ಭೂಮ್ಯಾಕಾಶಕ್ಕೂ ಆಯೋಗದ ಬೇಲಿ, ಕಪ್ಪು ಹಣ ಹರಿಯದಂತೆ ಹದ್ದಿನ ಕಣ್ಣು
ಈ ಬಾರಿ ಚುನಾವಣಾ ಆಯೋಗ ಸಾಮಾಜಿಕ ಜಾಲ ತಾಣಗಳ ಮೇಲೂ ನಿಗಾ ಇಟ್ಟಿದೆ. ಸಾಮಾಜಿಕ ಜಾಲ ತಾಣದಲ್ಲಿ..
ಈ ಬಾರಿ ಚುನಾವಣಾ ಆಯೋಗ ಸಾಮಾಜಿಕ ಜಾಲ ತಾಣಗಳ ಮೇಲೂ ನಿಗಾ ಇಟ್ಟಿದೆ. ಸಾಮಾಜಿಕ ಜಾಲ ತಾಣದಲ್ಲಿ ನಡೆಸುವ ಪ್ರಚಾರಕ್ಕೆ ಚುನಾವಣಾ ಆಯೋಗದ ಅನುಮತಿ ಕಡ್ಡಾಯ.
10 ಲಕ್ಷಕ್ಕಿಂತ ಹೆಚ್ಚು ನಗದು ಒಯ್ಯುವವರ ಮಾಹಿತಿ ಆದಾಯ ತೆರಿಗೆ ಇಲಾಖೆಗೆ ನೀಡಲು ಸೂಚನೆ
50 ಸಾವಿರಕ್ಕಿಂತ ಹೆಚ್ಚಿನ ನಗದು ಸಾಗಿಸುವವರು ಆ ಕುರಿತ ದಾಖಲೆ, ಗುರುತುಪತ್ರ ಇಟ್ಟುಕೊಳ್ಳುವುದು ಅಗತ್ಯ.
ನವದೆಹಲಿ: ರಾಜಕೀಯ ಪಕ್ಷಗಳೇ ಹಿಂದಿನ ಚುನಾವಣೆಯಂತೆ ಹಣ, ಹೆಂಡ ಹಂಚಿ ಚುನಾವಣೆ ಗೆಲ್ಲಬಹುದು ಎನ್ನುವ ಕಲ್ಪನೆಯಲ್ಲಿದ್ದರೆ ಅದನ್ನು ಮರೆತುಬಿಡಿ. ಈ ಬಾರಿ ಚುನಾವಣಾ ಆಯೋಗ ಹಣ ಮತ್ತು ಹೆಂಡ ಹಂಚುವವರ ಮೇಲೆ ಹದ್ದಿನ ಕಣ್ಣಿಟ್ಟಿದೆ. ರಸ್ತೆ ಮಾರ್ಗ ಮಾತ್ರವಲ್ಲ ವಿಮಾನ, ಕಾಪ್ಟರ್ ಮೂಲಕ ಸಾಗಣೆಯಾಗುವ ಹಣದ ಮೇಲೂ ನಿಗಾ ಇಟ್ಟಿದೆ.
ಹೆಚ್ಚುವರಿ ಭದ್ರತೆ
ಕಳೆದ ಬಾರಿ ಶೇ.90ರಷ್ಟು ಹೆಚ್ಚು ಮತದಾನ ನಡೆದ ಹಾಗೂ ಒಬ್ಬ ಅಭ್ಯರ್ಥಿ ಶೇ.75ಕ್ಕಿಂತ ಹೆಚ್ಚು ಮತಪಡೆದ ಮತಕೇಂದ್ರಗಳ ಮೇಲೆ ಚುನಾವಣಾ ಆಯೋಗ ಹೆಚ್ಚು ನಿಗಾ ಇಡಲಿದೆ. ಇಂಥ ಮತಕೇಂದ್ರಗಳನ್ನು ಅಧಿಕಾರಿಗಳು ಸೂಕ್ಷ್ಮಮತ ಕೇಂದ್ರಗಳ ಪಟ್ಟಿಗೆ ಸೇರಿಸಲಿದ್ದಾರೆ. ಈ ರೀತಿಯ ಮತಕೇಂದ್ರಗಳಲ್ಲಿ ಅಭ್ಯರ್ಥಿಗಳು ಹಣ ಮತ್ತು ತೋಳ್ಬಲ ಪ್ರದರ್ಶಿಸಿ ವಂಚನೆ ಮಾಡಿರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಆಯೋಗ ಈ ಕ್ರಮ ಕೈಗೊಂಡಿದೆ. ಅದರಂತೆ ಈ ಮತಕೇಂದ್ರಗಳಿಗೆ ಹೆಚ್ಚುವರಿ ಭದ್ರತೆ ಕಲ್ಪಿಸಲಾಗುವುದು ಮತ್ತು ಹೆಚ್ಚುವರಿ ವೀಕ್ಷಕರನ್ನು ನಿಯೋಜಿಸಲಾಗುವುದು.
ಹೋಳಿಯಲ್ಲೂ ಆಟ ನಡೆಯಲ್ಲ!
ಹೋಳಿ ಅಂದಾಕ್ಷಣ ಇಡೀ ಉತ್ತರ ಭಾರತ ಬಣ್ಣದೋಕುಳಿಯಾಡಿ ಸಂಭ್ರಮಿಸುತ್ತದೆ. ಚುನಾವಣೆ ವೇಳೆಗೇ ಹೋಳಿ ಬರುವುದರಿಂದ ಬಹುತೇಕ ಪಕ್ಷಗಳು ಓಕುಳಿಯಾಟದ ವೇಳೆ ರಾಜಕೀಯ ಆಟ ಆಡುತ್ತಿದ್ದರು. ಹಣ, ಹೆಂಡ ಹಂಚುತ್ತಿದ್ದರು. ಆದರೆ, ಈ ಬಾರಿ ಚುನಾವಣಾ ಆಯೋಗ ಹೋಳಿಯ ಮೇಲೂ ಕಣ್ಣಿಟ್ಟಿದೆ. ಹಾಗಾಗಿ ಈ ಬಾರಿ ಲಾಲು ಸೇರಿದಂತೆ ಬಹುತೇಕ ನಾಯಕರು ಹೋಳಿ ಸಂಭ್ರಮದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.
ವಿಮಾನ ಹಾರಾಟದ ಮೇಲೂ ಕಣ್ಣು
ಚುನಾವಣೆ ವೇಳೆ ಕಪ್ಪುಹಣದ ಹರಿವಿನ ಮೇಲೆ ನಿಗಾ ಇಡಲು ಚುನಾವಣಾ ಆಯೋಗ ಈ ಬಾರಿ ಹೊಸ ತಂತ್ರ ಹೆಣೆದಿದೆ. ವಾಣಿಜ್ಯ ಅಥವಾ ಬಾಡಿಗೆ ವಿಮಾನಗಳ ಮೂಲಕ ಕಪ್ಪು ಹಣ ಸಾಗಣೆ ತಡೆಗೆ ಆಯೋಗ ಒಂದಷ್ಟು ಕಠಿಣ ಮಾರ್ಗದರ್ಶಿಗಳನ್ನು ರೂಪಿಸಿದೆ. ಚುನಾವಣೆ ವೇಳೆ ಎಲ್ಲ ವಿಮಾನಗಳು ಹಾಗೂ ಕಾಪ್ಟರ್ಗಳ ಸಂಚಾರದ ಮೇಲೆ ಕಣ್ಣಿಡುವಂತೆಆಯೋಗ ಏರ್ಟ್ರಾಫಿಕ್ ಕಂಟ್ರೋಲರ್ಗಳಿಗೆ ಸೂಚಿಸಿದೆ.