ವಿದ್ಯುತ್ ಅವಘಡಕ್ಕೆ ಮೂವರು ರೈತರು ಬಲಿ
ಶಿರಹಟ್ಟಿ/ಇಂಡಿ: ಭಾರಿ ಗಾಳಿ, ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಪ್ರತ್ಯೇಕ ಘಟನೆಗಳಲ್ಲಿ ಮೂವರು ರೈತರು ಮೃತಪಟ್ಟಿದ್ದಾರೆ.
ಶನಿವಾರ ಹೊಲ ಸ್ವಚ್ಛಗೊಳಿಸಲು ತೆರಳಿದ್ದ ಶಿರಹಟ್ಟಿ ಪಟ್ಟಣದ ವಿದ್ಯಾನಗರ ನಿವಾಸಿ ಇಬ್ರಾಹಿಂ ಅಬ್ದುಲ್‌ಸಾಬ್ ಬುಕ್ಕಿಟಗಾರ (32) ಹೊಲದಲ್ಲಿ ಮಳೆ ಗಾಳಿಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದಿದ್ದಾರೆ. ಇವರ ಚೀರಾಟ ಕೇಳಿ ಪಕ್ಕದ ಹೊಲದಲ್ಲಿದ್ದ ಮೇಗೆರಿ ನಿವಾಸಿ ಮಂಜುನಾಥ ಫಕ್ಕೀರೇಶ ಮಾಬಳಿ (38) ರಕ್ಷಿಸಲು ಹೋಗಿ ಅವರಿಗೂ ವಿದ್ಯುತ್ ಪ್ರವಹಿಸಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಂದೆಡೆ ಇಂಡಿ ತಾಲೂಕಿನ ಬಳ್ಳೊಳ್ಳಿ ಗ್ರಾಮದ ಮಲ್ಲಪ್ಪ ವಾಂಗೆ (40) ತೋಟದಲ್ಲಿ ಮೋಟರ್ ಆರಂಭ ಮಾಡುವಾಗ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.