ಭೂತಾನ್ಗೆ ಮೋದಿ ಬಲ
'ಮೋದಿ ಸಹೃದಯಿ. ನಮ್ಮ ದೇಶದ ಸ್ಥಿತಿಗತಿಯೂ ಅವರಿಗೆ ಗೊತ್ತು. ಭಾರತ ಮತ್ತು ಭೂತನ್ ನಡುವಿನ...
ಥಿಂಪು: 'ಮೋದಿ ಸಹೃದಯಿ. ನಮ್ಮ ದೇಶದ ಸ್ಥಿತಿಗತಿಯೂ ಅವರಿಗೆ ಗೊತ್ತು. ಭಾರತ ಮತ್ತು ಭೂತನ್ ನಡುವಿನ ಸ್ಥಿತಿಗತಿ ಚೆನ್ನಾಗಿ ಬಲ್ಲರು. ಇವರ ಭೇಟಿ ನಮಗೆ ಹೊಸ ಭರವಸೆ ಮೂಡಿಸಿದೆ' ಎಂದು ಭೂತಾನ್ ಪ್ರಧಾನಿ ತ್ಸೆರಿಂಗ್ ತೊಬ್ಗೆ ಮೆಚ್ಚುಗೆ ಸೂಚಿಸಿದರು.
ಭಾರತದ ಆರ್ಥಿಕ ನೆರವಿನಿಂದಲೇ ಇಲ್ಲಿನ ಹೆಜೋದಲ್ಲಿ ನಿರ್ಮಾಣಗೊಂಡ ಭೂತಾನ್ ಸುಪ್ರೀಂಕೋರ್ಟ್ಗೆ ಭಾನುವಾರ ನರೇಂದ್ರ ಮೋದಿ ಉದ್ಘಾಟನೆಯ ಸ್ಪರ್ಶ ನೀಡಿದರು. ಭಾರತದ ಯಾವ ಪ್ರಧಾನಿಗೂ ಸಿಗದ ಅಭೂತಪೂರ್ವ ಸ್ವಾಗತ ಮೋದಿ ಅವರಿಗೆ ಸಿಕ್ಕಿತು. ಇಲ್ಲಿಗೆ ಎರಡು ದಿನದ ಭೇಟಿಗೆ ಬಂದಿರುವ ಮೋದಿ ಅವರಿಗಿದು ಚೊಚ್ಚಲ ವಿದೇಶ ಪ್ರವಾಸ. 'ನಮಸ್ತೆ' ಸಂಜ್ಞೆಯಲ್ಲಿ ಭೂತನ್ ಪ್ರಧಾನಿ ತೊಬ್ಗೆ, ಮೋದಿಯವರನ್ನು ಬರಮಾಡಿಕೊಂಡರು.
ಭಾನುವಾರದ ರಜೆ ಮರೆತು ನೂರಾರು ಶಾಲಾ ಮಕ್ಕಳು ಉಭಯ ದೇಶಗಳ ಧ್ವಜ ಹಿಡಿದು, ಪಾರೋ ಏರ್ಪೋರ್ಟಿನಲ್ಲಿ ಭವ್ಯ ಸ್ವಾಗತ ಕೋರಿದರು. 'ನಮ್ಮ ಆತ್ಮೀಯ ಸ್ನೇಹಿತ ಆಗಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆತ್ಮೀಯ ಸ್ವಾಗತ' ಎಂಬ ಸುಸ್ವಾಗತದ ಕಟೌಟ್ಗಳು ಎಲ್ಲೆಡೆ ರಾರಾಜಿಸುತ್ತಿದ್ದವು. 'ನೈಸರ್ಗಿಕ ಶ್ರೀಮಂತ ದೇಶಕ್ಕೇ ನಾನು ಮೊದಲ ಪ್ರವಾಸ ನಿಗದಿಮಾಡಿಕೊಂಡೆ' ಅಂತ ಮೋದಿ ಈ ವೇಳೆ ಹೇಳಿಕೊಂಡರು. ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್, ರಾಷ್ಟ್ರೀಯ ರಕ್ಷಣಾ ಸಲಹೆಗಾರ ಅಜಿತ್ ದೊವಲ್ ಮತ್ತು ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್ ಮೋದಿ ಜೊತೆಗಿದ್ದರು.
