ಅದ್ಧೂರಿ ಮದುವೆಗೆ ಇನ್ನು ತೆರಿಗೆ ಬಿಸಿ
ಸಾಮೂಹಿಕ, ಸರಳ ವಿವಾಹಕ್ಕೆ ಪ್ರೋತ್ಸಾಹ, ದುಂದುವೆಚ್ಚದ ಮದುವೆ ನಿಯಂತ್ರಣ ಉದ್ದೇಶ
ರು. 5 ಲಕ್ಷಕ್ಕೂ ಅಧಿಕ ಹಣ ವೆಚ್ಚವಾಗುವ ಮದುವೆಗೆ ಅಥವಾ ಸಾವಿರಕ್ಕಿಂತ ಹೆಚ್ಚು ಅತಿಥಿಗಳಿದ್ದರೆ ತೆರಿಗೆ
1976ರ ಕರ್ನಾಟಕ ಮದುವೆ ನಿಯಂತ್ರಣ ಕಾಯಿದೆ ತಿದ್ದುಪಡಿ ತರಲು ಸರ್ಕಾರ ಆಲೋಚನೆ
ಸಾಮೂಹಿಕ, ಸರಳ ವಿವಾಹಕ್ಕೆ ಪ್ರೋತ್ಸಾಹ, ದುಂದುವೆಚ್ಚದ ಮದುವೆ ನಿಯಂತ್ರಣ ಉದ್ದೇಶ
ಕ.ಪ್ರ.ವಾರ್ತೆ ಬೆಂಗಳೂರು ಮೇ 29
ಮದುವೆ ಮಾಡುತ್ತಿದ್ದೀರಾ? ಹಾಗಿದ್ದರೆ ಹುಷಾರ್! ಸಾವಿರಕ್ಕೂ ಅಧಿಕ ಅತಿಥಿಗಳು ಬಂದರೆ ಅಥವಾ 5 ಲಕ್ಷಕ್ಕೂ ಅಧಿಕ ಹಣ ವೆಚ್ಚ ಮಾಡಿದರೆ ತೆರಿಗೆ ತೆರಬೇಕಾಗುತ್ತದೆ.
ಹೌದು, ಇನ್ನು ಮುಂದೆ ಅದ್ಧೂರಿ ಮದುವೆಗೆ ಕಡಿವಾಣ ಬೀಳಲಿದೆ. ಅದ್ಧೂರಿ ಮದುವೆ ನಿಲ್ಲಿಸುವುದಿಲ್ಲವಾದರೂ ಅಂತಹ ಮದುವೆ ಮಾಡುವವರು ಸರ್ಕಾರಕ್ಕೆ ಭಾರಿ ಪ್ರಮಾಣದಲ್ಲಿ ತೆರಿಗೆ ಕಟ್ಟಬೇಕಾಗುತ್ತದೆ. ರಾಜ್ಯ ಸರ್ಕಾರ ಇದಕ್ಕಾಗಿಯೇ ಕಾಯಿದೆಗೆ ತಿದ್ದುಪಡಿ ತರುತ್ತಿದೆ. ಸಾಮೂಹಿಕ, ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡುವುದು, ದುಂದುವೆಚ್ಚದ ಮದುವೆಗಳಿಗೆ ನಿಯಂತ್ರಣ ಹಾಕುವುದೇ ಈ ತಿದ್ದುಪಡಿ ಉದ್ದೇಶ.
ಕರ್ನಾಟಕ ಮದುವೆ ನಿಯಂತ್ರಣ ಕಾಯಿದೆ 1976ಕ್ಕೆ ತಿದ್ದುಪಡಿ ತರಲು ಸರ್ಕಾರ ಆಲೋಚಿಸುತ್ತಿದ್ದು, ಜೂನ್-ಜುಲೈನಲ್ಲಿ ನಡೆಯುವ ವಿಧಾನಮಂಡಲ ಅಧಿವೇಶನದಲ್ಲೇ ಈ ತಿದ್ದುಪಡಿ ಮಂಡನೆಯಾಗುವ ನಿರೀಕ್ಷೆ ಇದೆ.
ದುಂದುವೆಚ್ಚ, ವೈಭವದ ಮದುವೆಗೆ ಕಡಿವಾಣ ಹಾಕಬೇಕು ಎಂದು ಜನಪ್ರತಿನಿಧಿಗಳು ಪಕ್ಷಾತೀತವಾಗಿ ಒತ್ತಾಯ ಮಾಡುತ್ತಿದ್ದಾರೆ. ಸಾರ್ವಜನಿಕರಿಂದಲೂ ಇದೇ ಒತ್ತಡ ಇದೆ. ಕೇರಳದಲ್ಲಿ ಭರ್ಜರಿ ಮದುವೆಗೆ ಕಡಿವಾಣ ಇದೆ. ಅದೇ ರೀತಿ ರಾಜ್ಯದಲ್ಲೂ ಕಾಯಿದೆ ಜಾರಿ ಮಾಡಿ ದುಂದುವೆಚ್ಚ ಮದುವೆಗೆ ಕಡಿವಾಣ ಹಾಕಲಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಟಿ.ಬಿ. ಜಯಚಂದ್ರ ಸುದ್ದಿಗಾರರಿಗೆ ಗುರುವಾರ ತಿಳಿಸಿದರು.
ತೆರಿಗೆ ಕ್ರಮ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ನಡೆಯುವ ಮದುವೆಗಳಿಗೆ ಮಾತ್ರ ಅನ್ವಯ. ಈ ತೆರಿಗೆ ಹಣವನ್ನು 'ವಿವಾಹ ನಿಧಿ'ಯಲ್ಲಿ ಇರಿಸಲಾಗುತ್ತದೆ. ಸರಳ ವಿವಾಹ, ಸಾಮೂಹಿಕ ವಿವಾಹ ಆಗುವವರಿಗೆ ಮಾಂಗಲ್ಯ ನಿಧಿ ಯೋಜನೆಯ ಮೂಲಕ ತಲಾ 25 ಸಾವಿರ ನೀಡಲಾಗುತ್ತದೆ. ಅಂತರ್ಜಾತಿ ಮದುವೆ ಮಾಡಿಕೊಂಡವರಿಗೂ ಹೆಚ್ಚಿನ ಹಣ ನೀಡಲಾಗುತ್ತದೆ. ಈ ಎಲ್ಲದ್ದಕ್ಕೂ ನಿಯಮಗಳನ್ನು ಕಾಯಿದೆ ಜಾರಿಯಾಗುವ ಮುನ್ನ ಸಾರ್ವಜನಿಕವಾಗಿ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ ಎಂದು ವಿವರಿಸಿದರು.
ಅದ್ಧೂರಿ ಮದುವೆಗಳು ಇದೀಗ ಪ್ರತಿಷ್ಠೆಯಾಗುತ್ತಿವೆ. ಜನರು ವೈಭವದ ಮದುವೆ ಮಾಡಿದರಷ್ಟೇ ತಮ್ಮ ಘನತೆ ಹೆಚ್ಚುತ್ತದೆ ಎಂದುಕೊಳ್ಳುತ್ತಾರೆ. ಆದರೆ ಸರಳ ಹಾಗೂ ಅಂತರ್ಜಾತಿ ವಿವಾಹಗಳಿಗೆ ಆದ್ಯತೆ ನೀಡಬೇಕಿದೆ ಎಂದರು.