ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ತಾಯಿ ಮಗು ಮಾರಿದಳು ಅಜ್ಜಿ ದುಡ್ಡು ಎಣಿಸಿದಳು..!

ತಾಯಿ ಹಾಗೂ ಅಜ್ಜಿ ಸೇರಿ ತಮ್ಮ ಒಂದು ತಿಂಗಳ ಹೆಣ್ಣು ಮಗುವನ್ನು 6 ಸಾವಿರಕ್ಕೆ ಮಾರಾಟ ಮಾಡಿದ ಘಟನೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ.

Srinivasa Murthy VN
Updated On : 11 Mar 2014, 1:23 am

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಮಾ.10
ತಾಯಿ ಹಾಗೂ ಅಜ್ಜಿ ಸೇರಿ ತಮ್ಮ ಒಂದು ತಿಂಗಳ ಹೆಣ್ಣು ಮಗುವನ್ನು 6 ಸಾವಿರಕ್ಕೆ ಮಾರಾಟ ಮಾಡಿದ ಘಟನೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ. ಮತ್ತೂ ಆಶ್ಚರ್ಯ ಎಂದರೆ, ಇವರೇ ಈ ಹಿಂದೆಯೂ ತಮ್ಮ ಮೂರು ಮಕ್ಕಳನ್ನು ಮಾರಾಟ ಮಾಡಿದ್ದಾರೆ ಎಂದು ಗೊತ್ತಾಗಿದೆ.
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸವಳಂಗ ಸಮೀಪದ ಕೊಡತಾಳ ತಾಂಡ ಗ್ರಾಮದ ನಾಗೀಬಾಯಿ (27)ಎಂಬುವರಿಗೆ ಈ ಮಗು ಸೇರಿದ್ದಾಗಿದೆ. ನಾಗೀಬಾಯಿ ಹಾಗೂ ಆಕೆಯ ತಾಯಿ ಸೋಮ್ಲಿಬಾಯಿ (70) ಈ ಮಗುವನ್ನು ಮಾರಾಟ ಮಾಡಿದ್ದಾರೆ. ಭಾನುವಾರ ಮಧ್ಯಾಹ್ನ ಆಸ್ಪತ್ರೆಯ ಶರಾವತಿ ವಾರ್ಡ್‌ನಲ್ಲಿಯೇ ಅಪರಿಚಿತ ಪುರುಷ ಹಾಗೂ ಮಹಿಳೆ 6 ಸಾವಿರ ನೀಡಿ ಮಗುವನ್ನು ಕೊಂಡೊಯ್ದಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಭಾನುವಾರ ರಾತ್ರಿಯೇ ಆಸ್ಪತ್ರೆಗೆ ಆಗಮಿಸಿದ ದೊಡ್ಡಪೇಟೆ ಪೊಲೀಸರು, ನಾಗೀಬಾಯಿ, ಸೋಮ್ಲಿಬಾಯಿಯನ್ನು ವಿಚಾರಣೆ ನಡೆಸಿದ್ದಾರೆ. ಆದರೆ ಮಗು ಖರೀದಿಸಿದವರ ಹೆಸರು ವಿಳಾಸ ಮತ್ತಿತರ ಯಾವುದೇ ಮಾಹಿತಿ ಸಿಕ್ಕಿಲ್ಲ. ಈ ನಡುವೆ ನಾಗೀಬಾಯಿಗೆ ಈ ಹಿಂದೆ ಹುಟ್ಟಿದ್ದ 2 ಹೆಣ್ಣು, ಒಂದು ಗಂಡು ಮಗುವನ್ನೂ ಮಾರಾಟ ಮಾಡಿದ್ದಾರೆ. ಇದರಲ್ಲಿ ನಾಗೀಬಾಯಿ, ಆಕೆಯ ತಾಯಿ ಸೋಮ್ಲಿಬಾಯಿಯ ಕೆಲವು ಕುಟುಂಬದ ಸದಸ್ಯರು ಕೂಡ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಕಾರಣ ಏನು? ನಾಗಿಬಾಯಿ,  ಸೋಮ್ಲಿಬಾಯಿ ವರ್ತನೆ, ಮಾತುಕತೆ ಗಮನಿಸಿದರೆ ಮೇಲ್ನೋಟಕ್ಕೆ ಕಡುಬಡತನ, ಅನಕ್ಷರತೆಯಿಂದಲೇ ಹುಟ್ಟಿದ ಮಗುವನ್ನು ಮಾರಾಟ ಮಾಡಿದ್ದಾರೆ ಎಂಬುದು ಕಂಡುಬರುತ್ತಿದೆ. ಈ ಮಧ್ಯೆ 'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯೆ ನೀಡಿದ ಸೋಮ್ಲಿಬಾಯಿ,'10 ಸಾವಿರಕ್ಕೆ ಮಾತುಕತೆ ನಡೆದಿತ್ತು. 6 ಸಾವಿರಕ್ಕೆ ಒಪ್ಪಿಸಿ ಒಂದು ಸಾವಿರ ಕೊಟ್ಟು ಹೋಗಿದ್ದಾರೆ' ಎಂದು ಹಣ ತೋರಿಸಿದರು. ಉಳಿದ 3 ಮಕ್ಕಳನ್ನು ಸಾಕಲು ಸಾಧ್ಯವಿಲ್ಲದ ಕಾರಣ ಕುಟುಂಬದವರ ಬಳಿ ಬಿಟ್ಟಿರುವುದಾಗಿ ಹೇಳಿದ್ದಾರೆ. ಈ ಮಕ್ಕಳು ಮಾರಾಟವಾಗಿದೆವೆಯೇ ಇಲ್ಲವೇ ಎಂಬುದು ತನಿಖೆಯಿಂದ ಗೊತ್ತಾಗಬೇಕಾಗಿದೆ.
ವೈದ್ಯರ ವಿವರಣೆ: ಮೆಗ್ಗಾನ್ ಮಾನಸಿಕ ತಜ್ಞ ವೈದ್ಯ ಡಾ. ಸಂಜಯ್ ವಿವರಿಸುವಂತೆ, ಮಗುವಿನ ತಾಯಿ ಬಾಣಂತಿ ಸನ್ನಿಗೆ ಒಳಗಾಗಿ ಈ ಹಿಂದೆ ಕೂಡ ಮಾನಸಿಕ ಅಸ್ವಸ್ಥೆಯಾಗಿ ಇಲ್ಲಿ ಚಿಕಿತ್ಸೆ ಪಡೆದು ನಂತರ ವಾಪಸಾಗಿದ್ದರು. ಇದೀಗ ಅವರ ಕುಟುಂಬದವರು ಆಕೆಯನ್ನು ಕರೆದುಕೊಂಡು ಹೋಗಲು ಮುಂದೆ ಬರುತ್ತಿಲ್ಲವಾದ್ದರಿಂದ ಅನಿವಾರ್ಯವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಈಕೆಯನ್ನು ಹಸ್ತಾಂತರಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಕೂಡ ಆಕೆಗೆ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement