ವಾರಾಣಸೀಲಿ ರಾಗಾ ಚೊಚ್ಚಲ ರ್ಯಾಲಿ
ವಿಶ್ವದ ಕಣ್ಣು ನೆಟ್ಟಿರುವ ದೇಗುಲ ನಗರಿ ವಾರಾಣಸಿಯಲ್ಲಿ ಶನಿವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್..
ವಾರಾಣಸಿ: ವಿಶ್ವದ ಕಣ್ಣು ನೆಟ್ಟಿರುವ ದೇಗುಲ ನಗರಿ ವಾರಾಣಸಿಯಲ್ಲಿ ಶನಿವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹವಾ.
ರಾಹುಲ್ ಕ್ಷೇತ್ರ ಅಮೇಠಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಪರ ನರೇಂದ್ರ ಮೋದಿ ನಡೆಸಿದ್ದ ಪ್ರಚಾರಕ್ಕೆ ಪ್ರತಿಯಾಗಿ ರಾಹುಲ್ ವಾರಾಣಸಿಗೆ ದಾಂಗುಡಿ ಯಿಟ್ಟರು. ಬಹಿರಂಗ ಪ್ರಚಾರದ ಕೊನೇ ದಿನವಾದ ಶನಿವಾರ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ಪರ ರಾಹುಲ್ ರೋಡ್ಶೋ ನಡೆಸಿ ವಾರಾಣಸಿಯಲ್ಲಿ ತಮ್ಮ ಚೊಚ್ಚಲ ಬಲಪ್ರದರ್ಶನ ನಡೆಸಿದರು.
12 ಕಿ.ಮೀ: ಮುಸ್ಲಿಂ ಬಾಹುಳ್ಯವಿರುವ ಗೋಲ್ ಗಡ್ಡಾ ಪ್ರದೇಶದಲ್ಲಿ ಆರಂಭವಾದ ರ್ಯಾಲಿ 12 ಕಿ.ಮೀ ಸಾಗಿ ಬಿಎಚ್ಯು ಗೇಟ್ನಲ್ಲಿ ಕೊನೆಗೊಂಡಿತು. ಕೇಂದ್ರ ಸಚಿವ ಗುಲಾಂ ನಬಿ ಆಜಾದ್, ಮಧುಸೂದನ್ ಮಿಸ್ತ್ರಿ, ಸಿ.ಪಿ.ಜೋಶಿ, ರಾಜ್ಬಬ್ಬರ್ ಸೇರಿ ಪ್ರಮುಖರು ರಾಹುಲ್ಗೆ ಸಾಥ್ ನೀಡಿದರು. ಇದೇ ವೇಳೆ ರಾಹುಲ್, ಮದನ್ ಮೋಹನ್ ಮಾಳವೀಯ ಪ್ರತಿಮೆಗೆ ಗೌರವ ಸಲ್ಲಿಸಿದರು.
ರಾಹುಲ್ಗೆ 'ಯೆಸ್'!: ವಿಶೇಷವೆಂದರೆ, ಬೇನಿಯಾ ಬಾಗ್ನಲ್ಲಿ ರೋಡ್ಶೋ ನಡೆಸಲು ರಾಹುಲ್ಗೆ ಆಯೋಗ ಅವಕಾಶ ಕಲ್ಪಿಸಿತ್ತು. ಆದರೆ, ಇತ್ತೀಚೆಗಷ್ಟೇ ಭದ್ರತೆಯ ನೆಪ ಹೇಳಿ ಮೋದಿ ರೋಡ್ಶೋಗೆ ಅವಕಾಶ ನಿರಾಕರಿಸಲಾಗಿತ್ತು.
ಪ್ರಚಾರ ಅಂತ್ಯ: ವಾರಾಣಸಿ ಸೇರಿದಂತೆ 41 ಸ್ಥಾನಗಳಿಗೆ ನಡೆಯಲಿರುವ 9ನೇ ಹಾಗೂ ಕೊನೇ ಹಂತದ ಮತದಾನದ ಬಹಿರಂಗ ಪ್ರಚಾರ ಶನಿವಾರ ಅಂತ್ಯವಾಯಿತು. ರಾಜಕೀಯ ನಾಯಕರು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಕೊನೆಯ ಬಲಪ್ರದರ್ಶನ ಮಾಡಿದರು. ಮೇ 12ರಂದು ಉತ್ತರಪ್ರದೇಶದ 18 ಸ್ಥಾನ, ಪಶ್ಚಿಮ ಬಂಗಾಳದ 17 ಹಾಗೂ ಬಿಹಾರದ 6 ಸ್ಥಾನಗಳಿಗೆ ಮತದಾನ ನಡೆಯಲಿದೆ.
ಮೋದಿಗೆ ಭಾರತದ ಬಗ್ಗೆ ಗೊತ್ತಿಲ್ಲ. ಮಹಿಳೆಯರ ಬೇಹುಗಾರಿಕೆ ನಡೆಸಲು ಮಾತ್ರವೇ ಗೊತ್ತು. ಮೋದಿ ಕೈಗಾರಿಕೋದ್ಯಮಿಗಳಿಗೆ ಶೇ.0.1ರ ದರದಲ್ಲಿ ಸಾಲ ನೀಡುತ್ತಾರೆ, ಆದರೆ ಕೃಷಿಕರಿಗೆ ಶೇ.14ರ ದರದಲ್ಲಿ ಸಾಲ ಕೊಡುತ್ತಾರೆ.
-ರಾಹುಲ್ ಗಾಂಧಿ