ಮಲೆನಾಡಲ್ಲಿ ನಕ್ಸಲರ ವಸೂಲಿ
ಪಶ್ಚಿಮಘಟ್ಟದಲ್ಲಿ ನಕ್ಸಲರು ಹಣ ವಸೂಲಿಗಿಳಿದಿದ್ದಾರಂತೆ. ಅಲ್ಲಿಗೆ ಹೋದವರು ವಾಪಸಾಗುವುದು ಗ್ಯಾರಂಟಿ ಇಲ್ಲವಂತೆ! ಈ ನಕ್ಸಲರು ಪೊಲೀಸರಿಗೆ ಮಾತ್ರವಲ್ಲ...
-ಆರ್. ಕೇಶವಮೂರ್ತಿ
ಕನ್ನಡಪ್ರಭ ವಾರ್ತೆ ಬೆಂಗಳೂರು ಮಾ.6
ಪಶ್ಚಿಮಘಟ್ಟದಲ್ಲಿ ನಕ್ಸಲರು ಹಣ ವಸೂಲಿಗಿಳಿದಿದ್ದಾರಂತೆ. ಅಲ್ಲಿಗೆ ಹೋದವರು ವಾಪಸಾಗುವುದು ಗ್ಯಾರಂಟಿ ಇಲ್ಲವಂತೆ!
ಈ ನಕ್ಸಲರು ಪೊಲೀಸರಿಗೆ ಮಾತ್ರವಲ್ಲ, ಸಿನಿಮಾ ಮಂದಿಗೂ ವಿಲನ್‌ಗಳಾಗಿ ಕಾಡುತ್ತಿದ್ದಾರಂತೆ! ಹೀಗೆ ನಕ್ಸಲರ ಬಗ್ಗೆ ಕಥೆ ಹೇಳುತ್ತಿರುವುದು ಸಿನಿಮಾ ಮಂದಿ. ಅರೇ! ಈ ಸಿನಿಮಾ ಮಂದಿಗೂ ನಕ್ಸಲರಿಗೂ ಏನು ಸಂಬಂಧ? ಈಗ ನಕ್ಸಲರಿಂದ ತೊಂದರೆ ಅನುಭವಿಸಿ ಅದನ್ನು ರೋಚಕವಾಗಿ ಹೇಳುತ್ತಿರುವುದು ಬೇರ್ಯಾರೂ ಅಲ್ಲ, ನಟ ಪ್ರಜ್ವಲ್ ದೇವರಾಜ್ ಅಭಿನಯದ 'ಮೃಗಶಿರ' ಚಿತ್ರತಂಡ.
ನಿರ್ದೇಶಕರಾದಿಯಾಗಿ ನಿರ್ಮಾಪಕರ ತನಕ ಎಲ್ಲರೂ ಚಿತ್ರೀಕರಣಕ್ಕಿಂತ ಅಲ್ಲಿನ ನಕ್ಸಲರ ಬಗ್ಗೆ ಕುತೂಹಲಕಾರಿ ಘಟನೆಗಳನ್ನು ಹೇಳತೊಡಗಿದ್ದಾರೆ. ಅಲ್ಲದೆ, ಈ ಹಿಂದೆ ನಿರ್ದೇಶಕ ಎಸ್. ನಾರಾಯಣ್ ಕೂಡ ಮಲೆನಾಡಿನಲ್ಲಿ ಚಿತ್ರೀಕರಣಕ್ಕೆ ಹೋದಾಗ ನಕ್ಸಲರು ಅವರನ್ನು ಬೆದರಿಸಿ, ಲಕ್ಷ ರು. ಕಿತ್ತುಕೊಂಡಿದ್ದರಂತೆ.
ಹಾಗಾದರೆ ನಕ್ಸಲರು ಸಿನಿಮಾ ಮಂದಿ ಹೇಳುವಂತೆ ವಸೂಲಿಗಿಳಿದಿದ್ದಾರೆಯೇ? ಎನ್ನುವ ಪ್ರಶ್ನೆ ಮೂಡುತ್ತಿದೆ. ಅಲ್ಲದೆ ಎಎನ್‌ಎಫ್ ಕೂಡ ನಕ್ಸಲರ ಹಾವಳಿ ತಡೆಯಲು ವಿಫಲವಾಗಿದೆಯೇ ಎಂಬ ಅನುಮಾನ ಮೂಡುತ್ತಿದೆ.
'ಮೃಗಶಿರ ಚಿತ್ರದ ಕಥೆ ಕಾಡಿನಲ್ಲಿ ನಡೆಯುತ್ತದೆ. ಇದುವರೆಗೂ ಯಾರೂ ಚಿತ್ರೀಕರಿಸದ ಕುಂದಾಪುರದ ತೊಂಬಟ್ಟುನಲ್ಲಿ ಶೂಟಿಂಗ್ ಮಾಡುತ್ತಿದ್ದಾಗ ಇದು ನಕ್ಸಲ್ ಪೀಡಿತ ಪ್ರದೇಶವೆಂದು ಗೊತ್ತಾಯಿತು. ಅಲ್ಲಿಗೆ ಅರಣ್ಯ ಇಲಾಖೆಯವರು, ಪೊಲೀಸರೂ ಹೋಗಲ್ಲ. ನಾವು ಧೈರ್ಯ ಮಾಡಿ ಹೋಗಿದ್ವಿ. ಒಮ್ಮೆ ನಕ್ಸಲರು ಬಂದು ವಿಚಾರಿಸಿದರು. ಅವರ ಹೆಸರು ಹೇಳುವುದು ಬೇಡ.
25 ದಿನ ಚಿತ್ರೀಕರಣ ಮುಗಿದಿತ್ತು. 26ನೇ ದಿನ ಅಲ್ಲೇ ಚಿತ್ರೀಕರಣ ಮಾಡಿದರೆ ಅನಾಹುತ ಸಂಭವಿಸಬಹುದೆಂಬ ಮಾಹಿತಿ ಬಂತು. ಹೀಗಾಗಿ ಹೇಳದೆ ಕೇಳದೆ ಅಲ್ಲಿಂದ ತಪ್ಪಿಸಿಕೊಂಡು ಬಂದೆವು. ನಿಜಕ್ಕೂ 25 ದಿನ ಕಾಡಿನಲ್ಲಿ ಹೇಗೆ ಕಳೆಯಿತು ಅಂತ ನೆನಪಿಸಿಕೊಂಡರೆ ಭಯವಾಗುತ್ತೆ' ಎಂದು ಮೊದಲು ಕಥೆ ಹೇಳಿದ್ದು ನಿರ್ಮಾಪಕ ಚೆನ್ನಪ್ಪ.
ಅಲ್ಲಿ ಚಿತ್ರೀಕರಣಕ್ಕೆ ಹೋದವರು ನಕ್ಸಲರ ಬಗ್ಗೆ ಹೀಗೆ ವರ್ಣರಂಜಿತ 'ಸ್ಟೋರಿ'ಗಳನ್ನು ಹೇಳುತ್ತಿದ್ದಾರೆ. ಇವರ ಕಥೆಗಳು ರೀಲೋ, ರಿಯಲ್ಲೋ ತಿಳಿಯದು. ಆ ಕತೆಗಳು ನಿಜವೇ ಆಗಿದ್ದಲ್ಲಿ ಸರ್ಕಾರ, ನಕ್ಸಲ್ ನಿಗ್ರಹ ದಳ ಇದನ್ನು ಗಂಭೀರವಾಗಿ ಪರಿಗಣಿಸಬೇಕಾದ ಅನಿವಾರ್ಯವಿದೆ.
25 ದಿನ ಮಲೆನಾಡಿನ ತೊಂಬಟ್ಟುನಲ್ಲಿ ಚಿತ್ರೀಕರಣ ಮಾಡಿದ್ವಿ. ಅಷ್ಟರಲ್ಲಿ ಇದು ನಕ್ಸಲ್ ಪೀಡಿತ ಪ್ರದೇಶ ಅಂತ ಗೊತ್ತಾಯಿತು. ಚಿತ್ರೀಕರಣ ಮುಂದುವರಿಸಿದರೆ ಅನಾಹುತ ಆಗಬಹುದು ಅಂತಂದುಕೊಂಡಿದ್ವಿ.
-ಶ್ರೀವತ್ಸ, ನಿರ್ದೇಶಕ
ನಾವು ನಕ್ಸಲರಿಗೆ ಹೆದರಿದ್ದು ನಿಜ. ಆದರೆ, ಅವರು ನಮಗೆ ಚಿತ್ರೀಕರಣ ಮಾಡಬೇಡಿ ಅಂತ ಹೇಳಲಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳೇ ಬಂದು 'ಇಲ್ಲಿ ಚಿತ್ರೀಕರಣ ಮಾಡಬೇಡಿ. ನಿಮಗೆ ತೊಂದರೆ ಆಗುತ್ತದೆ' ಅಂತಂದರು.
-ಪ್ರಜ್ವಲ್ ದೇವರಾಜ್, ನಟ