ದೇವನೆಲದಲ್ಲಿ ರುದ್ರಭೂಮಿ ಸೃಷ್ಟಿಯಾಗಿ ಇಂದಿಗೆ ವರುಷ
ಇಂದಿಗೆ ಸರಿಯಾಗಿ ಒಂದು ವರ್ಷದ ಹಿಂದೆ ಅಂದರೆ ಜೂನ್ 16ರಂದು ಚೋರ್ಬಾರಿ ತಾಲ್ ರಿಸರ್ಚ್...
-ರಾಧಾಕೃಷ್ಣ ಭಡ್ತಿ
ಅಂದು, ಆ ಕರಾಳ ರಾತ್ರಿ ಲೋಕರಕ್ಷಕ, ದೀನನಾಥ ಕೇದಾರನಾಥ ಅಕ್ಷರಶಃ ಅನಾಥನಾಗಿಬಿಟ್ಟ. ಆತನ ನಂಬಿ ಬಂದ ಭಕ್ತಾದಿಗಳ ಹೆಣಗಳ ರಾಶಿಯ ನಡುವೆ ಇದ್ದ ಶಿವನಿಗೆ 'ಸ್ಮಶಾನವಾಸಿ' ಎಂಬ ಹೆಸರು ಅನ್ವರ್ಥಗೊಂಡಿತ್ತು.
ಇಂದಿಗೆ ಸರಿಯಾಗಿ ಒಂದು ವರ್ಷದ ಹಿಂದೆ ಅಂದರೆ ಜೂನ್ 16ರಂದು ಚೋರ್ಬಾರಿ ತಾಲ್ ರಿಸರ್ಚ್ ಸ್ಟೇಶನ್ನಲ್ಲಿ ಕಂಡ ಸತ್ಯವೆಂದರೆ, ಹಿಮ ಸರೋವರ ತನ್ನ ದಕ್ಷಿಣದ ಗೋಡೆಯಲ್ಲಿ ಬಿರುಕು ಕಂಡಿತು. ನಿಮಿಷಗಳ ನಂತರ, ದೇವಾಲಯ ನಗರದಲ್ಲಿ ಅಂದರೆ ಆ ಸ್ಥಳಕ್ಕಿಂತ 4.ಕಿ.ಮಿ. ಕೆಳಗಿನ ನಗರ ನಾಶವಾಯಿತು.
ಅದಾಗಿ ಸರಿಯಾಗಿ ಒಂದು ವಾರದಲ್ಲಿ ನಾನು ಕೇದಾರದ ತಪ್ಪಲಿನ ಹತ್ತಾರು ಹಳ್ಳಿಗಳ ಅವಶೇಷಗಳ ನಡುವೆ ಹುಚ್ಚನಂತೆ ಓಡಾಡುತ್ತಿದ್ದೆ. ಪತ್ರಕರ್ತನಾಗಿ ಕಂಡದ್ದೆಲ್ಲವನ್ನು ದಾಖಲಿಸಿಕೊಳ್ಳುವ ತವಕ, ಹೊಸ ಹೊಸ ಸಂಗತಿಗಳು, ಮಾಹಿತಿಗಳು ಸಿಕ್ಕಾಗ ಪುಳಕ. ಆದರೆ ನನ್ನೊಳಗಿನ ಮನುಷ್ಯನಿಗೆ ಆ ಹೆಣಗಳ ರಾಶಿ ಹೇವರಿಕೆ ತರಿಸಿತ್ತು. ಅಲ್ಲಿ ಎಲ್ಲವನ್ನೂ ಕಳೆದುಕೊಂಡು ಬದುಕುಳಿದವರ ಅನಾಥ ಸ್ಥಿತಿ ಮರುಕ ಹುಟ್ಟಿಸುತ್ತಿತ್ತು. ಭೀಬತ್ಸಕ್ಕೆ ಬೆಚ್ಚಿದ್ದೂ ಇದೆ. ಒಮ್ಮೊಮ್ಮೆ ಉಮ್ಮಳಿಸಿ ಬರುವ ದುಃಖ ತಡೆಯಲಾರದೇ ಅ ಬೆಟ್ಟಗಳ ಸಾಲಿನಲ್ಲಿ ಕುಳಿತು ಬೋರೆಂದು ಅತ್ತಿದ್ದಿದೆ.
ಉತ್ತರಾಖಂಡದ ಪರ್ವತದ ಮೇಲಿನ ಗೌರಿಗಾಂವ್ನಿಂದ ಉತ್ತರಕ್ಕೆ ಕೇದಾರ ಗುಮ್ಮಟದವರೆಗೂ ರಾತ್ರಿಯಿಡಿ ಮಳೆ ಸುರಿದಿರುವ ಬಗ್ಗೆ ಬೆಟ್ಟದಿಂದ ಇಳಿದು ಬಂದ ಶೆರ್ಪಾಗಳು ಮಾಹಿತಿ ನೀಡಿದ್ದರು. ಕೇದಾರನಾಥ ದೇವಾಲಯದ ಈಶಾನ್ಯಕ್ಕಿರುವ ಕೇದಾರ ಗುಮ್ಮಟ (6, 831 ಮೀ.) ಆ ಭಾಗದ ಪರ್ವತ ಶ್ರೇಣಿಯಲ್ಲಿಯೇ ಮೂರನೇ ಅತಿ ಎತ್ತರದ ಶೃಂಗ. ಅಲ್ಲಿಯೇ ಜೂನ್ 16ರಂದು ಮೇಘಸ್ಫೋಟವಾಗಿ ಬಂಡೆಗಳು ಚೂರುಚೂರಾಗಿ ಉರುಳಿ ಬಂದಿದ್ದವು. ಅಂಥ ಬಂಡೆಗಳೇ ಒತ್ತಡವನ್ನು ಹೆಚ್ಚಿಸಿ ದೇವಾಲಯದಿಂದ 6 ಕಿ.ಮೀ. ಉತ್ತರಕ್ಕಿರುವ ಚಾರ್ಬಾರಿ ಸರೋವರ ಛಿದ್ರವಾಗಿತ್ತು. ಹೀಗಾಗಿ ಪ್ರವಾಹದ ನೀರು ಊಹೆಗೂ ಮೀರಿದ ವೇಗವನ್ನು ಪಡೆದು ಬಂಡೆ, ಪರ್ವತ ಸಾಲು, ಮನೆ-ಮಠ, ಮರ-ಗಿಡಗಳನ್ನು ನುಂಗಿ ಕುಡಿದಿತ್ತು. ಗಂಗೋತ್ರಿ ನೀರ್ಗಲ್ಲಿನ ದಕ್ಷಿಣಕ್ಕಿರುವ ಅದೇ ಕೇದಾರನಾಥದ ಪ್ರದೇಶದಲ್ಲಿ ಮತ್ತೆ ಮಳೆಯ ಅಬ್ಬರ ಶುರುವಾಗಿತ್ತು. ದೇಗುಲದ ಪ್ರದೇಶದಲ್ಲಿ ಓಡಾಡಿ ಬಂದ ದಿನವೇ ರಾತ್ರಿ ಅಲ್ಲಿ ಮತ್ತೆ ಶುರುವಾದದ್ದು ನನ್ನ ಭಯವನ್ನು ಮತ್ತಷ್ಟು ಹೆಚ್ಚಿಸಿತ್ತು. ನಾನು ಉಳಿದುಕೊಂಡಿದ್ದ ಹೋಟೆಲಿನಿಂದ ಕೆಲವೇ ಮೀಟರ್ ಅಂತರದಲ್ಲಿ ಮಂದಾಕಿನಿ ಹರಿಯುತ್ತಿದ್ದಳು. ಅವಳ ಹರಿವಿನ ಮಟ್ಟ ರಾತ್ರಿಗಿಂತಲೂ ಹೆಚ್ಚಿತ್ತು. ಪ್ರವಾಹದ ಸಂದರ್ಭದಲ್ಲೂ ಹೋಟೆಲಿಗೆ ಯಾವುದೇ ಧಕ್ಕೆ ಅಗಿಲ್ಲ. ಯಾವುದೇ ಕಾರಣಕ್ಕೂ ನದಿ ಈ ಎತ್ತರಕ್ಕೆ ಬರುವುದಿಲ್ಲ ಎಂಬ ಅಭಯ ಹೋಟೆಲ್ನವರು ಕೊಡುತ್ತಲೇ ಇದ್ದರೂ, ನದಿಯನ್ನು ನೋಡುತ್ತ ಇದ್ದಷ್ಟೂ ಅದು ನನ್ನ ಹೃದಯದೊಳಕ್ಕೇ ನುಗ್ಗುತ್ತಿದೆಯೇನೋ ಎಂಬಂಥ ಅವ್ಯಕ್ತ ತೊಳಲಾಟ. ಗಮನಾರ್ಹ ಸಂಗತಿಯೆಂದರೆ ಇವತ್ತಿಗೂ ಗಂಗೆಯ ತಟದ ಜನರ ಮನಸ್ಥಿತಿ ಒಂದಿನಿತೂ ಬದಲಾಗಿಲ್ಲ. ಅಲ್ಲಿಗೆ ಪ್ರವಾಸ ಹೋಗಲು ದೇಶದ ಜನ ಹಿಂಜರಿಯುವುದು ಹಾಗಿರಲಿ, ಇಂದಿಗೂ ಮಂದಾಕಿನಿಯ ಹರಿವಿನಲ್ಲಿ ತುಸುವೇ ಏರುಪೇರಾದರೂ ಸ್ಥಳೀಯರು ಒಳಗೊಳಗೇ ಬೆಚ್ಚುತ್ತಿದ್ದಾರೆ. ನಿನ್ನೆ (ಶನಿವಾರ)ಯಷ್ಟೇ ಗುಪ್ತಕಾಶಿಯ ಹೋಟೆಲ್ ಮಾಲೀಕ ಗಜೇಂದ್ರ ಸಿಂಗ್ ಹಾಗೂ ಹೃಷಿಕೇಶದ ನನ್ನ ಅತಿಆಪ್ತ ಟ್ಯಾಕ್ಸಿ ಚಾಲಕ ಸತ್ಯೇಂದರ್ಗೆ ಫೋನಾಯಿಸಿ, ಅಲ್ಲಿನ ಪರಿಸ್ಥಿತಿಯ ಬಗೆಗೆ ವಿಚಾರಿಸಿದಾಗ ಅವರು ವಿವರಿಸಿದ್ದು ಕೇಳಿ ನಿಜಕ್ಕೂ ವಿಷಾದ ಸುಳಿದು ಹೋಯಿತು.
ಸ್ವಚ್ಛತಾ ಕಾರ್ಯ ಇನ್ನೂ ಮುಗಿದಿಲ್ಲ
ಕೇದಾರನಾಥ ದೇವಸ್ಥಾನದ ಸುತ್ತಲಿನ ಪ್ರದೇಶಗಳನ್ನು ರಾಸಾಯನಿಕ ಸಿಂಪಡಿಸಿ ಸ್ವಛ್ಛ ಮಾಡವ ಕೆಲಸವೇ ಸಂಪೂರ್ಣವಾಗಿ ಮುಗಿದಿಲ್ಲ. ಇದಲ್ಲದೇ ಈ ವರ್ಷದ ಮಳೆಯಿಂದ ದೇವಸ್ಥಾನವನ್ನು ಸಂರಕ್ಷಿಸುವ ಮುನ್ನೆಚ್ಚರಿಕೆ ಕಾಮಗಾರಿಗಳು ನಡೆಯುತ್ತಿವೆ. ಉತ್ತರಾಖಂಡ ಸರ್ಕಾರ ಸಮರೋಪಾದಿಯಲ್ಲಿ ನಡೆಸುತ್ತಿದ್ದರೂ ನಿರೀಕ್ಷೆಗೆ ತಕ್ಕಂತೆ ಕೆಲಸವಾಗುತ್ತಿಲ್ಲ. ಶೇ.80ಕ್ಕೂ ಅಧಿಕ ಐತಿಹಾಸಿಕ ದಾಖಲೆಗಳು ನಾಶವಾಗಿರುವುದರಿಂದ ಅದನ್ನು ಮತ್ತೆ ಸಂಗ್ರಹಿಸುವ ಕಾರ್ಯವನ್ನು ದೇವಾಲಯದ ಅರ್ಚಕರು ಹಾಗೂ ಪುರಾತತ್ವ ಇಲಾಖೆ ಮಾಡುತ್ತಿದೆ.
ಭಯ ಹುಟ್ಟಿಸಿರುವ ಮಂದಾಕಿನಿ: ಕಳೆದ ವರ್ಷದ ಜಲ ಪ್ರಳಯದಿಂದ ಮಂದಾಕಿನಿ ನದಿಯು ಕೇದಾರನಾಥದ ಬಳಿ ದಿಕ್ಕು ಬದಲಾಗಿತ್ತು. ಆರಂಭದಲ್ಲಿ ಇದನ್ನು ಹಾಗೆಯೇ ಬಿಡುವ ಬಗ್ಗೆ ಚಿಂತನೆ ನಡೆದಿತ್ತು. ಆದರೆ ಇದರಿಂದ ಕೇದಾರನಾಥ ಸುತ್ತಲಿನ ಪರಿಸರಕ್ಕೆ ಮತ್ತಷ್ಟು ಧಕ್ಕೆಯಾಗುತ್ತದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿತ್ತು. ಸತತ 6 ತಿಂಗಳ ಪ್ರಯಾಸದ ಬಳಿಕ ಮತ್ತೆ ಮಂದಾಕಿನಿಯನ್ನು ಮೂಲ ಪಥಕ್ಕೆ ತಿರುಗಿಸಲಾಗಿದೆ. ಆದರೆ ಈ ವರ್ಷದ ಮಳೆಯ ಬಳಿಕ ಮಂದಾಕಿನಿಯ ನೈಜ ಅವತಾರ ಮತ್ತೆ ತಿಳಿಯುವ ಸಾಧ್ಯತೆಯಿದೆ. ಜಲಪ್ರಳಯದಲ್ಲಿ ದಿಕ್ಕು ಬದಲಾಗಿರುವುದು ಮತ್ತೆ ಕೇದಾರನಾಥನ ಮೇಲೆ ಪರಿಣಾಮ ಬೀರಬಹುದು ಎಂಬ ಅಂದಾಜು ಕೂಡ ಇದೆ.
ಮತ್ತೊಂದೆಡೆ ರಸ್ತೆ ಮಾರ್ಗವನ್ನು ಬದಲಿಸಿ ಸೋನ್ಪ್ರಯಾಗ್, ಗೌರಿಕುಂಡ್, ಭೀಮ್ಬಾಲಿ, ಲಿಂಚೋಲಿ ಹಾಗೂ ಕೇದಾರನಾಥಗಳಲ್ಲಿ ಭಕ್ತಾದಿಗಳ ಸಂಪೂರ್ಣ ವಿವರ ಇರಿಸಿಕೊಂಡು ಜಿಲ್ಲಾಡಳಿತ ಎಚ್ಚರಿಕೆ ಕ್ರಮ ತೆಗೆದುಕೊಳ್ಳುತ್ತಿದೆ. ಪ್ರತಿ ಭಕ್ತರ ಬಯೋವುಟ್ರಿಕ್ ವಿವರ ಪಡೆಯಲಾಗುತ್ತಿದೆ. ಏಕೆಂದರೆ ಯಾವುದೇ ಸಂದರ್ಭದಲ್ಲಿ ಮಳೆ ಬಂದರೆ ಬಹುತೇಕ ರಸ್ತೆಗಳು ಮತ್ತೆ ಮುಚ್ಚುವ ಸಾಧ್ಯತೆಯಿದೆ. ಇನ್ನೊಂದೆಡೆ ದೇಶದ ನಾನಾ ಭಾಗಗಳಿಂದ ಕುಟುಂಬ ಸದಸ್ಯರು ಇವತ್ತಿಗೂ ತಮ್ಮ ಆಪ್ತರ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಲೆಕ್ಕವಿಲ್ಲದಷ್ಟು ಜನರ ಹೆಣವೂ ದೊರೆತಿಲ್ಲ, ಗುರುತು ಸಿಕ್ಕಿಲ್ಲ.
...
ದೇಗುಲಕ್ಕೆ ಬರುವ ಹಾದಿ ಒಂದಷ್ಟು ಸರಿಯಾಗಿದೆ ಎಂಬುದನ್ನು ಬಿಟ್ಟರೆ ಪೂರ್ಣ ಸುಸ್ಥಿತಿಗೆ ಬಂದಿಲ್ಲ. ಬೆಟ್ಟ ಸಾಲು ಮತ್ತೆಮತ್ತೆ ಕುಸಿಯುತ್ತಲೇ ಇದೆ. ಅಪಾಯಕಾರಿ ರಸ್ತೆಗಳು ಈಗಾಗಲೇ ಎರಡು ಬಾರಿ ಬಸ್ ದುರಂತಕ್ಕೆ ಕಾರಣವಾಗಿ ಮೂವತ್ತಕ್ಕೂ ಹೆಚ್ಚು ಮಂದಿಯನ್ನು ಪಾತಾಳಕ್ಕೆ ತಳ್ಳಿವೆ. ರಸ್ತೆಗಳನ್ನು ಪೂರ್ಣ ಸರಿಪಡಿಸಲು ಇನ್ನೆರಡು ವರ್ಷವಾದರೂ ಬೇಕಾಗುತ್ತದೆ ಎನ್ನುತ್ತಾನೆ ಸತ್ಯೇಂದರ್. ಗಂಗೆಯ ಆರ್ಭಟಕ್ಕೆ ಕೇದಾರನಾಥದ ಸುಂದರ ದೇಗುಲ ಸ್ಮಶಾನದಂತೆ ಆಗಿತ್ತು. ಗಾಂಧಿ ಸರೋವರದಿಂದ ಹರಿದು ಬಂದ ಹಿಮಪ್ರವಾಹಕ್ಕೆ ಮೈಯ್ಯೊಡ್ಡಿ ನಿಂತ ಕೇದಾರನಾಥ ಮಲೀನಗೊಂಡರೂ ಜಖಂಗೊಂಡಿಲ್ಲ ಎಂಬುದನ್ನು ಬಿಟ್ಟರೆ ಪ್ರೇತ ಕಳೆ ಇಂದಿಗೂ ಆ ಪ್ರದೇಶವನ್ನು ಬಿಟ್ಟು ಹೋಗಿಲ್ಲ ಎಂಬುದು ಗಜೇಂದರ್ ನೀಡಿದ ಮಾಹಿತಿ.
...
ಅದಕ್ಕೆ ಕಾರಣಗಳು ಇಲ್ಲದಿಲ್ಲ. ಕೈಲಾಸವೆಂಬ ನಂಬಿಕೆಯ, ನಿಸರ್ಗ ರಮಣೀಯ, ಸುಂದರ ಕನಸಿನ ತಾಣದಲ್ಲೀಗ ನಿತ್ಯ ನರಕದ ಚಿಂತೆ. ಆಲ್ಲಿನ ಸ್ಥಿತಿ ನಿಜವಾಗಿಯೂ ದುಃಖವನ್ನೂ ಮೀರಿಸಿ ಭಯಾವೃತಗೊಂಡಿದೆ. ವಿಚಿತ್ರ ಫೋಬಿಯಾ ಅವರನ್ನು ಕಾಡುತ್ತಿರುವುದಕ್ಕೆ ಕಾರಣ ಪ್ರತ್ಯೇಕ ಹುಡುಕಬೇಕಿಲ್ಲ. ನಿವಾಸಿಗಳಂತಲೇ ಅಲ್ಲ, ಅಲ್ಲಿಗೆ ಹೋದ ಪ್ರತಿಯೊಬ್ಬರನ್ನೂ ಇದು ಸಾಂಕ್ರಮಿಕದಂತೆ ಕಾಡುತ್ತಿದೆ. ನದಿಯ ಭೋರ್ಗರೆತ ತುಸು ಹೆಚ್ಚಿದರೂ ಸಾಕು, ಎದೆ ಬಡಿದುಕೊಳ್ಳಲಾರಂಭಿಸುತ್ತದೆ. ಊರಿನ ಒಬ್ಬರಲ್ಲಾ ಒಬ್ಬರು ನದಿಯ ದಂಡೆಗೆ ಹೋಗಿ ಹತ್ತು ನಿಮಿಷ ನಿಂತು ಅದರ ವರ್ತನೆಯಲ್ಲಿ ಏನಾದರೂ ಬದಲಾವಣೆ ಇದೆಯೇ ಎಂದು ಸೂಕ್ಷ್ಮವಾಗಿ ಇಂದಿಗೂ ಗಮನಿಸಿಕೊಂಡು ಬರುತ್ತಿದ್ದಾರೆ. ಅಗಸ್ತ್ಯಮುನಿ, ತಿಲ್ವಾರ, ಕುಂಡ್, ಸೋನ್ ಪ್ರಯಾಗ, ರಾಮಪುರ, ಸೀತಾಪುರ ಮತ್ತಿತರ ಕಡೆ ಒಂದು ವರ್ಷದ ಹಿಂದೆ ಇದೇ ದಿನ ಇದ್ದ ಹಳ್ಳಿಗಳು ಬೆಳಗಾಗುವುದರೊಳಗೆ ಅಲ್ಲಿ ಹೀಗೊಂದು ಹಳ್ಳಿ ಇತ್ತು ಎಂಬಷ್ಟಕ್ಕೇ ಸೀಮಿತವಾಗಿಬಿಟ್ಟಿವೆ. ಆ ಮಟ್ಟಿಗೆ ಸರ್ವನಾಶ ಕಂಡ ಹಳ್ಳಿಗಳ ಸಂಖ್ಯೆ ಇಪ್ಪತ್ತಕ್ಕೂ ಹೆಚ್ಚು. ಇಂಥ ಹಳ್ಳಿಗಳನ್ನು ಸಂಪರ್ಕಿಸುವ 510ಕ್ಕೂ ಹೆಚ್ಚು ರಸ್ತೆಗಳು ನಾಮಾವಶೇಷಗೊಂಡಿದ್ದು ಇಂದಿಗೂ ಸರಿಯಾಗಿಲ್ಲ. 50 ಕಡೆ ಭಾರಿ ಭೂಕುಸಿತಗಳುಂಟಾಗಿದ್ದರ ಸಾಕ್ಷಿ ಇನ್ನೂ ಜೀವಂತವಾಗಿವೆ. ಛಿದ್ರವಾಗಿ ಹೋದ 2000ದಷ್ಟು ಹಳ್ಳಿಗಳು ಮತ್ತು ಅಲ್ಲಿನವರ ಬದುಕು ಹಸನಾಗಿಯೇ ಇಲ್ಲ. ಸರ್ಕಾರ ಪರಿಹಾರ ಪ್ಯಾಕೇಜ್ ಘೋಷಿಸಿ ಸಮಸ್ಯೆಗಳಿಗೆ ಮೌನವಾಗಿದೆ. ಏನೂ ಆಗಿಯೇ ಇಲ್ಲವೆಂಬಂತೆ ಪ್ರತಿಷ್ಠೆಗಾಗಿ ಈ ವರ್ಷ ಮತ್ತೆ ಕೇದಾರ ಯಾತ್ರೆಯನ್ನು ಮಾತ್ರ ಪುನರಾರಂಭಿಸಿಬಿಟ್ಟಿದೆ. ಉತ್ತರಾಖಂಡದ ಸರಕಾರದ ಸಾರಥಿ ವಿಜಯ್ ಬಹುಗುಣ ಹೋಗಿ ಹರೀಶ್ ರಾವತ್ ಬಂದರೂ ಆಳುವವರ ಮನಸ್ಥಿತಿ ಬದಲಾಗದಿರುವುದು ದುರಂತ. ದುರಂತಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾದ ಅಣೆಕಟ್ಟುಗಳ ನಿರ್ಮಾಣ ಯೋಜನೆಗಳು ಸ್ಥಗಿತಗೊಳ್ಳದೇ ಕಡತಗಳಲ್ಲಿ ಹಾಗೆಯೇ ಉಳಿದುಕೊಂಡು ಇಂದಿಗೂ ಬೆದರಿಸುತ್ತಲೇ ಇವೆ. ಸರಕಾರಕ್ಕೆ ಬುದ್ಧಿ ಬರುವುದು ಎಂದು?
...
ಇಂಥವೆಲ್ಲದರ ನಡುವೆ ಅಲ್ಲಿ ಕಂಡ, ಕೇಳಿದ ಒಂದೊಂದೂ ನೋವಿನ ಚಿತ್ರಣವನ್ನು ಇಂದಿಗೂ ನನಗೇ ಅರಗಿಸಿಕೊಳ್ಳಲಾಗುತ್ತಿಲ್ಲ. ಇನ್ನು ದುರಂತದ ನೈಜ ಸಂತ್ರಸ್ತ ಸ್ಥಳೀಯ ನಿವಾಸಿಗಳು ಅದನ್ನು ಮರೆತಾರು ಹೇಗೆ? ಬಹುಶಃ ಜೀವನದ ಕೊನೆಯವರೆಗೂ ಅಂಥ ನೋವಿನ ಚಿತ್ರಣ ಮನುಕುಲವನ್ನು ಕಾಡದೇ ಬಿಡದು.
ದುರಂತಕ್ಕೆ ಕಾರಣಗಳು
- ಉತ್ತರಾಖಂಡದಲ್ಲಿ ಸರಾಸರಿಗಿಂತ ಕಳೆದ ವರ್ಷ ಶೇ.500ರಷ್ಟು ಅಧಿಕ ಮಳೆ.
- 385 ಮಿ.ಮಿ. ಮಳೆಯನ್ನು ಉತ್ತರಾಖಂಡ ಪಡೆಯಿತು. ಸರಾಸರಿಯಾಗಿ 71 ಮಿ.ಮೀ.ನಷ್ಟು ಮಳೆ ಈ ಸಮಯದಲ್ಲಿ ಬರುತ್ತಿತ್ತು.
-ಅಣೆಕಟ್ಟು ನಿರ್ಮಿಸಲು ಗುಡ್ಡಗಳಲ್ಲಿ ಸಿಡಿಮದ್ದು ಸಿಡಿಸಿದ್ದು.
-ಯಾತ್ರಿಗಳ ದಂಡು, ಹೊರಗಿನಿಂದ ಬಂದವರೇ ಅಲೆಗಳಿಂದ ಹಾನಿಗೊಳಗಾಗಬಲ್ಲ ಸ್ಥಳಗಳಲ್ಲಿ ಜಮಾಯಿಸಿದ್ದರು.
-ನದಿ ತೀರ ಮತ್ತು ನದಿ ದಡಗಳಲ್ಲಿ ನಗರ ನಿರ್ಮಾಣ ಕಾರ್ಯವನ್ನು ಪರೀಕ್ಷಿಸಿರಲಿಲ್ಲ.
-ಮರಳಿನ ಕಳ್ಳಸಾಗಣಿಕೆ, ಇದರಿಂದ ದಡ ಸಮರ್ಥವಾಗಿ ನೀರನ್ನು ತಡೆಯದೇ ಹೋದದ್ದು.
-ಕರಗುತ್ತಿರುವ ಹಿಮಾಲಯ -ಪರಿಸರದಲ್ಲಿನ ಬದಲಾವಣೆಗಳು ಹಿಮಗಿರಿಶ್ರೇಣಿಗೆ ಬಲವಾದ ಪೆಟ್ಟು ನೀಡುತ್ತಿವೆ. ಅಧಿಕ ಪ್ರವಾಹಗಳ ಸಾಧ್ಯತೆ ಇನ್ನೂ ಇದೆ.
-ಹಿಮಾಲಯದ ಮೇಲ್ಪದರದ ತಾಪಾಮಾನ 1-2 ಡಿಗ್ರಿ ಸೆಲ್ಸಿಯಸ್ ಹೆಚ್ಚಿದೆ. ಇದು 2050ರ ಹೊತ್ತಿಗೆ ಇನ್ನಷ್ಟು ಹೆಚ್ಚಾಗುವ ಸಂಭವವಿದೆ.
-20,000ದಷ್ಟು ಮಂಜಿನ ಸರೋವರಗಳು, ಮಂಜು ಕರಗುವಿಕೆಯಿಂದಲೇ ಹಿಮಶ್ರೇಣಿಯಲ್ಲಿ ಉಂಟಾಗುತ್ತಿವೆ.
-200ರಕ್ಕಿಂತ ಹೆಚ್ಚು, ಮಂಜಿನ ಸರೋವರಗಳು ಭಯಾನಕ ಮೇಘ ಸಿಡಿತವನ್ನು ಉಂಟುಮಾಡಿದ್ದವು.
ಸ್ಥಳೀಯರ ಊರು ಬಿಡಿಸುತ್ತಿರುವ ಮಳೆ
ಡೆಹ್ರಾಡೂನ್: ಉತ್ತರಾಖಂಡದಲ್ಲಿ ಮತ್ತೆ ಕರಿ ಮೋಡಗಳು ಕಾಣುತ್ತಿವೆ. ತುಂತುರು ಮಳೆ ಸುರಿಯಲು ಆರಂಭಿಸಿದೆ. ಈಗಲೇ ಜನರು ಕೇದಾರನಾಥ, ರುದ್ರಪ್ರಯಾಗ ಜಿಲ್ಲೆಯಿಂದ ಜನ ಪಲಾಯನ ಆರಂಭಿಸಿದ್ದಾರೆ. ಪವಿತ್ರ ಕ್ಷೇತ್ರ ಕೇದಾರನಾಥಕ್ಕೆ ಬರುತ್ತಿರುವ ಭಕ್ತಾದಿಗಳ ಸಂಖ್ಯೆ ಶೇ.97ರಷ್ಟು ಕಡಿಮೆಯಾಗಿದೆ. ಭಕ್ತರನ್ನೇ ನಂಬಿ ಜೀವನ ನಡೆಸುತ್ತಿದ್ದ ಅಳಿದುಳಿದ ಸಾವಿರಾರು ಕುಟುಂಬಗಳು ಮತ್ತೆ ಮಳೆರಾಯನತ್ತ ನೋಡುತ್ತ ಕೂತಿದ್ದಾರೆ. ಈ ವರ್ಷವು ಅದೇ ರೀತಿ ಮಳೆ ಮುಂದುವರಿದರೆ ಜೀವನವೇ ಮುಗಿಯಿತು ಎಂದು ತಲೆಕೆಡಿಸಿಕೊಂಡಿದ್ದಾರೆ. ರುದ್ರಪ್ರಯಾಗದಿಂದ ಕೇದಾರನಾಥಕ್ಕಿರುವ 93 ಕಿ.ಮೀ ಮಾರ್ಗವು ಇನ್ನು ದುರ್ಗಮವಾಗಿಯೇ ಇರುವುದರಿಂದ ಭಕ್ತರ ಸಂಖ್ಯೆ ಗಣನೀಯವಾಗಿ ಇಳಿದಿದೆ. ಆರಂಭಿಕ 70 ಕಿ.ಮೀ ಕಚ್ಚಾ ರಸ್ತೆಯಾಗಿದ್ದರೂ ವಾಹನಗಳ ಮೂಲಕ ಚಲಿಸಬಹುದಾಗಿದೆ. ರಸ್ತೆಯನ್ನು ಬದಲಿಸಿದ್ದರೂ ಅಂತಿಮ 23 ಕಿ.ಮೀ ರಸ್ತೆಯಲ್ಲಿ ಸಂಚರಿಸುವುದು ತುಸು ಕಷ್ಟವಾಗಿದೆ.