ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮುಂದುವರಿದ ಪೊಲೀಸ್ ಜಗಳ

ಎಡಿಜಿಪಿ ಪಿ.ರವೀಂದ್ರನಾಥ ತಾವಾಗಿಯೇ ಲಾಕಪ್‌ನ ಒಳಗೆ ಹೋಗಿ ಕುಳಿತಿದ್ದಾರೆ..!

Srinivasa Murthy VN
Updated On : 30 May 2014, 4:02 am

ರವೀಂದ್ರನಾಥ್ ತಾವಾಗಿಯೇ ಲಾಕಪ್‌ಗೆ ಹೋದರು: ಪೊಲೀಸ್ ಆಯುಕ್ತ ಔರಾದ್ಕರ್
ಐಪಿಎಸ್ ಅಧಿಕಾರಿ ಪರ ರಾಜ್ಯಾದ್ಯಂತ  ಸಾರ್ವಜನಿಕರ, ಕುಟುಂಬ ಸದಸ್ಯರ ಪ್ರತಿಭಟನೆ
ಕ.ಪ್ರ. ವಾರ್ತೆ ಬೆಂಗಳೂರು ಮೇ 29

ಎಡಿಜಿಪಿ ಪಿ.ರವೀಂದ್ರನಾಥ ತಾವಾಗಿಯೇ ಲಾಕಪ್‌ನ ಒಳಗೆ ಹೋಗಿ ಕುಳಿತಿದ್ದಾರೆ..!
ರವೀಂದ್ರನಾಥ್ ಅವರು ನಿರಂತರವಾಗಿ ತಮ್ಮ ಮೇಲೆ ಆರೋಪ ಮಾಡುತ್ತಿದ್ದರೂ ಎರಡು ದಿನಗಳಿಂದ ಘಟನೆ ಬಗ್ಗೆ ಸುಮ್ಮನಿದ್ದ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಗುರುವಾರ ಮಾತನಾಡಿದ್ದಾರೆ.
ಎಡಿಜಿಪಿ ದರ್ಜೆಯ ಐಪಿಎಸ್ ಅಧಿಕಾರಿಯೆಂದು ತಿಳಿದಿದ್ದರೂ ಪ್ರಕರಣ ದಾಖಲಾಗುವ ಮುನ್ನವೇ ಒಬ್ಬ
ಎಸ್‌ಐ ರವೀಂದ್ರನಾಥ್ ಅವರನ್ನು ಲಾಕಪ್‌ಗೆ ಹಾಕಿದ್ದು ಸರಿಯೇ? ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಔರಾದ್ಕರ್, 'ಇನ್ಸ್‌ಪೆಕ್ಟರ್ ಹಾಗೂ ಎಸ್‌ಐ ಹೇಳುವ ಪ್ರಕಾರ, ರವೀಂದ್ರನಾಥ್ ಅವರೇ ಲಾಕಪ್‌ನೊಳಗೆ ತೆರಳಿದ್ದಾರೆ. ಹೀಗಾಗಿ ಇದರಲ್ಲಿ ಪೊಲೀಸರು ಹಾಗೂ ನನ್ನ ಪಾತ್ರ ಏನು ಇಲ್ಲ.
ಅಂದು ಯುವತಿಯರ ದೂರಿನ ಮೇಲೆ ರವೀಂದ್ರನಾಥ ಅವರನ್ನು ಪೊಲೀಸರು ಠಾಣೆಗೆ ಕರೆ ತಂದಿದ್ದರು. ಅಲ್ಲಿಯವರೆಗೂ ಅವರು ಐಪಿಎಸ್ ಅಧಿಕಾರಿ ಎನ್ನುವುದು ಎಸ್‌ಐಗೆ ತಿಳಿದಿರಲಿಲ್ಲ. ಠಾಣೆಗೆ ಬಂದು ತಾವು ಎಡಿಜಿಪಿ ಎಂದು ಗುರುತಿನ ಚೀಟಿ ತೋರಿಸಿದ ರವೀಂದ್ರನಾಥ್ ಲಾಕಪ್‌ನೊಳಗೆ ತಾವಾಗಿಯೇ ಹೋಗಿದ್ದಾರೆ. ಘಟನೆ ವೇಳೆ ನಾನು ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಭಾಗಿಯಾಗಿದ್ದೆ. ಮಧ್ಯಾಹ್ನ 1.15ರ ಸುಮಾರಿಗೆ ಘಟನೆ ನಡೆದಿರುವುದು ಗೊತ್ತಾಗಿದೆ. ಹೀಗಾಗಿ ಘಟನೆಗೆ ನನಗೂ ಯಾವುದೇ ಸಂಬಂಧವಿಲ್ಲ ಎಂದು ಔರಾದ್ಕರ್ ಸ್ಪಷ್ಟನೆ ನೀಡಿದ್ದಾರೆ.
ನನ್ನ ವಿರುದ್ಧ ರವೀಂದ್ರನಾಥ ಅವರು ಆಪಾದನೆ ಮಾಡುತ್ತಿರುವುದಕ್ಕೆ ಕಾರಣ ಏನು ಎನ್ನುವುದು ತಿಳಿದಿಲ್ಲ. ಒಂದು ಹೇಳಿಕೆಗೆ, ಮತ್ತೊಂದು ಹೇಳಿಕೆ ನೀಡುವುದರ ಮೂಲಕ ವಿವಾದ ಹೆಚ್ಚುತ್ತಾ ಹೋಗುತ್ತದೆ. ಹೀಗಾಗಿ ಅದರ ಬಗ್ಗೆ ಏನನ್ನು ಹೇಳಲು ಇಚ್ಛಿಸುವುದಿಲ್ಲ.
ಮಹಿಳೆಯರ ಮೇಲೆ ದೌರ್ಜನ್ಯ ನಡೆದಿರುವ ಬಗ್ಗೆ ಅವರು ವಿವರಿಸಿರುವ ಹಿನ್ನೆಲೆಯಲ್ಲಿ ಐಪಿಸಿ ಕಾಯ್ದೆ 534ಅನ್ವಯ ಪ್ರಕರಣ ದಾಖಲಿಸಲಾಗಿದೆ. ಸರ್ಕಾರ ಪ್ರಕರಣದ ಸಮಗ್ರ ತನಿಖೆಗೆ ಸಿಐಡಿಗೆ ವಹಿಸಿರುವುದರಿಂದ ಸತ್ಯಾಸತ್ಯತೆ ಹೊರಗೆ ಬರಲಿದೆ ಎಂದು ಆಯುಕ್ತ ರಾಘವೇಂದ್ರ ಔರಾದ್ಕರ್ ತಿಳಿಸಿದರು.

ಪ್ರತಿಭಟನೆ ಹಿಂದಕ್ಕೆ
ಕೆಎಸ್‌ಆರ್‌ಪಿ ಎಡಿಜಿಪಿ ಪಿ.ರವೀಂದ್ರನಾಥ ಅವರಿಗೆ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸುತ್ತಿದ್ದ ಕೆಎಸ್‌ಆರ್‌ಪಿ ಸಿಬ್ಬಂದಿ ಗುರುವಾರ ಹಿಂದಕ್ಕೆ ತೆಗೆದುಕೊಂಡಿದ್ದಾರೆ. ನಗರದಲ್ಲಿರುವ ನಾಲ್ಕು ಕೆಎಸ್‌ಆರ್‌ಪಿ ತುಕಡಿಗಳಲ್ಲಿ 1,200 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ. ವರ್ಗಾವಣೆ ಬಳಿಕ ಗುರುವಾರವೂ ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದರು. ಹೀಗಾಗಿ, ಗುರುವಾರ ಬೆಳಗ್ಗೆಯಿಂದಲೇ ಸುಮಾರು 300ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಹಾಗೂ ಹಿರಿಯ ಅಧಿಕಾರಿಗಳು ಕೆಎಸ್‌ಆರ್‌ಪಿ ಮೈದಾನ ಹಾಗೂ ಸುತ್ತ ಮುತ್ತ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ನಗರದ ರಿಚ್ಮಂಡ್ ಟೌನ್, ಕೋರಮಂಗಲದ 2 ಹಾಗೂ ಕೂಡ್ಲುವಿನಲ್ಲಿರುವ 1 ಸೇರಿ ಒಟ್ಟು ನಾಲ್ಕು ಕೆಎಸ್‌ಆರ್‌ಪಿ ತುಕಡಿಗಳ ಸಿಬ್ಬಂದಿ ಸಮವಸ್ತ್ರ ಧರಿಸಿ ಆಯಾ ಮೈದಾನದಲ್ಲಿ ಕರ್ತವ್ಯ ನಿರ್ವಹಿಸುವಂತೆ ಕೆಎಸ್‌ಆರ್‌ಪಿ ಕಮಾಂಡೆಂಟ್‌ಗಳು ಆದೇಶ ನೀಡಿದ್ದರು. ಪ್ರತಿಭಟನೆ ನಡೆಸಿದರೆ ಶಿಸ್ತುಕ್ರಮದ ಎಚ್ಚರಿಕೆ ಹಿನ್ನೆಲೆಯಲ್ಲಿ ಎಲ್ಲ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಸಾಹೇಬ್ರು ಒಳ್ಳೆಯವರು
ಎಡಿಜಿಪಿ ಪಿ.ರವೀಂದ್ರನಾಥ ತುಂಬಾ ಸರಳ ವ್ಯಕ್ತಿ. ಕೆಎಸ್‌ಆರ್‌ಪಿ ಸಿಬ್ಬಂದಿಗೆ ಹಲವು ಸೌಲಭ್ಯ ದೊರಕಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ಪಡೆಯಲು ನೆರವಾಗಿದ್ದಾರೆ. ನನ್ನ ತಂದೆಗೆ ಕ್ಯಾನ್ಸರ್ ಚಿಕಿತ್ಸೆ ಪಡೆಯಲು ನೆರವು ನೀಡಿದ್ದಾರೆ. ಇಲ್ಲಿಗೆ ಬಂದ ಬಳಿಕ ಕೆಎಸ್‌ಆರ್‌ಪಿ ಅಭಿವೃದ್ಧಿ ಕಂಡಿದ್ದು ಕೆಎಸ್‌ಆರ್‌ಪಿ ಸಿಬ್ಬಂದಿ ತಾವು ಪೊಲೀಸರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆದರೆ, ರವೀಂದ್ರನಾಥ ಅವರ ಬೆಳವಣಿಗೆ ಸಹಿಸದ ಕೆಲವರು ಅವರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಕೆಎಸ್‌ಆರ್‌ಪಿ ಸಿಬ್ಬಂದಿ ತಿಳಿಸಿದರು.

ಸಾರ್ವಜನಿಕರಿಗೆ ತೊಂದರೆ, ಗಲಾಟೆ, ಪ್ರತಿಭಟನೆ ಮಾಡಲು ಪೊಲೀಸರಿಗೆ ಅಧಿಕಾರವಿಲ್ಲ. ಬುಧವಾರದಿಂದ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಗಮನಹರಿಸುತ್ತಿದ್ದೇವೆ. ಪ್ರತಿಭಟನೆಯನ್ನು ಹೀಗೆ ಮುಂದುವರಿಸಿದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಹೀಗಿರುವಾಗ ಕೆಎಸ್‌ಆರ್‌ಪಿ ಸಿಬ್ಬಂದಿ ಪ್ರತಿಭಟನೆ ನಡೆಸಿರುವುದು ದುರ್ದೈವದ ಸಂಗತಿ. ಇನ್ನು ಪ್ರತಿಭಟನೆಯಲ್ಲಿ ಕೆಎಸ್‌ಆರ್‌ಪಿಗಿಂತಲೂ ಹೆಚ್ಚಾಗಿ ಸ್ಥಳೀಯರು, ಕಿಡಿಗೇಡಿಗಳೇ ಇದ್ದರು. ಹೀಗಾಗಿ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
-ಕೆ.ಜೆ.ಜಾರ್ಜ್, ಗೃಹ ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement