ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನಕಲಿ ಪಡಿತರ ಚೀಟಿ ಕೊಡದಿದ್ರೆ ಕ್ರಿಮಿನಲ್ ಕೇಸ್

ನಕಲಿ ಅಥವಾ ಬೋಗಸ್ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರು ತಾವಾಗಿಯೇ...

Srinivasa Murthy VN
Updated On : 31 May 2014, 3:32 am

ಬೆಂಗಳೂರು: ನಕಲಿ ಅಥವಾ ಬೋಗಸ್ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರು ತಾವಾಗಿಯೇ ಹಿಂತಿರುಗಿಸದಿದ್ದರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಹಸಿವು ಮುಕ್ತ ರಾಜ್ಯದ ಕಲ್ಪನೆಯ ದೃಷ್ಟಿಯಿಂದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನ ಭಾಗ್ಯ ಯೋಜನೆ ರಾಜ್ಯದ ಶೇ.99 ರಷ್ಟು ಬಡವರಿಗೆ ತಲುಪುವಲ್ಲಿ ಯಶಸ್ವಿಯಾಗಿದೆ. ಅನ್ನಭಾಗ್ಯ ಯೋಜನೆಯಲ್ಲಿ ಸಣ್ಣಪುಟ್ಟ ಲೋಪಗಳಿರಬಹುದು. ಅದಕ್ಕೆ ಕಾರಣವೇ ಈ ಬೋಗಸ್ ಕಾರ್ಡ್‌ಗಳು. ಹೀಗಾಗಿ ಬೋಗಸ್ ಕಾರ್ಡುಗಳ ತಪಾಸಣೆ ಕಾರ್ಯ ನಡೆಸಲು ಸರ್ಕಾರ ಮುಂದಾಗಿದೆ ಎಂದಿದ್ದಾರೆ. ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಶುಕ್ರವಾರ ಅವರು ಮಾತನಾಡಿದರು.
ಬೋಗಸ್ ಕಾರ್ಡ್‌ಗಳನ್ನು ಹೊಂದಿರುವವರು ಸ್ವಯಂಪ್ರೇರಣೆಯಿಂದ ಅವುಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು. ಇಲ್ಲದಿದ್ದರೆ ಅಧಿಕಾರಿಗಳು ನಡೆಸುವ ತಪಾಸಣೆ ವೇಳೆಯಲ್ಲಿ ಸಿಕ್ಕಿಬಿದ್ದರೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುತ್ತದೆ. ಇದುವರೆಗೂ ಸರ್ಕಾರ 1.30 ಕೋಟಿ  ಬಿಪಿಎಲ್ ಪಡಿತರ ಚೀಟಿ ವಿತರಿಸಲಾಗಿದೆ. ಅನ್ನ ಭಾಗ್ಯ ಮತ್ತು ಕ್ಷೀರ ಭಾಗ್ಯ ಯೋಜನೆಯಲ್ಲಿ  ಹಾಲು ಮತ್ತು ಅಕ್ಕಿಯನ್ನು ರೈತರಿಂದ ನೇರವಾಗಿ ಪಡೆಯುವ ಮೂಲಕ ರೈತರಿಗೆ ನ್ಯಾಯಯುತ ಬೆಲೆ ನೀಡಲಾಗುತ್ತಿದೆ ಎಂದರು.
ಪ್ರತಿ ತಿಂಗಳು 7ನೇ ತಾರೀಖಿನಂದು ಆಹಾರ ಅದಾಲತ್ ಕಾರ್ಯಕ್ರಮ ನಡೆಸಲಾಗುತ್ತದೆ. ಎಲ್ಲಾ ಸಗಟು ಮಾರಾಟ ಮಳಿಗೆಗಳಲ್ಲಿ ಪ್ರತಿ ತಿಂಗಳು 1 ರಿಂದ 10ನೇ ತಾರೀಖಿನವರೆಗೂ ಕಡ್ಡಾಯವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement