ಪ್ರಧಾನ ಸುದ್ದಿ

ಲಂಕಾದಿಂದ ಚೆನ್ನೈಗೆ ಬಂದಿಳಿದ ಐವರು ಮೀನುಗಾರರು

Guruprasad Narayana

ಚೆನ್ನೈ: ಡ್ರಗ್ ಕಳ್ಳಸಾಗಾಣೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ತಮಿಳುನಾಡಿನ ೫ ಜನ ಬೆಸ್ತರು, ಶ್ರೀಲಂಕಾದ ರಾಷ್ಟ್ರಾಧ್ಯಕ್ಷ ರಾಜಪಕ್ಷ ಕ್ಷಮಾದಾನ ನೀಡಿದ ಮೇಲೆ ಇಂದು ಚೆನ್ನೈಗೆ ಬಂದಿಳಿದಿದ್ದಾರೆ.

ರಾಮೇಶ್ವರದ ಈ ಮೀನುಗಾರರು, ಶ್ರೀಲಂಕಾದ ಅಧಿಕಾರಿಗಳಿಂದ ನಿನ್ನೆ ಬಿಡುಗಡೆ ಪಡೆದು, ಏರ್ ಇಂಡಿಯಾ ವಿಮಾನದಲ್ಲಿ ಬೆಳಗ್ಗೆ ೧:೦೫ ಘಂಟೆಗೆ ಚೆನ್ನೈಗೆ ಬಂದಿಳಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಮಿಳುನಾಡಿನ ಮಂತ್ರಿಗಳಾದ ಬಿ ವಲಾರ್ಮತಿ, ಡಾ. ಎಸ್ ಸುಂದರರಾಜ್ ಮತ್ತು ಕೆ ಎ ಜಯಪಾಲ್, ಕೇಂದ್ರ ರಾಜ್ಯ ಸಚಿವರಾದ ಬಿಜೆಪಿ ಮುಖಂಡ ಪೊನ್ ರಾಧಾಕೃಷ್ಣನ್, ರಾಜ್ಯ ಬಿಜೆಪಿ ಅಧ್ಯಕ್ಷ ತಮಿಳಿಸೈ ಸೌಂದರರಾಜನ್, ಈ ಮೀನುಗಾರರನ್ನು ಬರಮಾಡಿಕೊಂಡಿದ್ದಾರೆ.

ಎಮರ್ಸನ್, ಪಿ ಅಗಸ್ಟಸ್, ಆರ್ ವಿಲ್ಸನ್, ಕೆ ಪ್ರಸಾತ್ ಮತ್ತು ಜೆ ಲಾಂಗ್ಲೆಟ್ ಈ ಐವರು ಮೀನುಗಾರು ತಮ್ಮ ಊರಿಗೆ ತೆರಳುವ ಮುಂಚೆ ಮುಖ್ಯಮತ್ರಿ ಪನ್ನೀರ್ ಸೆಲ್ವಂ ಅವರಿಂದ ಕರೆ ನಿರೀಕ್ಷಿಸಲಾಗಿದೆ ಮತ್ತು ನಾಳೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಡ್ರಗ್ ಕಳ್ಳಸಾಗಾಣೆ ಪ್ರಕರಣದಲ್ಲಿ ನವೆಂಬರ್ ೨೦೧೧ ರಲ್ಲಿ ಶ್ರೀಲಂಕಾ ಪೊಲೀಸರು ಈ ಮೀನುಗಾರರನ್ನು ಬಂಧಿಸಿ, ಕೊಲಂಬೊ ಉಚ್ಛ ನ್ಯಾಯಾಲಯ ಅಕ್ಟೋಬರ್ ೩೦ ರಂದು ಜೀವಾವಧಿ ಶಿಕ್ಷೆ ವಿಧಿಸಿತ್ತು.

ಈ ತೀರ್ಪು ತಮಿಳುನಾಡಿನಲ್ಲಿ ತೀವ್ರ ಚರ್ಚೆಗೆ ಒಳಗಾಗಿತ್ತು ಹಾಗೂ ರಾಮೇಶ್ವರದ ಸುತ್ತ ಮುತ್ತ ತೀವ್ರ ಪ್ರತಿಭಟನೆಗಳಾಗಿದ್ದವು. ತಮಿಳುನಾಡಿನ ಸರ್ಕಾರ ಈ ಪ್ರಕರಣದಲ್ಲಿ ಶ್ರೀಲಂಕಾ ಸರ್ಕಾರದ ಜೊತೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರವನ್ನು ಆಗ್ರಹಿಸಿತ್ತು.

ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಲಂಕ ರಾಷ್ಟ್ರಾಧ್ಯಕ್ಷ ರಾಜಪಕ್ಷ ಅವರ ಜೊತೆ ದೂರವಾಣಿ ಕರೆಯಲ್ಲಿ ಮಾತನಾಡಿದ ನಂತರ ರಾಜಪಕ್ಷ ಮೀನುಗಾರರಿಗೆ ಕ್ಷಮಾಪಣೆ ನೀಡಿದ್ದರು.

SCROLL FOR NEXT