ಪ್ರಧಾನ ಸುದ್ದಿ

ಲಂಡನ್‌ನಲ್ಲಿ ಅತೀ ಎತ್ತರದ ಮನುಷ್ಯ -ಪ್ರಚಂಡ ಕುಳ್ಳನ ಸಮಾಗಮ

Rashmi Kasaragodu

ಲಂಡನ್: ಗಿನ್ನಿಸ್ ವಿಶ್ವ ದಾಖಲೆ ದಿನದ 10ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಜಗತ್ತಿನ ಅತೀ ಎತ್ತರದ ಮನುಷ್ಯ ಮತ್ತು ಜಗತ್ತಿನ ಅತೀ ಚಿಕ್ಕ ಕುಳ್ಳ ಪರಸ್ಪರ ಭೇಟಿಯಾಗಿದ್ದಾರೆ.

ಅತೀ ಎತ್ತರದ ಮನುಷ್ಯನೆಂಬ ದಾಖಲೆ ಹೊಂದಿರುವ 2.51 ಮೀಟರ್ (8 ಫೀಟ್, 9 ಇಂಚುಗಳು) ಎತ್ತರದ ಟರ್ಕಿಯ ಸುಲ್ತಾನ್ ಕೋಸೆನ್ ಮತ್ತು ಪ್ರಚಂಡ ಕುಳ್ಳನೆಂದ ಖ್ಯಾತನಾದ 55 ಸೆಂಟಿಮೀಟರ್ (ಇಪ್ಪತ್ತೊಂದೂವರೆ ಇಂಚುಗಳು) ಎತ್ತರದ ನೇಪಾಳದ ಚಂದ್ರ ಬಹದ್ದೂರ್ ದಾಂಗಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಗುರುವಾರ ನಡೆದ ಸಮಾರಂಭದಲ್ಲಿ ಲಂಡನ್‌ನ ಹೌಸ್ ಆಫ್ ಪಾರ್ಲಿಮೆಂಟ್‌ನ ಮುಂದೆ 31ರ ಹರೆಯದ ಕೃಷಿಕ ಕೋಸನ್, 74ರ ಹರೆಯದ ದಾಂಗಿ ಅವರ ಹಸ್ತಲಾಘವ ಮಾಡಿ ಫೋಟೋಗಳಿಗೆ ಪೋಸ್ ಕೊಟ್ಟು ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

ದಾಂಗಿ ಅವರು ಎಷ್ಟು ಎತ್ತರ ಇರಬಹುದು ಎಂದು ಕುತೂಹಲದಿಂದಿದ್ದೆ. ಅವರನ್ನು ನೋಡಿದಾಗ ತಿಳಿಯಿತು ಅವರ ಎತ್ತರ! ಅವರೊಬ್ಬ ವಿಶಿಷ್ಟ ವ್ಯಕ್ತಿ. ಅವರ ಜತೆ ಫೋಟೋ ತೆಗೆದುಕೊಳ್ಳಲು ನಾನು ತುಂಬ ಬಗ್ಗಬೇಕಾಗಿ ಬಂತು. ನನ್ನ ಮೊಣಕಾಲಿಗೆ ಸಮಸ್ಯೆಯಿದೆ ಆದ್ದರಿಂದ ಹೆಚ್ಚು ಹೊತ್ತು ನಿಲ್ಲವುದಕ್ಕೆ ನನಗೆ ಸಾಧ್ಯವಾಗುವುದಿಲ್ಲ ಎಂದು ಕೋಸನ್ ಹೇಳಿದ್ದಾರೆ.

ನನಗೆ ಜಗತ್ತಿನ ಅತೀ ಎತ್ತರದ ಮನುಷ್ಯನನ್ನು ಭೇಟಿ ಮಾಡಿದ ಖುಷಿಯಿದೆ. ನಾನು ಗಿನ್ನಿಸ್ ದಾಖಲೆಯಲ್ಲಿ ಸ್ಥಾನ ಪಡೆದುಕೊಂಡಿರುವುದು ಅತೀವ ಖುಷಿ ತಂದುಕೊಟ್ಟಿದೆ. ಇದರಿಂದಾಗಿ ನನಗೆ ಹಲವಾರು ದೇಶಗಳನ್ನು ಸುತ್ತುವ ಮತ್ತು ಹಲವು ವ್ಯಕ್ತಿಗಳನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದೆ ಎಂದು ದಾಂಗಿ ಹೇಳಿದ್ದಾರೆ.

SCROLL FOR NEXT