ಬಿಜೆಪಿ ಶಕ್ತಿಪ್ರದರ್ಶನ
ರ್ಯಾಲಿ ನಡೆಸಲು ಅನುಮತಿ ನೀಡದೆ ಇದ್ದ ಜಿಲ್ಲಾಡಳಿತದ ವಿರುದ್ಧ ವಾರಾಣಸಿಯಲ್ಲಿ ಗುರುವಾರ ಕಂಡುಬಂದದ್ದು ಬರೋಬ್ಬರಿ...
ಪಿಟಿಐ ವಾರಾಣಸಿ/ನವದೆಹಲಿ/ಅಜಂಗಡ ಮೇ 7
ವಾರಾಣಸಿಯಲ್ಲಿ ಗುರುವಾರ ಕಂಡುಬಂದದ್ದು ಬರೋಬ್ಬರಿ ಕೇಸರಿ ಅಲೆ. ಇಲ್ಲಿನ ಬೇನಿಯಾಬಾಗ್ನಲ್ಲಿ ರ್ಯಾಲಿ ನಡೆಸಲು ಅನುಮತಿ ನೀಡದೆ ಇದ್ದ ಜಿಲ್ಲಾಡಳಿತದ ವಿರುದ್ಧ ಬಿಜೆಪಿಯ ಪ್ರಮುಖ ನಾಯಕರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದರು. ಜತೆಗೆ ರೋಡ್ ಶೋ ನಡೆಸಿ ಕೇಂದ್ರ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತದ ವಿರುದ್ಧ ವಾಗ್ದಾಳಿ ನಡೆಸಿದರು. ನವದೆಹಲಿಯಲ್ಲಿಯೂ ಒಪ್ಪಿಗೆ ನೀಡದೆ ಇದ್ದ ನಿಲುವು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ರ್ಯಾಲಿಗೆ ವಿನಾ ಕಾರಣ ತಡೆಯೊಡ್ಡುವ ನಿರ್ಧಾರಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಈ ನಡುವೆ ಮುಖ್ಯ ಚುನಾವಣಾ ಆಯುಕ್ತ ವಿ.ಎಸ್.ಸಂಪತ್ ಪತ್ರಿಕಾಗೋಷ್ಠಿ ನಡೆಸಿ, ವಾರಾಣಸಿ ಜಿಲ್ಲಾಧಿಕಾರಿ ಪ್ರಾಂಜಲ್ ಯಾದವ್ ನಿರ್ಧಾರವನ್ನು ಸಮರ್ಥಿಸಿದ್ದಾರೆ. ಅವರು ವೃತ್ತಿಪರವಾಗಿಯೇ ನಿರ್ಧಾರ ಕೈಗೊಂಡಿದ್ದಾರೆ. ಬಿಜೆಪಿಯಂಥ ರಾಷ್ಟ್ರೀಯ ಪಕ್ಷ ಮಾಡಿರುವ ಆರೋಪಗಳಿಂದ ನಿರಾಶೆಯಾಗಿದೆ. ಯಾವುದೇ ಪಕ್ಷದ ಬಗ್ಗೆ ನಮಗೆ ಹೆದರಿಕೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಆವರಣದಲ್ಲಿ ಬಿಜೆಪಿ ನಾಯಕರಾದ ಅರುಣ್ ಜೇಟ್ಲಿ, ಅಮಿತ್ಶಾ, ಅನಂತಕುಮಾರ್ ಸೇರಿ ಪ್ರಮುಖರು ಧರಣಿ ನಡೆಸಿ ವಾರಾಣಸಿ ಜಿಲ್ಲಾಧಿಕಾರಿ, ಚುನಾವಣಾಧಿಕಾರಿ ಪ್ರಾಂಜಲ್ ಯಾದವ್ರನ್ನು ವಜಾ ಮಾಡುವಂತೆ ಒತ್ತಾಯಿಸಿದರು.