ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

'ತೆರಿಗೆ ಭಾಗ್ಯ'ಕ್ಕೆ ಮಂಗಳಾರತಿ..!

ಆಹಾ! ಸೂಪರ್!! ಸರ್ಕಾರದ ಚಿಂತನೆ ಹೇಗಿದೆ ಅಂದ್ರೆ ನಾಳೆಯಿಂದ ನೀನು ಬಡವರ..

Srinivasa Murthy VN
Updated On : 1 Jun 2014, 1:59 am

ಆಹಾ! ಸೂಪರ್!! ಸರ್ಕಾರದ ಚಿಂತನೆ ಹೇಗಿದೆ ಅಂದ್ರೆ ನಾಳೆಯಿಂದ ನೀನು ಬಡವರ ಥ್ರಿಬ್ಬಲ್‌ಎಕ್ಸ್ ರಮ್ಮೇ ಕುಡೀಬೇಕು, ಅದನ್ನು ಬಿಟ್ಟು ಜಾನಿ ವಾಕರ್ ಸ್ಕಾಚ್‌ಗೀಚ್ ಕುಡಿದ್ರೆ ಅದರ ಮೇಲೆ ಟ್ಯಾಕ್ಸ್ ಹಾಕಿ, ಬಡವರಿಗೆ ವಿಸ್ಕಿ ಕುಡಿಸ್ತೀವಿ ಅಂದಂಗಿದೆ..!

ಟಾಕೀಸ್, ರೋಡ್ ಶೋ ಅಲ್ಲ
ಮದುವೆಯಂಥ ವಿಷಯಗಳಲ್ಲಿ ಸರ್ಕಾರ ಮೂಗು ತೂರಿಸಬಾರದು. ಬಾಲ್ಯ ವಿವಾಹದಂಥ ಸಾಮಾಜಿಕ ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಕು. ಸಾವಿರಾರು ಜನ ಬಂದಾಕ್ಷಣ ಆಡಂಬರದ ಮದುವೆಯೆಂದು ಪರಿಗಣಿಸಲು ಬರುವುದಿಲ್ಲ. ಆಹ್ವಾನ ಮಾಡಿದವರ ವ್ಯಕ್ತಿತ್ವ, ಗುಣಗಳನ್ನು ಪರಿಗಣಿಸಿ ಜನರು ಸೇರುತ್ತಾರೆ. ಇಂಥ ವಿಷಯದಲ್ಲಿ ತೆರಿಗೆ ವಿಧಿಸಲು ಮುಂದಾದರೆ ಅದು ಸರ್ಕಾರದ ದಡ್ಡತನವಾಗುತ್ತದೆ. ವೈಭವೋಪೇತ ಮದುವೆಗಳನ್ನು ಉನ್ನತಾಧಿಕಾರಿಗಳು, ರಾಜಕಾರಣಿಗಳು ಹೆಚ್ಚಾಗಿ ಮಾಡುತ್ತಾರೆ. ಇಂಥ ಆಡಂಬರಕ್ಕೆ ಅವರೇ ಕಾರಣಕರ್ತರಾಗುತ್ತಾರೆ. ಇಂಥ ಮದುವೆಗಳ ಮೇಲೆ ನಿಗಾ ವಹಿಸಬೇಕೇ ಹೊರತು ಸಾವಿರಕ್ಕಿಂತ ಹೆಚ್ಚಿನ ಜನ ಸೇರುವ ಮದುವೆಗೆ ತೆರಿಗೆ ವಿಧಿಸಬೇಕೆಂಬ ಸಚಿವ ಜಯಚಂದ್ರ ಅವರ ಅಭಿಪ್ರಾಯ ಸರಿಯಲ್ಲ. ಸಾಮೂಹಿಕ ಮದುವೆಯಲ್ಲಿ ಲಕ್ಷಾಂತರ ಜನರು ಸೇರುತ್ತಾರೆ. ಆಗೆಲ್ಲ ಜನಸಂಖ್ಯೆಯ ಲೆಕ್ಕಾಚಾರ ಹೇಗೆ ಮಾಡುತ್ತಾರೆ? ಜನರನ್ನು ಎಣಿಕೆ ಮಾಡುವುದಕ್ಕೆ ಮದುವೆ ಸಮಾರಂಭ ಸಿನಿಮಾ ಟಾಕೀಸ್ ಅಲ್ಲ. ರೋಡ್ ಷೋನೂ ಅಲ್ಲ. ಕೋಟಿಗಟ್ಟಲೆ ಕಪ್ಪು ಹಣ ಬಳಕೆ ಮಾಡಿ ಅತ್ಯಂತ ಆಡಂಬರದಿಂದ ಮದುವೆ ಮಾಡುವವರ ಮೇಲೆ ಸರ್ಕಾರ ನಿಗಾ ವಹಿಸಬೇಕೇ ಹೊರತು ಜನಸಾಮಾನ್ಯರ ಮದುವೆಯ ಬಗ್ಗೆ ಅಲ್ಲ. ಸರ್ಕಾರದ ಮಂತ್ರಿಗಳು ದಿಢೀರಾಗಿ ಇಂಥ ಹೇಳಿಕೆ ಕೊಡುವುದು ಬೇಸರದ ಸಂಗತಿ. ದುಬಾರಿ ಉಡುಗೊರೆ ಕೊಡುವುದು, ದೊಡ್ಡ ಮೊತ್ತದ ವರದಕ್ಷಿಣೆಗೆ ಕಡಿವಾಣ ಹಾಕಬೇಕು, ಜಾತ್ಯತೀತ ಮತ್ತು ಸರಳ ಮದುವೆ ಬೆಂಬಲಿಸುವ ಬಗ್ಗೆ ಸರ್ಕಾರ ಆಲೋಚಿಸಬೇಕು. ಇನ್ನು ಬಂದವರಿಗೆ ಆತಿಥ್ಯ ಮಾಡುವುದು ಕನ್ನಡಗಿರ ಗುಣ. ಮದುವೆ ಬರುವವರನ್ನು ಲೆಕ್ಕ ಹಾಕುವುದು ಸರಿಯಾದ ನಿರ್ಧಾರವಲ್ಲ.
-ಕುಂ. ವೀರಭದ್ರಪ್ಪ, ಖ್ಯಾತ ಕಾದಂಬರಿಕಾರ, ಬಳ್ಳಾರಿ

ಸಂಪ್ರದಾಯ ನಿಯಂತ್ರಣ ಅಸಾಧ್ಯ

ಅದ್ಧೂರಿ ವಿವಾಹ ಸಮಾರಂಭಗಳಿಗೆ ತೆರಿಗೆ ವಿಧಿಸುವ ಮೂಲಕ ಸರ್ಕಾರದ ಉದ್ದೇಶ ಏನೇ ಇದ್ದರೂ ಜನರ ಉತ್ಸಾಹ, ಸಂಪ್ರದಾಯ ನಿಯಂತ್ರಿಸುವುದು ಸಾಧ್ಯವಿಲ್ಲ. ವಿವಾಹ ಸಮಾರಂಭಗಳ ವಿಚಾರದಲ್ಲಿ ಸರ್ಕಾರ ವಿನಾಕಾರಣ ಮಧ್ಯಪ್ರವೇಶಿಸುತ್ತಿದೆ. ರಾಜ್ಯದ ಜನಹಿತ, ಅಭಿವೃದ್ಧಿಪರ ಯೋಜನೆಗಳ ಬಗ್ಗೆ ಚಿಂತನೆ ಮಾಡುವುದನ್ನು ಬಿಟ್ಟು ಅದ್ಧೂರಿ ವಿವಾಹ ಸಮಾರಂಭಗಳಿಗೆ ತೆರಿಗೆ ವಿಧಿಸುತ್ತಿರುವ ಕ್ರಮ ಸಮಂಜಸವಲ್ಲ. ಎಲ್ಲರೂ ತಮ್ಮ ತಮ್ಮ ಪ್ರತಿಷ್ಠೆ, ಧಾರ್ಮಿಕ ಆಚರಣೆ, ಸಂಪ್ರದಾಯದಂತೆ ವಿವಾಹ ಮಾಡಿಕೊಳ್ಳುತ್ತಾರೆ. ಈ ಸಮಾರಂಭದಲ್ಲಿ ಇಷ್ಟೇ ಜನ ಪಾಲ್ಗೊಳ್ಳಬೇಕು, ಎಷ್ಟು ಜನ ಪಾಲ್ಗೊಂಡಿದ್ದರು ಎಂಬ ಬಗ್ಗೆ ಲೆಕ್ಕಹಾಕುವುದು ಹಾಗೂ ತೆರಿಗೆ ವಿಧಿಸುವುದಾಗಿ ಕಾನೂನು ಸಚಿವರ ಹೇಳಿಕೆ ಬಾಲಿಶತನದಿಂದ ಕೂಡಿದೆ. ವಿವಾಹ ಸಮಾರಂಭಗಳ ವಿಚಾರದಲ್ಲಿ ಸರ್ಕಾರ ತಲೆ ಹಾಕುವುದು ಸರಿಯಲ್ಲ. ತೆರಿಗೆ ವಿಧಿಸುವ ವಿಚಾರ ಕೈಬಿಡಬೇಕು. ಜನಪರ, ಜನಹಿತ ಕಾರ್ಯಗಳನ್ನು ಮಾಡುವುದನ್ನು ಬಿಟ್ಟು ಇಲ್ಲಸಲ್ಲದ ಉಸಾಬರಿ ಮಾಡುವುದನ್ನು ಕಾನೂನು ಸಚಿವರು ನಿಲ್ಲಿಸಬೇಕು.
-ಡಾ.ರಾಮಕೃಷ್ಣ ಮರಾಠೆ ಸಾಹಿತಿ, ಬೆಳಗಾವಿ

ಪ್ರಥಮ ರಾತ್ರಿ ಮೇಲೂ ತೆರಿಗೆ!

ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರ ವಿಚಾರ ಮೂರ್ಖತನದಿಂದ ಕೂಡಿದೆ. ಇಂಥ ಕಾರ್ಯಸಾಧುವಲ್ಲದ ಕಾನೂನುಗಳನ್ನು ಜಾರಿಗೆ ತಂದರೆ ಕರ್ನಾಟಕ ಸರ್ಕಾರ ಮೊಹ್ಮದ ತುಘಲಕ್ ಆಡಳಿತದಂತೆ ಹುಚ್ಚರ ರಾಜ್ಯವಾಗುತ್ತದೆ. ಅದ್ಧೂರಿ ಮದುವೆ ಮಾಡುವವರಲ್ಲಿ ರಾಜಕಾರಣಿಗಳೇ ಹೆಚ್ಚು. ಬೆಂಗಳೂರು, ನವದೆಹಲಿ, ಮುಂಬೈ, ಕೋಲ್ಕತಾ ಮುಂತಾದ ಮಹಾನಗರಗಳಲ್ಲಿ ಇಂಥ ದುಂದು ವೆಚ್ಚ ಹಾಗೂ ಆಡಂಬರದ ಮದುವೆಗಳು ನಡೆಯುತ್ತವೆ. ರಾಜ್ಯ ಸರ್ಕಾರ ಮೊದಲು ರಾಜಕಾರಣಿಗಳ, ಅಧಿಕಾರಿಗಳ ಮದುವೆ ಮೇಲೆ ಕಡಿವಾಣ ಹಾಕುವ ಧೈರ್ಯ ಮಾಡಬೇಕು. ಬಡವರು, ಮಧ್ಯಮ ವರ್ಗದವರು ಸಾಮೂಹಿಕ ವಿವಾಹದಲ್ಲಿ ತಮ್ಮ ಮಕ್ಕಳ ಮದುವೆ ಮಾಡಿಕೊಳ್ಳುತ್ತಾರೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡುವುದು ಸರಿಯಲ್ಲ. ಇಂದು ಮದುವೆ ದುಂದು ವೆಚ್ಚದ ಮೇಲೆ ತೆರಿಗೆ ವಿಧಿಸಲು ವಿಚಾರ ಮಾಡುತ್ತಿರುವ ಸರ್ಕಾರ ನಾಳೆ ಪ್ರಥಮ ರಾತ್ರಿ ಕಾರ್ಯಕ್ರಮದ ಮೇಲೆಯೂ ತೆರಿಗೆ ವಿಧಿಸುವ ಹುಚ್ಚ ನಿರ್ಧಾರಕ್ಕೆ ಕೈ ಹಾಕಿದರೂ ಅಚ್ಚರಿಯಿಲ್ಲ. ಇದು ಮೊಹ್ಮದ ತುಘಲಕ್ ಹುಚ್ಚ ಸರ್ಕಾರದ ನಕಲು ಮಾಡಿದಂತಾಗುತ್ತದೆ. ಬಡವರು, ಮಧ್ಯಮ ವರ್ಗದವರು ತಮ್ಮ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಮದುವೆಯಲ್ಲಿ ಖರ್ಚು ಮಾಡುತ್ತಾರೆ. ಅವರೇನೂ ಸಾಲದ ಹೊರೆ ಹೆಚ್ಚಾಯಿತು. ಮದುವೆ ಖರ್ಚನ್ನು ಸರ್ಕಾರ ನೀಡಬೇಕು ಎಂದು ಸರ್ಕಾರಕ್ಕೆ ಅರ್ಜಿ ಹಾಕಿಕೊಳ್ಳುವುದಿಲ್ಲ. ಅವರ ಸಾಲವನ್ನು ಅವರೇ ತೀರಿಸುತ್ತಾರೆ. ಆದ್ದರಿಂದ ರಾಜ್ಯ ಸರ್ಕಾರ ಇದನ್ನು ಕೈ ಬಿಡಬೇಕು.
-ಈಶ್ವರಚಂದ್ರ ಚಿಂತಾಮಣಿ, ಹಿರಿಯ ಸಾಹಿತಿ, ಬಿಜಾಪುರ