'ಈ ಭೇಟಿಯಿಂದ ಎರಡೂ ದೇಶದ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ. ಆರ್ಥಿಕವಾಗಿ ಚೇತರಿಕೆಯ ಹೆಜ್ಜೆಯಿಡುತ್ತಿರುವ ನಮಗೆ ಮೋದಿ ಸರ್ಕಾರದ ನೆರವು ತೀರಾ ಅಗತ್ಯ. ಭಾರತದ ಎಲ್ಲ ನಡೆಗಳಿಗೂ ಧಾರಾಳ ಸಹಕಾರ ನೀಡುತ್ತೇವೆ' ಎಂದು ತೊಬ್ಗೆ ತಿಳಿಸಿದರು.
ಎರಡು ದಿನದ ಭೇಟಿಯಲ್ಲಿ ಭೂತಾನ್ಗೆ ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡುವ ಬಗ್ಗೆ ತೊಬ್ಗೆ ಜತೆ ಮೋದಿ ಚರ್ಚಿಸಲಿದ್ದಾರೆ. ಸೋಮವಾರ 600 ಮೆ.ವ್ಯಾ. ಸಾಮರ್ಥ್ಯದ ಹೈಡ್ರೋ ಎಲೆಕ್ಟ್ರಿಕ್ ಗ್ರಿಡ್ಗೆ ಚಾಲನೆ ನೀಡಲಿದ್ದಾರೆ. ರಾಜ ಜಿಗ್ಮೆ ಖೇಸರ್ ನಮ್ಗೈಲ್ ವಾಂಗ್ಚುಕ್ರನ್ನು ಮೋದಿ ಸೋಮವಾರ ಭೇಟಿ ಮಾಡಲಿದ್ದಾರೆ.
ಭೂತಾನ್ಗೆ ಬಲ: ಬೌದ್ಧರ ನಾಡು ಭಾರತ ಮತ್ತು ಚೀನಾ ನಡುವೆ ಇದ್ದರೂ, ಸ್ನೇಹದ ವಿಚಾರದಲ್ಲಿ ಭಾರತಕ್ಕೆ ತೀರಾ ಹತ್ತಿರವಿದೆ. ಇತ್ತೀಚೆಗೆ ಅತಿಕ್ರಮ ರಸ್ತೆ ನಿರ್ಮಾಣದ ವಿಚಾರದಲ್ಲಿ ಚೀನಾದೊಂದಿಗೆ ಸಂಬಂಧ ಹಳಸಿದ್ದು, ಭಾರತದ ಭೇಟಿ ಭೂತಾನ್ಗೆ ಆಶಾದಾಯಕ ಬೆಳವಣಿಗೆಯೂ ಆಗಬಹುದು. ಅಲ್ಲದೆ, ಮುಂದಿನ ತಿಂಗಳಲ್ಲಿರುವ ಚೀನಾ- ಭೂತಾನ್ ದ್ವಿಪಕ್ಷೀಯ ಮಾತುಕತೆಗೆ ಪೂರಕವೂ ಆಗಲಿದೆ.
ನೆರವಿನ ನಿರೀಕ್ಷೆ
1962ರಲ್ಲಿ ಮೊದಲ ರಸ್ತೆ ಕಂಡ, 1999ರಲ್ಲಿ ಇಂಟರ್ನೆಟ್ ಕಂಡ ಈ ದೇಶಕ್ಕೆ ಅಭಿವೃದ್ಧಿ ವಿಚಾರದಲ್ಲಿ ಭಾರತದ ಬೆಂಬಲ ಬೇಕೇಬೇಕು. ತೀವ್ರ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಭೂತಾನ್ಗೆ ಮೋದಿಯವರಿಂದ ಸೂಕ್ತ ಯೋಜನೆಗಳ ನೆರವು ನಿರೀಕ್ಷೆಯೂ ಇದೆ.