ರಾಮುಲು ಸಹವಾಸ ಬೇಡೆಂದ ಸುಷ್ಮಾ
ಬಿಜೆಪಿ ಜತೆಗೆ ಮಾಜಿ ಸಚಿವ ಶ್ರೀರಾಮುಲು ನೇತೃತ್ವದ ಬಿಎಸ್‌ಆರ್ ಕಾಂಗ್ರೆಸ್ ವಿಲೀನಕ್ಕೆ ಪಕ್ಷದ ಹಿರಿಯ ನಾಯಕಿ ಸುಷ್ಮಾಸ್ವರಾಜ್ ಅಡ್ಡಗಾಲು...
ನವದೆಹಲಿ: ಬಿಜೆಪಿ ಜತೆಗೆ ಮಾಜಿ ಸಚಿವ ಶ್ರೀರಾಮುಲು ನೇತೃತ್ವದ ಬಿಎಸ್‌ಆರ್ ಕಾಂಗ್ರೆಸ್ ವಿಲೀನಕ್ಕೆ ಪಕ್ಷದ ಹಿರಿಯ ನಾಯಕಿ ಸುಷ್ಮಾಸ್ವರಾಜ್ ಅಡ್ಡಗಾಲು ಹಾಕಿದ್ದಾರೆ. ಪಕ್ಷಕ್ಕೆ ಕಳಂಕಿತ ನಾಯಕರ ಸೇರ್ಪಡೆಗೆ ತಮ್ಮ ವಿರೋಧ ಇದೆ ಎಂದು ಸುಷ್ಮಾ ಬಹಿರಂಗವಾಗಿ ಘೋಷಿಸಿದ್ದಾರೆ. ಇದರಿಂದ ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ಬಿಎಸ್‌ಆರ್ ಕಾಂಗ್ರೆಸ್ ಅನ್ನು ಪಕ್ಷದೊಂದಿಗೆ ವಿಲೀನಗೊಳಿಸಬೇಕೆನ್ನುವ ಕರ್ನಾಟಕ ಬಿಜೆಪಿ ನಾಯಕರ ಪ್ರಯತ್ನಕ್ಕೆ ಹಿನ್ನಡೆಯಾದಂತಾಗಿದೆ.
'ಬಿಎಸ್‌ಆರ್ ಕಾಂಗ್ರೆಸ್ ಅನ್ನು ಬಿಜೆಪಿ ಜತೆಗೆ ವಿಲೀನ ಮಾಡುವುದು ಅಥವಾ ಅದರ ಜತೆಗೆ ಮೈತ್ರಿ ಮಾಡಿಕೊಳ್ಳುವುದಕ್ಕೆ ನನ್ನ ಸ್ಪಷ್ಟ ವಿರೋಧವಿದೆ. ಈ ಕುರಿತು ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಲಿಖಿತವಾಗಿ ನನ್ನ ವಿರೋಧ ವ್ಯಕ್ತಪಡಿಸಿದ್ದೇನೆ' ಎಂದು ಸುಷ್ಮಾ ಗುರುವಾರ ಟ್ವೀಟ್ ಮಾಡಿದ್ದಾರೆ.
ಸುಷ್ಮಾ ಬಹಿರಂಗ ಅಸಮಾಧಾನದಿಂದ ಈಗ ಕರ್ನಾಟಕದ ಬಿಜೆಪಿ ನಾಯಕರ ಕೈ ಕಟ್ಟಿಹಾಕಿದಂತಾಗಿದೆ. ಸುಷ್ಮಾ ವಿರೋಧದ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಕೂಡ ವಿಲೀನ ಪ್ರಕ್ರಿಯೆಗೆ ಕೆಲ ಕಾಲ ತಡೆ ಹಾಕುವ ಸಾಧ್ಯತೆ ಇದೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರಕಾರ ಶ್ರೀರಾಮುಲು ಮೇಲಿನ ಆರೋಪ ಇನ್ನೂ ಸಾಬೀತಾಗಿಲ್ಲ. ಬಿಹಾರದಲ್ಲಿ ಆರ್‌ಜೆಡಿ ಜತೆಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಬಹುದಾದರೆ ಕರ್ನಾಟಕದಲ್ಲಿ ಯಾಕೆ ನಾವು ಬಿಎಸ್‌ಆರ್‌ನೊಂದಿಗೆ ಕೈಜೋಡಿಸಬಾರದು ಎಂಬುದು ಕೆಲ ಬಿಜೆಪಿ ಮುಖಂಡರ ಪ್ರಶ್ನೆ.
ಬಿಜೆಪಿ ಜತೆಗೆ ಬಿಎಸ್‌ಆರ್ ಕಾಂಗ್ರೆಸ್‌ನ ವಿಲೀನ ಅಥವಾ ಮೈತ್ರಿಕೂಟಕ್ಕೆ ನಾನು ಸ್ಪಷ್ಟವಾಗಿ ವಿರೋಧ ವ್ಯಕ್ತಪಡಿಸಿದ್ದೇನೆ.
-ಸುಷ್ಮಾಸ್ವರಾಜ್ ಬಿಜೆಪಿ ಹಿರಿಯ ನಾಯಕಿ
ರಾಜಕೀಯ ಮತ್ತಷ್ಟು ಚುರುಕು
ಚುನಾವಣೆ ದಿನಾಂಕ ಪ್ರಕಟವಾದ ಬೆನ್ನಲ್ಲೇ ರಾಜಕೀಯ ಮುಖಂಡರಲ್ಲಿ ಮಿಂಚಿನ ಸಂಚಲನವಾಗಿದೆ. ತೆಲಂಗಾಣ ರಾಜ್ಯ ರಚನೆಯಿಂದಾಗಿ ಸತ್ವ ಕಳೆದುಕೊಂಡಿರುವ ಕಾಂಗ್ರೆಸ್‌ಗೆ ಕೇಂದ್ರದ ಮಾಜಿ ಸಚಿವೆ ಪಿ. ಪುರಂದೇಶ್ವರಿ, ಮಾಜಿ ಸಿಎಂ ಕಿರಣ್ ಕುಮಾರ್ ರೆಡ್ಡಿ ಮತ್ತೊಂದು ಶಾಕ್ ನೀಡಿದ್ದಾರೆ. ಪುರಂದೇಶ್ವರಿ ಬಿಜೆಪಿ ಸೇರುವ ನಿರ್ಧಾರ ಪ್ರಕಟಿಸಿದರೆ, ರೆಡ್ಡಿ ಲೋಕಸಭಾ ಚುನಾವಣೆಗೂ ಮುನ್ನ ಹೊಸ ಪಕ್ಷ ರಚಿಸುವುದಾಗಿ ಘೋಷಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ಬಿಹಾರದಲ್ಲಿ ಎನ್‌ಸಿಪಿ, ಕಾಂಗ್ರೆಸ್ ಮತ್ತು ಆರ್‌ಜೆಡಿ ಮೈತ್ರಿಕೂಟಕ್ಕೆ ಬಿಜೆಪಿ ಸಣ್ಣದೊಂದು ಆಘಾತ ನೀಡಿದೆ. ಎನ್‌ಸಿಪಿ ರಾಜ್ಯಘಟಕದ ಅಧ್ಯಕ್ಷ ನಾಗಮಣಿಯನ್ನೇ ಬಿಜೆಪಿ ತನ್ನ ತೆಕ್ಕೆಗೆ ಸೆಳೆದುಕೊಳ್ಳಲಿದೆ.
ಟಿಡಿಪಿ ಕೈಜೋಡಿಸಿದರೆ, ಜಯಾ ಕೈಬಿಟ್ಟರು!
ಎನ್‌ಡಿಎ ತೆಕ್ಕೆಗೆ ಮತ್ತಷ್ಟು ಪಕ್ಷಗಳನ್ನು ಸೆಳೆಯುವ ಪ್ರಯತ್ನ ಮುಂದುವರಿಸಿರುವ ಬಿಜೆಪಿ ಈಗ 10 ವರ್ಷಗಳ ಬಳಿಕ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿಗೆ ಮತ್ತೆ ರತ್ನಗಂಬಳಿ ಹಾಸಿದೆ. ಹೊಸ ಮೈತ್ರಿ ಕುರಿತು ಸದ್ಯದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ. ಇನ್ನು ತಮಿಳುನಾಡಿನಲ್ಲಿ ಎಡಪಕ್ಷಗಳು ಮತ್ತು ಎಐಎಡಿಎಂಕೆ ನಡುವಿನ ಮೈತ್ರಿಕೂಟ ಮುರಿದು ಬಿದ್ದಿದೆ. ಮುಂಬರುವ ಚುನಾವಣೆಯಲ್ಲಿ ಎಐಎಡಿಎಂಕೆ ಏಕಾಂಗಿಯಾಗಿ ಸ್ಪರ್ಧಿಸಲಿದೆ.
ಹುಕ್ಕೇರಿಗೆ ಸಂಹಿತೆ?
ಸಚಿವ ಪ್ರಕಾಶ್ ಹುಕ್ಕೇರಿ ಸಂಹಿತೆ ಉಲ್ಲಂಘಿಸಿದ್ದರೆ ನೋಟಿಸ್ ನೀಡ್ತೇವೆ ಎಂದ ಆಯೋಗ.
ದಿಢೀರ್ ವರ್ಗ
ಕರ್ತವ್ಯ ಲೋಪವೆಸಗಿದ ಆರೋಪದ ಮೇಲೆ ಚನ್ನಪಟ್ಟಣ ತಹಸೀಲ್ದಾರರ ದಿಢೀರ್ ವರ್ಗಾವಣೆ.
ಆಪ್ ಕಾರಣ
ಗಲಾಟೆಗೆ ಆಪ್ ಕಾರಣ. ಕೇಂದ್ರ ಚು. ಆಯೋಗ.