ಕಾಂಗ್ರೆಸ್ ಹೊರತು ಜಗತ್ತಿಲ್ಲವೇ?
ಕಾಂಗ್ರೆಸ್ ಟಿಕೆಟ್ ತಪ್ಪಿದರೇನು? ಮುಂದೆ ದಾರಿಯೇ ಇಲ್ಲವೇ? ಜಾಫರ್ ಷರೀಫ್ ಪ್ರಶ್ನೆ
ಕಾಂಗ್ರೆಸ್ ಟಿಕೆಟ್ ತಪ್ಪಿದರೇನು? ಮುಂದೆ ದಾರಿಯೇ ಇಲ್ಲವೇ? ಜಾಫರ್ ಷರೀಫ್ ಆಕ್ರೋಶ ಭರಿತ ಪ್ರಶ್ನೆ
ದೇವರು ಬುದ್ಧಿ ಕೊಟ್ಟರೆ ನನಗೆ ನರೇಂದ್ರ ಮೋದಿ ಕೂಡ ಅಸ್ಪೃಶ್ಯರಲ್ಲ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿರುವವರು ಕಾಂಗ್ರೆಸ್ ಹಿರಿಯ ನಾಯಕ ಜಾಫರ್ ಷರೀಫ್. ಬೆಂಗಳೂರು ಕೇಂದ್ರ ಟಿಕೆಟ್ ತಪ್ಪಿರುವ ಬಗ್ಗೆ ಬೇಸರಗೊಂಡಿರುವ ಅವರು ಸದ್ಯ ಹಜ್ ಯಾತ್ರೆಗೆ ಹೊರಟಿದ್ದಾರೆ. ನನ್ನ ರಾಜಕೀಯ ಜೀವನ ಮುಗಿಸಲು ಯಾರಿಗೂ ಸಾಧ್ಯವಿಲ್ಲ ಎಂದಿದ್ದಾರೆ.
ದೇವರ ಬಗ್ಗೆ ನಂಬಿಕೆ ಇರಬೇಕು. ಮನುಷ್ಯ ತಾನೇ ಹಣೆಬರಹ ಬರೆದು ಕೊಳ್ಳುತ್ತಾನೆಯೇ? ಹೀಗಾಗುವಂತಿದ್ದರೆ ಇಂದಿರಾ ಕೊಲೆಯೇ ಆಗುತ್ತಿರಲಿಲ್ಲ ಅಲ್ಲವೇ. ಮನೋಸ್ಥೈರ್ಯ ಇರಲಿ.
ಯುವಕರೆಂದರೆ ವಯಸ್ಸಾಗದೆ ಇರುತ್ತದೆಯೇ? ವಯಸ್ಸು ಯಾರ ವಶದಲ್ಲಾದರೂ ಇರುತ್ತದೆಯೇ? ಹಾಗಿದ್ದರೆ ಇವರ್ಯಾಕೆ ವಯಸ್ಸಿನ ಬಗ್ಗೆ ಮಾತನಾಡುತ್ತಾರೆ ಎಂಬುದೇ ಗೊತ್ತಾಗ್ತಿಲ್ಲ.
ಮೋದಿ ನನಗೆ ಅಸ್ಪೃಶ್ಯರಲ್ಲ. ನನಗೆ ಯಾರ ಬಗ್ಗೆಯೂ ತಾರತಮ್ಯವಿಲ್ಲ. ಗೋಧ್ರಾ ಘಟನೆ ಬಗ್ಗೆ ಪಶ್ಚಾತ್ತಾಪವಾಗಿದೆ ಎಂದರೆ ಅವರು ಅಸ್ಪೃಶ್ಯರು ಆಗೋದೇ ಇಲ್ಲ.
ಪ್ರಣಬ್ ಮುಖರ್ಜಿ ಅವರನ್ನು ಪ್ರಧಾನಿ ಅಭ್ಯರ್ಥಿ ಮಾಡಬೇಕಿತ್ತು. ಆದರೆ ಅವರನ್ನು ರಾಷ್ಟ್ರಪತಿ ಮಾಡಿ ಕೂರಿಸಲಾಗಿದೆ. ಪ್ರಣಬ್ಗೆ ಎಷ್ಟು ಪಕ್ಷಗಳ ಬೆಂಬಲ ಇದೆ ನೋಡಿ...
ರೆಹಮಾನ್ ಖಾನ್ ಯಾವ ಸೀಮೆ ನಾಯಕರು? ಅವರು ಅಲ್ಪಸಂಖ್ಯಾತ ಸಮುದಾಯದ ನಾಯಕರು ಎಂದು ಯಾರ ಬಳಿಯಾದರೂ ಹೇಳಿಸಿ ನೋಡೋಣ...
ರಾಹುಲ್ ಗಾಂಧಿ ಎಳಸಲ್ಲ. ರಾಜೀವ್ ಗಾಂಧಿ ಅವರೂ ಪ್ರಧಾನಿ ಗಾದಿಗೆ ಏರಿದಾಗ ವಯಸ್ಸು ಕಡಿಮೆಯೇ ಇತ್ತು. ಅಧಿಕಾರ ಸಿಕ್ಕಾಗ ಅನುಭವ ಎನ್ನುವುದು ತಾನಾಗಿಯೇ ಬರುತ್ತೆ.
ಕಾಂಗ್ರೆಸ್ ನನ್ನ ಕತ್ತು ಕೊಯ್ಯಲು ಸಾಧ್ಯವಿಲ್ಲ. ಜನ ನನ್ನ ಕೈಬಿಟ್ಟರು ಎಂದಾಗ ಮಾತ್ರ ಆಗ ಕತ್ತು ಕೊಯ್ದರು ಎನ್ನ ಬಹುದು. ಪಕ್ಷ ಟಿಕೆಟ್ ನಿರಾಕರಿಸಿದ್ದಕ್ಕೆ ಏಕೆ ತಲೆ ಕೆಡಿಸಿಕೊಳ್ಳಬೇಕು?ನನ್ನನ್ನು ರಾಜಕೀಯವಾಗಿ ಯಾರೂ ಮುಗಿಸಲು ಸಾಧ್ಯವಿಲ್ಲ. ನಾವು ಪಕ್ಷಕ್ಕೆ ಹೊಂದಾಣಿಕೆಯಾದರೆ ಮಾತ್ರ ಇಟ್ಟುಕೊಳ್ಳುತ್ತದೆ. ಇಲ್ಲದಿದ್ದರೆ ಬಿಟ್ಟು ಬರುತ್ತೇವೆ ಅಷ್ಟೇ. ನಾವ್ಯಾಕೆ ಚಿಂತೆ ಮಾಡ್ಬೇಕು?
ಟಿಕೆಟ್ ಕೈತಪ್ಪಿದ್ದಕ್ಕಾಗಿ ನಾನು ನಿರಾಶನಾಗಲಾರೆ. ನಾನು ಆಶಾವಾದಿ. ಮಾನವನಿಗೆ ಮನೋ ಸ್ಥೈರ್ಯ ಬೇಕು. ಆದರೆ ಬೆಟ್ಟಕ್ಕೆ ಹೋಗಿ ತಪಸ್ಸು ಮಾಡಲು ಆಗಲ್ಲ. ಅದಕ್ಕೆ ಹಜ್ಗೆ ಹೋಗ್ತೇನೆ.
ನಾನೂ ಅಧಿಕಾರ ನೋಡಿದ್ದೇನೆ. ನರಸಿಂಹರಾವ್ ಅವರ ಸರ್ಕಾರದಲ್ಲಿ ನಾಲ್ಕನೇ ಪ್ರಮುಖ ಮಂತ್ರಿ ಯಾಗಿದ್ದೆ. ರೆಹಮಾನ್ ಎಂದಾದರೂ ಚುನಾವಣೆ ಯಲ್ಲಿ ಗೆದ್ದಿದ್ದಾರಾ?
ದೇವೇಗೌಡರ ವಿರುದ್ಧ ಅಭ್ಯರ್ಥಿ ನಿಲ್ಲಿಸಬೇಡಿ ಎಂದು ಪತ್ರ ಬರೆದದ್ದು ನಿಜ. ಅವರು ಹುಟ್ಟಾ ಹೋರಾಟಗಾರರು. ಪ್ರಧಾನಿಯಾಗಿದ್ದವ ರಾದ್ರೂ ಜನರಿಗಾಗಿ ಬೀದಿಗಿಳೀತಾರೆ.
