ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅಬ್ ಕಿ ಬಾರ್ ಮೋದಿ ಸಾರ್ಕ್

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಭೂತಾನ್ ಸಂಸತ್ ಉದ್ದೇಶಿಸಿ ಭಾಷಣ ಮಾಡಿದ್ದು, ಭಾರತ ಸಮೃದ್ಧಿಯಾಗಿದ್ದರೆ ನೆರೆ ರಾಷ್ಟ್ರಗಳಿಗೂ ಲಾಭವಾಗಲಿದೆ..

Srinivasa Murthy VN
Updated On : 17 Jun 2014, 1:48 am

ಥಿಂಪು: ಎರಡು ದಿನಗಳ ಭೂತಾನ್ ಪ್ರವಾಸದಲ್ಲಿರುವ ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಭೂತಾನ್ ಸಂಸತ್ ಉದ್ದೇಶಿಸಿ ಭಾಷಣ ಮಾಡಿದ್ದು, ಭಾರತ ಸಮೃದ್ಧಿಯಾಗಿದ್ದರೆ ನೆರೆ ರಾಷ್ಟ್ರಗಳಿಗೂ ಸಾಕಷ್ಟು ಲಾಭವಾಗಲಿದೆ ಎಂದರು.
ಇಂದು ಭೂತಾನ್ ಸಂಸತ್ತಿನಲ್ಲಿ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಮೋದಿ, ಭಾರತದ ಪ್ರಜಾಪ್ರಭುತ್ವವನ್ನು ಬೆಂಬಲಿಸಿದ್ದಕ್ಕೆ ಭೂತಾನ್ ಜನತೆಗೆ ಕೃತಜ್ಞತೆ ಸಲ್ಲಿಸಿದರು. ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಗೆ ಭಾರತ ಬದ್ಧವಾಗಿದೆ ಎಂದರು.
ಉತ್ತಮ ಪ್ರಜಾಪ್ರಭುತ್ವಕ್ಕೆ ಭಾರತ ಉದಾಹರಣೆಯಾಗಿದೆ. ಪ್ರಜಾಪ್ರಭುತ್ವದ ಶಕ್ತಿಯಿಂದ ಭಾರತ ಇಂತ ಅಭಿವೃದ್ಧಿ ಸಾಧಿಸಲು ಸಾಧ್ಯವಾಯಿತು. ಹೀಗಾಗಿ ಪ್ರಜಾಪ್ರಭುತ್ವವನ್ನು ಬೆಂಬಲಿಸಿದ ಭೂತಾನ್ ಸಹ ಭವಿಷ್ಯದಲ್ಲಿ ಉತ್ತಮ ಅಭಿವೃದ್ಧಿ ಸಾಧಿಸಲಿದೆ. ಹಾಗೆ ಭೂತಾನ್ ರಾಷ್ಟ್ರದ ರಾಜಕೀಯ ಪರಿಕಲ್ಪನೆಯು ಉತ್ತಮವಾಗಿದೆ ಎಂದರು.
ಪ್ರಧಾನಿಯಾದ ಬಳಿಕ ಇದೇ ಮೊದಲ ಭಾರಿಗೆ ವಿದೇಶಿ ಪ್ರವಾಸ ಕೈಗೊಂಡಿರುವ ನರೇಂದ್ರ ಮೋದಿ ಅವರು, ನೆರೆ ರಾಷ್ಟ್ರ ಭೂತಾನ್‌ನೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಸುವ ಸಲುವಾಗಿ ನಿನ್ನೆ ಭೂತಾನ್‌ಗೆ ತೆರಳಿದ್ದರು. ಭಾರತದ ನೆರವಿನಿಂದ ನಿರ್ಮಾಣವಾಗಿರುವ ಭೂತಾನ್ ಸುಪ್ರೀಂಕೋರ್ಟ್ ಕಟ್ಟಡ ಹಾಗೂ ಸಂಸತ್ ಭವನ ಕಟ್ಟಡವನ್ನು ಮೋದಿ ನಿನ್ನೆ ಲೋಕಾರ್ಪಣೆ ಮಾಡಿದ್ದರು.

ಸ್ಯಾಟೆಲೈಟ್ ನೆರವು
ಭಾರತ ಹಾರಿಬಿಟ್ಟ ಸ್ಯಾಟ್‌ಲೈಟ್‌ಗಳು ಇನ್ನು ಭೂತಾನ್‌ಗೂ ಕೆಲಸ ಮಾಡಲಿವೆ. 1999ರಲ್ಲಿ ಅಂತರ್ಜಾಲ ಕಂಡ ಈ ದೇಶಕ್ಕೆ ಸ್ವಂತ ಉಪಗ್ರಹ ಇಲ್ಲ. ನಮ್ಮ ವಿಜ್ಞಾನಿಗಳು ಭೂತಾನ್‌ಗೂ ತಾಂತ್ರಿಕ ನೆರವು ಒದಗಿಸಲು ಚಿಂತನೆ ನಡೆಸಬೇಕು.

ನೀಗಲಿದೆ ಉತ್ತರದ ಕತ್ತಲು
ದೆಹಲಿ ಸೇರಿದಂತೆ ಉತ್ತರ ಈಶಾನ್ಯ ರಾಜ್ಯಗಳಲ್ಲಿ ತೀವ್ರ ವಿದ್ಯುತ್ ಕೊರತೆ ಇದೆ. ಬೆಟ್ಟ-ತಪ್ಪಲಿನ ದೇಶ ಭೂತಾನ್‌ನಲ್ಲಿ ನೈಸರ್ಗಿಕ ವಿದ್ಯುತ್ ಉತ್ಪಾದನೆಗೆ ವಿಫುಲ ಅವಕಾಶಗಳಿವೆ. ಮೋದಿ ಸೋಮವಾರ ಇಲ್ಲಿ ಉದ್ಘಾಟಿಸಿದ 600 ಮೆಗಾವ್ಯಾಟ್ ಸಾಮರ್ಥ್ಯದ ಜಂಟಿ ಜಲ ವಿದ್ಯುತ್ ಯೋಜನೆಯ ಲಾಭವನ್ನು ನಾವೂ ಪಡೆಯಲಿದ್ದೇವೆ.

ಡಿಜಿಟಲ್ ಲೈಬ್ರರಿ
ಉಭಯ ರಾಷ್ಟ್ರಗಳ ಯುವಕರನ್ನು ಬೆಸೆಯಲು ಡಿಜಿಟಲ್ ಲೈಬ್ರರಿಯೋಜನೆಯನ್ನು ಮೋದಿ ಪ್ರಸ್ತಾಪಿಸಿದರು. ಭೂತಾನ್‌ನ 20 ಜಿಲ್ಲೆಗಳಲ್ಲಿ 2 ಲಕ್ಷ ಪುಸ್ತಕಗಳ ಲೈಬ್ರರಿ ಸ್ಥಾಪನೆಯ ಉದ್ದೇಶವಿದು. 2ಜಿಯ ವೇಗವೂ ಇಲ್ಲದ ಆ ದೇಶದಲ್ಲಿ ಹೈಸ್ಪೀಡ್ ಇಂಟರ್ನೆಟ್ ಮೂಲಕ ಲೈಬ್ರರಿ ಭಾಗ್ಯದಕ್ಕಲಿದೆ.

ಭಾರತ-ಭೂತಾನ್ ಅಭಿವೃದ್ಧಿ ಬಗ್ಗೆ ಮಹತ್ವಪೂರ್ಣ ಚರ್ಚೆ: ಸುಷ್ಮಾ
ಎರಡು ದಿನಗಳ ಭೂತಾನ್ ಪ್ರವಾಸದಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾಸ್ವರಾಜ್, ಉಭಯ ರಾಷ್ಟ್ರಗಳ ಅಭಿವೃದ್ಧಿ ಕುರಿತಂತೆ ಭೂತಾನ್‌ನೊಂದಿಗೆ ಮಹತ್ವಪೂರ್ಣ ಚರ್ಚೆ ನಡೆಸಲಾಗಿದೆ ಎಂದರು.
ಭೂತಾನ್‌ನ ಥಿಂಪುವಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭೂತಾನ್ ಪ್ರವಾಸ ಯಶಸ್ವಿಯಾಗಿದೆ. ಈ ಭೇಟಿಯಲ್ಲಿ ಹಲವು ಪ್ರಮುಖ ವಿಷಯಗಳನ್ನು ಕುರಿತು ಚರ್ಚಿಸಲಾಗಿದೆ ಎಂದರು. ಇದೇ ವೇಳೆ, ಭೂತಾನ್ ದೇಶದ ಉಪಚಾರದಿಂದ ನಾವು ಸಂತೃಪ್ತರಾಗಿದ್ದು, ಈ ಭೇಟಿ ಉಭಯ ದೇಶಗಳ ಬಾಂಧವ್ಯ ವೃದ್ಧಿಗೆ ಇದು ಪೂರಕವಾಗಿದೆ ಎಂದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement