ಕ್ರಿಮಿನಲ್ ಶಾಸಕರ ವಿಚಾರಣೆಗೆ ಸುಪ್ರೀಂ ಗಡುವು
ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಕಳಂಕಿತ ಸಂಸದರು, ಶಾಸಕರ ವಿರುದ್ಧದ ವಿಚಾರಣೆ ಒಂದು ವರ್ಷದೊಳಗೆ ಪೂರ್ಣಗೊಳಿಸಿ. ಇದು ಸುಪ್ರೀಂ ಕೋರ್ಟ್ ವಿಧಿಸಿದ ಗಡುವು.
ನವದೆಹಲಿ: ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಕಳಂಕಿತ ಸಂಸದರು, ಶಾಸಕರ ವಿರುದ್ಧದ ವಿಚಾರಣೆ ಒಂದು ವರ್ಷದೊಳಗೆ ಪೂರ್ಣಗೊಳಿಸಿ.
ಇದು ಸುಪ್ರೀಂ ಕೋರ್ಟ್ ಸೋಮವಾರ ಕೆಳ ನ್ಯಾಯಾಲಯಗಳಿಗೆ ವಿಧಿಸಿದ ಗಡುವು. ಜನಪ್ರತಿನಿಧಿಗಳ ವಿರುದ್ಧದ ವಿಚಾರಣೆ ತ್ವರಿತಗೊಳಿಸುವ ಉದ್ದೇಶದಿಂದ ಸರ್ವೋಚ್ಚ ನ್ಯಾಯಾಲಯವು ಈ ಒಂದು ವರ್ಷದ ಗಡುವು ನೀಡಿದೆ. ಆರೋಪಿಯ ವಿರುದ್ಧ ಆರೋಪ ನಿಗದಿಯಾದ ಒಂದು ವರ್ಷದೊಳಗೆ ವಿಚಾರಣೆ ಪೂರ್ಣಗೊಳ್ಳಬೇಕು. ಇಂತಹ ಪ್ರಕರಣಗಳನ್ನು ದಿನಂಪ್ರತಿ ವಿಚಾರಣೆ ನಡೆಸಬೇಕು ಎಂದೂ ಸುಪ್ರೀಂ ಕೋರ್ಟ್ ನ್ಯಾ. ಆರ್.ಎಂ. ಲೋಧಾ ನೇತೃತ್ವದ ಪೀಠ ಆದೇಶಿಸಿದೆ.
ವಿವರ ನೀಡಲಿ: ಒಂದು ವೇಳೆ ವಿಚಾರಣಾ ನ್ಯಾಯಾಲಯಕ್ಕೆ ಒಂದು ವರ್ಷದ ಅವಧಿಯೊಳಗೆ ವಿಚಾರಣೆ ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ ಅದಕ್ಕೆ ಸೂಕ್ತ ಕಾರಣಗಳನ್ನು ಆಯಾ ಹೈಕೋರ್ಟ್ಗೆ ನೀಡಬೇಕು. ಆ ಕಾರಣಗಳು ಸಮಂಜಸ ಹಾಗೂ ತೃಪ್ತಿದಾಯಕವಾಗಿದ್ದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ವಿಚಾರಣಾ ಅವಧಿಯನ್ನು ವಿಸ್ತರಿಸಬಹುದು ಎಂದೂ ಸುಪ್ರೀಂ ಸೂಚಿಸಿದೆ.
ಆರೋಪ ಖಾತ್ರಿಯಾದ್ರೆ ಅನರ್ಹ
5, ಅದಕ್ಕಿಂತ ಹೆಚ್ಚು ವರ್ಷ ಶಿಕ್ಷೆಗೆ ಅರ್ಹವಾಗುವ ಪ್ರಕರಣದಲ್ಲಿ ಕೋರ್ಟ್ ಆರೋಪ ನಿಗದಿಪಡಿಸಿದ ತಕ್ಷಣವೇ ಅಂಥ ಅಭ್ಯರ್ಥಿಗಳನ್ನು ಅನರ್ಹಗೊಳಿಸುವಂತೆ ಕಾನೂನು ಆಯೋಗ ಸುಪ್ರೀಂಗೆ ಶಿಫಾರಸು ಮಾಡಿದೆ. ಜತೆಗೆ, ನಾಮಪತ್ರ ಸಲ್ಲಿಕೆ ವೇಳೆ ಸುಳ್ಳು ಅಫಿಡವಿಟ್ ಸಲ್ಲಿಸುವ ವ್ಯಕ್ತಿಗಳಿಗೆ ನೀಡಲಾಗುವ ಶಿಕ್ಷೆ ಕನಿಷ್ಠ ಎರಡು ವರ್ಷಕ್ಕೆ ಹೆಚ್ಚಿಸುವಂತೆಯೂ ಆಯೋಗ ಮನವಿ ಮಾಡಿದೆ.