ತೆರಿಗೆಯೇ ಪರಿಹಾರವೇನಲ್ಲ

ಬದುಕಿನ ಬಹು ಮುಖ್ಯ ಘಟ್ಟಗಳಲ್ಲಿ ಮದುವೆ ಸಂದರ್ಭವೂ ಒಂದು. ಸಂಪ್ರದಾಯಬದ್ದ ಮದುವೆ ಇವತ್ತು ಅನೇಕ ವಿಧದಲ್ಲಿ ಬದಲಾವಣೆಗಳನ್ನು ಕಂಡುಕೊಳ್ಳುತ್ತಿದೆ. ಸಂಭ್ರಮದ ಸಂಕೇತವಾದ ಮದುವೆಗಳು ಇವತ್ತು ಅವಸರದ ಬದುಕಿನ ಆತಂಕದಲ್ಲಿ ಜರುಗುತ್ತಿವೆ. ಜನಪ್ರಿಯವಾಗುತ್ತಿರುವ 'ಯಾದಿ ಮೇ ಶಾದಿ'ಯ ನಡುವೆಯೂ ಅದ್ಧೂರಿ ಮದುವೆಗಳಿಗೆ ನಾವು ಸಾಕ್ಷಿಯಾಗಿದ್ದೇವೆ. ಕಲ್ಯಾಣ ಮಂಟಪಗಳಿಗೆ ತೆರಿಗೆ ಕಟ್ಟುತ್ತಿರುವ ಹೊತ್ತಿನಲ್ಲಿ ಈಗ ಕಲ್ಯಾಣವಾಗುವವರೂ ತೆರಿಗೆ ಕಟ್ಟಬೇಕಾದ ಕಾಯ್ದೆ ರೂಪಿಸುತ್ತಿರುವುದು ಸರಿಯಾದ ಕ್ರಮವಲ್ಲ. ಹಾಗೆ ನೋಡಿದರೆ ನಮ್ಮ ಮದುವೆ ಸಮಾರಂಭಗಳನ್ನು ಇನ್ನಷ್ಟು ಸರಳಗೊಳಿಸುವ ದಿಸೆಯಲ್ಲಿ ನಾವು ಯೋಚಿಸಬೇಕಾಗಿದೆ. ಯಾವುದೇ ಕಾಯ್ದೆ ರೂಪಿಸಿದರೂ ಅದು ಬಡ, ಮಧ್ಯಮ ವರ್ಗದ ಕುಟುಂಬಗಳಿಗೇ ಹೊರೆಯಾಗುತ್ತದೆ. ಸಿರಿವಂತರು ಕಾಯ್ದೆ ರೂಪಿಸುತ್ತಾರೆ, ಬಡವರು ಪಾಲಿಸುತ್ತಾರೆ. ಈ ಮೆ ವೆಚ್ಚದಾಯಕ ಹಾಗೂ ಅರ್ಥಪೂರ್ಣ ಮದುವೆಗಳನ್ನು ನಾವು ಯೋಜಿಸಬೇಕಾಗಿದೆ. ದೈವ ಸ್ವರೂಪದಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ಮಠ ಮಾನ್ಯಗಳು, ಸೇವಾ ಸಂಸ್ಥೆಗಳು ಈ ದಿಸೆಯಲ್ಲಿ ಮನಸ್ಸು ಮಾಡಬೇಕು. ಪ್ರತಿ ಕುಟುಂಬಗಳಿಗೂ ಸುಲಭ ಮತ್ತು ಸರಳವಾಗಿ ಲಭ್ಯವಾಗುವಂತೆ ಪ್ರತಿ ಜನವಸತಿ ಪ್ರದೇಶಗಳಲ್ಲೂ ಸರ್ಕಾರ ಸುವ್ಯವಸ್ಥಿತ ಕಲ್ಯಾಣ ಮಂಟಪಗಳನ್ನು ನಿರ್ಮಿಸಿ, ಸ್ಥಳೀಯ ಸಂಸ್ಥೆಗಳ ಉಸ್ತುವಾರಿಗೆ ನೀಡಬೇಕು. ಅದ್ಧೂರಿ ಮದುವೆಯ ಆಕರ್ಷಣೆಗಳಾದ ಆಮಂತ್ರಣ ಪತ್ರಿಕೆ, ಆಲ್ಬಂ, ವೇದಿಕೆಯ ನಿರ್ಮಾಣ ಮೊದಲಾದವುಗಳಿಗೆ ಕಡಿವಾಣ ಹಾಕುವಂತೆ ಮನವೊಲಿಸಲಿ. ಇದು ತೆರಿಗೆ ಕಟ್ಟುವ ಮೂಲಕ ಪರಿಹಾರವಾಗುವುದಿಲ್ಲ.
-ಡಾ. ಪ್ರಕಾಶ ಗ. ಖಾಡೆ, ಸಾಹಿತಿ, ಬಾಗಲಕೋಟೆ

ಕರ್ನಾಟಕ ಸರಕಾರಕ್ಕೆ ಇಂಥ ಮನೆಹಾಳು ಐಡಿಯಾಗಳನ್ನು ಅದ್ಯಾರು ಕೊಡುತ್ತಾರೋ, ದೇಹದ ಅದ್ಯಾವ ಭಾಗದಿಂದ ಉದ್ಭವ ಆಗುತ್ತವೋ ನಮಗಂತೂ ಅರ್ಥವಾಗುವುದಿಲ್ಲ. ಐದು ಲಕ್ಷ ರೂಪಾಯಿಗಿಂತ ಹೆಚ್ಚು ಮಾಡಿದ ಖರ್ಚಿಗೆ ತೆರಿಗೆ ಹಾಕಿ, ಅದರಿಂದ ಬಡವರ ಮದುವೆ ಮಾಡಿಸುತ್ತೇವೆ ಎಂಬುದು ಮೂರ್ಖತನದ ಪರಮಾವಧಿಯೇ ಸರಿ.
ಅಲ್ಲಾ, ಉಳ್ಳವರು ಬಂಗಲೆ ಕಟ್ಟಿಸಿದ್ದಾರೆ ಎಂದಿಟ್ಟುಕೊಳ್ಳೋಣ. ಆ ಬಂಗಲೆ ಪಕ್ಕ ಗುಡಿಸಲು ಇದೆ, ಅಲ್ಲಿ ವಾಸಿಸುವವನ ಮನಸ್ಥಿತಿ ಮೇಲೆ ಆ ಬಂಗಲೆ ಪ್ರತಿಕೂಲ ಪರಿಣಾಮ ಬೀರುತ್ತದೆ, ಆ ಬಡವನಲ್ಲಿ ಕೀಳರಿಮೆ ಮೂಡಿಸುತ್ತದೆ ಎಂಬ ಕಾರಣಕ್ಕೆ ಬಂಗಲೆಯನ್ನು ಒಡೆದು ಹಾಕಿ, ಗುಡಿಸಲಲ್ಲೇ ವಾಸಿಸಿ ಎಂದು ಹೇಳಲು ಸಾಧ್ಯವೇ? ಇಲ್ಲ ಆ ಬಂಗಲೆಯವರಿಗೆ ತೆರಿಗೆ ವಿಧಿಸಿ, ಆ ಹಣದಿಂದ ಗುಡಿಸಲು ವಾಸಿಗಳಿಗೆ ಮನೆ ಕಟ್ಟಿ ಕೊಡುತ್ತೇವೆ ಎನ್ನುವುದು ಸರಿಯೇ. ಹಾಗಾದರೆ ಈ ಸರಕಾರ ಇರುವುದಾದರೂ ಏತಕ್ಕೆ? ಸರಕಾರಕ್ಕೆ ತಾಕತ್ತು ಇದ್ದರೆ, ಬಡವರ ಬಗ್ಗೆ ಕಾಳಜಿ ಇದ್ದರೆ, ಅವರಿಗೂ ಬಂಗಲೆ ಕಟ್ಟಿಕೊಡಲಿ, ಅವರ ಜೀವನ ಸ್ಥಿತಿ ಸುಧಾರಿಸಲಿ, ಅದಕ್ಕಾಗಿ ಯೋಜನೆಗಳನ್ನು ರೂಪಿಸಿ, ಜಾರಿಗೆ ತರಲಿ. ಅವರನ್ನೂ ಶ್ರೀಮಂತರನ್ನಾಗಿ ಮಾಡಲಿ. ಅದನ್ನು ಬಿಟ್ಟು ಶ್ರೀಮಂತರ ಪಿಕ್‌ಪಾಕೆಟ್ ಮಾಡಿ, ಆ ಹಣದಿಂದ ಬಡವರನ್ನು ಉದ್ಧಾರ ಮಾಡುತ್ತೀವಿ ಅನ್ನುತ್ತದಲ್ಲಾ, ಈ ಸರ್ಕಾರಕ್ಕೇನಾದರೂ ಘನತೆ-ಗೌರವ, ಬದ್ಧತೆ ಎಂಬುದು ಇದೆಯೇ?
ನನಗನ್ನಿಸುತ್ತದೆ, ಸಚಿವ ಜಯಚಂದ್ರ ಅವರು ಇಂಥ ಹೇಳಿಕೆಗಳನ್ನು ಕೊಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಮೂಢನಂಬಿಕೆ ನಿಷೇಧ ಕರಡು ಪ್ರಸ್ತಾವನೆ ಬಗ್ಗೆ ಪ್ರಸ್ತಾಪಿಸಿ ಜನರ ಭಾವನೆಗಳನ್ನು ಕೆದಕಿದ್ದರು, ಕೆರಳಿಸಿದ್ದರು. ಜಯಚಂದ್ರ ಅವರ ನಡೆ ನೋಡಿದರೆ ಅವರೆಲ್ಲೋ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಾಯಕತ್ವದ ವಿರುದ್ಧವೇ 'ಸುಪಾರಿ' ಪಡೆದಂತೆ ಕಾಣುತ್ತಾರೆ. ಸಿದ್ದರಾಮಯ್ಯನವರು ನೆಮ್ಮದಿಯಿಂದ ಇರುವುದು ಜಯಚಂದ್ರ ಅವರಿಗೆ ಬೇಕಿಲ್ಲ ಎಂದೆನಿಸುತ್ತದೆ. ಸಿದ್ದರಾಮಯ್ಯನವರು ಜಯಚಂದ್ರ ಅವರ ಪ್ರಾಬ್ಲಮ್ ಏನು ಅಂತ ಕೇಳಿ, ಅದನ್ನು ಪರಿಹರಿಸದಿದ್ದರೆ ಮುಂದೆ ಅವರೇ ಸಿದ್ದರಾಮಯ್ಯ ಅವರಿಗೇ ಯಾವುದಾದರೂ ಸೀರಿಯಸ್ ಪ್ರಾಬ್ಲಮ್ ತಂದಿಡುವುದರಲ್ಲಿ ಯಾವುದೇ ಅನುಮಾನ ಇಲ್ಲ!
-ಅರ್ಜುನ್, ಹನುಮಗಿರಿ

ಮಂಗಳ ಕಾರ್ಯಕ್ಕೆ 109ನೇ ವಿಘ್ನ

ನಾವೇನು ಮಾಡಿದರೂ ಜನ ಸುಮ್ಮನೆ ಸ್ವೀಕರಿಸುತ್ತಾರೆ ಎನ್ನುವ ರೀತಿಯಲ್ಲಿ ಅದ್ಧೂರಿ ಮದುವೆಗೆ ತೆರಿಗೆ ವಿಧಿಸಲು ಚಿಂತನೆ ನಡೆಸಿರುವ ಸರ್ಕಾರ, ಮಂಗಳ ಕಾರ್ಯಕ್ಕೆ 109ನೇ ವಿಘ್ನವನ್ನೂ ಸೇರಿಸಲು ಹೊರಟಿದೆ. ಯಾರೋ ಒಬ್ಬರು 7500 ಬೆಲೆಯ ಮದುವೆ ಆಮಂತ್ರಣ ಪತ್ರಿಕೆ ಮುದ್ರಿಸಿದ ಕಾರಣ ಇಟ್ಟುಕೊಂಡು ಮಧ್ಯಮ ವರ್ಗದ ಜನರ ಮದುವೆ ಮೇಲೆ ತೆರಿಗೆ ಪ್ರಹಾರ ಮಾಡಲು ಹೊರಟಿದ್ದು ಜನ ವಿರೋಧಿ ಕ್ರಮ. ಮದುವೆಗಾಗಿ ಕೊಳ್ಳುವ ಎಲ್ಲ ವಸ್ತುಗಳ ಮೇಲೆ ಮೊದಲೇ ತೆರಿಗೆ ಬಿದ್ದಿರುತ್ತದೆ. ಮತ್ತೆ ಮದುವೆಯ ತೆರಿಗೆಯನ್ನು ಹೇರುವುದು ಸುಲಿಗೆಯೇ ಆಗುತ್ತದೆ. ಮದುವೆಗೆ ಸಾವಿರಾರು ಜನ ಹಾಜರಾಗುವುದೂ ಸಾಮಾನ್ಯ ಸಂಗತಿ. ಎಲ್ಲ ವಸ್ತುಗಳ ಬೆಲೆಯೂ ಮುಗಿಲು ಮುಟ್ಟಿರುವುದರಿಂದ ಮದುವೆಗೆ ಏನಿಲ್ಲವೆಂದರೂ ಖರ್ಚು 5 ಲಕ್ಷ ದಾಟುತ್ತದೆ. ಸರ್ಕಾರ ಅದಕ್ಕೆ ತೆರಿಗೆ ವಿಧಿಸುವುದು ಊಟ ಮಾಡುವ ಅನ್ನದಲ್ಲಿ ಹರಳು ಬೆರೆಸಿದಂತಾಗುತ್ತದೆ. ಮದುವೆಯಲ್ಲಿ ಬಂಧು-ಬಾಂಧವರೆಲ್ಲ ಸೇರಿ ಸಂಭ್ರಮ ಹಂಚಿಕೊಳ್ಳಲು ಕೊಡುಗೆ ನೀಡಿದರೆ, ಸರ್ಕಾರ ತೆರಿಗೆಯ ಗಿಫ್ಟ್ ನೀಡಿ ಅಪಹಾಸ್ಯ ಮಾಡಲು ಹೊರಟಿದ್ದು ಸರಿಯಲ್ಲ. ಒಂದು ವೇಳೆ ಹಠದಿಂದ ತೆರಿಗೆ ಹೇರಲು ಮುಂದಾದರೆ ಜನ ಶಕ್ತಿಯೇ ಸರ್ಕಾರದ ವಿರುದ್ಧ ನಿಲ್ಲುವುದು ಖಚಿತ. ಇಂತಹ ಆಲೋಚನೆಗಳು ಸಚಿವರ ತಲೆಯಲ್ಲಿ ಹೇಗೆ ಬರುತ್ತವೋ ತಿಳಿಯದು.
-ವಿಠ್ಠಪ್ಪ ಗೋರಂಟ್ಲಿ, ಸಾಹಿತಿ, ಕೊಪ್ಪಳ

ಲಗ್ನ ವೆಚ್ಚದ ಮಿತಿ ಹೆಚ್ಚಲಿ

ರಾಜ್ಯ ಸರ್ಕಾರ ಅದ್ಧೂರಿ ಮದುವೆಗೂ ತೆರಿಗೆ ವಿಧಿಸುವ ಚಿಂತನೆಗೆ ಮುಂದಾಗಿರುವುದನ್ನು ಕಂಡು ಒಂದೆಡೆ ಸರಿ ಎನಿಸಿದರೂ, ಮತ್ತೊಂದೆಡೆ ಆ ಕಾನೂನು ಜಾರಿಯಾದರೆ ಏನಾದೀತು ಎಂಬುವ ಆತಂಕವೂ ನನ್ನನ್ನು ಕಾಡಿದೆ. ಅದ್ಧೂರಿ ಹಾಗೂ ಆಡಂಬರದ ಮದುವೆ ನಡೆಸುವುದು ಆ ಕುಟುಂಬಕ್ಕೂ ಹೊರೆ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗೆಯೇ ಹಿತಮಿತವಾದ ಜನರ ನಡುವೆ ನಡೆಯುವ ಮದುವೆ ಆರೋಗ್ಯಕರ ಹಾಗೂ ಆಶಾದಾಯಕ. ಹೀಗಾಗಿ ಸರ್ಕಾರ ಅದ್ಧೂರಿ ಮದುವೆಗೂ ತೆರಿಗೆ ವಿಧಿಸಲು ಮುಂದಾಗಿರುವುದು ಸ್ವಾಗತಾರ್ಹ. ಆದರೆ ಒಂದು ಮದುವೆಗೆ ಮಾಡುವ ಖರ್ಚು ಎಷ್ಟು ಎಂಬುದನ್ನು ಗಮನದಲ್ಲಿ ಇಟ್ಟಿಕೊಂಡು ಅದಕ್ಕೆ ತೆರಿಗೆ ವಿಧಿಸುವುದು ಸಮಂಜಸವಾದುದು. ಅದನ್ನು ಬಿಟ್ಟು, ಒಂದು ಸಾವಿರಕ್ಕೂ ಹೆಚ್ಚಿನ ಮಂದಿ ಆ ಮದುವೆಯಲ್ಲಿ ಭಾಗವಹಿಸಿದರೆ ತೆರಿಗೆ ಹಾಕಲಾಗುವುದು ಎಂಬುದು ಸರಿಯಲ್ಲ. ಈಗಿನ ಕಾಲದಲ್ಲಿ ಮದುವೆಗೆ ಅಗತ್ಯವಾದ ಚಿನ್ನಾಭರಣ, ಛತ್ರಗಳು ಹಾಗೂ ಊಟಕ್ಕೆ ಅಗತ್ಯವಾದ ದಿನಸಿ ಮತ್ತಿತರ ಖರ್ಚುಗಳನ್ನು ಲೆಕ್ಕ ಹಾಕಿದರೆ ಸಾಮಾನ್ಯ ಅಥವಾ ಮಧ್ಯಮ ವರ್ಗದ ಕುಟುಂಬಕ್ಕೆ ಕನಿಷ್ಠ ಎಂದರೇ 5 ಲಕ್ಷ ಬೇಕೇ ಬೇಕು. ಹೀಗಿರುವಾಗ ಸಾಮಾನ್ಯ ಅಥವಾ ಮಧ್ಯಮ ವರ್ಗದ ಕುಟುಂಬವು ಮದುವೆಯ ಸಂಭ್ರಮ ಹಾಗೂ ಸಂತೋಷದಿಂದ ಹೊರತಾಗುವುದು ತೆರಿಗೆಯ ಹೊರೆಯಿಂದ ಸಲ್ಲದು. ಆದ್ದರಿಂದ ಮದುವೆ ಖರ್ಚಿನ ಮಿತಿಯಿಂದ 5 ಲಕ್ಷಕ್ಕೂ ಹೆಚ್ಚುವಲ್ಲಿ ಸರ್ಕಾರ ಮುಂದಾಗುವ ಅಗತ್ಯವಿದೆ.
-ಪ್ರೊ.ಅರವಿಂದ ಮಾಲಗತ್ತಿ, ಸಾಹಿತಿ, ಮೈಸೂರು

ಸಂತೋಷಕ್ಕೆ ಹುಳಿ ಹಿಂಡಬೇಡಿ

ಮದುವೆ ಎನ್ನುವುದು ಪವಿತ್ರವಾದ ಸಾಮಾಜಿಕ ಒಪ್ಪಂದ. ಅದು ವೈಯಕ್ತಿಕ ನಂಬಿಕೆಗೆ ಸಂಬಂಧಿಸಿದ್ದು. ಜೀವನದಲ್ಲಿ ಒಮ್ಮೆ ಬರುವ ಮದುವೆಯ ಸಂತೋಷದ ಕ್ಷಣದಲ್ಲಿ ಅತಿಥಿಗಳು ಹೆಚ್ಚು ಅಥವಾ ಕಡಿಮೆಯೂ ಬರಬಹುದು. ಆದರೆ, ಸರ್ಕಾರ ಈ ವಿಷಯದಲ್ಲೂ ಮೂಗು ತೂರಿಸುವುದು ಮೂರ್ಖತನದ ಪರಮಾವಧಿ. ಕಾನೂನು ಮೂಲಕ ಮದುವೆಯ ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಪ್ರಯತ್ನ ಅನೇಕ ಅನರ್ಥಗಳಿಗೆ ಎಡೆ ಮಾಡಿಕೊಡುತ್ತದೆ. ಮದುವೆಗಳ ದುಂದು ವೆಚ್ಚವನ್ನು ಸರ್ಕಾರ ತಡೆಯಲೇಬೇಕೆಂಬ ಇರಾದೆ ಇದ್ದರೆ, ಪಾಲಕರ ಹಾಗೂ ಯುವಜನರ ಮನಸ್ಸನ್ನು ಪರಿವರ್ತಿಸಲಿ. ಮದುವೆ ಬಗ್ಗೆ ಇರುವ ದೃಷ್ಟಿಕೋನ ಬದಲಿಸುವ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಿ. ಪೂರಕವಾಗಿ ಸಮೂಹ ಮಾಧ್ಯಮಗಳ ಮುಖಾಂತರ ಸಮಾಜ ಸೇವಾ ಕಾರ್ಯಕರ್ತರು, ಸಾಹಿತಿ-ಕಲಾವಿದರು ಈ ಕುರಿತು ವಿವಿಧ ರೀತಿಯ ಪ್ರಚಾರ ಮಾಡಿ, ನಿಧಾನವಾಗಿ ಜನತೆಯ ಮನಸ್ಸು ಪರಿವರ್ತನೆ ಮಾಡುವುದು ಸೂಕ್ತ. ಕಾನೂನು ಸಚಿವರು ಹಾಗೂ ಸರ್ಕಾರ ಈ ರೀತಿಯ ಚಿಂತನೆ ಮಾಡುವುದನ್ನು ಬಿಟ್ಟು ದುಂದು ವೆಚ್ಚದ ಮದುವೆಗಳಿಗೆ ತೆರಿಗೆ ಹಾಕುತ್ತೇವೆ ಎನ್ನುವುದು ತಪ್ಪು ನಿರ್ಧಾರ.
-ಡಾ.ಎಸ್.ಎಂ. ವೃಷಭೇಂದ್ರಸ್ವಾಮಿ, ವಿದ್ವಾಂಸರು, ಧಾರವಾಡ

ಒಂದು ಹಳ್ಳಿ ಮುಗ್ಧನ ಕಥೆ..!

ಸಚಿವ ಜಯಚಂದ್ರರ ಯೋಚನೆ ಕಂಡು ಎಲ್ಲರಿಗೂ ಗೊತ್ತಿರಬಹುದಾದ ಹಳೆಯ ಕಥೆಯೊಂದು ನೆನಪಾಯಿತು. ಪಟ್ಟಣಕ್ಕೆ ಬಂದ ಹಳ್ಳಿಯ ಮುಗ್ಧನೊಬ್ಬ ಗಗನಚುಂಬಿ ಕಟ್ಟಡವೊಂದರ ಮುಂದೆ ಅದರ ಅಂತಸ್ತುಗಳನ್ನು ಲೆಕ್ಕ ಮಾಡುತ್ತ ಆಶ್ಚರ್ಯಚಕಿತನಾಗಿ ನಿಂತಿದ್ದ. ಅದನ್ನು ಗಮನಿಸಿದ ಪಟ್ಟಣದ ಚಾಲೂ ಆಸಾಮಿಯೊಬ್ಬ ಅವನ ಹತ್ತಿರಕ್ಕೆ ಬಂದು 'ಏನು ಮಾಡುತ್ತಿದ್ದೀಯಪ್ಪಾ? ಹಾಗೆಲ್ಲ ಕಟ್ಟಡದ ಅಂತಸ್ತುಗಳನ್ನು ಲೆಕ್ಕ ಮಾಡುವಂತಿಲ್ಲ. ಒಂದು ಅಂತಸ್ತಿಗೆ ಹತ್ತು ರುಪಾಯಿಯಂತೆ ತೆರಿಗೆ ಕಟ್ಟಬೇಕಾಗುತ್ತದೆ. ಈಗ ನೀನು ಎಷ್ಟು ಅಂತಸ್ತುಗಳನ್ನು ಲೆಕ್ಕ ಮಾಡಿದೆ ಹೇಳು? ಅಂದ. ಹಳ್ಳಿಯವ ಒಂದು ಕ್ಷಣ ಅವಾಕ್ಕಾದ. ಆದರೆ ಉಪಾಯವಿಲ್ಲ, ಏನೇನು ಕಾಯಿದೆಗಳೋ ಅಂತ ಮನಸ್ಸಿನಲ್ಲೇ ಯೋಚಿಸುತ್ತ, ನಾನು ಎಷ್ಟು ಲೆಕ್ಕ ಮಾಡಿದ್ದೇನೆ ಎಂಬುದು ಅವನಿಗೆ ಹೇಗೆ ಹೊತ್ತಾಗುತ್ತದೆ ಎಂದು ಇದ್ದುದರಲ್ಲಿಯೇ ಚುರುಕಾಗಿ ಕೇವಲ ಐದು ಅಂತಸ್ತು ಲೆಕ್ಕ ಮಾಡಿದ್ದೆ. ಅಷ್ಟರಲ್ಲಿ ನೀವು ಬಂದಿರಿ. ಇದೆಲ್ಲ ನನಗೆ ಗೊತ್ತಿರಲಿಲ್ಲ ಅನ್ನುತ್ತ ಐವತ್ತು ರುಪಾಯಿ ಕೊಟ್ಟ. ಹದಿನೈದು ಅಂತಸ್ತಿನ ಕಟ್ಟಡಕ್ಕೆ ಕೇವಲ 50 ಕೊಟ್ಟು, ಎಷ್ಟೆಲ್ಲ ಉಳಿಸಿ ಪಾರಾದೆನಲ್ಲ ಎಂದು ಹಳ್ಳಿಯವನೂ, ಪುಕ್ಕಟೆ 50 ಜೇಬಿಗೆ ಬಿದ್ದ ಖುಷಿಯಲ್ಲಿ ಪಟ್ಟಣದವನೂ... ನೆನಪಾಯಿತಲ್ಲ, ಈ ಮದುವೆಯ ತೆರಿಗೆಯ ಕಥೆ ಇದಕ್ಕಿಂತ ಭಿನ್ನವಾಗಿಲ್ಲ. ಖಾಸಗಿಯಾದ ಮದುವೆಯಂತ ವಿಚಾರಕ್ಕೆ ಕೈ ಹಾಕುವ ಮೊದಲು ಅದಕ್ಕಿಂತ ಮುಖ್ಯವಾದ ಮಹತ್ವದ ಅನೇಕ ಸಂಗತಿಗಳಿವೆ. ಸಚಿವ ಜಯಚಂದ್ರ ಅವರ ಕಾಳಜಿ ಪ್ರಾಮಾಣಿಕವಾದದು, ಆದರೆ ಅದು ಮದುವೆಗೆ ಸೀಮಿತಗೊಳ್ಳುವುದು ಬೇಡ.
-ವಿ. ಪಿ. ಹೆಗಡೆ, ನೆಮ್ಮದಿ ಕುಟೀರದ ಸಂಚಾಲಕ, ಶಿರಸಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement