ಭಾಗವತ್-ಮೋದಿ ಭೇಟಿ: ಚುನಾವಣಾ ಬೆಳವಣಿಗೆ ಚರ್ಚೆ
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಶನಿವಾರ ರಾತ್ರಿ ದೆಹಲಿಯಲ್ಲಿ ಆರ್ ಎಸ್ಎಸ್..
ನವದೆಹಲಿ: ದೇಶಾದ್ಯಂತ ಬಿಡುವಿಲ್ಲದ ಚುನಾವಣಾ ಪ್ರಚಾರ ಮುಕ್ತಾಯವಾದ ಬಳಿಕ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಶನಿವಾರ ರಾತ್ರಿ ನವದೆಹಲಿಯಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಪ್ರಚಾರ ಸಂದರ್ಭದಲ್ಲಿ ಉಂಟಾದ ಬೆಳವಣಿಗೆಗಳು ಹಾಗೂ ಸಮೀಕ್ಷೆಗಳಲ್ಲಿ ಬಿಜೆಪಿ ಮೈತ್ರಿಕೂಟ ಪರವಾದ ಅಲೆ ಇರುವುದರಿಂದ ಸರ್ಕಾರ ರಚನೆ ಸಾಧ್ಯತೆಗಳ ಬಗ್ಗೆಯೂ ಚರ್ಚೆ ನಡೆಸಲಾಯಿತು ಎಂದು ಮೂಲಗಳು ಹೇಳಿವೆ.
ಆರ್ಎಸ್ಎಸ್ ನಾಯಕರ ಭೇಟಿಗೆ ಮುನ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿವಾಸಕ್ಕೆ ತೆರಳಿ ಅವರ ಆಶೀರ್ವಾದ ಪಡೆದುಕೊಂಡರು. ಈ ಬಗ್ಗೆ ಟ್ವೀಟ್ ಮಾಡಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ 'ಚುನಾವಣಾ ಪ್ರಚಾರ ಆರಂಭಿಸುವ ಮುನ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭೇಟಿಯಾಗಿದ್ದೆ. ಉತ್ತರಪ್ರದೇಶದಲ್ಲಿ ಚುನಾವಣಾ ಪ್ರಚಾರ ಮುಕ್ತಾಯಗೊಳಿಸಿದ ತಕ್ಷಣ ನೇರವಾಗಿ ಅವರ ಭೇಟಿಗಾಗಿ ಬಂದೆ. ನನಗೆ ಯಾವತ್ತೂ ಅವರು ಗೌರವ ಪ್ರಾಯರು' ಎಂದು ಬರೆದುಕೊಂಡಿದ್ದಾರೆ. ಇದಾದ ಬಳಿಕ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಭೇಟಿ ಮಾಡಿದರು.