-ಮೋದಿ ಅಸ್ಪೃಶ್ಯರಲ್ಲ
ಮಾರ್ಚ್ 19ರಂದು ನಾನು ಹಜ್ಯಾತ್ರೆ ಹೊರಟಿದ್ದೇನೆ. ನಾನು ದೇವರಲ್ಲಿ ನಂಬಿಕೆ ಇಟ್ಟಿರುವ ಮನುಷ್ಯ. ಆ ಸಂದರ್ಭದಲ್ಲಿ ಆತ ಯಾವ ಬುದ್ಧಿ ಕೊಡುತ್ತಾನೋ ಹಾಗೆ ನಡೆದುಕೊಳ್ಳುತ್ತೇನೆ. ಒಂದೊಮ್ಮೆ ದೇವರು,' ಜಾಫರ್ ಷರೀಫ್, ನಿನಗೆ ನರೇಂದ್ರ ಮೋದಿ ಬಗ್ಗೆ ಅನುಮಾನ ಬೇಡ. ಆತನನ್ನು ನಾನು ಸರಿ ಮಾಡುತ್ತೇನೆ ಎಂದು ಹೇಳಿದರೆ, ನನಗೂ ದೇವರ ಬಗ್ಗೆ ಭಯಭಕ್ತಿ ಇದೆ. ನಾನು ಯಾರಿಗೂ ತಾರತಮ್ಯ ಮಾಡುವುದಿಲ್ಲ. ಗೋಧ್ರಾ ಘಟನೆಯಿಂದ ಪಶ್ಚಾತಾಪ ಪಟ್ಟಿದ್ದೇನೆ ಎಂದು ಹೇಳಿದರೆ ನನಗೆ ಅವರೂ ಅಸ್ಪೃಶ್ಯರಲ್ಲ.
ಅಂತಿಮವಾಗಿ ನಮ್ಮೆಲ್ಲರ ಉದ್ದೇಶವೇನು? ದೇಶಕ್ಕೆ, ಜನಕ್ಕೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಅನುಕೂಲವಾಗಬೇಕು. ಸಿರಿವಂತನಿಗಲ್ಲ. ಹೀಗಾಗಿ ನನಗೆ ಮೋದಿಯೂ ಅಸ್ಪೃಸ್ಯರಲ್ಲ, ದೇವೇಗೌಡರೂ ದೂರದವರಲ್ಲ!'
-ಸೋನಿಯಾ ಆಳುತ್ತಿದ್ದರೇ?
ನಾನು ಈ ರೀತಿ ಮಾತನಾಡುವುದನ್ನು ನೋಡಿ ಪತ್ರಿಕೆಯವರು ನನಗೆ ಹತಾಶೆಯಾಗಿದೆ, ಅದಕ್ಕೆ ದೇವರತ್ತ ಬೆರಳು ಮಾಡುತ್ತಿದ್ದೇನೆ ಎಂದು ವ್ಯಾಖ್ಯಾನ ಮಾಡಬಹುದು. ನಾನು ಒಂದು ಮಾತನ್ನು ಪತ್ರಿಕೆಯವರಲ್ಲಿ ಕೇಳಲು ಇಚ್ಛೆಪಡುತ್ತೇನೆ. ನೀವ್ಯಾಕೆ ದೇವರನ್ನು ನಂಬುವುದಿಲ್ಲ? ಮನುಷ್ಯ ಹಣೆಬರಹ ಬರೆಯುತ್ತಾನಾ? ಮನುಷ್ಯನೇ ತನ್ನ ಹಣೆ ಬರಹ ಬರೆದುಕೊಳ್ಳುವುದಾಗಿದ್ದರೆ, ಇಂದಿರಾ ಗಾಂಧಿಯವರ ಕೊಲೆಯಾಗುತ್ತಾ ಇತ್ತಾ? ರಾಜೀವ್ ಗಾಂಧಿಯವರು ಎಲ್ಟಿಟಿಇ ಕೈಯಲ್ಲಿ ಜೀವ ಕಳೆದುಕೊಳ್ಳುತ್ತಿದ್ದರಾ? ದೇವರು ಹಣೆ ಬರಹ ಬರೆಯದೇ ಇದ್ದರೆ ಸೋನಿಯಾ ಗಾಂಧಿಯವರು 10 ವರ್ಷಗಳ ಕಾಲ ಈ ಭಾರತದಂತ ದೊಡ್ಡ ರಾಷ್ಟ್ರದಲ್ಲಿ ಅಧಿಕಾರಕ್ಕೆ ಬರದೇ ಅಧಿಕಾರ ನಡೆಸುತ್ತಿದ್ದರಾ? ಯಾಕೆ ನೀವು ದೈವಿಕ ಶಕ್ತಿ ಬಗ್ಗೆ ಯೋಚನೆ ಮಾಡುವುದಿಲ್ಲ. ಬೇರೆಯದೇ ಆದ ರೀತಿಯಲ್ಲಿ ಕೆಲಸ ಮಾಡುವ ಶಕ್ತಿಯನ್ನು ನಂಬುವುದಿಲ್ಲ?
ಟಿಕೆಟ್ ಕೈ ತಪ್ಪಿದಕ್ಕಾಗಿ ನಾನು ನಿರಾಶನಾಗಲಾರೆ. ನಾನು ಆಶಾವಾದಿ. ಹಿಂದಿನ ಕಾಲದಲ್ಲಿ ಬೆಟ್ಟಕ್ಕೋ, ಕಾಡಿಗೋ ಹೋಗಿ ತಪಸ್ಸು ಮಾಡಿ ಆ ಮನಸ್ಥೈರ್ಯ ಸಂಪಾದಿಸುತ್ತಿದ್ದರು. ಪ್ರಜಾತಂತ್ರದಲ್ಲಿ ಪ್ರಜೆಗಳು ಮತ್ತು ರಾಜಕೀಯ ಪಕ್ಷಗಳ ಮಧ್ಯ ಇದ್ದು, ಅಲ್ಲಿನ ಆಗುಹೋಗುಗಳನ್ನು ನೋಡಿ ಮನಸ್ಥೈರ್ಯ ಸಂಪಾದಿಸಬೇಕು ದಿಸ್ ಈಸ್ ನಥಿಂಗ್.
-ಯುವ ಮಂತ್ರ ಪಠಿಸುವವರಿಗೂ ಮುಂದೆ ವಯಸ್ಸಾಗುತ್ತದೆ
ನನಗೆ ಟಿಕೆಟ್ ತಪ್ಪುತ್ತಿರುವುದು ಇದೇ ಮೊದಲ ಬಾರಿಯಲ್ಲ. ಹಿಂದೆ ಸಾಂಗ್ಲಿಯಾನ ಅವರಿಗೆ ಟಿಕೆಟ್ ಕೊಟ್ಟು ನನ್ನನ್ನು ನಿರ್ಲಕ್ಷಿಸಿದ್ದರು. ಕಾಂಗ್ರೆಸ್ಗೆ ಬಹುಶಃ ನನಗಿಂತ ಹೆಚ್ಚು ಸೇವೆ ಮಾಡಿದವರು ಕಂಡಿರಬೇಕು. ರಾಜಕೀಯ ಪಕ್ಷಗಳು ಸಂದರ್ಭಾನುಸಾರವಾಗಿ ತೀರ್ಮಾನ ತೆಗೆದುಕೊಳ್ಳುತ್ತವೆ. ಈಗ ಅವರು ಯುವ ಮಂತ್ರ ಜಪಿಸುತ್ತಿದ್ದಾರೆ. ಈ ಜಗತ್ತಿನಲ್ಲಿ ಎಲ್ಲರಿಗೂ ವಯಸ್ಸಾಗುತ್ತದೆ. ಈಗ ಯುವ ಮಂತ್ರ ಪಠಿಸುವವರಿಗೂ ಮುಂದೆ ವಯಸ್ಸಾಗುವುದಿಲ್ಲವೇ? ವಯಸ್ಸು ಯಾರಿಗೆ ಆಗುತ್ತದೋ ಅವರಿಗೆ ಅಷ್ಟೇ ಅನುಭವ ಇರುತ್ತದೆ. ತಿಳಿವಳಿಕೆ ಇರುತ್ತದೆ. ಜನಗಳ ಪರಿಚಯ ಇರುತ್ತದೆ. ಜನಗಳ ಸಮಸ್ಯೆಗಳ ಅರಿವಿರುತ್ತದೆ.
ಇಷ್ಟೆಲ್ಲ ಆದ ಮೇಲೆ ಸುತ್ತಿ ಬಳಸಿ ಮಾತನಾಡುವುದೇಕೆ? ನಾನು ಹೇಳುತ್ತಿರುವುದು ರಾಹುಲ್ ಗಾಂಧಿಯವರ ಬಗ್ಗೆಯೇ! ಅವರು ಯುವಕರನ್ನು ಬಯಸುತ್ತಿದ್ದಾರೆ. ರಾಹುಲ್ ಗಾಂಧಿ ಇಸ್ ರೈಟ್. ಆತ ಯುವಕ. ಯುವ ಪಡೆಯನ್ನು ಬಯಸುತ್ತಿದ್ದಾರೆ. ಅದರಲ್ಲಿ ತಪ್ಪೇನು? ಅದು ತಪ್ಪು ಎನ್ನುವುದಕ್ಕೆ ನಾನು ಯಾರು? ಅವರಿಗೆ ಏನು ಬೇಕು ಎಂಬುದನ್ನು ಅವರು ಹೇಳುತ್ತಾರೆ. ನಾಯಕರ ಹಿಂದೆ-ಮುಂದೆ ಕಾಕಾಪುಡಿ ಹೊಡೆದುಕೊಂಡಿರುವ ವ್ಯಕ್ತಿ ನಾನಲ್ಲ.
-ಅರಿವಿದಿದ್ದರೆ ಪ್ರಣಬ್ರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಬೇಕಿತ್ತು
ಇವತ್ತು ಕಾಂಗ್ರೆಸ್ಸಿಗೆ ಅರಿವಿದ್ದಿದ್ದರೆ, ಪ್ರಣಬ್ ಮುಖರ್ಜಿ ಅವರನ್ನು ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡಬೇಕಿತ್ತು. ಅವರು ಪ್ರಧಾನಿಯಾಗಿಸುವುದನ್ನು ತಪ್ಪಿಸಲು ರಾಷ್ಟ್ರಪತಿ ಮಾಡಿದರು. ಪ್ರಣಬ್ ಅಭ್ಯರ್ಥಿಯಾಗಿ ಎಷ್ಟು ಪಕ್ಷಗಳ ಒಲವು ಪಡೆದಿದ್ದಾರೆ ಎಂಬುದನ್ನು ಗುರುತಿಸಿ ನೋಡಿ. ಪ್ರಜಾತಂತ್ರದಲ್ಲಿ ಜನಗಳಿಗೆ ಬೇಕಾದ ರೀತಿಯಲ್ಲಿ ನಾವು ನಡೆದರೆ ಅವರು ನಮ್ಮ ಜತೆಗೆ ಬರುತ್ತಾರೆ. ಜನಗಳ ಇಚ್ಚೆಗೆ ತದ್ವಿರುದ್ದವಾದರೆ ಆಗ ಸಹಕಾರ ಕಳೆದುಕೊಳ್ಳಬೇಕಾಗುತ್ತದೆ. ಪಣಬ್ರನ್ನು ಪ್ರಧಾನಿ ಅಭ್ಯರ್ಥಿಯಾಗಿ ಮಾಡದೇ ರಾಷ್ಟ್ರಪತಿಯಾಗಿ ಮಾಡಿದ ದಿನದಿಂದಲೇ ಕಾಂಗ್ರೆಸ್ ತಪ್ಪು ಹೆಜ್ಜೆ ಇಡುತ್ತಿದೆ ಎಂದು ಜಾಫರ್ ಷರೀಫ್ ಕಿಡಿಕಾರಿದ್ದಾರೆ.
-ಅವರ್ಯಾವ ಸೀಮೆ ನಾಯಕರು ?
ರೆಹಮಾನ್ ಖಾನ್ ಅವರು ಅಲ್ಪಸಂಖ್ಯಾತ ಸಮುದಾಯದ ನಾಯಕರು ಎಂದು ಯಾರಾದರೊಬ್ಬರ ಕೈಲಿ ಹೇಳಿಸಿ ನೋಡೋಣ. ಮಂತ್ರಿ, ಎಂಪಿಯಾದವರೆಲ್ಲ ನಾಯಕರಲ್ಲ. ಜನ ಒಪ್ಪಿಕೊಂಡರೆ ಮಾತ್ರ ನಾಯಕರು. ಚುನಾವಣೆ ಗೆದ್ದಿದ್ದಾರಾ ಅವರು? ಆದರೆ ಅವಕಾಶ ಅವರ ಕಡೆಗೆ ಹೋಗುತ್ತಿದೆ. ಇದಕ್ಕೆ ಕಾರಣ ದೇವರು, ಮೇಲೆ ಕುಳಿತಿದ್ದಾನಲ್ಲ ಬ್ರಹ್ಮ. ಅವನು ಬರೆದಿರುವಾಗ ಇನ್ನೇನು ಮಾಡುವುದು? ನನಗೂ ಅದೃಷ್ಟ ಬರೆದಿತ್ತು. ನರಸಿಂಹರಾಯರ ಕಾಲದಲ್ಲಿ ನಾನು ಕೇಂದ್ರ ಸಚಿವ ಸಂಪುಟದಲ್ಲಿ ನಾಲ್ಕನೇ ಪ್ರಮುಖ ಮಂತ್ರಿಯಾಗಿದ್ದೆ. ನಾವೇನು ಅಧಿಕಾರ ನೋಡಿಲ್ಲ ಅಂತಲ್ಲ. ಎಲ್ಲ ನೋಡಿದ್ದೇವೆ. ಸದಾ ಕಾಲ ಅದನ್ನೇ ಬಯಸುವುದು ಸರಿಯಲ್ಲ. ಅವರು ಜೀವನದಲ್ಲಿ ಚುನಾವಣೆ ಗೆದ್ದವರಲ್ಲ. ಎಲ್ಲವನ್ನೂ ಪುಕ್ಸಟ್ಟೆ ಗಿಟ್ಟಿಸಿಕೊಂಡಿದ್ದಾರೆ. ಕೌನ್ಸಿಲ್ ಸದಸ್ಯತ್ವ, ರಾಜ್ಯಸಭಾ ಉಪಾಸಭಾಧ್ಯಕ್ಷ, ಈಗ ಸಚಿವ ಸ್ಥಾನ. ಹಿಂಬಾಗಿಲ ರಾಜಕಾರಣಕ್ಕೂ ನೇರವಾಗಿ ಚುನಾವಣೆ ಎದುರಿಸುವುದಕ್ಕೂ ವ್ಯತ್ಯಾಸವಿದೆ. ಸಾರ್ವಜನಿಕ ಜೀವನ ಎಂದರೆ ನನ್ನ ಪ್ರಕಾರ ಒಂದು ತಪಸ್ಸು.
-ದೇವೇಗೌಡರಂಥ ಹುಟ್ಟು ಹೋರಾಟಗಾರರು ಯಾರಿದ್ದಾರ್ರೀ?
ದೇವೇಗೌಡರ ವಿರುದ್ಧ ಅಭ್ಯರ್ಥಿಯನ್ನು ನಿಲ್ಲಿಸಬೇಡಿ ಎಂದು ಸೋನಿಯಾ ಗಾಂಧಿಯವರಿಗೆ ನಾನು ಪತ್ರ ಬರೆದಿದ್ದು ಸರಿಯಾಗಿಯೇ ಇದೆ. ನನಗೆ ಯಾವುದು ಸರಿ ಎನ್ನಿಸಿತೋ ಅದನ್ನು ಬರೆದಿದ್ದೇನೆ. ದೇವೇಗೌಡರು ಹುಟ್ಟುಹೋರಾಟಗಾರರು. ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ ಅಧಿಕಾರ ನಡೆಸಿದ್ದರೂ, ಸಮಸ್ಯೆ ಎದುರಾದಾಗ ಜನಸಾಮಾನ್ಯರ ಪರವಾಗಿ ಬೀದಿಗಿಳಿದು ಹೋರಾಡುತ್ತಾರೆ.
- ರಾಘವೇಂದ್ರ ಭಟ್