ಶಿಕ್ಷಣ ಸಂಸ್ಥೆಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ: ಮಾನದಂಡ ನಿಗದಿ
ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಅಳವಡಿಕೆ ಉದ್ದೇಶದಿಂದ ಶಿಕ್ಷಣ ಸಂಸ್ಥೆಗಳಿಗೆ ಭಾಷಾ, ಮತೀಯ ಅಲ್ಪಸಂಖ್ಯಾತ ಸ್ಥಾನಮಾನ ನೀಡುವುದಕ್ಕೆ ಮಾನದಂಡ ನಿಗದಿಗೊಳಿಸಲು ರಾಜ್ಯ ಸಚಿವ..
ಕ.ಪ್ರ. ವಾರ್ತೆ ಬೆಂಗಳೂರು ಜೂ.13
ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಅಳವಡಿಕೆ ಉದ್ದೇಶದಿಂದ ಶಿಕ್ಷಣ ಸಂಸ್ಥೆಗಳಿಗೆ ಭಾಷಾ, ಮತೀಯ ಅಲ್ಪಸಂಖ್ಯಾತ ಸ್ಥಾನಮಾನ ನೀಡುವುದಕ್ಕೆ ಮಾನದಂಡ ನಿಗದಿಗೊಳಿಸಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಅನುದಾನ ರಹಿತ ಶಾಲೆಗಳಿಗೆ ಅಲ್ಪಸಂಖ್ಯಾತ ಸ್ಥಾನ ಲಭಿಸಬೇಕಿದ್ದರೆ ಶೇ.25ರಷ್ಟು ಮಕ್ಕಳು ಆ ಸಮುದಾಯಕ್ಕೆ ಸೇರಿರಬೇಕು ಎಂಬ ನಿಯಮ ರೂಪಿಸಲಾಗಿದೆ.
ಸಂಪುಟ ಸಭೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಈ ವಿಷಯ ತಿಳಿಸಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ.75ರಷ್ಟು ವಿದ್ಯಾರ್ಥಿಗಳಿರಬೇಕೆಂಬ ನಿಯಮ ಹೇರಲಾಗಿತ್ತು.
ಆದರೆ ಶಿಕ್ಷಣ ಸಂಸ್ಥೆಗಳು ನ್ಯಾಯಾಲಯದ ಮೊರೆ ಹೋಗಿದ್ದವು. ಈ ಹಿನ್ನೆಲೆಯಲ್ಲಿ ಪರಿಮಿತಿ ಇಳಿಕೆ ಮಾಡುವ ಮೂಲಕವಾದರೂ ಅಂಥ ಶಿಕ್ಷಣ ಸಂಸ್ಥೆಗಳನ್ನು ಆರ್ಟಿಇ ವ್ಯಾಪ್ತಿಯಲ್ಲಿ ತರುವ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.
ಸಂಪುಟ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳು ಹೀಗಿವೆ...
- ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರ ಸ್ಥಾಪನೆಗೆ ಪರಿಷ್ಕೃತ ವರದಿ. ರು. 6.56 ಕೋಟಿ ವೆಚ್ಚದಲ್ಲಿ 86 ಕೇಂದ್ರ ಸ್ಥಾಪನೆ. ಪ್ರತಿ ಕೇಂದ್ರಕ್ಕೆ ತಲಾ ರು. 25 ಲಕ್ಷ ನಿಗದಿ.
- ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ರಾಜ್ಯದಲ್ಲಿ ಗಣಿಗಾರಿಕೆಯಿಂದ ಹಾನಿಗೊಳಗಾದ ಜಿಲ್ಲೆಗಳಾದ ತುಮಕೂರು, ಚಿತ್ರದುರ್ಗ ಹಾಗೂ ಬಳ್ಳಾರಿಯಲ್ಲಿ ಕೇಂದ್ರೀಕೃತ ಪರಿಸರ ಯೋಜನೆಗಾಗಿ ವಿಶೇಷ ಕಾರ್ಯಕ್ರಮ ಮತ್ತು ದಂಡ ವಸೂಲಿಗೆ ಕಂಪನಿ ಕಾಯ್ದೆ ಅನ್ವಯ ಸಂಸ್ಥೆಯನ್ನು ನೋಂದಾಯಿಸಲು ಒಪ್ಪಿಗೆ. ಸುಮಾರು ರು. 30 ಸಾವಿರ ಕೋಟಿ ಸಂಗ್ರಹ ಗುರಿ.
