ಪ್ರಧಾನ ಸುದ್ದಿ

ಸಿದ್ದುಗಿಂತ ಮೊದಲು 'ಕೈ' ಹಿಡಿದಿದ್ದು ನಾನು: ಅಂಬರೀಷ್

Lingaraj Badiger

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮತ್ತೊಮ್ಮೆ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರ ಹಾಕಿರುವ ವಸತಿ ಸಚಿವ ಅಂಬರೀಷ್ ಅವರು, ನಿಗಮ-ಮಂಡಳಿ ನೇಮಕ ವಿಚಾರದಲ್ಲಿ ಸಿದ್ದರಾಮಯ್ಯ ಅವರು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ಎಂದು ಶುಕ್ರವಾರ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಂಬಿ, ನಾನು ಸಂಸದನಾಗಿ, ಶಾಸಕನಾಗಿ ಕೆಲಸ ಮಾಡಿದ್ದೇನೆ. ಅಲ್ಲದೆ ಸಿದ್ದರಾಮಯ್ಯ ಅವರಿಗಿಂತ ಮೊದಲು ಕಾಂಗ್ರೆಸ್‌ಗೆ ಬಂದಿದ್ದು ನಾನು. ಹೀಗಾಗಿ ಅವರು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ಎಂದು ಅಂಬರೀಷ್ ಹೇಳಿದ್ದಾರೆ.

ಇನ್ನು ಕಲಬುರಗಿಯಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಸಭೆಗೆ ಗೈರು ಆಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅಂಬರೀಷ್, ನಾಳೆ ನಡೆಯುವ ಡಾ.ರಾಜ್‌ಕುಮಾರ್ ಸ್ಮಾರಕ ಉದ್ಘಾಟನೆ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿರುವುದರಿಂದ ನಾನು ಸಚಿವ ಸಂಪುಟ ಸಭೆಗೆ ಹೋಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಂಪುಟ ಸಭೆಗೆ ಎಲ್ಲರೂ ಕಡ್ಡಾಯವಾಗಿ ಹಾಜರಾಗುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು. ಆದರೆ ನಿಗಮ-ಮಂಡಳಿ ನೇಮಕದಲ್ಲಿ ತಮ್ಮ ಬೆಂಬಲಿಗರಿಗೆ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಗೆ ಗೈರು ಆಗುವ ಮೂಲಕ ಅಂಬರೀಷ್ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ.

ಕಳೆದ ಎರಡು ದಿನಗಳ ಈ ಹಿಂದೆಯೂ ನಿಗಮ-ಮಂಡಳಿ ನೇಮಕ ಸಂಬಂಧ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ ಅಂಬಿ, ಸಿಎಂ ನಮ್ಮ ಮಾತಿಗೂ ಬೆಲೆ ಕೊಡಬೇಕು ಎಂದಿದ್ದರು. ಅಲ್ಲದೆ ನನ್ನ ಪರವಾಗಿ ಕೆಲಸ ಮಾಡಿದವರಿಗೆ ನಿಗಮ-ಮಂಡಳಿ ನೇಮಕದಲ್ಲಿ ಅವಕಾಶ ನೀಡದಿದ್ದರೆ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ಎಚ್ಚರಿಸಿದ್ದರು.

SCROLL FOR NEXT