ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬೀದಿಗೆ ಬಂತು ಪೊಲೀಸರ ಜಗಳ

ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್- ಎಡಿಜಿಪಿ ರವೀಂದ್ರನಾಥ

Srinivasa Murthy VN
Updated On : 29 May 2014, 2:46 am

ಕನ್ನಡಪ್ರಭ ವಾರ್ತೆ ಬೆಂಗಳೂರು ಮೇ 28
ಎಡಿಜಿಪಿ ಪಿ.ರವೀಂದ್ರನಾಥ ಫೋಟೋ ಕ್ಲಿಕ್ಕಿಸಿದ ಪ್ರಕರಣ ಅತಿರೇಕಕ್ಕೆ ತಲುಪಿದ್ದು ಬುಧವಾರ ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಹಾಗೂ ಎಡಿಜಿಪಿ ರವೀಂದ್ರನಾಥ ಅವರು ನಡುವಿನ ಕಲಹ ಬೀದಿಗೆ ಬಂದಿದೆ.
ಸರ್ಕಾರ ಈ ಬಗ್ಗೆ ಸಿಐಡಿ ತನಿಖೆಗೆ ಆದೇಶಿಸಿದ್ದು, ರವೀಂದ್ರನಾಥ್ ಅವರನ್ನು ಕೆಎಸ್‌ಆರ್‌ಪಿ ಎಡಿಜಿಪಿ
ಸ್ಥಾನದಿಂದ ವರ್ಗಾಯಿಸಿ ಬುಧವಾರ ರಾತ್ರಿ ಆದೇಶ ಹೊರಡಿಸಿದೆ. ರವೀಂದ್ರನಾಥ ಅವರಿಗೆ ಯಾವುದೇ ಸ್ಥಾನ ತೋರಿಸಲಾಗಿಲ್ಲ. ಮೇಘರಿಕ್ ಅವರಿಗೆ ಕೆಎಸ್‌ಆರ್‌ಪಿ ಎಡಿಜಿಪಿಯ ಹೆಚ್ಚುವರಿ ಹೊಣೆ ನೀಡಲಾಗಿದ್ದು, ಪ್ರಕರಣದ ತನಿಖೆಯ ನೇತೃತ್ವವನ್ನೂ ವಹಿಸಲಾಗಿದೆ.
ಕಾಫಿ ಶಾಪ್‌ನಲ್ಲಿ ಹುಡುಗಿ ಫೋಟೋ ತೆಗೆದ ಕುರಿತು ಎಫ್‌ಐಆರ್ ದಾಖಲಾಗಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ರವೀಂದ್ರನಾಥ್, ಬುಧವಾರ ಆಯುಕ್ತರ ಕಚೇರಿಗೆ ಆಗಮಿಸಿ ತನ್ನನ್ನು ಬಂಧಿಸುವಂತೆ ರಾಘವೇಂದ್ರ ಔರಾದ್ಕರ್ ಬಳಿ ಕೇಳಿದ್ದಾರೆ.
'ನಿಮ್ಮನ್ನು ಬಂಧಿಸುವುದು, ತನಿಖೆ ನಡೆಸುವುದು ತನಿಖಾಧಿಕಾರಿಗೆ ಬಿಟ್ಟಿದ್ದು, ನನ್ನದು ಮೇಲ್ವಿಚಾರಣೆ ಮಾಡುವ ಕೆಲಸ ಮಾತ್ರ ಎಂದು ಔರಾದ್ಕರ್ ಉತ್ತರಿಸಿದ್ದಾರೆ'. ಆದರೆ, ಪಟ್ಟು ಬಿಡದ ರವೀಂದ್ರನಾಥ್, 'ಪ್ರಕರಣ ದಾಖಲಿಸುವಂತೆ ಕಿರಿಯ ಅಧಿಕಾರಿಗೆ ಹೇಳಲು ಬರುತ್ತದೆ. ಆದರೆ, ಬಂಧಿಸಲು ಆಗುವುದಿಲ್ಲವೇ' ಎಂದು ವಾದಿಸಿದ್ದಾರೆ.
'ಆಯುಕ್ತರ ಕಚೇರಿಗೆ ಬಂದು ಈ ರೀತಿ ವರ್ತಿಸುವುದು ಸರಿಯಲ್ಲ. ನಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಿದ್ದೀರಾ ನಿಮ್ಮ ವಿರುದ್ಧ ಪೊಲೀಸ್ ಮಹಾ ನಿರ್ದೇಶಕರಿಗೆ ವರದಿ ಮಾಡುತ್ತೇನೆ' ಎಂದು ಔರಾದ್ಕರ್ ಹೇಳಿದಾಗ, ಅದಕ್ಕೆ 'ನಾನು ಈಗಲೇ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಬರಲು ಸಿದ್ಧ. ಬನ್ನಿ ಹೋಗೋಣ' ಎಂದಿದ್ದಾರೆ.
ಈ ಇಬ್ಬರೂ ಅಧಿಕಾರಿಗಳು ಡಿ.ಜಿ ಲಾಲ್ ರುಖಾಮ್ ಪಚಾವೋ ಅವರ ಮುಂದೆ ಪ್ರಕರಣದ ವಿಚಾರವಾಗಿ ವರ್ತನೆ ಬಗ್ಗೆ ಪರಸ್ಪರ ದೂರು ನೀಡಿದ್ದಾರೆ ಎನ್ನಲಾಗಿದೆ. ಮತ್ತೊಂದು ಆರೋಪ: ಹಿಂದೆ ಗುಲ್ಬರ್ಗದಲ್ಲಿ ಔರಾದ್ಕರ್ ಎಸ್ಪಿಯಾಗಿದ್ದ ಸಂದರ್ಭ ನನಗೂ ಅವರಿಗೂ ಒಂದು ಸಂಗತಿಗೆ ಮನಸ್ತಾಪ ಉಂಟಾಗಿತ್ತು. ಒಂದು ವಿಚಾರವನ್ನು ಪೊಲೀಸ್ ಮಹಾ ನಿರ್ದೇಶಕರ ಗಮನಕ್ಕೆ ತರಲು ಪತ್ರ ಬರೆದಿದ್ದೆ. ಈ ವಿಷಯ ತಿಳಿದು ದೂರವಾಣಿ ಮೂಲಕ ನನ್ನನ್ನು ಸಂಪರ್ಕಿಸಿ ಡಿ.ಜಿ ಅವರ ಗಮನಕ್ಕೆ ತಾರದಂತೆ ಮನವಿ ಮಾಡಿದ್ದರು. ಅಂದಿನಿಂದ ರಾಘವೇಂದ್ರ ಔರಾದ್ಕರ್ ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ ಎಂದು ಎಡಿಜಿಪಿ ಪಿ.ರವೀಂದ್ರನಾಥ ಬುಧವಾರ ಗಂಭೀರ ಆರೋಪ ಮಾಡಿದರು.
ಹಲ್ಲೆ ನಡೆಸಿದವನೆಲ್ಲಿ?: ಕಾಫಿಶಾಪ್‌ನಲ್ಲಿ ರವೀಂದ್ರನಾಥ ಅವರ ಮೊಬೈಲ್ ಫೋನ್ ಹಾಗೂ ಪರ್ಸ್ ಕಿತ್ತುಕೊಂಡು ಹಲ್ಲೆ ನಡೆಸಿರುವ ಶ್ರೀಧರ್ ಎಂಬಾತನಿಗಾಗಿ ಪೊಲೀಸರು ಹುಡುಕಾಟ ತೀವ್ರಗೊಳಿಸಿದ್ದಾರೆ. ಯುವತಿಯರ ಸಹಾಯಕ್ಕೆ ಬಂದ ಶ್ರೀಧರ್, ಫೋಟೋ ತೆಗೆದಿದ್ದಾರೆಂದು ಆರೋಪಿಸಿ ರವೀಂದ್ರನಾಥ ಅವರ ಮೊಬೈಲ್ ಫೋನ್ ಕಿತ್ತುಕೊಂಡು ಹಲ್ಲೆ ನಡೆಸಿರುವಾತನ ಹೇಳಿಕೆಯು ಪ್ರಮುಖವಾಗುತ್ತದೆ. ಹೀಗಾಗಿ ಶ್ರೀಧರ್ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ.

ಪ್ಲೀಸ್ ನನ್ನ ಅರೆಸ್ಟ್ ಮಾಡಿ ಗೃಹಸಚಿವರ ಬಳಿ ಕಣ್ಣೀರಿಟ್ಟ ಎಡಿಜಿಪಿ
ಬೆಂಗಳೂರು: ದೂರು ಸಲ್ಲಿಸಿರುವ ಯುವತಿಯರಿಗೆ, ಮಹಿಳಾ ಸಮಾಜಕ್ಕೆ ನ್ಯಾಯ ಸಿಗಬೇಕಿದ್ದಲ್ಲಿ ನನ್ನ ಬಂಧನವಾಗಲೇಬೇಕು ಎಂದು ಎಡಿಜಿಪಿ ರವೀಂದ್ರನಾಥ್ ಗೃಹ ಸಚಿವ ಕೆ.ಜೆ.ಜಾರ್ಜ್ ಅವರ ಮುಂದೆ ಕಣ್ಣೀರಿಟ್ಟು ಕೈ ಮುಗಿದು ಮನವಿ ಮಾಡಿಕೊಂಡಿದ್ದಾರೆ. ಸತ್ಯಾಸತ್ಯತೆ ನ್ಯಾಯಾಂಗ ತನಿಖೆಯಿಂದ ಮಾತ್ರ ಬಯಲಾಗುತ್ತದೆ. ಹೀಗಾಗಿ ನನ್ನನ್ನು ಬಂಧಿಸಬೇಕು ಎಂದು ಜಾರ್ಜ್ ಅವರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಾರ್ಜ್, ನಿಮ್ಮ ಮನವಿಯನ್ನು ಪರಿಗಣಿಸುತ್ತೇವೆ. ಆದರೆ, ತನಿಖಾಧಿಕಾರಿಯಿಂದ ಮಾತ್ರ ಬಂಧನ ಸಾಧ್ಯ ಎಂದರು. ಆದರೆ, ನೀವು ನೀಡಿರುವ ರಾಜಿನಾಮೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಗರ ಪೊಲೀಸ್ ಆಯುಕ್ತರ ಮೇಲೆ ನೀವು ಆರೋಪ ಮಾಡಿರುವ ಕಾರಣ ನಿಷ್ಪಕ್ಷಪಾತ ತನಿಖೆಗಾಗಿ ಸಿಐಡಿಗೆ ವಹಿಸಲಾಗಿದೆ. ತನಿಖೆ ನಡೆದ ನಂತರ ಸತ್ಯ ಬಯಲಾಗಲಿದೆ ಎಂದು ಜಾರ್ಜ್ ಹೇಳಿದರು.
ನನ್ನನ್ನು ಬಂಧಿಸಿ ಲಾಕಪ್‌ನಲ್ಲಿಟ್ಟ ಸಬ್ ಇನ್ಸ್‌ಪೆಕ್ಟರ್‌ಕ್ರಮ ಸರಿಯಲ್ಲ. ನನ್ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದರೆ ಅದರಿಂದ ನನಗಾದ ಅನ್ಯಾಯವೂ ನ್ಯಾಯಾಲಯದ ಗಮನಕ್ಕೆ ಬರುತ್ತದೆ. ನೊಂದ ಮಹಿಳೆಯರಿಗೂ ನ್ಯಾಯ ಸಿಗುತ್ತದೆ. ಇಂತಹ ಪರಿಸ್ಥಿತಿ ಎದುರಿಸುವ ಮಹಿಳೆಯರೆಲ್ಲರಿಗೂ ನ್ಯಾಯ ಸಿಗುತ್ತದೆ ಎಂದು ರವೀಂದ್ರನಾಥ್ ಹೇಳಿದರು.
ಆರೋಪ ಇದ್ದಾಗ ಐಪಿಎಸ್ ಹುದ್ದೆಯಲ್ಲಿರುವುದು ಒಳ್ಳೆಯದಲ್ಲ. ನನಗೆ ಐಪಿಎಸ್ ಬೇಕಿಲ್ಲ. ನಾನು ಕೆಲಸ ಬಿಟ್ಟು ವೈದ್ಯಕೀಯ ವೃತ್ತಿಯನ್ನು ಮುಂದುವರಿಸುತ್ತೇನೆ ಎಂದು ಅವರು ಹೇಳಿದರು.

ಕೆಎಸ್‌ಆರ್‌ಪಿ ಸಿಬ್ಬಂದಿ ಪ್ರತಿಭಟನೆ
ಬೆಂಗಳೂರು: ಕೆಎಸ್‌ಆರ್‌ಪಿ ಸಿಬ್ಬಂದಿ ಪ್ರತಿಭಟನೆ ಹಿನ್ನೆಲೆಯಲ್ಲಿ ಕೋರಮಂಗಲ ಸುತ್ತಮುತ್ತಲಿನ ರಸ್ತೆಗಳಲ್ಲಿ ಬುಧವಾರ ರಾತ್ರಿ ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು.
ಕೋರಮಂಗಲ 3ನೇ ಬ್ಲಾಕ್ 8ನೇ ಮುಖ್ಯರಸ್ತೆ ಕೃಪಾನಿಧಿ ಕಾಲೇಜು ಬಳಿ ಎಡಿಜಿಪಿ ರವೀಂದ್ರನಾಥ್ ಅವರಿಗೆ ಬೆಂಬಲ ಸೂಚಿಸಿ ನೂರಾರು ಜನ ಪ್ರತಿಭಟನೆ ನಡೆಸಿದರು. ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನಗಳು ನಿಧಾನಗತಿಯಲ್ಲಿ ಚಲಿಸುತ್ತಿದ್ದವು. ಅಲ್ಲದೇ ಈ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು. ರಾತ್ರಿ 10 ಗಂಟೆ ಸುಮಾರಿಗೆ ಖಾಸಗಿ ಟ್ರಾವೆಲ್ಸ್‌ಗೆ ಸೇರಿದ ವಾಹನಕ್ಕೆ ಕಲ್ಲು ತೂರಲಾಯಿತು. ರಾತ್ರಿ 11 ಗಂಟೆಯಾದರೂ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬಂದಿರಲಿಲ್ಲ. ಹಲವು ವಾಹನಗಳಿಗೆ ಬದಲಿ ಮಾರ್ಗಗಳಲ್ಲಿ ಸಂಚರಿಸಲು ಅವಕಾಶ ನೀಡಲಾಯಿತು.

ಹಿರಿಯ ಅಧಿಕಾರಿಗಳ ಭೇಟಿ
ಪ್ರತಿಭಟನೆ ಹಿಂತೆಗೆಯಲು ನಿರಾಕರಿಸಿದ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಕಮಲ್ ಪಂಥ್, ದಯಾನಂದ, ಜಂಟಿ ಪೊಲೀಸ್ ಆಯುಕ್ತ ಶರಶ್ಚಂದ್ರ, ಡಿಸಿಪಿ ರೇವಣ್ಣ, ಹರ್ಷ, ಪವಾರ್, ಕೆಎಸ್‌ಆರ್‌ಪಿ ಕಮಾಂಡೆಂಟ್ ಸೋನಿಯಾ ನಾರಂಗ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನಕಾರರ ಮನವೋಲಿಸಲು ಯತ್ನಿಸಿದರು. ಕೊನೆಗೆ ರಾತ್ರಿ 11 ಗಂಟೆಗೆ ಹೊತ್ತಿಗೆ ಬಹುತೇಕ ಮಂದಿ ಪ್ರತಿಭಟನೆ ಕೈ ಬಿಟ್ಟು ಮನೆಗೆ ಮರಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement