಯಿಂದ ಹೊರ ಬಂದರು. ಆಗ ಮಂಡೂರು ಗ್ರಾಮಸ್ಥರು, ಮಹಿಳೆಯರು ಮಳೆಯಲ್ಲೇ ನಿಂತು ಸರ್ಕಾರದ ವಿರುದ್ಧ ಕೂಗಾಡಿದರು. ಶಾಸಕರ ವಿರುದ್ಧವೂ ಕಿಡಿಕಾರಿದರು. ಇದರಿಂದ ಗೃಹ ಕಚೇರಿ ಕೃಷ್ಣಾ ಸಂಪೂರ್ಣ ಕಸದ ಗದ್ದಲದಲ್ಲಿ ಮುಳುಗಿತ್ತು. ಆನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಳೆಯಲ್ಲೇ ನಿಂತು ಪತ್ರಿಕಾಗೋಷ್ಠಿ ನಡೆಸಿದರು.