ವಿಕ್ರಮೋದಿತ್ಯ
ಐಎನ್‌ಎಸ್ ವಿಕ್ರಮಾದಿತ್ಯ ಯುದ್ಧನೌಕೆಯನ್ನು ನೌಕಾಪಡೆಗೆ ಸಮರ್ಪಿಸಿರುವ ಪ್ರಧಾನಿ ನರೇಂದ್ರ ಮೋದಿ, 'ಭಾರತೀಯ ಸೇನೆಯ ಸುವರ್ಣ ದಿನ' ಎಂದು ಬಣ್ಣಿಸಿದ್ದಾರೆ.
ಪಣಜಿ: ಐಎನ್‌ಎಸ್ ವಿಕ್ರಮಾದಿತ್ಯ ಯುದ್ಧನೌಕೆಯನ್ನು ನೌಕಾಪಡೆಗೆ ಸಮರ್ಪಿಸಿರುವ ಪ್ರಧಾನಿ ನರೇಂದ್ರ ಮೋದಿ, 'ಭಾರತೀಯ ಸೇನೆಯ ಸುವರ್ಣ ದಿನ' ಎಂದು ಬಣ್ಣಿಸಿದ್ದಾರೆ.
'ಭಾರತೀಯ ನೌಕಾದಳದ ಅತಿ ದೊಡ್ಡ ಯುದ್ಧ ನೌಕೆಯಾದ ವಿಕ್ರಮಾದಿತ್ಯದ ಸಾಮರ್ಥ್ಯ ಹಾಗೂ ಕಾರ್ಯನಿರ್ವಹಣೆ ತಿಳಿಯುವುದು ಹೆಮ್ಮೆ ಹಾಗೂ ಖುಷಿಯ ಸಂಗತಿ. ಭಾರತದ ಮಟ್ಟಿಗೆ ಇದು ಐತಿಹಾಸಿಕ ಕ್ಷಣವಾಗಿದೆ' ಎಂದು ಹೇಳಿರುವ ಮೋದಿ, ರಕ್ಷಣಾ ಕ್ಷೇತ್ರದಲ್ಲಿ ಭಾರತ ಸ್ವಾವಲಂಬನೆ ಸಾಧಿಸಲು ದಿಟ್ಟ ಹೆಜ್ಜೆ ಇಡಲಿದೆ ಎಂದು ತಿಳಿಸಿದ್ದಾರೆ. ಪಣಜಿಯ ಸಮುದ್ರ ತೀರದಲ್ಲಿ ಶನಿವಾರ ಭಾರತೀಯ ನೌಕಾಸೇನೆಯ ಗರ್ವದ ಪ್ರತೀಕವಾಗಿರುವ ಐಎನ್‌ಎಸ್ ವಿಕ್ರಮಾದಿತ್ಯ ಯುದ್ಧನೌಕೆಯನ್ನು ಸೇನೆಗೆ ಹಸ್ತಾಂತರಿಸಿದ ಮೋದಿ, ಇದರ ಕಾರ್ಯನಿರ್ವಹಣೆ ಬಗ್ಗೆ ನೌಕಾಪಡೆಯ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಇದಕ್ಕೂ ಮುಂಚೆ 44,500 ಟನ್ ತೂಕದ ಯುದ್ಧನೌಕೆಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದರು. ನೌಕಾದಳದ ಮುಖ್ಯಸ್ಥ ಆ್ಯಡ್ಮಿರಲ್ ಆರ್.ಕೆ.ಧೊವನ್ ಸ್ವಾಗತಿಸಿದರು. ಮೋದಿಗೆ ರಕ್ಷಣಾ ಇಲಾಖೆ ಸಹಾಯಕ ಸಚಿವ ಇಂದ್ರಜಿತ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಇಲಾಖೆ ಕಾರ್ಯದರ್ಶಿ ಆರ್.ಕೆ.ಮಾಥೂರ್ ಸಾಥ್ ನೀಡಿದರು.
ಮಿಗ್ ಏರಿದ ಪ್ರಧಾನಿ: ಅರಬ್ಬಿ ಸಮುದ್ರದ ಗೋವಾ ಕರಾವಳಿಯಲ್ಲಿರುವ ವಿಕ್ರಮಾದಿತ್ಯ ಯುದ್ಧನೌಕೆಯಲ್ಲಿರುವ ಮಿಗ್-29ನ್ನು ಏರಿದ ಮೋದಿ, ಅಲ್ಲಿಯೇ ಕುಳಿತು ತುಸು ಕಾಲ ಅಧಿಕಾರಿಗಳಿಂದ ತಾಂತ್ರಿಕ ಮಾಹಿತಿ ಪಡೆದುಕೊಂಡರು. ಮಿಗ್-29ಕ್ಕೆ, ಯುದ್ಧ ವಿಮಾನ, ಹೆಲಿಕಾಪ್ಟರ್ ಸೇರಿದಂತೆ ಅನೇಕ ಯುದ್ಧಕೌಶಲ್ಯಗಳನ್ನು ಮಳೆಯ ಅಡಚಣೆ ನಡುವೆಯೇ ಮೋದಿ ವೀಕ್ಷಿಸಿದರು. ಕಳೆದ ನವೆಂಬರ್‌ನಲ್ಲಿ ರಷ್ಯಾ ಸೆವ್‌ಮಾಷ್ ನೌಕಾನೆಲೆಯಿಂದ ಮಾಜಿ ರಕ್ಷಣಾ ಸಚಿವ ಎ.ಕೆ.ಆ್ಯಂಟನಿ ಸ್ವೀಕರಿಸಿದ್ದರು. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ದೆಹಲಿಯಿಂದ ಮೊದಲ ಬಾರಿಗೆ ಮೋದಿ, ಗೋವಾ ತೀರದಲ್ಲಿರುವ ಯುದ್ಧನೌಕೆಯ ಮೇಲೆ ಕಾಲಿಡುತ್ತಿರುವುದು ವಿಶೇಷ.
ರಕ್ಷಣಾ ಸ್ವಾವಲಂಬನೆ- ಮೋದಿ ವರಸೆ: ಚುನಾವಣೆ ಭಾಷಣದಲ್ಲಿ ಹೇಳುತ್ತಿದ್ದಂತೆ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವುದು ನೂತನ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾಗಿದೆ. ಇನ್ನೆಷ್ಟು ದಿನಗಳ ಕಾಲ ವಿದೇಶದಿಂದ ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವುದು ಎಂದು ಪ್ರಶ್ನಿಸಿರುವ ಮೋದಿ, ಮುಂದಿನ ಬಜೆಟ್‌ನಲ್ಲಿ ಈ ಬಗ್ಗೆ ಸ್ಪಷ್ಟ ಹೆಜ್ಜೆ ಇಡಲಾಗುವುದು ಎಂದು ಹೇಳಿದರು.
'ಆಧುನಿಕ ತಂತ್ರಜ್ಞಾನ ಹಾಗೂ ಸ್ಥಳೀಯ ಉತ್ಪಾದನೆಯು ರಕ್ಷಣಾ ಕ್ಷೇತ್ರದ ಆದ್ಯತೆಯಾಗಬೇಕು. ಇದರಲ್ಲಿ ಯಶ ಸಾಧಿಸಿ ನಾವೇ ಇತರೆ ದೇಶಗಳಿಗೆ ರಪ್ತು ಮಾಡುವ ನಿಟ್ಟಿನಲ್ಲಿ ಅಭಿವೃದ್ಧಿ ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆಯಾಗಬೇಕಿದೆ' ಎಂದು ಸೇನೆಯೊಂದಿಗಿನ ಮೊದಲ ಭೇಟಿಯಲ್ಲಿ ಅಭಿಪ್ರಾಯಪಟ್ಟರು.
-ನೌಕಾಪಡೆಗೂ ಎನ್‌ಸಿಸಿ
ನೌಕಾಸೇನೆಗೆ ನೆರವಾಗುವ ನಿಟ್ಟಿನಲ್ಲಿ ಭೂಸೇನೆಯಲ್ಲಿರುವ ಮಾದರಿಯಲ್ಲಿಯೇ ವಿಶೇಷ ಎನ್‌ಸಿಸಿ ಪಡೆ ಕಟ್ಟುವ ಇಂಗಿತವನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದ್ದಾರೆ. ನೌಕಾದಳದ ಶಕ್ತಿ ವರ್ತನೆಗೆ ಈ ರೀತಿಯ ಪಡೆ ಕಟ್ಟುವುದು ಅನಿವಾರ್ಯ. ಕೇಂದ್ರ ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದು, ಶೀಘ್ರದಲ್ಲಿಯೇ ರೂಪುರೇಷೆ ಸಿದ್ಧಪಡಿಸುತ್ತೇವೆ ಎಂದು ಘೋಷಿಸಿದ್ದಾರೆ.
-ಪಿಂಚಣಿ ಅನುಷ್ಠಾನಕ್ಕೆ ಬದ್ಧ
'ಸಮಾನ ಹುದ್ದೆ, ಸಮಾನ ಪಿಂಚಣಿ'ಯನ್ನು ಶೀಘ್ರದಲ್ಲಿಯೇ ಅನುಷ್ಠಾನಗೊಳಿಸಲು ಕೇಂದ್ರ ತಯಾರಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಸುಪ್ರೀಂ ಕೋರ್ಟ್, ರಾಜ್ಯಸಭೆ ಹಾಗೂ ರಾಜಕೀಯವಾಗಿ ಹೋರಾಟ ನಡೆಸಿರುವುದರ ಪರಿಣಾಮವಾಗಿ ಸಮಾನ ಹುದ್ದೆ, ಸಮಾನ ಪಿಂಚಣಿ ವ್ಯವಸ್ಥೆಗೆ ಹಿಂದಿನ ಸರ್ಕಾರ ಅನುಮೋದನೆ ನೀಡಿತ್ತು. ನೂತನ ಪ್ರಧಾನಿ ಮೋದಿ ಕೂಡ ಈ ಪ್ರಸ್ತಾಪಕ್ಕೆ ಬೆಂಬಲ ಸೂಚಿಸಿರುವುದು ರಾಜೀವ್ ಅವರ ಹೋರಾಟಕ್ಕೆ ಸಿಕ್ಕ ಜಯವಾಗಿದೆ.