ಫಲಿತಾಂಶ ಬಳಿಕ ಸಂಪುಟ ಪುನಾರಚನೆ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಲಿದ್ದು, ಅದರ ಬೆನ್ನಲ್ಲೇ ಲೋಕಸಭಾ...
ನಿಗಮ, ಮಂಡಳಿಗಳಿಗೆ ನೇಮಕ
ಸದ್ಯದಲ್ಲೇ ಕಾಂಗ್ರೆಸ್‌ಸಮನ್ವಯ ಸಮಿತಿ ಸಭೆ
ಕನ್ನಡಪ್ರಭ ವಾರ್ತೆ ಮೈಸೂರು ಮೇ 9
ಮೇ 13ರಂದು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಲಿದ್ದು, ಅದರ ಬೆನ್ನಲ್ಲೇ ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತು ನಿಗಮ, ಮಂಡಳಿಗೆ ಅಧ್ಯಕ್ಷರ ನೇಮಕ ಮಾಡುವ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.
ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮತದಾನ ಮುಗಿದ ದಿನದಿಂದಲೂ ಸಚಿವ ಸಂಪುಟ ಪುನಾರಚನೆ, ನಿಗಮ, ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಕುರಿತು ಊಹಾಪೋಹಗಳಿದ್ದವು. ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ನೇತೃತ್ವದಲ್ಲಿ ಸಮನ್ವಯ ಸಮಿತಿ ಸಭೆ ಕೂಡ ನಡೆಯಲಿದೆ. ಸಚಿವರ ಸಾಧನೆಯನ್ನು ಸಹ ಪರಾಮರ್ಶೆ ಮಾಡಲಾಗುತ್ತದೆ. ಅದರ ಆಧಾರದ ಮೇಲೆ ಸಂಪುಟದಿಂದ ಕೈಬಿಡುವುದು ಅಥವಾ ಖಾತೆ ಬದಲಾವಣೆ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಸಂಪುಟ ಪುನಾರಚನೆ ಸಂಬಂಧ ಇದ್ದ ಎಲ್ಲ ಊಹಾಪೋಹಗಳಿಗೆ ಈಗ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ತೆರೆ ಎಳೆದಿದ್ದಾರೆ. ಇದು ಕೇವಲ ಊಹಾಪೋಹವಲ್ಲ, ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಸಂಪುಟ ಪುನಾರಚನೆ, ನಿಗಮ, ಮಂಡಳಿಗಳಿಗೆ ನೇಮಕ ನಡೆಯಲಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ರಾಜ್ಯ ರಾಜಕೀಯದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಆದರೆ ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಲಾಗುವುದು ಎನ್ನುವ ಮೂಲಕ ಫಲಿತಾಂಶ ಏನೇ ಆಗಲಿ ತಮ್ಮ ನಾಯಕತ್ವ ಬದಲಾವಣೆ ಇಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಚಿವ ಸಂಪುಟದಲ್ಲಿ ಖಾಲಿ ಇರುವ ಮೂರು ಸ್ಥಾನಗಳನ್ನು ಮಾತ್ರ ಭರ್ತಿ ಮಾಡಲಾಗುತ್ತದೋ ಅಥವಾ ಫಲಿತಾಂಶದ ಆಧಾರದ ಮೇಲೆ ಕೆಲವು ಸಚಿವರ ತಲೆದಂಡ ಮಾಡಲಾಗುತ್ತದೋ ಅಥವಾ ಖಾತೆಗಳ ಮರು ಹಂಚಿಕೆ ಮಾಡಲಾಗುತ್ತದೆ ಎಂಬ ಬಗ್ಗೆ ಅವರು ಯಾವುದೇ ಸುಳಿವು ಬಿಟ್ಟುಕೊಡಲಿಲ್ಲ. ಸಂಪುಟ ಪುನಾರಚನೆ, ನಿಗಮ, ಮಂಡಳಿಗಳ ನೇಮಕಾತಿಯ ಜೊತೆಗೆ ವಿಧಾನ ಪರಿಷತ್ ಹಾಗೂ ರಾಜ್ಯಸಭೆಯ ದೈವಾರ್ಷಿಕ ಚುನಾವಣೆಗಳು ಎದುರಾಗುತ್ತಿವೆ. ಕಾಂಗ್ರೆಸ್ ರಾಜ್ಯಸಭೆಯ ಎರಡು, ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳನ್ನು ಗೆಲ್ಲಲಿದೆ. ಇದಲ್ಲದೇ ನಾಮಕರಣ ಸದಸ್ಯ ಸ್ಥಾನಗಳು ಖಾಲಿಯಾಗುತ್ತಿವೆ. ಶಿಕ್ಷಕ ಹಾಗೂ ಪದವೀಧರ ಕ್ಷೇತ್ರಗಳ ಎರಡು ಸ್ಥಾನಗಳಿಗೂ ಚುನಾವಣೆ ನಡೆಯಬೇಕಿದೆ.
ಸ್ವತಃ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಅವರು ಮೇಲ್ಮನೆ ಸದಸ್ಯರಾಗಿ ರಾಜ್ಯ ಸಚಿವ ಸಂಪುಟ ಪ್ರವೇಶಿಸುವ ಪ್ರಯತ್ನದಲ್ಲಿದ್ದಾರೆ. ಅದರಲ್ಲೂ ಉಪ ಮುಖ್ಯಮಂತ್ರಿಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಇದಲ್ಲದೇ ಐದಾರು ಬಾರಿ ಗೆದ್ದಿರುವ ಹಲವಾರು ಶಾಸಕರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಒಟ್ಟಾರೆ ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಳ್ಳಲಿವೆ.
ಕುಡಿಯುವ ನೀರು ಸಮಸ್ಯೆ: ರಾಜ್ಯದಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ರಾಜ್ಯದ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. 10 ಸಾವಿರ ಜನವಸತಿ ಪ್ರದೇಶ ಬರದ ದವಡೆಗೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದೇನೆ. ನೀರಿನ ಸಮಸ್ಯೆ ಪರಿಹಾರಕ್ಕೆ 504 ಕೋಟಿ ಬಿಡುಗಡೆ ಮಾಡಲಾಗಿದೆ. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ನಿಯಂತ್ರಣ ಕೊಠಡಿ ತೆರೆಯಲಾಗಿದೆ. ದೂರು ಬಂದ 24 ಗಂಟೆಯಲ್ಲಿ ಸ್ಪಂದಿಸದಿದ್ದರೆ ಜಿಲ್ಲಾಡಳಿತ ಹೊಣೆ ಹೊರಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.