- ರಾಜ್ಯದಲ್ಲಿರುವ ಸಿ ದರ್ಜೆ ಗಣಿಗಳಲ್ಲಿನ ಅದಿರು ಪ್ರಮಾಣ ಪತ್ತೆ ಹಚ್ಚಲು ಕೇಂದ್ರ ಸರ್ಕಾರದ ಎಂಇಸಿಎಲ್ ಸಂಸ್ಥೆಗೆ ಈಗಾಗಲೇ ಗುತ್ತಿಗೆ ನೀಡಲಾಗಿದ್ದು, ಆ ಸಂಸ್ಥೆಗೆ 4ಜಿ ವಿನಾಯಿತಿ ಮತ್ತು ರು. 20.19 ಕೋಟಿ ಹೆಚ್ಚುವರಿ ಹಣ ನೀಡಲು ಘಟನೋತ್ತರ ಅನುಮತಿ.
- ಆಹಾರ ಮತ್ತು ನಾಗರಿಕ ಪೂರೈಕೆ ನಿಗಮಕ್ಕೆ ರು. 400 ಕೋಟಿ ಸಾಲ ಪಡೆಯಲು ಘಟನೋತ್ತರ ಒಪ್ಪಿಗೆ.
- ರೇಷ್ಮೆಗೆ ಉತ್ತೇಜನ ನೀಡಲು ಮಿಶ್ರತಳಿಯ ಬೆಳೆಗಳಿಗೆ ಕ್ವಿಂಟಲ್ಗೆ ರು. 10ರಿಂದ ರು. 30, ಸಂಕರ ತಳಿಗಳಿಗೆ 40ರಿಂದ ರು. 50 ಪ್ರೋತ್ಸಾಹ ಧನ ನೀಡಲು ಒಪ್ಪಿಗೆ.
- ವಸತಿ ಇಲಾಖೆ ವತಿಯಿಂದ 2013-14ನೇ ಸಾಲಿನಲ್ಲಿ ರು. 1.20 ಲಕ್ಷ ವೆಚ್ಚದಲ್ಲಿ 60 ಸಾವಿರ ಮನೆ ನಿರ್ಮಿಸುವುದಕ್ಕೆ ರು. 720 ಕೋಟಿ ಬಿಡುಗಡೆಗೆ ಒಪ್ಪಿಗೆ.
- ಹಾಸನ -ಬೆಂಗಳೂರು ರೈಲ್ವೆ ಮಾರ್ಗದ ಪರಿಷ್ಕೃತ ಅಂದಾಜು ಪಟ್ಟಿ ತಯಾರಿಕೆ. ಇದರಲ್ಲಿ ರಾಜ್ಯದ ಪಾಲಿನ ಹಣ ರು. 467 ಕೋಟಿಯನ್ನು ಹಂತ ಹಂತವಾಗಿ ಬಿಡುಗಡೆಗೊಳಿಸಲು ನಿರ್ಧಾರ. ಜತೆಗೆ ರಾಜ್ಯಕ್ಕೆ ಸಂಬಂಧಿಸಿದ 15 ಯೋಜನೆಗಳ ಜಾರಿಗೆ ಸದ್ಯದಲ್ಲೇ ಸಭೆ ನಡೆಸಿ ಚರ್ಚೆ.
- ವಿಶ್ವಬ್ಯಾಂಕ್ ನೆರವಿನೊಂದಿಗೆ ಗ್ರಾಮಸ್ವರಾಜ್- 2ನೇ ಹಂತದ ಕಾಮಗಾರಿ ಆರಂಭ. ನಂಜುಂಡಪ್ಪ ವರದಿಯಲ್ಲಿನ ಹಿಂದುಳಿದ ತಾಲೂಕುಗಳಿಗೆ ರು. 2000 ಕೋಟಿ ನೆರವು.
- ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರಿದ 110 ಗ್ರಾಮಗಳಲ್ಲಿ ಅಭಿವೃದ್ಧಿ ಕೆಲಸ ಮಾಡಲು ಹಣ ಬಿಡುಗಡೆಗೆ ಒಪ್ಪಿಗೆ.
- ಹೋಟಾ ಸಮಿತಿ ಶಿಫಾರಸಿನ ಪ್ರಕಾರ ಕೆಪಿಎಸ್ಸಿಯಲ್ಲಿ ಸಂದರ್ಶನ ಸದಸ್ಯರ ಸಂಖ್ಯೆಯನ್ನು 9ರಿಂದ 14ಕ್ಕೆ ಹೆಚ್ಚಿಸಲು ನಿರ್ಧಾರ.
- ಗುಲ್ಬರ್ಗ, ಗದಗ, ಕಾರವಾರ, ಕೊಪ್ಪಳ ಚಾಮರಾಜನಗರದ ಸರ್ಕಾರಿ ವೈದ್ಯ ಕಾಲೇಜುಗಳಲ್ಲಿ 2014-15ನೇ ಸಾಲಿನಲ್ಲಿ ಖಾಲಿ ಇರುವ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡುವುದಕ್ಕೆ ಒಪ್ಪಿಗೆ.