ಲಕ್ನೋ: ಅಲಹಾಬಾದ್ ಹೈಕೋರ್ಟ್ ಆದೇಶದ ಮೇರೆಗೆ ಅಲಿಘಡ ಮುಸ್ಲಿಂ ವಿಶ್ವ ವಿದ್ಯಾನಿಲಯದ ಲೈಬ್ರರಿಗೆ ಮಹಿಳೆಯರು ಪ್ರವೇಶಿಸುವಂತೆ ಒಪ್ಪಿಗೆ ಸೂಚಿಸಿದೆ.
ವಿವಿಯಲ್ಲಿರುವ ಮೌಲಾನಾ ಆಜಾದ್ ಲೈಬ್ರರಿ, ಏಷ್ಯಾದಲ್ಲಿಯೇ ಉತ್ತಮವಾದ ಲೈಬ್ರರಿ ಎಂದು ಹೇಳಲಾಗುತ್ತಿದೆ. ಆದರೆ ಈ ಲೈಬ್ರರಿಗೆ ಮಹಿಳೆಯರು ಬಂದರೆ ಅವರಿಗೆ ಹೆಚ್ಚಿನ ಭದ್ರತೆ ನೀಡಬೇಕೆಂದು ಹೇಳಿ ವಿಶ್ವ ವಿದ್ಯಾನಿಲಯ ಮಹಿಳೆಯರಿಗೆ ಪ್ರವೇಶ ನಿಷೇಧಿಸಿತ್ತು.
ಲೈಬ್ರರಿಗೆ ಮಹಿಳೆಯರ ಪ್ರವೇಶ ನಿಷೇಧದ ಬಗ್ಗೆ ಮಂಗಳವಾರ ವಿಚಾರಣೆ ನಡೆದಿದ್ದು, ಇದೀಗ ಮಹಿಳೆಯರ ಪ್ರವೇಶಕ್ಕೆ ವಿವಿ ಒಪ್ಪಿಕೊಂಡಿದೆ.
ಲೈಬ್ರರಿಯಿಂದ 3.5 ಕಿ.ಮೀ ದೂರದಲ್ಲಿ ಮಹಿಳೆಯರ ಕಾಲೇಜು ಇದೆ. ಅಲ್ಲಿಂದ ಮಹಿಳೆಯರು ಇಲ್ಲಿಗೆ ಬರುವ ವರೆಗೆ ಅವರಿಗೆ ಭದ್ರತೆಯನ್ನು ನೀಡಬೇಕಾಗುತ್ತದೆ. ಮಾತ್ರವಲ್ಲ ಲೈಬ್ರರಿಯಲ್ಲಿ ಕುಳಿತುಕೊಳ್ಳಲು ಅಷ್ಟು ಸೌಕರ್ಯಗಳಿಲ್ಲ. ಆದ್ದರಿಂದಲೇ ಪ್ರವೇಶ ನಿಷೇಧಿಸಲಾಗಿದೆ ಎಂದು ವಿವಿ ಹೇಳಿತ್ತು.
ಆದಾಗ್ಯೂ, ಮಹಿಳೆಯರು ಲೈಬ್ರರಿಗೆ ಬಂದಕೆ ಅವರ ನಾಲ್ಕು ಪಟ್ಟು ಹುಡುಗರು ಅವರೊಂದಿಗೆ ಲೈಬ್ರರಿಗೆ ಬರುತ್ತಾರೆ. ಇದರಿಂದ ಜಾಗದ ಸಮಸ್ಯೆ ಎದುರಾಗುತ್ತದೆ. ಆದ್ದರಿಂದ ಮಹಿಳೆಯರು ಲೈಬ್ರರಿಗೆ ಬರುವಂತಿಲ್ಲ ಎಂದು ವಿವಿಯ ಉಪ ಕುಲಪತಿ ಲೆ.ಜನರಲ್ ಜಮೀರುದ್ದೀನ್ ಶಾ ಹೇಳಿದ್ದು ವಿವಾದಕ್ಕೀಡಾಗಿತ್ತು.