ಸಿಇಟಿ ಅಕ್ರಮ ಈ ಬಾರಿಯೂ ಸಕ್ರಮ
ಕೆಟ್ಟ ಮೇಲಾದರೂ ಬುದ್ಧಿ ಬರುತ್ತದೆ ಎಂದು ಭಾವಿಸುವುದು ಉನ್ನತ ಶಿಕ್ಷಣ ಇಲಾಖೆಯ ಮಟ್ಟಿಗೆ...
ಹೈದ್ರಾಬಾದ್ - ಕರ್ನಾಟಕ ಮೀಸಲು ನೆಪದಲ್ಲಿ ನಿಯಮ ಬದಲು ಮಾಡಿದ ಸರ್ಕಾರ
ದಾಖಲೆ ಪರಿಶೀಲನೆ ವೇಳೆ ಜಾತಿ, ವರ್ಗ ದಾಖಲೆ ತಿದ್ದಲು ಅನುಮತಿಸಿ ಆದೇಶ
7693 ವಿದ್ಯಾರ್ಥಿಗಳನ್ನು ಇಂತಹುದೇ ಎಡವಟ್ಟಲ್ಲಿ ಕಳೆದ ವರ್ಷ ಕೆಟಗರಿ ಬದಲಾಯಿಸಿದ್ದರು
-ರಾಜೀವ ಹೆಗಡೆ
ಬೆಂಗಳೂರು: ಕೆಟ್ಟ ಮೇಲಾದರೂ ಬುದ್ಧಿ ಬರುತ್ತದೆ ಎಂದು ಭಾವಿಸುವುದು ಉನ್ನತ ಶಿಕ್ಷಣ ಇಲಾಖೆಯ ಮಟ್ಟಿಗೆ ಹಸಿ ಸುಳ್ಳು!
ಕಳೆದ ವರ್ಷದ ಸಿಇಟಿ ಕೌನ್ಸೆಲಿಂಗ್ನಲ್ಲಿ ಮಾನ ಹರಾಜು ಹಾಕಿಕೊಂಡ ಮೇಲೂ ರಾಜ್ಯ ಸರ್ಕಾರ ಅಕ್ರಮಕ್ಕೆ ಅವಕಾಶ ಮಾಡಿಕೊಡುವಂತಹ ಮತ್ತೊಂದು ಸುತ್ತೋಲೆ ಹೊರಡಿಸಿದೆ. ದಾಖಲೆ ಪರಿಶೀಲನೆ ವೇಳೆ ಜಾತಿ, ವರ್ಗ ಅಥವಾ ಇತರೆ ದಾಖಲೆಗಳನ್ನು ತಿದ್ದಲು ಅನುಮತಿ ನೀಡಿ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಕಳೆದ ಕೌನ್ಸೆಲಿಂಗ್ನಲ್ಲಿ 7693 ವಿದ್ಯಾರ್ಥಿಗಳು ಕೆಟಗರಿ ಬದಲಾವಣೆ ಮಾಡಿದ್ದರು. ಕೆಲ ವಿದ್ಯಾರ್ಥಿಗಳು ಕಾನೂನು ಬಾಹಿರವಾಗಿಯೂ ಮಾಡಿದ್ದರು.
ಇದರಲ್ಲಿ 70 ವಿದ್ಯಾರ್ಥಿಗಳ ಜಾತಿ ಹಾಗೂ ಇತರೆ ದಾಖಲೆ ಬದಲಾವಣೆ ಕಾನೂನು ಬಾಹಿರ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿತ್ತು. ಇದೆಲ್ಲ ಅಕ್ರಮಗಳನ್ನು ತಿಳಿದಿರುವ ಅದೇ ಸಚಿವರು ಹಾಗೂ ಅಧಿಕಾರಿಗಳು ಮತ್ತೆ ಎಡವಲು ಹೊರಟಿರುವುದು ಸಾಕಷ್ಟು ಗುಮಾನಿಗೆ ಕಾರಣವಾಗಿದೆ. ಇದಕ್ಕೆ ಪೂರಕವೆಂಬಂತೆ ಕಳೆದ ವರ್ಷದ ಅಕ್ರಮವನ್ನು ಸಂಪೂರ್ಣವಾಗಿ ಮುಚ್ಚಿಹಾಕುವ ಪ್ರಯತ್ನ ನಡೆದಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿದ್ಯಾರ್ಥಿಗಳಿಗೆ ನೀಡಿರುವ ಮಾರ್ಗದರ್ಶಿ ಪುಸ್ತಕದಲ್ಲಿ ಹೇಳಿರುವುದಕ್ಕೆ ವಿರುದ್ಧವಾಗಿ ಈ ಸುತ್ತೋಲೆ ಹೊರಬಿದ್ದಿದೆ. ಅರ್ಜಿಯಲ್ಲಿ ಸಲ್ಲಿಸಿರುವ ಮಾಹಿತಿಯೇ ಅಂತಿಮ ಎಂದು ಪ್ರಾಧಿಕಾರ ಆ ನಂತರ ಹೊರಡಿಸಿದ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ. ಆದರೆ ಈಗ ಸಂಪೂರ್ಣ ಯುಟರ್ನ್ ತೆಗೆದುಕೊಂಡಿರುವ ಉನ್ನತ ಶಿಕ್ಷಣ ಇಲಾಖೆ ಬೇಕಾಬಿಟ್ಟಿ ನಡೆದುಕೊಳ್ಳಿ ಎಂಬ ಸಂದೇಶ ನೀಡಲು ಹೊರಟಿದೆ. ಅಷ್ಟಕ್ಕೂ ಇದಕ್ಕೆಲ್ಲ ನೆಪವಾಗಿದ್ದು ಕೇವಲ ಹೈದ್ರಾಬಾದ್-ಕರ್ನಾಟಕ ಮೀಸಲು ವಿಚಾರ. ಇದೊಂದಕ್ಕಾಗಿ ಸಂಪೂರ್ಣ ವ್ಯವಸ್ಥೆಯನ್ನೇ ಕುಲಗೆಡಿಸುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ.
ಹೈ-ಕ ಮೀಸಲು ನೆಪದಲ್ಲಿ ನಿಯಮ ಬದಲು: ಸಿಇಟಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಹೈದರಾಬಾದ್-ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಮೀಸಲು ನೀಡುವ ಬಗ್ಗೆ ಸ್ಪಷ್ಟ ಅಧಿಸೂಚನೆ ಹೊರಬಿದ್ದಿರಲಿಲ್ಲ. ಸಾಕಷ್ಟು ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಮಾಹಿತಿಯೇ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿಯಲ್ಲಿ ಹೈ-ಕ ಭಾಗದ ಮೀಸಲು ಪಟ್ಟಿಗೆ ಸೇರಿರುವ ವಿಚಾರ ದಾಖಲಿಸದಿದ್ದರೂ ದಾಖಲೆ ಪರಿಶೀಲನೆ ವೇಳೆ ಪ್ರಮಾಣಪತ್ರ ಹಾಜರುಪಡಿಸಲು ಅವಕಾಶ ನೀಡಲಾಯಿತು. ಈ ಬಗ್ಗೆ ಮೇ 20ರಂದು ಹೊರಡಿಸಿದ ಸುತ್ತೋಲೆಯಲ್ಲಿಯೂ ಸ್ಪಷ್ಟಪಡಿಸಲಾಯಿತು. ಆದರೆ ಮೇ 26ಕ್ಕೆ ಮತ್ತೆ ನಿಯಮ ಸಡಿಲಿಸಿ ಎಲ್ಲ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಜಾತಿ, ಆದಾಯ, ಗ್ರಾಮೀಣ ಸೇರಿದಂತೆ ಎಲ್ಲ ದಾಖಲೆಗಳ ತಿದ್ದುಪಡಿಗೆ ಅವಕಾಶ ಮಾಡಿಕೊಡಲಾಗಿದೆ.
ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಹೊರಡಿಸಿರುವ ಸುತ್ತೋಲೆಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಕಾಣುತ್ತಿಲ್ಲ. ರಾಜ್ಯ ಸರ್ಕಾರ ಹೊರಡಿಸಿರುವ ಮೇ 20 ಆದೇಶದಲ್ಲಿಯೇ ಹೈದರಾಬಾದ್-ಕರ್ನಾಟಕ ಮೀಸಲಿನ ಪ್ರಮಾಣಪತ್ರ ಪರಿಗಣಿಸಲು ಅವಕಾಶ ನೀಡುವುದಾಗಿ ಹೇಳಲಾಗಿತ್ತು. ಇನ್ನು ಇದು ಕೇವಲ ಹೈ-ಕ ವಿದ್ಯಾರ್ಥಿಗಳಿಗೆ ಸೀಮಿತ ಎಂದು ಮಾತಿನಲ್ಲಿ ಹೇಳುವ ಅಧಿಕಾರಿಗಳು, ಮೇ 26ರ ಸುತ್ತೋಲೆಯನ್ನು ಹೈ-ಕ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತಗೊಳಿಸಬಹುದಿತ್ತು.
ಖುದ್ದು ಪರಿಶೀಲನೆ ಸಾಧ್ಯವೇ?: ದಾಖಲೆ ಪರಿಶೀಲನೆ ಸಮಯದಲ್ಲಿ ಜಾತಿ ಹಾಗೂ ಇತರ ಮಾಹಿತಿಗಳನ್ನು ಬದಲಾಯಿಸಲು ಅವಕಾಶ ನೀಡಲಾಗಿರುವುದರಿಂದ, ಪ್ರತಿಯೊಂದು ಬದಲಾವಣೆಯನ್ನು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು ಪರಿಶೀಲಿಸಿ ಅಂತಿಮ ನಿರ್ಣಯ ತೆಗೆದುಕೊಳ್ಳಬೇಕು ಎಂದಿದೆ. ಕಳೆದ ವರ್ಷದ ಕೌನ್ಸೆಲಿಂಗ್ನಲ್ಲಿ ಇದೇ ರೀತಿ ಎಡವಟ್ಟು ಮಾಡಿದ್ದರಿಂದ 7693 ವಿದ್ಯಾರ್ಥಿಗಳು ರಾಜ್ಯದ 13 ಕೇಂದ್ರಗಳಲ್ಲಿ ಬದಲಾವಣೆ ಮಾಡಿಸಿದ್ದರು. ಇಷ್ಟೊಂದು ದೊಡ್ಡ ಪ್ರಮಾಣದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ಮಾಡಲು ಸಾಧ್ಯವಿದೆಯೇ? ಅಷ್ಟಕ್ಕೂ ಅಕ್ರಮ ಮಾಡಿದ ಬೆರಳೆಣಿಕೆ ಅಧಿಕಾರಿಗಳು ಹಾಗೂ 70 ವಿದ್ಯಾರ್ಥಿಗಳ ವಿರುದ್ಧವೇ ವಿಚಾರಣೆ ಮಾಡದೇ ಉನ್ನತ ಶಿಕ್ಷಣ ಇಲಾಖೆ ತನ್ನ ಅಸಮರ್ಥ ಕಾರ್ಯವೈಖರಿ ತೋರಿಸಿದೆ. ಇನ್ನು 7 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ಹೊಸ ಮಾಹಿತಿಗಳನ್ನು ಖಾತ್ರಿ ಮಾಡಿಕೊಳ್ಳಲು ಸಾಧ್ಯವೇ ಇಲ್ಲ.
ಇದು ಅಕ್ರಮಕ್ಕೆ ಹೇಗೆ ಕಾರಣವಾಗುತ್ತದೆ?
ಸಿಇಟಿ ರ್ಯಾಂಕ್ ಘೋಷಣೆಯಾದ ಬಳಿಕ ಯಾವ್ಯಾವ ಕಾಲೇಜಿನಲ್ಲಿ ಸೀಟು ಸಿಗುತ್ತದೆ ಎಂಬ ಅಂದಾಜು ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಸಿಗುತ್ತದೆ. ಆಗ ಜಾತಿ ಬದಲು ಮಾಡಿಕೊಂಡರೆ ಸೀಟು ಸಿಗುತ್ತದೆ ಎಂಬ ಲೆಕ್ಕಾಚಾರವೂ ಸಿಗುತ್ತದೆ. ಇದೇ ಕಾರಣದಿಂದ ನಕಲಿ ಜಾತಿ ಹಾಗೂ ಗ್ರಾಮೀಣ ಪ್ರಮಾಣಪತ್ರ ತಯಾರಿಸುವ ಸಾಧ್ಯತೆ ಇರುತ್ತದೆ. ಅಸಲಿ ಹಾಗೂ ನಕಲಿಯನ್ನು ಕೂಡಲೇ ಪರಿಶೀಲಿಸುತ್ತೇವೆ ಎಂದು ಅಧಿಕಾರಿಗಳು ಕೇವಲ ಸುಳ್ಳು ಹೇಳುತ್ತಾರೆ ಅಷ್ಟೆ. ಏಕೆಂದರೆ ಕಳೆದ ಬಾರಿಯದ್ದೇ ಕ್ರಮ ಜರುಗಿಸಲಾಗಿಲ್ಲ.
ನಿಯಮ ಮಾಡುವುದೇಕೆ?
ಸಿಇಟಿ ಕೌನ್ಸೆಲಿಂಗ್ ಅಕ್ರಮವನ್ನು 'ಕನ್ನಡಪ್ರಭ'ವು ದಾಖಲೆ ಸಮೇತ ಹೊರಹಾಕಿದ ಬಳಿಕ ನಿಯಮ ಬದಲಿಸಲಾಗಿತ್ತು. ಸಿಇಟಿ ಮಾರ್ಗದರ್ಶಿ ಪುಸ್ತಕದ 22ನೇ ಪುಟದಲ್ಲಿ ಇರುವ ನೂತನ ನಿಯಮ ಹೀಗೆ ಹೇಳುತ್ತದೆ. 'ಸಿಇಟಿ-2014ರ ಅರ್ಜಿಯಲ್ಲಿ ದಾಖಲಿಸಿರುವ ಜಾತಿ, ಪ್ರವರ್ಗ, ಆದಾಯ, ಗ್ರಾಮೀಣ ಮೀಸಲನ್ನು ಆ ನಂತರ ಬದಲಿಸಲು ಅವಕಾಶವಿರುವುದಿಲ್ಲ. ವಿದ್ಯಾರ್ಥಿಗಳು ಅರ್ಜಿಯಲ್ಲಿ ದಾಖಲಿಸಿರುವ ವಿಚಾರಕ್ಕೆ ಸಂಬಂಧಿಸಿ ಮಾತ್ರ ದಾಖಲೆ ಪರಿಶೀಲನೆ ಸಂದರ್ಭದಲ್ಲಿ ಪ್ರಮಾಣಪತ್ರ ಒದಗಿಸಬೇಕು.'