ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರವೀಂದ್ರನಾಥ್‌ಗೆ ಪೇದೆಗಳ ಬೆಂಬಲ

ಕಾಫಿ ಶಾಪ್‌ನಲ್ಲಿ ಯುವತಿಯ ಫೋಟೋ ತೆಗೆದಿದ್ದಾರೆಂಬ ಪ್ರಕರಣಕ್ಕೆ ಸಂಬಂಧಿಸಿ ಐಪಿಎಸ್..

ಗುಲ್ಬರ್ಗದ ತಾಜಸುಲ್ತಾನಪುರದಲ್ಲಿರುವ ಕೆಎಸ್‌ಆರ್‌ಪಿ ಬಟಾಲಿಯನ್ ಕಚೇರಿಯಲ್ಲೇ ಸಿಬ್ಬಂದಿ ಗುರುವಾರ ಪ್ರತಿಭಟನೆ ನಡೆಸಿದರು.
Srinivasa Murthy VN
Updated On : 30 May 2014, 1:55 am

ಕನ್ನಡಪ್ರಭ ವಾರ್ತೆ ಬೆಂಗಳೂರು ಮೇ 29
ಕಾಫಿ ಶಾಪ್‌ನಲ್ಲಿ ಯುವತಿಯ ಫೋಟೋ ತೆಗೆದಿದ್ದಾರೆಂಬ ಪ್ರಕರಣಕ್ಕೆ ಸಂಬಂಧಿಸಿ ಐಪಿಎಸ್ ಅಧಿಕಾರಿ ಡಾ.ರವೀಂದ್ರನಾಥ್ ಪರ ಇಂಡಿಯನ್ ರಿಸರ್ವ್ ಪೊಲೀಸ್ ಪೇದೆಗಳು ಗುರುವಾರ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿದ್ದಾರೆ.
ಮುನಿರಾಬಾದ್‌ನಲ್ಲಿ 1,500ಕ್ಕೂ ಹೆಚ್ಚು ಪೇದೆಗಳು ರಾಷ್ಟ್ರೀಯ ಹೆದ್ದಾರಿ-50 ಹಾಗೂ 63ರಲ್ಲಿ ಡಿಸಿಪಿ ರವಿಕಾಂತೇಗೌಡ ಪ್ರತಿಕೃತಿ ದಹಿಸಿ, ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲವು ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪೇದೆಗಳಿಗೆ ಅವರ ಕುಟುಂಬಸ್ಥರೂ ಸಾಥ್ ನೀಡಿದ್ದು ವಿಶೇಷ.
ಪ್ರತಿಭಟನೆ ವೇಳೆ ಪೊಲೀಸ್ ಪೇದೆಯೊಬ್ಬ ತಮ್ಮ ಮೇಲಧಿಕಾರಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ಅಸಭ್ಯವಾಗಿ ವರ್ತಿಸಿದ ಪೇದೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪಟ್ಟುಹಿಡಿದರು. ರಸ್ತೆಗೆ ನುಗ್ಗಲು ಯತ್ನಿಸಿದಾಗ ಐಆರ್‌ಪಿಯ ಹಿರಿಯ ಅಧಿಕಾರಿಗಳು ಅವರನ್ನು ಸಮಾಧಾನಿಸಿ, ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ತಡೆದರು.
ಗುಲ್ಬರ್ಗದ ತಾಜ ಸುಲ್ತಾನಪುರ ಬಳಿ ಇರುವ ಕೆಎಸ್‌ಆರ್‌ಪಿ ಬಟಾಲಿಯನ್ ಸಿಬ್ಬಂದಿ ತಮ್ಮ ಬಟಾಲಿಯನ್‌ನ ಆವರಣದಲ್ಲೇ ಪ್ರತಿಭಟನೆ ನಡೆಸಿದರು. ಡಾ. ರವೀಂದ್ರನಾಥ್ ಹೆಸರನ್ನು ವಿನಾಕಾರಣ ವಿವಾದದಲ್ಲಿ ಎಳೆದು ತರಲಾಗಿದೆ ಎಂದು ಆರೋಪಿಸಿದರು. ಮಂಡ್ಯದಲ್ಲಿ ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಪ್ರಾಮಾಣಿಕ ಅಧಿಕಾರಿ ಮೇಲೆ ಸಲ್ಲದ ಆರೋಪ ಹೊರಿಸಿ ಹಿಂಸೆ ನೀಡಲಾಗುತ್ತಿದೆ. ಇದಕ್ಕೆ ಹಿರಿಯ ಅಧಿಕಾರಿಗಳ ಕುಮ್ಮಕ್ಕೂ ಇದೆ ಎಂದು ದೂರಿದರು. ಹಾಸನದ ಕೆಎಸ್‌ಆರ್‌ಪಿ 11ನೇ ಬಟಾಲಿಯನ್‌ನ ಸಿಬ್ಬಂದಿ ಕಮಾಂಡೆಂಟ್ ಕಚೇರಿ ಎದುರು ಬೆಂಗಳೂರು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದಕರ್, ಪೊಲೀಸ್ ಅಧಿಕಾರಿ ರವಿಕಾಂತೇಗೌಡ ವಿರುದ್ಧ ಘೋಷಣೆ ಕೂಗಿದರು. ಪ್ರಕರಣವನ್ನು ಸಿಐಡಿಗೆ ವಹಿಸಿ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದರು. ಮೈಸೂರಿನ ಕುರುಬಾರಹಳ್ಳಿ ವೃತ್ತದಲ್ಲಿ ಕೆಎಸ್‌ಆರ್‌ಪಿ ಸಿಬ್ಬಂದಿ ಹಾಗೂ ಕುಟುಂಬದವರು ಪ್ರತಿಭಟಿಸಿದರು.  

ಗೃಹ ಸಚಿವ ಸ್ಥಾನಕ್ಕೆ ಜಾರ್ಜ್ ಅಯೋಗ್ಯ: ಶೆಟ್ಟರ್
ಹುಬ್ಬಳ್ಳಿ:
ಗೃಹ ಸಚಿವ ಸ್ಥಾನಕ್ಕೆ ಕೆ.ಜೆ. ಜಾರ್ಜ್ ಅಸಮರ್ಥ, ಅಯೋಗ್ಯರಾಗಿದ್ದಾರೆ. ತಕ್ಷಣವೇ ಅವರನ್ನು ಬದಲಾಯಿಸಬೇಕು ಎಂದು ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಒತ್ತಾಯಿಸಿದ್ದಾರೆ. ಎಡಿಜಿಪಿ ಡಾ.ರವೀಂದ್ರನಾಥ್ ಪ್ರಕರಣ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿ. ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಗೃಹ ಸಚಿವ ಜಾರ್ಜ್ ಅವರಿಗೆ ಆಡಳಿತದಲ್ಲಿ ಹಿಡಿತವಿಲ್ಲ. ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಜನಸಾಮಾನ್ಯರ ರಕ್ಷಣೆ ಮಾಡಬೇಕಿರುವವರೇ ಬೀದಿಗಿಳಿದು ನ್ಯಾಯಕ್ಕಾಗಿ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾಲ್ಕು ಗೋಡೆಗಳ ಮಧ್ಯೆ ನಡೆಯಬೇಕಿದ್ದ ತನಿಖೆ ಬೀದಿರಂಪವಾಗಿ ಬದಲಾಗಿದೆ. ರಾಜ್ಯದಲ್ಲಿ ಸರ್ಕಾರ ಇದೆಯೋ ಅಥವಾ ಇಲ್ಲವೋ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ರವೀಂದ್ರನಾಥ್ ದೂರು
'ಆಯುಕ್ತ ರಾಘವೇಂದ್ರ ಔರಾದ್ಕರ್ ತನ್ನನ್ನು ಕೊಠಡಿಯೊಳಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದು, ಕಾರಿನಲ್ಲಿ ಡಿ.ಜಿ ಕಚೇರಿಗೆ ಬರುತ್ತೇನೆ ಎಂದರೆ ಕೂರಿಸಿಕೊಂಡಿಲ್ಲ. ಈ ಮೂಲಕ ಅವರು ಅಸ್ಪೃಷ್ಯತೆಯನ್ನುಜೀವಂತವಾಗಿಡಲು ಹೊರಟಿದ್ದಾರೆ' ಎಂದು ಎಡಿಜಿಪಿ ಡಾ.ಪಿ.ರವೀಂದ್ರನಾಥ್ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ದಾಖಲಿಸಿದ್ದಾರೆ. ಕೇಂದ್ರ ವಿಭಾಗದ ಡಿಸಿಪಿ ರವಿಕಾಂತೇಗೌಡ ಹಾಗೂ ಹೈಗ್ರೌಂಡ್ಸ್ ಎಸ್ಸೈ ರವಿ ಅವರ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಿಎಂ ಮಧ್ಯಪ್ರವೇಶಿಸಲಿ
ಗದಗ:
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೃಷ್ಟಿಯಾಗಿರುವ ಗೊಂದಲವನ್ನು ನಿವಾರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಸಿ.ಸಿ.ಪಾಟೀಲ ಆಗ್ರಹಿಸಿದ್ದಾರೆ. ಜನರ ರಕ್ಷಣೆ ಮಾಡಬೇಕಾದ ಇಲಾಖೆಯಲ್ಲೇ ಗೊಂದಲ ಉಂಟಾದರೆ, ಹತ್ತಾರು ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತದೆ. ಇನ್ನು ಪೊಲೀಸ್ ಸಿಬ್ಬಂದಿ ತಮ್ಮ ಸಮವಸ್ತ್ರ ಧರಿಸಿಯೇ ಪ್ರತಿಭಟನೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಏನಾಗುತ್ತಿದೆ ಎನ್ನುವುದೇ ಅರ್ಥವಾಗುತ್ತಿಲ್ಲ. ಸಮಸ್ಯೆ ಪರಿಹರಿಸಲು ರಾಜ್ಯಪಾಲರು ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಅತಿಯಾದ ಪ್ರಾಮಾಣಿಕತೆಯೇ ಮುಳುವಾಗಿದೆ
ಬೆಂಗಳೂರು:
'ನನ್ನ ತಂದೆ ಮುಗ್ಧರು. ತನಿಖೆಯ ಬಳಿಕ ಅದು ಸಾಬೀತಾಗುತ್ತದೆ. ಆದರೆ, ನನ್ನ ತಂದೆ ಅತಿಯಾದ ಪ್ರಾಮಾಣಿಕತೆಯೇ ಅವರಿಗೆ ಮುಳುವಾಗಿದೆ...'
ಎಡಿಜಿಪಿ ರವೀಂದ್ರನಾಥ್ ಅವರ ಮೊದಲನೇ ಮಗಳು ಕುಶಾಲ ರವೀಂದ್ರನಾಥ್ ಅವರ ಮಾತಿದು. ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ 2ನೇ ಪಿಯು ವ್ಯಾಸಂಗ ಮಾಡುತ್ತಿದ್ದಾರೆ. ಕುಶಾಲ ಸಹೋದರಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇವರು ತಂದೆ ಬಗ್ಗೆ ಬಹಿರಂಗವಾಗಿ ವಕಾಲತ್ತು ವಹಿಸಿದ್ದಾರೆ.ಕಾಫಿಶಾಪ್‌ನಲ್ಲಿ ಯುವತಿಯ ಆಕ್ಷೇಪಾರ್ಹ ಫೋಟೋ ಕ್ಲಿಕ್ಕಿಸಿ ಸಿಕ್ಕಿಬಿದ್ದಿರುವ ಕೆಎಸ್‌ಆರ್‌ಪಿ ಎಡಿಜಿಪಿ ರವೀಂದ್ರನಾಥ್  ಬೆಂಬಲಕ್ಕೆ ಕುಟುಂಬವೂ ಮುಂದಾಗಿದೆ.ಸಂಬಂಧಿಗಳು, ಸ್ನೇಹಿತರು, ಮಾಧ್ಯಮದವರಿಂದ ತುಂಬಿದ್ದ ಎಚ್‌ಎಸ್‌ಆರ್ ಬಡಾವಣೆಯ ಮನೆಯಲ್ಲಿ ಮಾತನಾಡಿದ ಕುಶಾಲ, ಇದೊಂದು 'ದುರ್ದೈವದ ಘಟನೆ. ದೂರು ನೀಡಿದ ಯುವತಿಯನ್ನು ಭೇಟಿ ಮಾಡಿ ಮಾತನಾಡಲು ಇಚ್ಛಿಸುತ್ತೇನೆ. ನಾನು ಒಬ್ಬ ಮಹಿಳೆಯಾಗಿ ಮಹಿಳೆಯರ ನೋವು, ಭಾವನೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲೆ. ಆದರೆ, ಅಲ್ಲಿ ನಡೆದ ಘಟನೆ ಏನು ಎನ್ನುವುದನ್ನು ತಿಳಿದುಕೊಳ್ಳಲು ಆಕೆಯನ್ನು ಭೇಟಿ ಮಾಡಲು ಕಾಯುತ್ತಿದ್ದೇನೆ. ಅದಕ್ಕಾಗಿ ಸಾಮಾಜಿಕ ತಾಣ ಫೇಸ್‌ಬುಕ್‌ನಲ್ಲಿ ಹುಡುಕಾಟ ನಡೆಸಿದೆ ಸಾಧ್ಯವಾಗಿಲ್ಲ. ಆದರೆ, ಖಂಡಿತ ಭೇಟಿ ಮಾಡುತ್ತೇನೆ' ಎಂದು ಕುಶಾಲ ಹೇಳಿದರು.'ಸಾರ್ವಜನಿಕ ಸ್ಥಳಗಳಲ್ಲಿ ಫೋಟೋ ಕ್ಲಿಕ್ಕಿಸುವುದು ಅಪರಾಧ ಎನ್ನುವುದನ್ನು ಕೇಳಿ ಆಘಾತಗೊಂಡಿದ್ದೇನೆ. ಸೋಮವಾರ ರಾತ್ರಿ ತಂದೆ ಘಟನೆ ಬಗ್ಗೆ ವಿವರಿಸಿದಾಗ ಇಡೀ ಕುಟುಂಬ ತೀವ್ರ ಆಘಾತಗೊಂಡಿತ್ತು. ಆದರೆ, ಈ ಬಗ್ಗೆ ವಿಸ್ತೃತವಾಗಿ ಮಾಹಿತಿ ನೀಡಿದ ತಂದೆ ಕಾನೂನು ಸಮರದಲ್ಲಿ ತಾನು ನಿರಪರಾಧಿ ಎಂದು ಸಾಬೀತಾಗುತ್ತದೆ ಎಂದರು. ನನ್ನ ತಂದೆ ಏನು ಎನ್ನುವುದು ನನ್ನ ಸ್ನೇಹಿತರಿಗೆ ಗೊತ್ತು. ಘಟನೆ ವಿಚಾರ ತಿಳಿದು ಸ್ನೇಹಿತರು ಫೋನ್ ಕರೆ ಮಾಡಿ ಆಘಾತ ವ್ಯಕ್ತಪಡಿಸಿದರು.

ಪತ್ನಿಗೆ ಅಕಾಶವೇ ಕಳಚಿ ಬಿದ್ದಂತಾಗಿದೆ
'ನನ್ನ ಪತಿ ಈ ರೀತಿ ಮಾಡುತ್ತಾರೆ ಎನ್ನುವುದನ್ನು ಊಹಿಸಿಕೊಳ್ಳುವುದು ಅಸಾಧ್ಯ. ಅವರು ಪ್ರಾಮಾಣಿಕ ಹಾಗೂ ದಕ್ಷ, ಪಾರದರ್ಶಕ ಅಧಿಕಾರಿ ಎನ್ನುವುದು ಗೊತ್ತಿದೆ. ಇದೇ ಕಾರಣಕ್ಕೆ ಇಲಾಖೆಯಲ್ಲಿ ಹಲವು  ಶತ್ರುಗಳನ್ನು ಸಂಪಾದಿಸಿದ್ದಾರೆ. ಆದರೂ, ಇಂತಹ ಗಂಭೀರ ಕಪೋಲಕಲ್ಪಿತ ಆರೋಪ ಅವರ ಮೇಲೆ ಬರುತ್ತದೆ ಎಂದು ನಾನು ಊಹಿಸಿರಲಿಲ್ಲ' ಎಂದು ರವೀಂದ್ರನಾಥ್ ಪತ್ನಿ ಶ್ರೀದೇವಿ ತಿಳಿಸಿದರು.
'ರವೀಂದ್ರನಾಥ  ಗೌರವಾನ್ವಿತ ಅವಿಭಕ್ತ ಕುಟುಂಬ ಹಿನ್ನೆಲೆಯಿಂದ ಬಂದವರು. ಅವರಿಗೆ 6 ಜನ ಸಹೋದರಿಯರಿದ್ದಾರೆ. ಅದರಲ್ಲಿ ಮೂವರು ಕಿರಿಯ ಸಹೋದರಿಯರು. ಈ ಬಗ್ಗೆ ಸಹೋದ್ಯೋಗಿಗಳಿಗೆ, ಕಿರಿಯ, ಹಿರಿಯ ಸಹೋದ್ಯೋಗಿಗಳಿಗೆ ತಿಳಿದಿದೆ. ಹೀಗಾಗಿಯೇ ಅವರು ಭಾರಿ ಪ್ರಮಾಣದಲ್ಲಿ ಬೆಂಬಲ ಸೂಚಿಸುತ್ತಿದ್ದಾರೆ' ಎಂದು ಶ್ರೀದೇವಿ ಹೇಳಿದರು.

ಎಡಿಜಿಪಿ ರವೀಂದ್ರನಾಥ್ ಕಾಫಿ ಶಾಪ್‌ನಲ್ಲಿ ಯುವತಿಯರ ಫೋಟೋ ಕ್ಲಿಕ್ಕಿಸಿದ ಪ್ರಕರಣದ ಬಿಸಿ ಗುರುವಾರವೂ ಮುಂದುವರಿದಿದ್ದು, ರವೀಂದ್ರನಾಥ್ ಪರ ರಾಜ್ಯಾದ್ಯಂತ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಪತ್ನಿ, ಮಗಳು ಸಹ ರಕ್ಷಣೆಗೆ ಮುಂದಾಗಿದ್ದಾರೆ. ಶಿಸ್ತುಕ್ರಮದ ಎಚ್ಚರಿಕೆ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಪಿ ಪೊಲೀಸ್ ಸಿಬ್ಬಂದಿ ಪ್ರತಿಭಟನ ಹಿಂಪಡೆದಿದ್ದಾರೆ. ಎರಡು ದಿನಗಳಿಂದ ಸುಮ್ಮನಿದ್ದ ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್‌ಕರ್ ಮೊದಲ ಬಾರಿಗೆ ಪ್ರತಿಕ್ರಿಯಿಸಿ ರವೀಂದ್ರನಾಥ್ ತಾವಾಗಿಯೇ ಲಾಕಪ್ ಒಳಗೆ ಹೋಗಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ನನ್ನ ತಂದೆ ಮುಗ್ಧರು. ಆದರೆ, ಅವರ ಅತಿಯಾದ ಪ್ರಾಮಾಣಿಕತೆಯೇ ಅವರಿಗೆ ಮುಳುವಾಗಿದೆ...
-ಕುಶಾಲ, ರವೀಂದ್ರನಾಥ್ ಮಗಳು

ರವೀಂದ್ರನಾಥ್ ಅವರೇ ಲಾಕಪ್‌ನೊಳಗೆ ತೆರಳಿದ್ದಾರೆ. ಹೀಗಾಗಿ ಇದರಲ್ಲಿ ಪೊಲೀಸರು ಹಾಗೂ ನನ್ನ ಪಾತ್ರ ಏನು ಇಲ್ಲ.    
-ರಾಘವೇಂದ್ರ ಔರಾದ್ಕರ್, ಪೊಲೀಸ್ ಆಯುಕ್ತ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement