ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ದುಬಾರಿ ಮದುವೆಗೆ ತೆರಿಗೆ: ಕೈಕಮಾಂಡ್ ಮಂಗಳಾರತಿ

ದುಬಾರಿ ಮದುವೆಗೆ ಕರ ವಿಧಿಸುವ ಕಾಯ್ದೆ ಜಾರಿಗೆ ತರಲು ಮುಂದಾಗಿರುವ ರಾಜ್ಯ...

Srinivasa Murthy VN
Updated On : 1 Jun 2014, 4:50 am

ಬೆಂಗಳೂರು: ದುಬಾರಿ ಮದುವೆಗೆ ಕರ ವಿಧಿಸುವ ಕಾಯ್ದೆ ಜಾರಿಗೆ ತರಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಈಗ ಕಾಂಗ್ರೆಸ್ ಹೈಕಮಾಂಡ್‌ನಿಂದಲೇ ವಿರೋಧ ವ್ಯಕ್ತವಾಗಿದೆ.
ತಲೆ ಬುಡವಿಲ್ಲದ ಜನವಿರೋಧಿ ಕಾಯ್ದೆಗಳನ್ನು ಜಾರಿಗೆ ತರುವುದೇಕೆ? ಎಂದು ಹೈಕಮಾಂಡ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಷ್ಟು ಮಾತ್ರವಲ್ಲ ಜೂ. 4ರಂದು ದೆಹಲಿಗೆ ಬರಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೇ ಈ ಬಗ್ಗೆ ಸ್ಪಷ್ಟೀಕರಣ ಪಡೆಯಲು ಹೈಕಮಾಂಡ್ ಬಯಸಿದೆ.
ಕುತೂಹಲಕಾರಿ ಸಂಗತಿ ಎಂದರೆ ರಾಜ್ಯ ಸರ್ಕಾರದ ಈ ವಿವಾದಿತ ಕಾಯ್ದೆ ಜಾರಿ ಬಗ್ಗೆ ಕಾಂಗ್ರೆಸ್ ಶಾಸಕರೇ ಹೈಕಮಾಂಡ್‌ಗೆ ಮಾಹಿತಿ ನೀಡಿದ್ದಾರೆ. ಲೋಕಸಭಾ ಚುನಾವಣೆಗೆ ಪೂರ್ವದಲ್ಲಿ ಕಾಂಗ್ರೆಸ್ ತೆಗೆದುಕೊಂಡ ಇಂಥ ಎಡವಟ್ಟು ನಿರ್ಧಾರಗಳಿಂದಲೇ ರಾಜ್ಯದಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಈಗ ಮತ್ತೆ ರಾಜ್ಯ ಸರ್ಕಾರ ಹಳೆ ಚಾಳಿ ಮುಂದುವರಿಸಿದರೆ ಪಕ್ಷಕ್ಕೆ ನಷ್ಟವಾಗುತ್ತದೆ ಎಂದು ಶಾಸಕರು ರಾಜ್ಯ ಉಸ್ತುವಾರಿ ಮುಖಂಡರ ಬಳಿ ಅಳಲು ತೋಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ಹೈಕಮಾಂಡ್, ಯಾವುದೇ ಕಾನೂನನ್ನು ಜಾರಿಗೆ ತರುವುದಕ್ಕೆ ಮುನ್ನ ಅದರ ಸಾಧಕ-ಬಾಧಕಗಳ ಬಗ್ಗೆ ಚಿಂತನೆ ನಡೆಸಬೇಕು. ಹಿಂದೆ ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಗೆ ತರಲು ಮುಂದಾದಾಗ ಏನಾಗಿತ್ತು ಎಂಬುದರ ಅರಿವಿಲ್ಲವೇ? ಪದೇ ಪದೆ ಇಂಥ ಹುಚ್ಚುತನಕ್ಕೆ ಕೈ ಹಾಕುವುದೇಕೆ? ಎಂದು ಹೈಕಮಾಂಡ್ ಪ್ರಶ್ನಿಸಿದೆ.
ಜನರ ಭಾವನಾತ್ಮಕ ವಿಚಾರಗಳನ್ನು ನಿಯಂತ್ರಿಸುವುದಕ್ಕೆ, ಆಚರಣೆಗಳ ಮೇಲೆ ಕರ ವಿಧಿಸುವುದಕ್ಕೆ ರಾಜ್ಯ ಸರ್ಕಾರಕ್ಕೆ ಯಾವುದೇ ಹಕ್ಕಿಲ್ಲ. ಕರ್ನಾಟಕದ ಜನರು ಎಷ್ಟು ಉದಾರ ಸ್ವಭಾವದವರೋ, ಕೆಲ ವಿಚಾರಗಳಲ್ಲಿ ಅಷ್ಟೇ ಸೂಕ್ಷ್ಮ ಮನಸ್ಥಿತಿ ಹೊಂದಿದ್ದಾರೆ. ಮದುವೆಯಂಥ ಆಚರಣೆಗಳ ಮೇಲೆ ಕರ ವಿಧಿಸಿ ಬೊಕ್ಕಸ ತುಂಬಿಸಿಕೊಳ್ಳುವಂಥ ಜರೂರತ್ತು ಏನಿತ್ತು? ಎಂದು ಹೈಕಮಾಂಡ್ ಪ್ರಶ್ನಿಸಿದೆ.
ಸಿಎಲ್‌ಪಿಯಲ್ಲಿ ಚರ್ಚೆ: ಈ ನಡುವೆ ಸಚಿವ ಜಯಚಂದ್ರ ಅವರು ಪ್ರಸ್ತಾಪಿಸಿರುವ ಈ ವಿವಾದಾತ್ಮಕ ಕಾನೂನು ಕಾಂಗ್ರೆಸ್ ಶಾಸಕರನ್ನೂ ಕೆರಳಿಸಿದೆ. ಜೂ 5ರಂದು ವಿಧಾನಸೌಧದಲ್ಲಿ ನಡೆಯುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಬಗ್ಗೆ ತರಾಟೆಗೆ ತೆಗೆದುಕೊಳ್ಳಲು ಶಾಸಕರು ನಿರ್ಧರಿಸಿದ್ದಾರೆ.
 ವಿಧಾನಸೌಧದಲ್ಲಿ ಕುಳಿತು ತಲೆಬುಡವಿಲ್ಲದ ಕಾನೂನು ಜಾರಿ ಮಾಡಲು ಸಚಿವರು ಮುಂದಾಗುತ್ತಾರೆ. ಆದರೆ ಇದರ ಬಿಸಿ ತಗಲುವುದು ಶಾಸಕರಿಗೆ. ದಿನನಿತ್ಯ ಸಾರ್ವಜನಿಕರಿಗೆ ಉತ್ತರ ನೀಡಲು ಯಾವ ಮಂತ್ರಿಗಳು ಬರುವುದಿಲ್ಲ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಲ್ಲ ಬಿಟ್ಟ ಭಂಗಿ ನೆಟ್ಟ
ಅದೇನಾಗಿದೆಯೋ ಕಾಂಗ್ರೆಸ್ ಸರ್ಕಾರಕ್ಕೆ, ಸಚಿವರುಗಳಿಗೆ. ಎಲ್ಲ ಬಿಟ್ಟ ಮಗ ಭಂಗಿ ನೆಟ್ಟ ಎಂಬಂತಾಡುತ್ತಿದ್ದಾರೆ. ಅನ್ನಭಾಗ್ಯ, ಶಾದಿಭಾಗ್ಯ, ಕ್ಷೀರಭಾಗ್ಯ, ಹಿಂದುಳಿದ ಮಕ್ಕಳಿಗೆ ಪ್ರವಾಸಭಾಗ್ಯ ಎಂದು ಹಿಂದೆ ಮುಂದೆ ಆಲೋಚನೆಯನ್ನೇ ಮಾಡದೆ ಘೋಷಿಸಿ ಬಿಡುವುದು. ವಿವಾದಗಳಾದಾಗ ಇದನ್ನು ಮುಂದೆ ಎಲ್ಲರಿಗೂ ವಿಸ್ತರಿಸಲಾಗುವುದು ಎಂದು ಕಣ್ಣೊರೆಸಿ ಮರೆತೇ ಬಿಡುವ ಪ್ರಕ್ರಿಯೆ ಸಾಮಾನ್ಯವಾಗಿ ಬಿಟ್ಟಿದೆ. ಈಗ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರ ಕಣ್ಣುಗಳು ವೈಭವೋಪೇತ ವಿವಾಹಗಳ ಮೇಲೆ ನೆಟ್ಟಿದೆ. ಐದು ಲಕ್ಷಕ್ಕೂ ಹೆಚ್ಚು ವೆಚ್ಚ ಮಾಡಿದರೆ, ಸಾವಿರಕ್ಕಿಂತಲೂ ಹೆಚ್ಚು ಆಹ್ವಾನಿತರು ಪಾಲ್ಗೊಂಡರೆ ಅದನ್ನು ವೈಭವೋಪೇತ ವಿವಾಹವೆಂದು ಪರಿಗಣಿಸಿ, ವೆಚ್ಚಕ್ಕೆ ಸರಿಯಾದ ತೆರಿಗೆ ವಿಧಿಸುತ್ತಾರಂತೆ.

1976ರ ಕರ್ನಾಟಕ ವಿವಾಹ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತಂದು ತೆರಿಗೆ ವಿಧಿಸುವ ಚಿಂತನೆ ಅವರದ್ದಾಗಿದೆ. ಅಂತೆಯೇ ಆ ತೆರಿಗೆ ಹಣಕ್ಕೆ 'ಮಾಂಗಲ್ಯ ನಿಧಿ' (ಭಾಗ್ಯ) ಎಂದು ನಾಮಕರಣ ಮಾಡಿ ಆ ನಿಧಿಯನ್ನು ಬಡವರ ಸಾಮೂಹಿಕ ವಿವಾಹ ಕಾರ್ಯಗಳಿಗೆ ನೀಡುವ ಸದುದ್ದೇಶವೂ ಇದೆ. ನಿಜಕ್ಕೂ ಅವರಿಗೆ ಕೆಳಮಧ್ಯಮ ವರ್ಗದವರ ಮೇಲಿರುವ ಕಳಕಳಿ ಅಭಿನಂದನಾರ್ಹ. ಇದನ್ನೆಲ್ಲಾ ಪರಿಶೀಲಿಸಲು ಅಧಿಕಾರಿಗಳ ತಂಡವನ್ನು ಪ್ರತಿ ಜಿಲ್ಲೆ, ತಾಲೂಕಿಗೂ ನೇಮಿಸಬೇಕಾಗುತ್ತದಲ್ಲವೇ? ಭ್ರಷ್ಟ ಅಧಿಕಾರಿಗಳು ಇಲ್ಲೂ ತಮ್ಮ ಕೈಚಳಕ ತೋರಿ ದುಂಡಗಾಗುತ್ತಾರೆಂದು ಸಂಪಾದಕರು ಅನುಮಾನ ವ್ಯಕ್ತಪಡಿಸಿರುವುದರಲ್ಲಿ ಅನುಮಾನವೇ ಇಲ್ಲ.
ಆಚಾರ ಹೇಳೋಕೆ ಬದನೆಕಾಯಿ ತಿನ್ನೋಕೆ ಎಂಬಂತೆ ಇತರರಿಗೆ ನೀತಿ ಪಾಠ ಹೇಳುವ ರಾಜಕಾರಣಿಗಳು ತಮ್ಮ ಮಕ್ಕಳ ವಿವಾಹಗಳನ್ನು ಅತ್ಯಂತ ಸರಳವಾಗಿ ಗುಡಿ ಗುಂಡಾರ, ಮಠ ಮಾನ್ಯಗಳಲ್ಲಿ ಮಾಡುವರೇ? ಸಾಮೂಹಿಕ ವಿವಾಹಗಳಲ್ಲಿ ನೆರವೇರಿಸಿದ ಉದಾಹರಣೆಗಳುಂಟೆ? ಕೋಟಿಗಟ್ಟಲೇ ಖರ್ಚು ಮಾಡಿ ಐದಾರು ಸಾವಿರ ಜನರನ್ನು ಕರೆದು ವೈಭವೋಪೇತ ವಿವಾಹ ಮಾಡುವವರು ಇವರೇ. ಇವರಿಗೆ ವಿವಾಹವಷ್ಟೇ ಅಲ್ಲ ಎಲ್ಲವೂ ಅದ್ಧೂರಿಯಾಗಿಯೇ ನಡೆಯಬೇಕು. ಚುನಾವಣಾ ರ್ಯಾಲಿಗಳಿಗೆ ಇವರ ಖರ್ಚೆಷ್ಟು? ಗೆದ್ದಾಗ ಆಚರಿಸುವ ವಿಜಯೋತ್ಸವಕ್ಕೆ ಚೆಲ್ಲುವ ಹಣಕ್ಕೆ ಮಿತಿಯುಂಟೆ?
ಹಾಗಂತ ಅದ್ಧೂರಿ ವಿವಾಹವನ್ನು ಬೆಂಬಲಿಸಬೇಕೆ? ಇದ್ದವರು ಮಾಡುತ್ತಾರೆಂದರೆ ಅವರಿಗೆ ಕೋಟಿಗಟ್ಟಲೆ ಖರ್ಚು ಮಾಡಲು ಹಣ ಎಲ್ಲಿಂದ ಬಂತು? ಬೆವರು ಬಸಿದು ಸಂಪಾದಿಸಿದವ ಲಕ್ಷಗಟ್ಟಲೆ ವರದಕ್ಷಿಣೆ, ವರೋಪಚಾರ, ಭಾರಿ ಛತ್ರ, ಭೋಜನ ವೆಚ್ಚ, ಚಿನ್ನ ಖರೀದಿ ಎಲ್ಲವನ್ನೂ ಭರಿಸಬಲ್ಲನೆ? ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು. ಸಾಲ ಮಾಡಿ ಶೂಲಕ್ಕೇರಬಾರದು. ಅದ್ಧೂರಿಯಾಗಿ ಮದುವೆ ಮಾಡುತ್ತಾರೆ. ಕೋಟಿಗಟ್ಟಲೆ ಖರ್ಚು ಮಾಡುತ್ತಾರೆಂದರೆ ಖಂಡಿತ ಆ ಹಣ ಪ್ರಾಮಾಣಿಕವಾಗಿ ದುಡಿದ ಸಂಪಾದನೆಯಾಗಿರುವುದಿಲ್ಲ. ಕಾರಣ ಕೋಟಿ ಖರ್ಚು ಮಾಡುವವನು ಜುಜುಬಿ ತೆರಿಗೆ ಕಟ್ಟಲು ಸಿದ್ಧನಾಗಿಯೇ ಅದ್ಧೂರಿ ಮದುವೆ ಜರುಗಿಸುತ್ತಾನೆ. ಸರ್ಕಾರ ಸಬ್ಸಿಡಿ ಹಣ ನೀಡುವುದಿಲ್ಲವೆಂದು ಸಿನಿಮಾದವರಿಗೆ ಧಮಕಿ ಹಾಕಿದರೂ ಅವರುಗಳು ರಿಮೇಕ್ ಸಿನಿಮಾ ಮಾಡುವುದನ್ನು ಬಿಡಲಿಲ್ಲ. ಸಬ್ಸಿಡಿಯನ್ನೇ ಬಿಟ್ಟರು. ಇದು ಹಾಗೆಯೇ.
ಈಗಂತೂ ಮಧ್ಯಮ ವರ್ಗದ ಮದುವೆಗಳಿಗೂ ಐದಾರು ಲಕ್ಷ ಪೀಕಲೇಬೇಕು. ಹೆಣ್ಣು ಹೆತ್ತವರು ಮನೆಯಲ್ಲಿಟ್ಟುಕೊಳ್ಳಲು ಸಾಧ್ಯವೇ? ಸಾಲ ಸೋಲ ಮಾಡಿ ಮದುವೆ ಮಾಡುವುದರಲ್ಲೇ ಹೈರಾಣವಾದ ಹೆತ್ತವರ ಮೇಲೆ ಸರ್ಕಾರದ ಟ್ಯಾಕ್ಸ್ ಸವಾರಿಯೇ? ಇದ್ಯಾವ ಸೀಮೆಯ 'ಕಾನೂನು' ಸಚಿವರೇ? ಅದ್ಧೂರಿ ಮದುವೆ ಮಾಡುವವರು ನಿಮ್ಮ ತೆರಿಗೆಗೆ ಬೆದರಿ ಸಿಂಪಲ್ ಮ್ಯಾರೇಜ್ ಎಂದು ನಿಮ್ಮ ನಿಯಂತ್ರಣಾಧಿಕಾರಿಗಳ ಕೈ ಬೆಚ್ಚಗೆ ಮಾಡಿ ಸರ್ಟಿಫಿಕೇಟ್ ಪಡೆಯದಿರುವರೇ? ನಾವೇ ನಮ್ಮ ಡೆತ್ ಸರ್ಟಿಫಿಕೇಟ್ ಸುಲಭವಾಗಿ ಪಡೆಯಬಲ್ಲ ಈ ಕಾಲದಲ್ಲಿ ಇಂತಹ ಸರ್ಟಿಫಿಕೇಟ್‌ಗಳಿಗೇನು ಬರ ಹೇಳಿ? ಹೀಗಂತ ಅದ್ಧೂರಿ ಮದುವೆಗಳು ಜರುಗಲಿ ಬಿಡಿ ಎಂಬುವುದೂ ಅಪರಾಧವೇ. ಮದುವೆ ಮನೆಗಳಲ್ಲಿ ತಿನ್ನುವುದಕ್ಕಿಂತ ಬಿಸಾಡುವುದೇ ಹೆಚ್ಚು. ಒಂದೂವರೆ ದಿನಕ್ಕೆ ಮಾಡುವ ಅದ್ಧೂರಿ ಅಲಂಕಾರ, ವಿದ್ಯುತ್, ಸಡಗರ, ಆರ್ಕೆಸ್ಟ್ರಾ ಅಬ್ಬರ ಎಲ್ಲ ವೇಸ್ಟೇ. ಆದರೆ, ಅನ್ನ ಹಾಕುವುದು ತಪ್ಪಲ್ಲ. ಅನ್ನಶಾಂತಿ ಅಂತಾರೆ. ಅನ್ನ ಹಾಕಿದ ಮನೆ ತಣ್ಣಗೆ ಅಂತಾರೆ. ಅಂತದ್ದರಲ್ಲಿ ಬಂದವರ ತಲೆ ಉಂಡವರ ಎಲೆ ಎಣಿಸಲೊಬ್ಬನ ನೇಮಿಸಲಾದೀತೆ? ಸಚಿವರ ಉದ್ದೇಶ ಒಳ್ಳೆಯದಿರಬಹುದು. ಆದರೆ, ಕಾನೂನಿನಿಂದ ನಿಯಂತ್ರಿಸಲು ಅಸಾಧ್ಯ. ನಮ್ಮಲ್ಲಿ ಅದ್ಧೂರಿ ವಿವಾಹಗಳು ಹಲವೊಮ್ಮೆ ದಾಖಲೆಗಳನ್ನೇ ನಿರ್ಮಿಸಿವೆ. ಸಹರಾ ಗ್ರೂಪ್‌ನ ಮಾಲೀಕ ಸುಬ್ರತಾರಾಯ್ (ಜೈಲು ಸೇರಿರುವ) 2004ರಲ್ಲಿ ತನ್ನ ಮಗನ ವಿವಾಹಕ್ಕೆ ಸುಮಾರು 552 ಕೋಟಿ ವೆಚ್ಚ ಮಾಡಿದ್ದಾನೆ. ಇದು ಪ್ರಪಂಚದ ಎರಡನೇ ವೈಭವೋಪೇತ ವಿವಾಹವೆಂಬ ದಾಖಲೆ ಮಾಡಿದೆ. ಲಕ್ಷ್ಮಿ ಮಿತ್ತಲ್ ಮಗಳ ಮದುವೆಗೆ 2004ರಲ್ಲಿ 240 ಕೋಟಿ ಖರ್ಚು ಮಾಡಿದ್ದಾರೆ. ತಮಿಳುನಾಡಿನ ಅಮ್ಮ ಜಯಲಲಿತಾ ತನ್ನ ಸಾಕು ಮಗನ ಮದುವೆಗೆ 1995ರಲ್ಲಿ ಸುರಿದಿದ್ದು ಸುಮಾರು 100 ಕೋಟಿ.  ಸಚಿವರ ಆಲೋಚನೆಯಲ್ಲಿ ಕಾಳಜಿ ಕಂಡರೂ ತೆರಿಗೆ ವಿಧಾನ ಹಾವು ಹೊಡೆದು ಹದ್ದುಗಳಿಗೆ ಹಾಕಿದಂತೆ.
ಸರ್ಕಾರಕ್ಕೆ ಕಷ್ಟವಾದರೆ ಮಠಮಾನ್ಯಗಳ ಸಹಯೋಗದಲ್ಲಿ ಶುಭ ಕಾರ್ಯ ಕೈಗೊಳ್ಳಲಿ. ಚಿತ್ರದುರ್ಗ ಮುರುಘಾಮಠವಂತೂ ಪ್ರತಿ ತಿಂಗಳು ಐದನೇ ತಾರೀಕಿನಂದು ಸರಳ ಸಾಮೂಹಿಕ ವಚನ ಮಾಂಗಲ್ಯ ವಿವಾಹ ನೆರವೇರಿಸುತ್ತಾ, ಉಚಿತ ತಾಳಿ, ಹೆಣ್ಣು-ಗಂಡಿಗೆ ಹೊಸ ಬಟ್ಟೆ ಬರೆ ನೀಡಿ ದಾಸೋಹವನ್ನು ಕೈಗೊಳ್ಳುತ್ತಾ 25 ವರ್ಷದ ದಾಖಲೆಯನ್ನೂ ಮೀರಿ ಮುನ್ನಡೆದಿದೆ. ಕಾನೂನಿನಿಂದ ಜಾರಿಗೆ ತರಲು ಹೊರಟರೆ ಒಳಸುಳಿಗಳಿರುತ್ತವೆ. ಮೊದಲು ನೀವು ನಿಮ್ಮ ಸಹೋದ್ಯೋಗಿಗಳೂ ಪಾಲಿಸಿ ನಾಲ್ಕು ವರ್ಷಗಳಲ್ಲಿ ಮನೆ ಮಾತಾಗಿ ಮಾದರಿ ಎನ್ನಿಸಿಕೊಳ್ಳಿ. ವರ್ಷಕ್ಕೊಮ್ಮೆ ಸರ್ಕಾರವೇ ಸರಳ ಸಾಮೂಹಿಕ, ಜಾತ್ಯತೀತ, ಮತಾತೀತ ವಿವಾಹ ಏರ್ಪಡಿಸಿ ಸರ್ವ ಸಮಾನತೆ ಬಿಂಬಿಸಲಿ. ಸಾಮಾಜಿಕ ನ್ಯಾಯದ ಪರಿಕಲ್ಪನೆ ಸಾಕಾರಗೊಳಿಸಲಿ. ಬಡವರೂ ಪ್ರತಿಷ್ಠೆಗಾಗಿ ಸಾಲ ಮಾಡಿ ಅದ್ಧೂರಿ ಮದುವೆ ಮಾಡುತ್ತಾರೆ. ಅಂಥವರ ಮೇಲೂ ತೆರಿಗೆ ಹೇರುವುದು ಸಾಧುವಲ್ಲ. ಕಾನೂನು ತರುವುದು ಸಮಂಜಸವೂ ಅಲ್ಲ.

-ಡಾ.ಬಿ.ಎಲ್. ವೇಣು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement