ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮಲೇಷ್ಯಾ ಅವಘಡ ಉಗ್ರರ ಕೈವಾಡ ಶಂಕೆ

ಮಲೇಷ್ಯಾ ವಿಮಾನ ನಾಪತ್ತೆ ಪ್ರಕರಣ ಭಾನುವಾರ ಹೊಸ ತಿರುವು ಪಡೆದುಕೊಂಡಿದೆ. ನಿಜವಾಗಿಯೂ ವಿಮಾನ ದುರಂತಕ್ಕೀಡಾಗಿದೆಯೇ ಅಥವಾ ಬೇರೇನಾದರೂ ನಡೆದಿದೆಯೇ ಎಂಬ ಪ್ರಶ್ನೆ ಕಾಡತೊಡಗಿದೆ.

Srinivasa Murthy VN
Updated On : 10 Mar 2014, 12:53 pm

ಮಲೇಷ್ಯಾ ವಿಮಾನ ಅವಶೇಷಗಳ ಸುಳಿವಿಲ್ಲ
ಬಿಡಿಸಲಾಗದ ಕಗ್ಗಂಟಾದ ಪ್ರಕರಣ
ನಕಲಿ ಪಾಸ್ಪೋರ್ಟ್ ಬಳಸಿ ಪ್ರಯಾಣಿಸಿದ್ದ ನಾಲ್ವರು

ಕೌಲಾಲಂಪುರ/ಬೀಜಿಂಗ್:
ಮಲೇಷ್ಯಾ ವಿಮಾನ ನಾಪತ್ತೆ ಪ್ರಕರಣ ಭಾನುವಾರ ಹೊಸ ತಿರುವು ಪಡೆದುಕೊಂಡಿದೆ.  ನಿಜವಾಗಿಯೂ ವಿಮಾನ ದುರಂತಕ್ಕೀಡಾಗಿದೆಯೇ ಅಥವಾ ಬೇರೇನಾದರೂ ನಡೆದಿದೆಯೇ ಎಂಬ ಪ್ರಶ್ನೆ ಕಾಡತೊಡಗಿದೆ. ಈ ನಿಗೂಢತೆಯ ನಡುವೆಯೇ  ನಾಲ್ವರು ನಕಲಿ ಪಾಸ್‌ಪೋರ್ಟ್ ಬಳಸಿ ವಿಮಾನದಲ್ಲಿ ಪ್ರಯಾಣಿಸಿದ್ದರು ಎಂಬ ಮಾಹಿತಿಯೂ ಬಹಿರಂಗವಾಗಿದ್ದು, ವಿಮಾನ ನಾಪತ್ತೆಯಾಗುವಲ್ಲಿ ಉಗ್ರರ ಕೈವಾಡವಿದೆಯೇ ಎಂಬ ಸಂಶಯವೂ ಮೂಡತೊಡಗಿದೆ.
ಇನ್ನೂ ನಿಗೂಢ: ಮಲೇಷ್ಯಾದಿಂದ 239 ಪ್ರಯಾಣಿಕರನ್ನು ಹೊತ್ತು ಬೀಜಿಂಗ್‌ಗೆ ತೆರಳುತ್ತಿದ್ದ ವಿಮಾನ ಶುಕ್ರವಾರ ತಡರಾತ್ರಿಯಿಂದ ನಾಪತ್ತೆಯಾಗಿತ್ತು. ಅದು ಸಮುದ್ರದ ಮಧ್ಯೆ ಪತನಗೊಂಡು ಅದರಲ್ಲಿದ್ದ ಎಲ್ಲರೂ ಮೃತಪಟ್ಟಿರಬಹುದೆಂದು ಶಂಕಿಸಲಾಗಿತ್ತು. ಆದರೆ ಘಟನೆ ನಡೆದು ಎರಡು ದಿನಗಳಾದರೂ ವಿಮಾನದ ಅವಶೇಷಗಳು ಪತ್ತೆಯಾಗಿಲ್ಲ. ಅಮೆರಿಕ, ಚೀನಾ, ಸಿಂಗಾಪುರ, ಮಲೇಷ್ಯಾ ಹೀಗೆ ವಿವಿಧ ರಾಷ್ಟ್ರಗಳು ಶೋಧ ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದರೂ ವಿಮಾನದ ಬಗ್ಗೆ ಒಂದೇ ಒಂದು ಸುಳಿವು ಕೂಡ ಲಭ್ಯವಾಗಿಲ್ಲ. ಹೀಗಾಗಿ ಅಧಿಕಾರಿಗಳಲ್ಲಿ ಹೊಸ ಅನುಮಾನಗಳು ಮೂಡತೊಡಗಿವೆ.

 ಸುಳಿವಿಲ್ಲದೆ ನಾಪತ್ತೆ
ವಿಮಾನ ಪತನಗೊಂಡಿರುವುದಕ್ಕೆ ಯಾವುದೇ ಸಾಕ್ಷ್ಯ ಸಿಗುತ್ತಿಲ್ಲ, 10 ದಿನಗಳ ಹಿಂದಷ್ಟೇ ವಿಮಾನದ ಸಂಪೂರ್ಣ ತಪಾಸಣೆ ನಡೆದಿತ್ತು; ಹೀಗಾಗಿ ತಾಂತ್ರಿಕ ದೋಷ ಕಂಡುಬರಲು ಸಾಧ್ಯವಿಲ್ಲ. ಆ ಸಮಯದಲ್ಲಿ ಹವಾಮಾನ ವೈಪರೀತ್ಯವೂ ಇರಲಿಲ್ಲ, ಪೈಲಟ್‌ನಿಂದ ಅಪಾಯದ ಮುನ್ಸೂಚನೆಯೂ ಬಂದಿರಲಿಲ್ಲ. ಹೀಗಿರುವಾಗ ವಿಮಾನಕ್ಕೇನಾಯಿತು ಎಂಬುದೇ ಅಧಿಕಾರಿಗಳಿಗೆ ಬಿಡಿಸಲಾಗದ ಒಗಟಾಗಿ ಕಾಡುತ್ತಿದೆ.

ಉಗ್ರರ ಕೃತ್ಯವೇ?: ನಾಪತ್ತೆ ಪ್ರಕರಣದಲ್ಲಿ ಉಗ್ರ ಕೃತ್ಯ ನಡೆದಿರುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ ಎಂದೂ ಮಲೇಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೆ ಕಾರಣವೂ ಇದೆ. ಅದೇನೆಂದರೆ, ನಕಲಿ ಪಾಸ್ಪೋರ್ಟ್‌ಗಳನ್ನು ಬಳಸಿ ನಾಲ್ವರು ಅದೇ ವಿಮಾನದಲ್ಲಿ ಪ್ರಯಾಣಿಸಿದ್ದರು. ಆಸ್ಟ್ರಿಯಾ ಹಾಗೂ ಇಟಲಿಯ ಇಬ್ಬರು ಪ್ರಜೆಗಳು ಈ ಹಿಂದೆ ತಮ್ಮ ಪಾಸ್‌ಪೋರ್ಟ್ ಕಳೆದುಹೋಗಿದೆಯೆಂದು ಪೊಲೀಸರಿಗೆ ದೂರುನೀಡಿದ್ದರು. ಆ ಇಬ್ಬರ ಹೆಸರಿದ್ದ ಪಾಸ್‌ಪೋರ್ಟ್ ಬಳಸಿ ಬೇರೆ ಯಾರೋ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಪ್ರಯಾಣಿಕರ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ನೋಡಿ ಪಾಸ್‌ಪೋರ್ಟ್ ಕಳೆದುಕೊಂಡವರು ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ನಕಲಿ ಪಾಸ್‌ಪೋರ್ಟ್ ಬಳಸಿ ಪ್ರಯಾಣಿಸಿದ ಮತ್ತಿಬ್ಬರ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಉಗ್ರರು ವಿಮಾನದೊಳಕ್ಕೆ ನುಸುಳಿ ಅದನ್ನು ಹೈಜಾಕ್ ಮಾಡಿರಬಹುದೇ ಎಂಬ ನಿಟ್ಟಿನಲ್ಲಿಯೂ ತನಿಖೆ ನಡೆಸಲಾಗುತ್ತಿದೆ.
ಮಾರ್ಗ ಬದಲಿಸಿತ್ತೇ ವಿಮಾನ?: ವಿಮಾನವು ನಿಯಂತ್ರಣ ಕೊಠಡಿಯ ಸಂಪರ್ಕ ಕಡಿದುಕೊಳ್ಳುವ ಮುನ್ನ ತನ್ನ ಮಾರ್ಗ ಬದಲಿಸಿತ್ತೇ? ಹೌದು. ವಿಮಾನವು ಹಿಂದಕ್ಕೆ ತಿರುಗಿತ್ತು ಎನ್ನುತ್ತದೆ ಮಲೇಷ್ಯಾದ ಸೇನಾ ರೇಡಾರ್. ಆದರೆ, ಒಂದು ವೇಳೆ ವಿಮಾನವು ವಾಪಸ್ ಬರುವುದಾದರೆ ಅಥವಾ ತನ್ನ ಪಥ ಬದಲಿಸುವುದಿದ್ದರೆ ಮೊದಲು ನಿಯಂತ್ರಣ ಕೊಠಡಿ ಅಥವಾ ಏರ್‌ಲೈನ್ ಅಧಿಕಾರಿಗಳಿಗೆ ಮಾಹಿತಿ ರವಾನಿಸಬೇಕು. ಆದರೆ ಅಂತಹ ಯಾವುದೇ ಮಾಹಿತಿ ಬಂದಿಲ್ಲ, ಅಪಾಯದ ಮುನ್ಸೂಚನೆಯೂ ಸಿಕ್ಕಿಲ್ಲ ಎನ್ನುತ್ತಾರೆ ಮಲೇಷ್ಯಾ ಏರ್‌ಲೈನ್ಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಹ್ಮದ್ ಜೌಹಾರಿ ಯಾಹ್ಯಾ. ಹಾಗಿದ್ದರೆ ಮಾರ್ಗ ಬದಲಿಸಿದ ವಿಮಾನ ಹೋಗಿದ್ದಾದರೂ ಎಲ್ಲಿಗೆ ಎಂಬುದೂ ಯಕ್ಷಪ್ರಶ್ನೆಯಾಗಿ ಉಳಿದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement