ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮದುವೆ ಮಾಡಿ ನೋಡು ತೆರಿಗೆ ಕಟ್ಟಿ ನೋಡು

ನಮ್ಮ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರಿಗೆ ಇಂಥ ಕ್ರೇಜಿ, ತಿಕ್ಕಲು ಐಡಿಯಾವನ್ನು ಯಾರು...

Srinivasa Murthy VN
Updated On : 31 May 2014, 3:32 am

ನಮ್ಮ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರಿಗೆ ಇಂಥ ಕ್ರೇಜಿ, ತಿಕ್ಕಲು ಐಡಿಯಾವನ್ನು ಯಾರು ಕೊಡುತ್ತಾರೋ ಗೊತ್ತಿಲ್ಲ. ಈಗ ಅವರ ಮನಸ್ಸಿನಲ್ಲಿ ಅದ್ಧೂರಿ ಅಥವಾ ವೈಭವೋಪೇತ ಮದುವೆಗೆ ತೆರಿಗೆ ವಿಧಿಸುವ ಕಾಯಿದೆಯನ್ನು ಜಾರಿಗೆ ತಂದರೆ ಹೇಗೆ ಎಂಬ ಯೋಚನೆ ಬಂದಿದೆ. 'ಕೆಲಸವಿಲ್ಲದ ಬಡಗಿ ಅದೇನೋ ಮಾಡಿದ...' ಅಂತಾರಲ್ಲ, ಜಯಚಂದ್ರ ಅವರ ಯೋಚನೆಯನ್ನು ಗಮನಿಸಿದಾಗ ಯಾರಿಗಾದರೂ ಹೀಗೆ ಅನಿಸದಿರದು. ಐದು ಲಕ್ಷ ರು.ಗಳಿಗಿಂತ ಹೆಚ್ಚು ಖರ್ಚು ಮಾಡಿದರೆ ಹಾಗೂ ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಪಾಲ್ಗೊಂಡರೆ ಅದನ್ನು ವೈಭವೋಪೇತ ವಿವಾಹ ಎಂದು ಪರಿಗಣಿಸಿ ತೆರಿಗೆ ವಿಧಿಸುತ್ತಾರಂತೆ. ಕರ್ನಾಟಕ ವಿವಾಹ ನಿಯಂತ್ರಣ ಕಾಯಿದೆ- 1976ಕ್ಕೆ ತಿದ್ದುಪಡಿ ತಂದು ತೆರಿಗೆ ವಿಧಿಸುವುದು ಅವರ ಚಿಂತನೆ. ಅದ್ಧೂರಿ ವಿವಾಹಗಳಿಂದ ಸಂಗ್ರಹವಾಗುವ ತೆರಿಗೆ ಹಣಕ್ಕೆ 'ಮಾಂಗಲ್ಯನಿಧಿ' ಎಂದು ಹೆಸರಿಸಿ, ಈ ಹಣವನ್ನು ಬಡವರ ಸಾಮೂಹಿಕ ವಿವಾಹಕ್ಕೆ ನೀಡುವುದು ಅವರ ಉದ್ದೇಶ.
      ಮದುವೆಯೆಂಬುದು ಖಾಸಗಿ ಸಮಾರಂಭ. ಅದು ತೀರಾ ವೈಯಕ್ತಿಕವಾದುದು. ಸರ್ಕಾರ ಅದರೊಳಗೆ ಮೂಗು ತೂರಿಸಬಾರದು. ಜನರು ಅವರವರ ಸಾಮರ್ಥ್ಯ, ಯೋಗ್ಯತೆಗೆ ತಕ್ಕ ರೀತಿಯಲ್ಲಿ ಮದುವೆಯಾಗುತ್ತಾರೆ, ಮದುವೆ ಮಾಡುತ್ತಾರೆ. ಇಂಥ ವಿಷಯದಲ್ಲಿ ಸರ್ಕಾರ ಮಧ್ಯಪ್ರವೇಶಿಸಬಾರದು. ಈ ಕಾನೂನು ಜಾರಿಯಾದರೆ, ಮದುವೆಗೆ ಎಷ್ಟು ಖರ್ಚು ಮಾಡುತ್ತೇವೆ, ಎಷ್ಟು ಮಂದಿಯನ್ನು ಕರೆಯುತ್ತೇವೆ ಎಂಬ ಬಗ್ಗೆ ಸರ್ಕಾರಕ್ಕೆ ಲೆಕ್ಕ ಕೊಡಬೇಕು. ಈ ಮದುವೆ ಸಮಾರಂಭಕ್ಕೆ ಎಷ್ಟು ಮಂದಿ ಬಂದಿದ್ದಾರೆಂಬುದನ್ನು ಲೆಕ್ಕ ಹಾಕಲು, ನಿಗಾ ಇಡಲು ಸರ್ಕಾರ ಇನ್ಸ್‌ಪೆಕ್ಟರ್‌ಗಳನ್ನು ನೇಮಿಸಬೇಕಾಗುತ್ತದೆ. ಅವರು ರಾಜ್ಯದಲ್ಲಿ ನಡೆಯುವ ಎಲ್ಲ ಮದುವೆಗಳಿಗೂ ಹಾಜರಾಗಿ ತಪಾಸಣೆ ಮಾಡಬೇಕಾಗುತ್ತದೆ. ಮದುವೆ ಹಾಲ್‌ನಲ್ಲಿಯೇ ಕನ್ಯಾಪಿತೃರ ಮುಂದೆ ನೀವು ಐದು ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡಿದ್ದೀರಿ, ತೆರಿಗೆ ಕಟ್ಟಿ ಎಂದು ಗದರಬಹುದು. ಸಾವಿರಕ್ಕಿಂತ ಹೆಚ್ಚು ಮಂದಿಯನ್ನು ಕರೆದಿದ್ದೀರಿ ತೆರಿಗೆ ಕೊಡಿ ಎಂದು ತಾಕೀತು ಮಾಡಬಹುದು. ಮದುವೆ ಮಂಟಪದಲ್ಲಿ ಈ ಅವಮಾನ ಅನುಭವಿಸುವುದು ಅದೆಂಥ ಕರ್ಮ!
      ಒಮ್ಮೊಮ್ಮೆ ಮದುವೆಯಂಥ ಸಮಾರಂಭದಲ್ಲಿ ಖರ್ಚು ಇಷ್ಟೇ ಆಗುತ್ತದೆ, ಜನ ಇಷ್ಟೇ ಬರುತ್ತಾರೆ ಎಂದು ಹೇಳಲಾಗುವುದಿಲ್ಲ. ಆಹ್ವಾನಿಸಿದ್ದಕ್ಕಿಂತ ಹೆಚ್ಚು ಜನ ಬರಬಹುದು, ಖರ್ಚೂ ಜಾಸ್ತಿಯಾಗಬಹುದು. ಇವನ್ನೆಲ್ಲ ಅಲ್ಲಿ ಲೆಕ್ಕ ಹಾಕುತ್ತಾ ಕುಳಿತುಕೊಳ್ಳುವುದು ಎಷ್ಟು ಸರಿ? ಅತಿಥಿಗಳನ್ನು ಉಪಚರಿಸುವುದನ್ನು ಬಿಟ್ಟು ಬಂದ ಅತಿಥಿಗಳ ತಲೆ ಲೆಕ್ಕ ಹಾಕುತ್ತಾ ಕುಳಿತುಕೊಳ್ಳಲಾಗುತ್ತದೆಯೇ? ಬಂದವರ ಮುಂದೆ ಹಣ ಹಾಗೂ ತಲೆ ಲೆಕ್ಕಾಚಾರ ಮಾಡುವುದು ಶೋಭೆಯೇ? ಸತ್ಕಾರಕ್ಕೆ ಮಾಡಿದ ಖರ್ಚು ಹಾಗೂ ಬಂದ ಅತಿಥಿಗಳೆಷ್ಟು ಎಂಬುದನ್ನು ಲೆಕ್ಕ ಹಾಕಬಾರದೆಂಬುದು ನಮ್ಮ ಸಂಸ್ಕಾರ, ಸಂಸ್ಕೃತಿ. ಅದೆಷ್ಟೇ ಬಡವರಿರಲಿ, ಮನೆಗೆ ಬಂದ ಅತಿಥಿಗಳ ಊಟೋಪಚಾರಕ್ಕೆ ಮಾಡಿದ ಖರ್ಚನ್ನು ಯಾರೂ ಲೆಕ್ಕ ಹಾಕುವುದಿಲ್ಲ. ಯಾಕೆಂದರೆ ಅದು ನಮ್ಮ ಸಂಪ್ರದಾಯವಲ್ಲ.
ಈ ಕಾನೂನು ಜಾರಿಗೆ ಬಂದರೆ ಸರ್ಕಾರಿ ಅಧಿಕಾರಿಗಳಿಗೆ ಹಣ ವಸೂಲಿಗೆ ಮತ್ತೊಂದು ಮಾರ್ಗ ಸಿಕ್ಕಂತಾಗುತ್ತದೆ.

ಎರಡು ಸಾವಿರ ಮಂದಿ ಬಂದರೂ, 'ತಲೆ-ಲೆಕ್ಕ ಹಾಕುವ' ಇನ್ಸ್ ಪೆಕ್ಟರ್ ಜೇಬಿಗೆ ಒಂದಷ್ಟು ತುರುಕಿದರೆ ಆತ ಸಾವಿರಕ್ಕಿಂತ ಕಡಿಮೆ ಮಂದಿ ಬಂದಿದ್ದಾರೆಂದೇ ಬರೆದುಕೊಂಡು ಹೋಗುತ್ತಾನೆ. ಕೋಟಿ ರೂ. ಖರ್ಚು ಮಾಡಿದರೂ ಐದು ಲಕ್ಷ ರೂ. ಮಿತಿಯೊಳಗೆ ವೆಚ್ಚ ಮಾಡಿದ್ದಾರೆಂದೇ ಸರ್ಟಿಫಿಕೇಟ್ ಕೊಡುತ್ತಾನೆ. ಇದರಿಂದ ಅದ್ಧೂರಿ ವಿವಾಹಗಳಿಗೆ ಕಡಿವಾಣ ಎಲ್ಲಿಂದ ಬಂತು? ಕನ್ಯಾಪಿತೃರಿಗೆ ಮತ್ತಷ್ಟು ಹೊರೆ, ಲಂಚದ ಭಾರ! ಅಂದರೆ ಈ ಕಾಯಿದೆಯ ಮೂಲಕ ದುಂದು ವೆಚ್ಚಗಳಿಗೆ ಕಡಿವಾಣ ಹಾಕುವ ಸರ್ಕಾರದ ಆಶಯವೇ ಸೋತಂತೆ ಅಲ್ಲವೇ? ಮದುವೆಯ ಹಾಲ್ ಬಾಕಿ ಇತ್ತು, ಅಲ್ಲೂ ಇನ್ನು ಮುಂದೆ ಭ್ರಷ್ಟಾಚಾರದ ಕೌಂಟರ್ ತೆರೆಯಲು ಆಸ್ಪದ ನೀಡಿದಂತಾಗುತ್ತದೆ. ಅಲ್ಲದೇ ಇನ್ನು ಮುಂದೆ ಆಹ್ವಾನ ಪತ್ರಿಕೆಯಲ್ಲಿ 'ಸಕುಟುಂಬ ಸಪರಿವಾರ ಸಮೇತವಾಗಿ ಬರಬೇಕು' ಎಂದು ಬರೆಯುವಂತಿಲ್ಲ. 'ಒಬ್ಬರಿಗೆ ಅಥವಾ ಇಬ್ಬರಿಗೆ ಮಾತ್ರ ಪ್ರವೇಶ' ಎಂದು ಬರೆಯಬೇಕಾಗುತ್ತದೆ.  ಈ ದಿನಗಳಲ್ಲಿ ಮಧ್ಯಮ ವರ್ಗದವರಿಗಾಗಲಿ, ಕೆಳಮಧ್ಯಮ ವರ್ಗದವರಿಗಾಗಲಿ ಐದು ಲಕ್ಷ ರೂ.ಗಿಂತ ಕಡಿಮೆ ಖರ್ಚಿನಲ್ಲಿ ಮದುವೆ ಮಾಡುವುದು ಅಸಾಧ್ಯ. ಮದುವೆ ಹಾಲ್, ಬಂಗಾರದ ಒಡವೆ, ವಸ್ತ್ರ, ಊಟೋಪಚಾರಗಳಿಗೆಂದು ಆರೇಳು ಲಕ್ಷ ರೂ.ಗಳಾದರೂ ಬೇಕೇ ಬೇಕು. ಬೆಂಗಳೂರಿನಂಥ ನಗರದಲ್ಲಿ ಮದುವೆ ಛತ್ರದ ಬಾಡಿಗೆಯೇ 75 ಸಾವಿರದಿಂದ -ಒಂದು ಲಕ್ಷ ರೂ. ಆಗುತ್ತದೆ. ಐದು ಲಕ್ಷದೊಳಗೆ ನಾಮಕರಣ, ಮುಂಜಿಯನ್ನಷ್ಟೇ ಮಾಡಬಹುದೇನೋ? ಐದು ಲಕ್ಷ ರೂ. ಮಿತಿ ಮೀರಿದರೆಂಬ ಕಾರಣಕ್ಕೆ ವಿಧಿಸುವ ತೆರಿಗೆ ಕನ್ಯಾಪಿತೃರಿಗೆ ದೊಡ್ಡ ಹೊರೆಯೇ. ಸಾಲ ಸೋಲ ಮಾಡಿ ಮದುವೆ ಮಾಡಿದ್ದಲ್ಲದೇ ಆ ಹಣದಲ್ಲಿ ತೆರಿಗೆಯನ್ನೂ ಕಟ್ಟಬೇಕೆಂದರೆ ಗಾಯದ ಮೇಲೆ ಬರೆ ಎಳೆದಂತೆ. ಈ ಕಾನೂನು ಜಾರಿಗೆ ಬಂದರೆ, 'ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು' ಎಂಬ ಗಾದೆಯನ್ನು 'ಮದುವೆ ಮಾಡಿ ನೋಡು, ತೆರಿಗೆ ಕಟ್ಟಿ ನೋಡು' ಎಂದು ಮಾರ್ಪಡಿಸಬೇಕಾಗಬಹುದು. 'ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು' ಅಂತಾರೆ. ಇನ್ನು ಮುಂದೆ ಮದುವೆ ಖರ್ಚು ಹಾಗೂ ಬಂದ ಅತಿಥಿಗಳ ವಿಷಯದಲ್ಲಿ ಮತ್ತಷ್ಟು ಸುಳ್ಳುಗಳನ್ನು ಹೇಳಬೇಕಾಗಬಹುದು. ಒಟ್ಟಾರೆ ವಾಸ್ತವದಲ್ಲಿ ಈ ಕಾನೂನು ಜಾರಿ ಅವೈಜ್ಞಾನಿಕ, ಅಭಾಸಕಾರಿ ಹಾಗೂ ಅವಿವೇಕತನದಿಂದ ಕೂಡಿದ್ದು ಎಂದು ಹೇಳಬಹುದು.
ಅಲ್ರೀ ಸಚಿವರೇ, ಮದುವೆ ಅನ್ನೋದೇ ಒಂದು ದೊಡ್ಡ ಟ್ಯಾಕ್ಸ್. ಅದರ ಮೇಲೆ ಮತ್ತೊಂದು ಟ್ಯಾಕ್ಸ್ ಕಟ್ಟಿ ಅಂತೀರಲ್ಲಾ, ನಿಮಗೆ ಹೆಣ್ಣು ಹೆತ್ತವರ ಬಗ್ಗೆ ಒಂಚೂರಾದ್ರೂ ಕರುಣೆ ಬೇಡ್ವೆ. ಸಾಮಾನ್ಯವಾಗಿ ಮದುವೆ ಮಾಡಿಕೊಡುವವರು ಹೆಣ್ಣಿನ ಕಡೆಯವರೇ. ಪಾಪ, ಮದುಮಗಳ ಚಿನ್ನಾಭರಣಕ್ಕೆ ತೆರಿಗೆ, ವರೋಪಚಾರ ನೆಪದಲ್ಲಿ ಗಂಡಿಗೆ ಕೊಡುವ ಚೈನು, ವಾಚು, ಸೂಟು-ಬೂಟು, ಬೆಳ್ಳಿ ಪರಿಕರಕ್ಕೂ ತೆರಿಗೆ, ಛತ್ರದ ಬಾಡಿಗೆ, ಆ ಬಾಡಿಗೆ ಮೇಲೂ ತೆರಿಗೆ, ಊಟ-ತಿಂಡಿಗೆ ಬಳಸುವ ದವಸ-ಧಾನ್ಯಗಳಿಗೂ ತೆರಿಗೆ ಕಟ್ಟಿ, ಇದೀಗ ಸಾವಿರಕ್ಕೂ ಮಿಕ್ಕಿ ಹೆಚ್ಚಿನ ಜನರಿಗೆ ಹಾಕುವ ಊಟಕ್ಕೂ ತೆರಿಗೆ ಕಟ್ಟಿ ಅಂದರೆ ಹೆಣ್ಣಿನ ಮನೆಯವರು ಎಲ್ಲಿಗೆ ಹೋಗಬೇಕು? ಅವರ ಸಂಕಟ ಯಾರಿಗೆ ಅರ್ಥ ಆಗಬೇಕು?
ಎಲ್ಲಕ್ಕೂ ಮಿಗಿಲಾಗಿ ಪ್ರತಿಯೊಬ್ಬ ಮನುಷ್ಯನಿಗೂ ಒಂದು ಕನಸು ಇರುತ್ತದೆ. ಒಂದೊಂದು ಗುರಿ ಇರುತ್ತದೆ. ಒಬ್ಬನಿಗೆ ಒಂದು ಒಳ್ಳೆಯ ಮನೆ ಕಟ್ಟಬೇಕು ಎಂದಿದ್ದರೆ ಮತ್ತೊಬ್ಬನಿಗೆ ಒಳ್ಳೆಯ ಕಾರಲ್ಲಿ ಓಡಾಡಬೇಕು ಎಂದೆನಿಸುತ್ತದೆ. ಒಬ್ಬರಿಗೆ ತಮ್ಮ ಮಕ್ಕಳಿಗೆ ಉನ್ನತ ವ್ಯಾಸಂಗ ಕೊಡಿಸಬೇಕು ಎಂದೆನಿಸಿದರೆ, ಇನ್ನೊಬ್ಬರಿಗೆ ತಮ್ಮ ಮಕ್ಕಳ ಮದುವೆಯನ್ನು ಚೆನ್ನಾಗಿ ಮಾಡಿ, ಆ ಸಂಭ್ರಮ ಸಡಗರವನ್ನು ಕಣ್ತುಂಬಿಕೊಳ್ಳಬೇಕು ಎಂಬ ಮಹದಾಸೆ ಇರುತ್ತದೆ. ಚೆನ್ನಾಗಿ ಮದುವೆ ಮಾಡಿಕೊಟ್ಟರೆ ಗಂಡಿನ ಮನೆಯವರು ತಮ್ಮ ಮಗಳನ್ನು ಚೆನ್ನಾಗಿ ನೋಡಿಕೊಳ್ಳಬಹುದು, ನೆಂಟಸ್ತನ ಬೆಳೆಸುವ ಗಂಡಿನ ಮನೆಯವರು ಮೆಚ್ಚುವಂತೆ ಮದುವೆ ಮಾಡಿಕೊಡಬೇಕು ಎಂಬ ಹಿರಿದಾಸೆ, ಕನಸು ಅವರದಾಗಿರುತ್ತದೆ. ಸರಿಯಾಗಿ ಮದುವೆ ಮಾಡಿಕೊಡದಿದ್ದರೆ ನಾಳೆ ಗಂಡಿನ ಮನೆಯವರು ಆ ಬಗ್ಗೆ ಎತ್ತಾಡಬಹುದು, ಮುಂದೆ ಮಗಳ ಭವಿಷ್ಯಕ್ಕೆ ತೊಂದರೆ ಆಗಬಹುದು ಎಂಬ ಆತಂಕವೂ ಇರುತ್ತದೆ. ನೀವು ಈ ರೀತಿ ಮದುವೆಗೆ ಕಡಿವಾಣ ಹಾಕುವುದರಿಂದ, ಒಬ್ಬರ ಕನಸಿಗೂ, ಕನಸು ಕಾಣುವ ಬಯಕೆಗೂ ಕನ್ನ ಹಾಕಿದಂತಾಗುವುದಿಲ್ಲವೇ?
ಒಂದು ವೇಳೆ ಈ ಕಾನೂನು ಜಾರಿಗೆ ಬಂದರೆ, ಮದುವೆಯಾಗಿ ವಿದೇಶಗಳಿಗೆ ಹನಿಮೂನ್‌ಗೆ ಹೋಗುವವರೂ ತೆರಿಗೆ ಕಟ್ಟಿ ಎಂದು ಮುಂದೊಂದು ದಿನ ಸರ್ಕಾರ ಈ ಕಾಯಿದೆಗೂ ತಿದ್ದುಪಡಿ ತರಬಹುದು. ಮದುವೆ ಖರ್ಚಿನಲ್ಲಿ ಹನಿಮೂನ್ ಸಹ ಸೇರಿದೆ ಎಂದು ಹೇಳಬಹುದು.
ಹಾಗೆಂದು ಇಲ್ಲಿ ದುಂದು ವೆಚ್ಚದ ವಿವಾಹವನ್ನು ಬೆಂಬಲಿಸುತ್ತಿಲ್ಲ. ಮದುವೆಯೆಂಬುದು ಆಡಂಬರದ, ದೌಲತ್ತಿನ ಪ್ರದರ್ಶನ ಅಲ್ಲ. ಸಿರಿವಂತರ ಮನೆಯ ಮದುವೆಯಲ್ಲಿ ಊಟ ಮಾಡುವುದಕ್ಕಿಂತ ಮುಸುರೆಯಾಗಿ ಬಿಸಾಡುವುದೇ ಹೆಚ್ಚು. ಈ ವಿಷಯದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಕುಡಿತ, ಸಿಗರೇಟು, ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರವಾಗಿದ್ದರೂ ಸರ್ಕಾರ ಯಾಕೆ ನಿಷೇಧಿಸುತ್ತಿಲ್ಲ? ನಿಷೇಧಿಸಿದರೂ ಅಂಥ ಕಾನೂನು ಪಾಲನೆ ಏಕೆ ಕಾರ್ಯಸಾಧುವಲ್ಲ? ಇವು ಗೊತ್ತಿರದ ಸಂಗತಿಗಳೇನೂ ಅಲ್ಲ. ಎಲ್ಲವುಗಳನ್ನು ಕಾನೂನಿಂದಲೇ ನಿಯಂತ್ರಿಸಲು ಆಗುವುದಿಲ್ಲ.
ಜಯಚಂದ್ರ ಅವರೇ, ಅಷ್ಟಕ್ಕೂ ಈ ಕಾನೂನನ್ನು ಜಾರಿಗೆ ತಂದರೆ ಅದರಿಂದ ತೊಂದರೆಯಾಗುವುದು ಮಧ್ಯಮ ವರ್ಗದವರಿಗೇ. ವೈಭವೋಪೇತ ಮದುವೆ ಮಾಡುವವರು ತೆರಿಗೆಯನ್ನು ಕಟ್ಟುತ್ತಾರೆ. ಐದು ಕೋಟಿಯೋ, ಹತ್ತು ಕೋಟಿಯೋ ಖರ್ಚು ಮಾಡಿ ಮದುವೆ ಮಾಡುವವರು, ಹತ್ತೋ ಇಪ್ಪತ್ತೋ ಲಕ್ಷ ರೂ.ಯನ್ನು ತೆರಿಗೆ ಕಟ್ಟುತ್ತಾರೆ. ಅದು ಅವರಿಗೆ ಹೊರೆ ಅಲ್ಲ. ಅದೇ ಮಧ್ಯಮ ವರ್ಗದವರಿಗೆ ತೆರಿಗೆ ಎಂದು ಐವತ್ತು ಸಾವಿರ ಕಟ್ಟುವುದು ಸಹ ಹೊರೆಯೇ.
ಇಲ್ಲಿ ಮತ್ತೊಂದು ಸಮಸ್ಯೆಯಿದೆ. ಐದೋ, ಹತ್ತೋ ಲಕ್ಷ ರೂ. ಖರ್ಚು ಮಾಡಿ ಮಧ್ಯಮ ವರ್ಗದವರು ಮದುವೆ ಮಾಡುತ್ತಾರೆ ಅಂತಿಟ್ಟುಕೊಳ್ಳಿ. ಈ ಹಣ ಎಲ್ಲಿಂದ ಬಂತು ಎಂದು ತೆರಿಗೆ ಅಧಿಕಾರಿಗಳು ಕೇಳಬಹುದು. ಮದುವೆಗೆಂದು ಯಾವ ಬ್ಯಾಂಕುಗಳೂ ಸಾಲ ನೀಡುವುದಿಲ್ಲ. ಆದರೆ ಕನ್ಯಾಪಿತೃಗಳು ಮದುವೆ ನಿರ್ವಹಣೆಗೆ ಸಂಬಂಧಿಕರಿಂದ, ಸ್ನೇಹಿತರಿಂದ ಸಾಲ ಮಾಡಿರುತ್ತಾರೆ. ಆದರೆ ಖರ್ಚು ಮಾಡಿದ ಹಣದ ವಿವರಗಳನ್ನೆಲ್ಲ ನೀಡಬೇಕಾದುದರಿಂದ ತೆರಿಗೆ ಅಧಿಕಾರಿಗಳು ಇಷ್ಟು ಹಣ ಎಲ್ಲಿಂದ ಬಂತು ಎಂದು ಆದಾಯದ ಮೂಲವನ್ನು ಕೆದಕಬಹುದು. ಕೈ ಸಾಲ ಕೊಟ್ಟವರನ್ನೂ ಪೀಡಿಸಬಹುದು. ಇದು ಅನಗತ್ಯ ಕಿರುಕುಳ, ಹಿಂಸೆ, ತೊಂದರೆ, ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು.
ಅಂದರೆ ಈ ಕಾನೂನಿನಿಂದ ವೈಭವದ ಮದುವೆಗೆ ಕಡಿವಾಣ ಹಾಕುವುದು ಅಸಾಧ್ಯ. ಗಣಪತಿ ಮಾಡಲು ಹೋಗಿ ಹನುಮಂತನನ್ನು ಮಾಡಿದರು ಅಂತಾರಲ್ಲ, ಒಳ್ಳೆಯದನ್ನು ಮಾಡುವ ಆತುರದಲ್ಲಿ ಅದು ಇನ್ನಿತರ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಅಷ್ಟಕ್ಕೂ ದುಂದು ವೆಚ್ಚದ ಮದುವೆ ಸಾಮಾಜಿಕ ಪಿಡುಗೇನೂ ಅಲ್ಲ. ಹಣವಂತರು ತಮ್ಮ ತೆವಲಿಗೆ ಖರ್ಚು ಮಾಡಿದರೆ ಮಾಡಲಿ ಬಿಡಿ, ತಪ್ಪೇನು? ಬೆಂಜ್ ಕಾರಿನಲ್ಲಿ ಓಡಾಡುವುದು ದುಂದು ವೆಚ್ಚ ಎಂದು ನ್ಯಾನೋ ಕಾರಿನವರು ವಾದಿಸಿದಷ್ಟೇ ಬಾಲಿಶ ವಿಚಾರವಾದೀತು. ಮದುವೆ ಹೇಗೆ ಮಾಡಿದರೇನು? ಸರ್ಕಾರ ಇಂಥ ವಿಷಯದಲ್ಲಿ ತಲೆ ಎಣಿಸಲೂ ಬಾರದು, ತಲೆ ಹಾಕಲೂ ಬಾರದು.
ಜಯಚಂದ್ರ ಅವರೇ, ಅಷ್ಟಕ್ಕೂ ಈ ಕಾನೂನನ್ನು ಜಾರಿಗೆ ತರಲೇ ಬೇಕೆಂದಿದ್ದರೆ, ಮೊದಲು ಇದನ್ನು ನಿಮ್ಮ ಸಚಿವ ಸಹೋದ್ಯೋಗಿಗಳ ಮಕ್ಕಳು, ನೆಂಟರ ಮದುವೆಗೆ ಅನ್ವಯಿಸಿ. ಶಾಸಕರು, ಸಂಸದರು, ಸರ್ಕಾರಿ ಅಧಿಕಾರಿಗಳ ಮಕ್ಕಳ ಮದುವೆಗೆ ಲಾಗೂ ಮಾಡಿ. ದುಂದು ವೆಚ್ಚ ಮಾಡಿ ಮದುವೆಯಾಗುವವರು, ಮದುವೆ ಮಾಡುವವರು ವಿಧಾನಸೌಧ, ವಿಕಾಸಸೌಧ, ಶಾಸಕರ ಭವನ ಹಾಗೂ ಅಲ್ಲಿರುವವರ ಸುತ್ತಮುತ್ತ ಇರುವವರು. ಈ ಕಾನೂನು ಪ್ರಯೋಗಾರ್ಥವಾಗಿ ಅವರಿಗೇ ಅನ್ವಯವಾಗಲಿ. ದುಂದು ವೆಚ್ಚದ ಸಮಾರಂಭಗಳಿಗೆ ಕಡಿವಾಣ ಹಾಕುವುದು ಸಚಿವರ ಸದಾಶಯವಾದರೆ, ಇದನ್ನು ಮದುವೆಗೆ ಮಾತ್ರ ಏಕೆ ಸೀಮಿತಗೊಳಿಸಬೇಕು? ರಾಜಕಾರಣಿಗಳು, ಮಂತ್ರಿಗಳು ವೈಭವದಿಂದ, ಭರ್ಜರಿಯಾಗಿ ಆಚರಿಸಿಕೊಳ್ಳುವ ಬರ್ಥ್‌ಡೇ, ವಿಜಯೋತ್ಸವ, ರಾಜಕೀಯ ಸಮಾರಂಭ, ಸಾಧನೆ ಸಮಾವೇಶ, ರ್ಯಾಲಿಗಳಿಗೂ ಅನ್ವಯಿಸಬಹುದಲ್ಲ.
ಈ ಎಲ್ಲ ಅನುಭವವನ್ನು ಪಡೆದ ನಂತರ ಅದನ್ನು ಇಡೀ ರಾಜ್ಯಕ್ಕೆ, ರಾಜ್ಯದ ಜನತೆಗೆ ವಿಸ್ತರಿಸುವ ಬಗ್ಗೆ ಯೋಚಿಸಬಹುದು. ಇಂಥ ವಿಷಯಗಳಲ್ಲಿ ಜನರಿಗೆ ಅರಿವು, ತಿಳಿವಳಿಕೆ ಮೂಡಿಸುವುದೊಂದೇ ಸೂಕ್ತ ಮಾರ್ಗ. ಎಲ್ಲವನ್ನೂ ಕಾನೂನಿನಿಂದಲೇ ನಿಯಂತ್ರಿಸಲು ಹೋಗುವುದು ಸರಿಯಲ್ಲ. ಅಷ್ಟಕ್ಕೂ ಸರ್ಕಾರಕ್ಕೆ ವೈಭವೋಪೇತ ಮದುವೆಗೆ ಕಡಿವಾಣ ಹಾಕಲೇಬೇಕೆಂಬ ಸದಿಚ್ಛೆ, ಪ್ರಾಮಾಣಿಕ ಕಳಕಳಿಯಿದ್ದರೆ ತೆರಿಗೆ ಹಾಕಲು ಮುಂದಾಗುವ ಕಾನೂನು ತರುವ ಬದಲು ಸರಳ ಮದುವೆ, ಸಾಮೂಹಿಕ ವಿವಾಹಗಳನ್ನು ಉತ್ತೇಜಿಸಲಿ. ಸರಳ ವಿವಾಹವಾಗುವವರಿಗೆ ಸಾಂಕೇತಿಕ ಪ್ರೋತ್ಸಾಹಕ ಸವಲತ್ತುಗಳನ್ನು ನೀಡಲಿ, ಅವರ ಮಕ್ಕಳಿಗೆ ಶಾಲಾ ಫೀಜಿನಲ್ಲಿ ರಿಯಾಯಿತಿ ಕೊಡಲಿ. ಅದೆಲ್ಲ ಬಿಟ್ಟು ಈ ಕಾಯಿದೆ ತಂದು ಮದುವೆ ಮಂಟಪದ ಮುಂದೆ ಭ್ರಷ್ಟಾಚಾರದ ಮತ್ತೊಂದು ಕೌಂಟರ್ ತೆರೆಯುವ ಕ್ರಮ ಖಂಡಿತವಾಗಿಯೂ ಸರಿ ಅಲ್ಲ. ಏನಂತೀರಾ?

ನೀವೇನಂತೀರಿ?
ಈ ಬಗ್ಗೆ ಓದುಗರೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು.
ನಮ್ಮ ವಿಳಾಸ ಕನ್ನಡಪ್ರಭ ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001
ಇ-ಮೇಲ್
anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement